ಅಥವಾ

ಒಟ್ಟು 45 ಕಡೆಗಳಲ್ಲಿ , 23 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಅಳಲುತ್ತ ಬಳಲುತ್ತಲಿರ್ದಾರಯ್ಯ. ಅಲ್ಲದ ಚೇಳಿನೊಳು ಚಲ್ಲವಾಡಿ, ಎಲ್ಲರೂ ನಾಣುಗೆಟ್ಟರಲ್ಲಯ್ಯಾ. ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು. ಇದ ಬಲ್ಲವರಾರೊ, ಮಾರೇಶ್ವರಾ ?
--------------
ಮಾರೇಶ್ವರೊಡೆಯರು
ಎಲ್ಲರೂ ಕೂಡಿ ಬೀರನ ಚಪ್ಪರಕ್ಕೆ ಬಂದ ಅಜಗಾಹಿಗಳಂತೆ. ದ್ವೇಷದಲ್ಲಿ , ಅಸಿಯ ಒಡಲಲ್ಲಿ ಗಸಣಿಗೊಂಡಡೆ, ಅದು ಮಿಸುಕದಂತೆ. ಕೂಟದಲ್ಲಿ ಕೂಡಿ, ಮಾತಿನಲ್ಲಿ ನಿಜವಿಲ್ಲದೆ, ಅದೇತರ ಭಕ್ತಿಯ ವ್ರತ? ನಿಜನೀತಿಯ ನಿಚ್ಚಟಂಗೆ ಬಳಕೆಯ ಬಳಸುವ ನೀತಿಯ ಅರ್ತಿಕಾರರಿಗಿಲ್ಲ, ನಿಚ್ಚಟಂಗಲ್ಲದೆ. ಬಂಕೇಶ್ವರಲಿಂಗದ ಒಲುಮೆ ಎಲ್ಲರಿಗೆಲ್ಲಿಯದೊ !
--------------
ಸುಂಕದ ಬಂಕಣ್ಣ
ಮೂರುಮಂಡಲ ತಿರುಗುವಲ್ಲಿ ಆರೂರವರು ಅಳುತ್ತಿರ್ಪರು ನೋಡಾ. ಬೇರೊಂದೂರವರು ಬಂದು, ಮೂರುಮಂಡಲವನೊಂದುಮಾಡಿ ಆರೂರವರ ಆಳುವ ಮಾಣಿಸಿ ಬೇರೊಂದೂರ ಹೊಕ್ಕು ನೋಡಲು ಈ ಊರೊಳಗೆ ಸತ್ತವನಿವನಾರೋಯೆಂದು ನೋಡಿಯೆತ್ತಹೋಗಲು ಎಲ್ಲರೂ ಸತ್ತುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶೀಲ ಶೀಲವೆಂದು ನುಡಿವ ಉದ್ದೇಶಪ್ರಾಣಿಗಳು ಎಲ್ಲರೂ ಅನಂತಶೀಲರು, ಅರಿವಿನ ನಿರ್ಣಯವನರಿಯರು. ಹೊರಗೆ ಬಳಸುವರು, ಒಳಗಣ ಶುದ್ಧಿಯನರಿಯರು. ನೇಮಶೀಲವೆಂದು ಹಿಡಿವರು, ನಿರ್ಣಯವನರಿಯರಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಉದ್ದೇಶಪ್ರಾಣಿಗಳು.
--------------
ಚನ್ನಬಸವಣ್ಣ
ಎಲ್ಲರೂ ವೀರರು, ಎಲ್ಲರೂ ದ್ಥೀರರು, ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು. ಕಾಳಗದ ಮುಖದಲ್ಲಿ ಕಾಣಬಾರದು, ಓಡುವ ಮುಖದಲ್ಲಿ ಕಾಣಬಹುದು. ನಮ್ಮ ಕೂಡಲಸಂಗನ ಶರಣರು ದ್ಥೀರರು, ಉಳಿದವರೆಲ್ಲರೂ ಅಧೀರರು. 445
--------------
ಬಸವಣ್ಣ
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ, ಹಲ್ಲು ಕಲ್ಲಿನೊಳಗಾಗಿ, ಅಲ್ಲಿಯೆ ಅಡಗಿ ನೋಡುತ್ತದೆ. ಅದ ನಾವು ನೀವು ಎಲ್ಲರೂ ಅರಿವ ಬನ್ನಿ, ಅರ್ಕೇಶ್ವರಲಿಂಗವ ಬಲ್ಲವರಹರೆ.
--------------
ಮಧುವಯ್ಯ
ವಿಭೂತಿ ವಿಭೂತಿಯೆಂಬ ಮಾತಿಂಗಂಜಲೇಕೋ, ಅದು ವಿಭೂತಿ ಅಹುದೊ ಅಲ್ಲೊ ಎಂಬ ಕ್ರಮವನರಿಯಬೇಕಲ್ಲದೆ ? ಕೊಂತವೆಂದರೆ ಕರುಳು ಹರಿವುದೆ ಇರಿಯದನ್ನಕ್ಕ ? ನಿಃಕ್ರಿಯ ನಿಃಕಾಮ್ಯ ನಿರುಪಾಧಿಕದಿಂದ ಶ್ರೇಷ್ಠಾಚಾರವಿಡಿದು ಚರಿಸುವುದು ವಿಭೂತಿ. ಅದಕ್ಕಂಜುವುದು, ಬೆಚ್ಚುವುದು, ಅದಕ್ಕೆ ತಪ್ಪಿದಡೆ ತಪ್ಪಿದುದು, ಅಲ್ಲಿ ಶಿಕ್ಷಿಸಲುಂಟು ಬುದ್ಧಿಗಲಿಸಲುಂಟು. ಅಂತಲ್ಲದೆ ಕುಮಂತ್ರವನೊಡಲೊಳಗಿಂಬಿಟ್ಟುಕೊಂಡು ಧನದುಪಾಧಿಕೆಗೆ ಅಹುದನಲ್ಲವ ಮಾಡಿ, ಕುಚೇಷ್ಟೆವಿಡಿದು ಚರಿಸುವುದು ವಿಭೂತಿಯೆ ? ಅಲ್ಲ. ಅದಕಂಜಲಿಲ್ಲ ಬೆಚ್ಚಲಿಲ್ಲ. ಅದೇನು ಕಾರಣವೆಂದೆಡೆ_ ವಿಭೂತಿಯಲ್ಲಾಗಿ. ಇಂತೀ ಉಭಯದ ಸಕೀಲವ ಸಜ್ಜನ ಶುದ್ಧಸಾತ್ವಿಕರು ಬಲ್ಲರಲ್ಲದೆ ಎಲ್ಲರೂ ಬಲ್ಲರೆ ಕೂಡಲಚೆನ್ನಸಂಗನಲ್ಲಿ ?
--------------
ಚನ್ನಬಸವಣ್ಣ
ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ, ಪ್ರಾಣದೊಳಗೆ ಶಬ್ದವಿರ್ಪುದನಾರೂ ಅರಿಯರಲ್ಲ. ಪ್ರಾಣದೊಳಗೆ ಶಬ್ದವಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ. ಶಬ್ದದೊಳಗೆ ನಾದವಿರ್ಪುದ ಎಲ್ಲರೂ ಬಲ್ಲರಲ್ಲದೆ, ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ. ಮಂತ್ರದೊಳಗೆ ಶಿವನಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಿವನ ಕೂಡುವ ಅವಿರಳಸಮರಸವನಾರೂ ಅರಿಯರಲ್ಲ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಬ್ಬನಿಗಿಬ್ಬರು ಸ್ತ್ರೀಯರು ನೋಡಾ, ಒಬ್ಬಳು ಕಾಯದ ರೂಪೆಯಾಗಿ ಕಾಯವ ಶುದ್ಧವ ಮಾಡುವಳು. [ಆ]ಕಾಯದ ಗುಣವ ಹೊದ್ದಳು ನೋಡಾ. ಮತ್ತೊಬ್ಬಳು ಪ್ರಾಣದ ರೂಪೆಯಾಗಿ ಪ್ರಾಣವ ಶುದ್ಧವ ಮಾಡುವಳು; ಆ ಪ್ರಾಣನ ಗುಣವ ಹೊದ್ದಳು ನೋಡಾ. ಇಬ್ಬರ ಸಂಗದಿಂದ ತಾನೊಬ್ಬ ಸಾಯಲು ಮೂರುಲೋಕದ ತಬ್ಬಿಬ್ಬು ಬಿಟ್ಟು, ಕತ್ತಲೆ ಹರಿಯಿತ್ತು, ತಲ್ಲಣವಡಗಿತ್ತು. ಎಲ್ಲರೂ ನಿರಾಳರಾದರು. ಅವರು ನಿಮ್ಮವರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಟ್ಟೆಗೊಂಡು ಹೋಗುತ್ತೊಂದ ಕೊಟ್ಟುಹೋದರೆಮ್ಮವರು. ಎಲ್ಲಿಯದು ಲಿಂಗ ಎಲ್ಲಿಯದು ಜಂಗಮ ? ಎಲ್ಲಿಯದು ಪಾದೋದಕ ಪ್ರಸಾದವಯ್ಯಾ ? ಅಲ್ಲದವರೊಡನಾಡಿ ಎಲ್ಲರೂ ಮುಂದುಗೆಟ್ಟರಯ್ಯಾ. ಅನು ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗ್ರಾಮಮಧ್ಯದ ಧವಳಾರದೊಳಗೆ ಎಂಟು ಕಂಬ, ಒಂಬತ್ತು ಬಾಗಿಲ ಶಿವಾಲ್ಯವಿರುತಿರಲು, ಮಧ್ಯಸ್ಥಾನದಲ್ಲಿದ್ದ ಸ್ವಯಂಭುನಾಥನನೇನೆಂದರಿಯರಲ್ಲಾ. ಕಲ್ಲಿನಾಥನ ಪೂಜಿಸಿ ಸ್ವಯಂಭುನಾಥನನೊಲ್ಲದೆ ಎಲ್ಲರೂ ಮರುಳಾದರು ನೋಡಾ. ಮೆಲ್ಲ ಮೆಲ್ಲನೆ ಸ್ವಯಂಭುನಾಥನು ತನ್ನ ತಪ್ಪಿಸಿಕೊಂಡು, ಕಲ್ಲಿನಾಥನ ತೋರಿದ. ಶಿವಾಲ್ಯದೊಳಗಣ ಮಧ್ಯಸ್ಥಾನವನರಿದು ಗರ್ಭಗೃಹವ ಹೊಕ್ಕಡೆ ಕಲ್ಲಿನಾಥ ನಾಸ್ತಿ. ಕೂಡಲಚೆನ್ನಸಂಗನೆಂಬ ಸ್ವಯಂಭು ಇರುತ್ತಿರಲು ಎತ್ತಲೆಂದರಿಯರಲ್ಲಾ.
--------------
ಚನ್ನಬಸವಣ್ಣ
ಊರ ಕನ್ನವನಿಕ್ಕಿ ನೀರ ಕದ್ದೆನು. ಹೋಹಾಗ ಆರೂ ಅರಿಯರು, ಬಾಹಾಗ ಎಲ್ಲರೂ ಅರಿವರು. ಅರಿದರಲ್ಲಾ ಎಂದು ಸುರಿದೆ ನೀರ. ಹಾಕಿದ ಮಡಕೆಯು ಕನ್ನಗತ್ತಿಯ ಕೈಯಲ್ಲಿಯದೆ. ಅಂಗ ಸಿಕ್ಕಿತ್ತು ಮದನಂಗದೂರ ಮಾರೇಶ್ವರಾ.
--------------
ಕನ್ನದ ಮಾರಿತಂದೆ
ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹಾರುವವರಿಗೆ ಇಷ್ಟಾರ್ಥಸಿದ್ಧಿ ಇನ್ನೆಲ್ಲಿಯದೊ ? ಅದೆಲ್ಲಿಯದೊ ಲಿಂಗ ಅದೆಲ್ಲಿಯದೊ ಜಂಗಮ ? ಅದೆಲ್ಲಿಯದೊ ಪಾದೋದಕ ಪ್ರಸಾದ ? ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು,_ ಗುಹೇಶ್ವರಾ ನಿಮ್ಮಾಣೆ.
--------------
ಅಲ್ಲಮಪ್ರಭುದೇವರು
ಲಿಂಗದಿಂದ ಶರಣರುದಯಯವಾಗದಿರ್ದಡೆ, ಬಸವ ಚೆನ್ನಬಸವ ಪ್ರಭುದೇವರು ಮುಖ್ಯವಾದ ಏಳುನೂರುಯೆಪ್ಪತ್ತು ಅಮರಗಣಂಗಳು ಎಲ್ಲರೂ ಕ್ಷೀರ ಕ್ಷೀರವ ಬೆರಸಿದಂತೆ, ನೀರು ನೀರು ಬೆರಸಿದಂತೆ, ಘೃತ ಘೃತವ ಬೆರಸಿದಂತೆ, ಬಯಲು ಬಯಲ ಬೆರಸಿದಂತೆ ಲಿಂಗವ ಬೆರಸಿ ಮಹಾಲಿಂಗವೆಯಾದರು ನೋಡ. ಲಿಂಗದಿಂದ ಶರಣರುದಯವಾಗದಿರ್ದಡೆ, ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ, ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ನೋಡಾ. ಇಂತಪ್ಪ ದೃಷ್ಟವ ಕಂಡು ನಂಬದಿರ್ಪುದು ಕರ್ಮದ ಫಲ. ಅದು ಇವರ ಗುಣವೆ? ಶಿವನ ಮಾಯಾಪ್ರಪಂಚಿನ ಗುಣ ನೋಡಾ. ಈ ಪ್ರಪಂಚುಜೀವಿಗಳು ಅಲ್ಲ ಎಂಬುದು, ಅಹುದೆಂಬುದು ಪ್ರಮಾಣೆ? ಅಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಲ್ಲ ಹೋರಿನೊಳಗೊಂದು ಕಿಚ್ಚು ಹುಟ್ಟಿತ್ತ ಕಂಡೆ. ಹುಲ್ಲ ಮೇವ ಎರಳೆಯ, ಹುಲಿಯ, ಸರಸವ ಕಂಡೆ ಎಲ್ಲರೂ ಸತ್ತು ಆಡುತ್ತಿಪ್ಪುದ ಕಂಡೆ. ಇನ್ನು ಎಲ್ಲಿಯ ಭಕುತಿ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->