ಎನ್ನಲ್ಲಿ ನಾನು ದೃಷ್ಟವೆಂದಡೆ ನಿಮ್ಮಲ್ಲಿ ನೀವು ಮೆಚ್ಚುವಿರೆ ? ಸಂದೇಹದಿಂದ ಸವೆಯಿತ್ತು ಲೋಕವು. ಕನ್ನಡಿಯುಂಡ ಬಿಂಬ, ಕಬ್ಬನವುಂಡ ನೀರು, ಕಬ್ಬಿಸಿಲು ಅರಿಸಿನವ ನುಂಗಿದಂತೆ ಗುಹೇಶ್ವರಾ ನಿಮ್ಮ ಶರಣರು.
ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ ಅದು ನಿಮ್ಮ ಮತಕ್ಕೆ ಬಪ್ಪುದೆ? ಎನ್ನ ನಾನು ಮರೆದು, ನಿಮ್ಮನರಿದಡೆ, ಅದು ನಿಮ್ಮ ರೂಪೆಂಬೆ. ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ ಭಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ.