ಅಥವಾ

ಒಟ್ಟು 35 ಕಡೆಗಳಲ್ಲಿ , 14 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡುವ ಸದಾಚಾರಕ್ಕೆ ಮೊದಲನೆಯ ಲಿಂಗಪೂಜೆಯೆ ಗುರುಪೂಜೆ. ಮಾಡುವ ಸದಾಚಾರಕ್ಕೆ ಎರಡನೆಯ ಲಿಂಗಪೂಜೆಯೆ ಲಿಂಗಪೂಜೆ. ಮಾಡುವ ಸದಾಚಾರಕ್ಕೆ ಮೂರನೆಯ ಲಿಂಗಪೂಜೆಯೆ ಜಂಗಮಪೂಜೆ. ಮಾಡುವ ಸದಾಚಾರಕ್ಕೆ ಮೂರು ಪೂಜೆ. ಈ ಪೂಜೆ ಅನಂತಜನ್ಮದುರಿತಧ್ವಂಸಿ ನೋಡಾ, ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ
--------------
ಚನ್ನಬಸವಣ್ಣ
ಒಂದನೆ ದೆಸೆಯಲ್ಲಿ ಒಂದು ಮುಖದ ಭೈರವನು. ಎರಡನೆಯ ದೆಸೆಯಲ್ಲಿ ಎರಡು ಮುಖದ ಭೈರವನು. ಮೂರನೆಯ ದೆಸೆಯಲ್ಲಿ ಮೂರು ಮುಖದ ಭೈರವನು. ನಾಲ್ಕನೆಯ ದೆಸೆಯಲ್ಲಿ ನಾಲ್ಕು ಮುಖದ ಭೈರವನು. ಐದನೆಯ ದೆಸೆಯಲ್ಲಿ ಐದು ಮುಖದ ಭೈರವನು. ಆರನೆಯ ದೆಸೆಯಲ್ಲಿ ಆರು ಮುಖದ ಭೈರವನು. ಏಳನೆಯ ದೆಸೆಯಲ್ಲಿ ಏಳು ಮುಖದ ಭೈರವನು. ಎಂಟನೆಯ ದೆಸೆಯಲ್ಲಿ ಎಂಟು ಮುಖದ ಭೈರವನು. ಇಂತಿರುವ ಅಷ್ಟಭೈರವರು ಹೊರಸುತ್ತಿನಲ್ಲಿ ಪಹರಿಕರು. ತುತ್ತರಸಿನವೆಂಬ ಚಕ್ರವು ಸುರಗಿಯಂದದಿ ಸುತ್ತಿ, ತೆರಹು ಇಲ್ಲವೆ ತಿರುಗುತ್ತಿಹುದು. ಅದು ಕಾಣಬಾರದಂತಿಹುದು ನೋಡಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಭಕ್ತನೆದ್ದು ಭವಿಯ ಮುಖವ ಕಂಡರೆ, gõ್ಞರವ ನರಕವೆಂಬರು. ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, `ನಾನು ಭವಿಯ ಮೋರೆಯ ಕಾಣಬಾರದು, ಎಂದು ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ದಾಸಿಯ ಸಂಗ ಎರಡನೆಯ ಪಾತಕ, ವೇಶಿಯ ಸಂಗ ಮೂರನೆಯ ಪಾತಕ. ಮೀಸಲಳಿದ ಪರಸ್ತ್ರೀಯರ ಸಂಗ ಪಂಚಮಹಾಪಾತಕ. ಇನಿಸು ಶಿವಭಕ್ತರಿಗೆ ಸಲ್ಲವು. ಇವನರಿದರಿದು ಮಾಡಿದನಾದರೆ, ಯಮಪಟ್ಟಣವೆ ವಾಸವಾಗಿಪ್ಪರಲ್ಲದೆ, ಈ ದೇಶಕ್ಕೆ ಮರಳಿ ಬರಲಿಲ್ಲ ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಮತ್ತಮಾ ಶಕ್ತಿಬೀಜವಾದ ಸಕಾರವೆ ಚತುರ್ಥಸ್ವರದೊಡನೆ ಕೂಡಿ ನಾದ ಬಿಂದು ಸಂಜ್ಞಿತವಾದ ಸೊನ್ನಯೊಡಗಲಸೆ ಸೀಂ ಎಂಬ ವರ್ಣವಾದುದೀ ವರ್ಣವೆ ಎರಡನೆಯ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಪವಿತ್ರಾಂತರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಒಂದನೆಯ ಗಾಳಕ್ಕೆ ಬ್ರಹ್ಮನ ಕೆಡವಿದೆ. ಎರಡನೆಯ ಗಾಳಕ್ಕೆ ವಿಷ್ಣುವಿನ ಕೆಡವಿದೆ. ಮೂರನೆಯ ಗಾಳಕ್ಕೆ ರುದ್ರನ ಕೆಡವಿದೆ. ಮಿಕ್ಕಾದ ಗಾಳದಿಂ ಹಲವು ದೇವತೆಗಳ ಕೆಡವಿದೆ. ಒಂದು ಗಾಳದಿಂದ ನಾ ಸತ್ತು ಕಾಯಕವ ಮಾಡುತ್ತಿರ್ಪೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಲವು ದೈವಂಗಳ ಪೂಜೆಯ ಮಾಡುವ ಗೊರವನ ಗುರುದೇವನೆಂದು ನುಡಿದು ಕರೆವ ವಿವೇಕವಿಹೀನ ದುರಾಚಾರಿಯ ಮುಖವ ನೋಡಲಾಗದು. ಸರ್ವದೇವರಿಗೆ ಒಡೆಯನಾದಂತಹ ಸದಾಶಿವನೆ ಗುರುದೇವನು. ಶಿವಲಿಂಗಕ್ಕೆ ತಮ್ಮ ಪಾದತೀರ್ಥ ಪ್ರಸಾದವನೀವ ವೀರಮಾಹೇಶ್ವರ ಜಂಗಮದೇವರು, ತನಗೆ ಗುರುದೇವ ಮಹಾದೇವನು. ಅದೆಂತೆಂದಡೆ: ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂತೆಂದುದಾಗಿ, ಗುರುದೇವನೆಂಬ ಶಬ್ದವು ಉಳಿದವರಿಗೆ ಸಲ್ಲದು. ``ಏಕೋ ದೇವೋ ನ ದ್ವಿತೀಯಃ'' ಎಂದು ಶುದ್ಧಶೈವನಿಷ್ಠಾಪರನಾಗಿ ಶಿವಮಹೇಶ್ವರನ ಎರಡನೆಯ ಶಿವನೆಂದು ಭಾವಿಸಿ ಅವನೊಕ್ಕು ಮಿಕ್ಕುದ ಶೇಷಪ್ರಸಾದವೆಂದುಕೊಂಡು ಅನ್ಯಾಯವನರಿಯದ ಶುದ್ಧಪತಿವ್ರತೆಯಂತೆ, ಶಿವಲಿಂಗೈಕ್ಯಭಾವದಿ ಅರಿವಾಗಿ ನಚ್ಚಿ ಮಚ್ಚಿ ಮನವು ಲಿಂಗದಲ್ಲಿ ನೆಲೆಗೊಂಡು ನಿಂದ ಸುಜ್ಞಾನಭರಿತನ ಅಯ್ಯನೆಂಬುದು. ಮಿಕ್ಕಿನ ಶೈವನೆಂಬುದು, ಮಿಕ್ಕಿನ ಕೀಳುದೈವದ ಪೂಜೆಯ ಮಾಡುವ[ನ] ಗೊರವನೆಂಬುದು. ಅದೆಂತೆಂದಡೆ: ತೊತ್ತು ತೊಂಡರ ಕಾಲ ತೊಳೆದು ಸೇವೆಯ ಮಾಡಿ ಬದುಕುವನ, ಪಡಿದೊತ್ತಿನ ಮಕ್ಕಳೆಂದು ಎಂಬರಲ್ಲದೆ, ರಾಜಕುಮಾರನೆಂದೆನ್ನರು. ಆ ಪ್ರಕಾರದಲ್ಲಿ ವಿಪ್ರ, ಭ್ರಷ್ಟ, ನಂಟ, ಶ್ವಪಚ ಮಾನವರ ವೇಷ ತಾಳಿ ಹಲಬರ ಹೊಗಳಿ ಕೀಳು ದೈವದ ಕಾಲು ತೊಳೆದು ಎಂಜಲ ತಿಂಬ ಭ್ರಷ್ಟಜಾತಿಯ ಗುರುದೇವನೆಂದು ಹೇಸಿಕೆಯಿಲ್ಲದೆ ನುಡಿದು ಕರೆವ ದುರಾಚಾರಿಗಳಿಗೆ ಶಿವಭಕ್ತಿ ಸಲ್ಲದು, ನರಕ ತಪ್ಪದು, ಅಂಜದೆ ಕರೆಸಿಕೊಂಬ ಅಜ್ಞಾನಿ ಗೊರವಂಗೆ ಮೊದಲೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶೀಲಶೀಲವೆಂಬ ಅಣ್ಣಗಳು ನೀವು ಕೇಳಿರೊ: ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧಭವಿಯ ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು ಅಂಗದ ಮೇಲೆ ಅವರಿಗೆ ಲಿಂಗವುಂಟೊ ? ಇಲ್ಲವೊ ? ಎಂಬ ಜಗಭಂಡರು ನೀವು ಕೇಳಿರೊ: ಅಚ್ಚಪ್ರಸಾದಿ ನಿಚ್ಚಪ್ರಸಾದಿ ! ಜಲವನೆ ಹೊಕ್ಕು ಕನ್ನವನಿಕ್ಕಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವ ಹಗಲುಗಳ್ಳರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಮತ್ತೆ, ಎರಡನೆಯ ಚಂದ್ರಮಂಡಲದ ಪದಿನಾರೆಸಳ್ಗಳಲ್ಲಿ, ಉಮೇಶ್ವರ ಚಂಡೇಶ್ವರ ನಂದಿಕೇಶ್ವರ ಮಹಾಕಾಳ ಭೃಂಗಿರಿಟಿ ಗಣೇಶ್ವರ ವೃಷಭೇಶ್ವರ ಷಣ್ಮುಖರೆಂಬಷ್ಟ ಗಣೇಶ್ವರರನುತ್ತರಂ ಮೊದಲಾದಷ್ಟದಳಂಗಳಲ್ಲಿ ಪೂಜಿಪುದುಳಿದಷ್ಟದಳಂಗಳಲ್ಲಿ ಭವ ಶರ್ವ ರುದ್ರ ಮಹಾದೇವ ಸೋಮ ಭೀಮೋಗ್ರ ಪಶುಪತಿಗಳೆಂಬಷ್ಟಮೂರ್ತಿಗಳನಾರಾಧಿಪುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ[ಪ್ರ]ತಿಪದಾರ್ಥ ಭಾಸ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ತಾಯಿಯಲ್ಲಿ ಬಯಸಿ ತಂದ ತಲೆಯ ಕೈಯೊಳಿಟ್ಟು ಕಾಣದಿರ್ದೊಡೆ ಸವಿಸುಖ ತಪ್ಪಿತ್ತು. ಮಣ್ಣೊಳಗೆ ಮುಚ್ಚಿದರೆ ಒಂದನೆಯ ಸುಖ ತಪ್ಪಿತ್ತು. ಜಲದೊಳಗೆ ಮುಚ್ಚಿದರೆ ಎರಡನೆಯ ಸುಖ ತಪ್ಪಿತ್ತು. ಕಿಚ್ಚಿನೊಳಗೆ ಮುಚ್ಚಿದರೆ ಮೂರನೆಯ ಸುಖ ತಪ್ಪಿತ್ತು. ಗಾಳಿಯೊಳಗೆ ಮುಸುಕಲಿಟ್ಟರೆ ನಾಲ್ಕನೆಯ ಸುಖ ತಪ್ಪಿತ್ತು. ಅಂಬರದೊಳಗಡಗಿಸಿದರೆ ಐದನೆಯ ಸುಖ ತಪ್ಪತ್ತು. ಕರ್ತಾರನಲ್ಲಿಟ್ಟು ಕಾಣಿಸದಿರ್ದಡೆ ಆರನೆಯ ಸುಖ ತಪ್ಪಿತ್ತು. ಈ ಸುಖವನರಿಯದೆ ಮತ್ತೆ ಮತ್ತೆ ಮಾಡಿಕೊಂಡರೇನು ಅತ್ತತ್ತಲರಿಯದೆ ವ್ಯರ್ಥವಾಯಿತ್ತು ಗುರುನಿರಂಜನ ಚನ್ನಬಸವಲಿಂಗವು ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವಿಚಾರ, ಜಂಗಮವಿಚಾರ, ಪಾದೋದಕವಿಚಾರ ಬಹು ಸೂಕ್ಷ ್ಮ ಕೇಳಯ್ಯಾ. ಮೊದಲನೆಯ ಪಾದೋದಕ ಗುರುಸಂಬಂಧ; ಎರಡನೆಯ ಪಾದೋದಕ ಲಿಂಗ ಸಂಬಂಧ; ಮೂರನೆಯ ಪಾದೋದಕ ಜಂಗಮ ಸಂಬಂಧ. ಈ ತ್ರಿವಿಧೋದಕ ಭಕ್ತನಲ್ಲಿ ಸಂಬಂಧ. ಈ ತ್ರಿವಿಧೋದಕ ಗುರು-ಲಿಂಗ-ಜಂಗಮದಲ್ಲಿ ಸಂಬಂಧ. ಅದು ಕಾರಣ, ಭಕ್ತ-ಮಹೇಶ-ಪಾದೋದಕ, ಪ್ರಸಾದದಲ್ಲಿ ಭೇದವ ಮಾಡಿ ನಿಂದಡೆ, ಅಘೋರನರಕದಲ್ಲಿಕ್ಕುವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಳಿಕೀ ಪ್ರಕಾರಮಾದ ಹಠಯೋಗರೂಪಮಪ್ಪ ಅಷ್ಟಾಂಗಗಳಂ ನಿರಾಲಸ್ಯದಿಂ ಎಡೆಬಿಡುವಿಲ್ಲದೆ ಮಾಡಿದಾತಂಗೆ ಆಗುವ ಸಿದ್ಧಿಪ್ರಕಾರಗಳೆಂತೆನೆ : ಮೊದಲನೆಯ ವರ್ಷದಲ್ಲಿ ನಿರೋಗಿಯಾಗಿ ಸಕಲಜನ ಪ್ರೀತನಾಗುವನು. ಎರಡನೆಯ ವರ್ಷದಲ್ಲಿ ಸುಸಂಸ್ಕøತ ಭಾಷೆಯಿಂದ ಕವಿತ್ವವಂ ಮಾಡುವನು. ಮೂರನೆಯ ವರ್ಷದಲ್ಲಿ ಸರ್ಪಾದಿ ದುಷ್ಟಪ್ರಾಣಿಗಳಿಂದೆ ಬಾಧಿಸಿಕೊಳ್ಳುತಿರನು. ನಾಲ್ಕನೆಯ ವರ್ಷದಲ್ಲಿ ಹಸಿವು ತೃಷೆ ವಿಷಯ ನಿದ್ರೆ ಶೋಕ ಮೋಹಾದಿಗಳಂ ಬಿಡುವನು. ಐದನೆಯ ವರ್ಷದಲ್ಲಿ ದೂರಶ್ರವಣ ವಾಕ್ಸಿದ್ಧಿ ಪರಕಾಯಪ್ರವೇಶಾಧಿಕವುಳ್ಳಾತನಹನು. ಆರನೆಯ ವರ್ಷದಲ್ಲಿ ವಜ್ರಾದ್ಯಾಯುಧಗಳಿಂದೆ ಭೇದಿಸಲ್ಪಡದಾತನಾಗಿ, ಶೀಘ್ರಗಾಮಿಯಾಗಿ ದೂರದರ್ಶನವುಳ್ಳಾತನಾಗುವನು. ಏಳನೆಯ ವರ್ಷದಲ್ಲಿ ಖೇಚರಗಾಮಿಯಾಗುವನು. ಎಂಟನೆಯ ವರ್ಷದಲ್ಲಿ ಅಣಿಮಾದಿ ಅಷ್ಟಮಹದೈಶ್ವರ್ಯಸಂಪನ್ನನಾಹನು. ಒಂಬತ್ತನೆಯ ವರ್ಷದಲ್ಲಿ ಸ್ವೇಚ್ಛಾಗಮನಿಯಾಗಿ ವಜ್ರಶರೀರಿಯಾಹನು. ಹತ್ತನೆಯ ವರ್ಷದಲ್ಲಿ ಮನೋಯೋಗಿಯಾಗಿ ಇಚ್ಛಾವಿಷಯಂಗಳ ಪಡೆಯುವನು. ಹನ್ನೊಂದನೆಯ ವರ್ಷದಲ್ಲಿ ಸಕಲ ಲೋಕಂಗಳಿಗೆ ಆಜ್ಞಾಕರ್ತೃವಾಹನು. ಹನ್ನೆರಡನೆಯ ವರ್ಷದಲ್ಲಿ ಶಿವನ ಸಮಾನವಾಗಿ ಸೃಷ್ಟಿಸ್ಥಿತಿಲಯಂಗಳಂ ಮಾಡುತಿರ್ಪುದೇ ಹಠಯೋಗಸಿದ್ಧಿ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಭಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ, ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ- ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು ಆರೂ ಆರೂ ಇಲ್ಲದಂದು, ನಾಮವಿಲ್ಲದಂದು, ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ. ಅಂದು ನಿಮ್ಮ ನಾಭಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು. ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು. ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು. ಇಪ್ಪತ್ತನೆಯ ಯುಗದಲ್ಲಿ ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು. ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣ. ಹತ್ತೊಂಬತ್ತನೆಯ ಯುಗದಲ್ಲಿ ಏಕಪಾದದ ಮಾಹೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿನೆಂಟನೆಯ ಯುಗದಲ್ಲಿ ಕತ್ತಲೆಯ ಕಾಳೋದರನೆಂಬ ರುದ್ರನ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನೇಳನೆಯ ಯುಗದಲ್ಲಿ ವೇದಪುರಾಣಾಗಮಶಾಸ್ತ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನಾರನೆಯ ಯುಗದಲ್ಲಿ....... ಹದಿನೈದನೆಯ ಯುಗದಲ್ಲಿ ಅಮೃತಮಥನವ ಮಾಡಿದಾತ ನಮ್ಮ ಬಸವಣ್ಣ. ಹದಿನಾಲ್ಕನೆಯ ಯುಗದಲ್ಲಿ ತೆತ್ತೀಸಕೋಟಿ ದೇವರ್ಕಳ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿಮೂರನೆಯ ಯುಗದಲ್ಲಿ ಸೌರಾಷ್ಟ್ರ ಸೋಮೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೆರಡನೆಯ ಯುಗದಲ್ಲಿ ಪಾರ್ವತಿಪರಮೇಶ್ವರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೊಂದನೆಯ ಯುಗದಲ್ಲಿ ಏಕಾದಶ ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹತ್ತನೆಯ ಯುಗದಲ್ಲಿ ದಶವಿಷ್ಣುಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂಬತ್ತನೆಯ ಯುಗದಲ್ಲಿ ನವಬ್ರಹ್ಮರ ನಿರ್ಮಿಸಿದಾತ ನಮ್ಮ ಬಸವಣ್ಣ. ಎಂಟನೆಯ ಯುಗದಲ್ಲಿ ಅಷ್ಟದಿಕ್ಪಾಲರ ನಿರ್ಮಿಸಿದಾತ ನಮ್ಮ ಬಸವಣ್ಣ. ಏಳನೆಯ ಯುಗದಲ್ಲಿ ಸಪ್ತ ಸಮುದ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಆರನೆಯ ಯುಗದಲ್ಲಿ ಷಣ್ಮುಖದೇವರ ನಿರ್ಮಿಸಿದಾತ ನಮ್ಮ ಬಸವಣ್ಣ. ಐದನೆಯ ಯುಗದಲ್ಲಿ ಪಂಚಮುಖದೀಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ನಾಲ್ಕನೆಯ ಯುಗದಲ್ಲಿ ಚತುರ್ಮುಖದ ಬ್ರಹ್ಮನ ನಿರ್ಮಿಸಿದಾತ ನಮ್ಮ ಬಸವಣ್ಣ. ಮೂರನೆಯ ಯುಗದಲ್ಲಿ ಬ್ರಹ್ಮ, ವಿಷ್ಣು, ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಎರಡನೆಯ ಯುಗದಲ್ಲಿ ಸಂಗಯ್ಯನ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂದನೆಯ ಯುಗದಲ್ಲಿ ಪ್ರಭುವೆಂಬ ಜಂಗಮವ ನಿರ್ಮಿಸಿದಾತ ನಮ್ಮ ಬಸವಣ್ಣ. ಇಂತೀ ಇಪ್ಪತ್ತೊಂದು ಯುಗಂಗಳಲ್ಲಿ ಬಸವಣ್ಣನು ತಮ್ಮ ಕರಕಮಲವೆಂಬ ಗರ್ಭದಲ್ಲಿ ಜನಿಸಿದನೆಂದು. ಕಕ್ಕಯ್ಯಗಳು ತಮ್ಮ ಮೋಹದ ಮಗನೆಂದು ಒಕ್ಕುದನಿಕ್ಕಿ ಸಲಹಿದರು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಿತ್ತಿ ಮೂರರ ಮೇಲೆ ಚಿತ್ರ ಬರೆಯಿತ್ತು; ಪ್ರಥಮ ಭಿತ್ತಿಯ ಚಿತ್ರ ಚಿತ್ರದಂತೆ ಇದ್ದಿತ್ತು; ಎರಡನೆಯ ಭಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು, ಮೂರನೆಯ ಭಿತ್ತಿಯ ಚಿತ್ರ ಹೋಯಿತ್ತು ಮರಳಿ ಬಾರದು. ಗುಹೇಶ್ವರಾ_ನಿಮ್ಮ ಶರಣ ತ್ರಿವಿಧದಿಂದತ್ತತ್ತಲೆ !
--------------
ಅಲ್ಲಮಪ್ರಭುದೇವರು
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4
--------------
ಬಸವಣ್ಣ
ಇನ್ನಷ್ಟು ... -->