ಅಥವಾ

ಒಟ್ಟು 88 ಕಡೆಗಳಲ್ಲಿ , 19 ವಚನಕಾರರು , 88 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ ? ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ, ಜ್ಞಾನಿಗಳೆಂದರಿಯದೆ, ಬಾಯಿಗೆ ಬಂದಂತೆ ನುಡಿವ ತರಕಿಮೂಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಷ್ಠೆಯ ಮರೆದರೇನಯ್ಯಾ ? ಲೋಕದ ಮನುಜರ ದೃಷ್ಟಿಗೆ ಸಿಲ್ಕಿ ಭ್ರಷ್ಟೆದ್ದುಹೋದರು. ತನು ಕಷ್ಟಮಾಡಿದರೇನಯ್ಯಾ ಮನ ನಿಷ್ಠವಾಗದನ್ನಕ್ಕ ? ತನು ಮನವೆರಡು ನಷ್ಟವಾಗಿ, ಘನವ ನೆಮ್ಮಿ, ನಿಮ್ಮ ನೆನಹು ನಿಷ್ಪತ್ತಿಯಾದ ಶರಣರ ಎನಗೊಮ್ಮೆ ತೋರಯ್ಯ, ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರ್ಮದ ಗುಣವನಳಿದು ಅಸಮಾಯಲಿಂಗದೊಳು ಕೂಡಿ ಸೀಮೆಯ ದಾಂಟಿ ನಿಸ್ಸೀಮನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಕಂಬದ ಗುಡಿಯ ಶಿಖರದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತು ನೋಡಾ. ಆ ಲಿಂಗದ ಬೆಳಗಿನೊಳಗೆ ತನ್ನ ಮರೆದು ನಿಃಪ್ರಿಯನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ. ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ ವಿಷವನುಗುಳುತಿಪ್ಪುದು ನೋಡಾ. ಆ ವಿಷವ ಕೆಡಿಸಿ, ಉರಗನ ಕೊಂದು, ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಾಮಸಗುಣಂಗಳಲ್ಲಿ ಬಿದ್ದು, ತ್ವರಿತದ ವಿಷಯದಲ್ಲಿ ಹರಿದಾಡಿ, ಭವಜಾಲದಲ್ಲಿ ಸತ್ತು ಹುಟ್ಟುವಾತ ಗುರುಸ್ಥಲಕ್ಕೆ ಸಲ್ಲ, ಚರಸ್ಥಲಕ್ಕೆ ಸಲ್ಲ, ಪರಸ್ಥಲಕ್ಕೆ ಸಲ್ಲ. ಗುರುಸ್ಥಲವೆಂದಡೆ ಘನಲಿಂಗಸ್ಥಲವು. ಚರಸ್ಥಲವೆಂದಡೆ ಅತೀತಸ್ಥಲವು. ಪರಸ್ಥಲವೆಂದಡೆ ವಿರಕ್ತಿಸ್ಥಲವು. ಇಂತೀ ತ್ರಿವಿಧಸ್ಥಲದ ನಿರ್ಣಯವ ಬಲ್ಲಾತನೆ ಗುರುಸ್ಥಲಕ್ಕೆ ಯೋಗ್ಯನೆಂಬೆನು ; ಚರಸ್ಥಲಕ್ಕೆ ಯೋಗ್ಯನೆಂಬೆನು ; ಪರಸ್ಥಲಕ್ಕೆ ಯೋಗ್ಯನೆಂಬೆನು. ಇಂತೀ ತ್ರಿವಿಧನಿರ್ಣಯವನರಿಯದೆ ತ್ರಿವಿಧಮಲದಲ್ಲಿ ಭಂಗಿತರಾದವರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ ನಿಮ್ಮ ಧರ್ಮ.
--------------
ಷಣ್ಮುಖಸ್ವಾಮಿ
ಸ್ಥೂಲವಾದರೇನಯ್ಯ ? ಆ ಸ್ಥೂಲಕ್ಕೆ ಕ್ರಿಯವ ನಟಿಸಬೇಕಯ್ಯ. ಸೂಕ್ಷ್ಮವಾದರೇನಯ್ಯ ? ಆ ಸೂಕ್ಷ್ಮಕ್ಕೆ ಮಂತ್ರವ ನಟಿಸಬೇಕಯ್ಯ. ಕಾರಣವಾದರೇನಯ್ಯ? ಆ ಕಾರಣಕ್ಕೆ ಸದಾಚಾರವ ನಟಿಸಬೇಕಯ್ಯ. ಮಹಾಕಾರಣವಾದರೇನಯ್ಯ? ಆ ಮಹಾಕಾರಣಕ್ಕೆ ಲಿಂಗಾಂಗಸಮರಸವÀ ನಟಿಸಬೇಕಯ್ಯ. ಪರಕಾರಣವಾದರೇನಯ್ಯ? ಆ ಪರಕಾರಣಕ್ಕೆ ನಿಃಶಬ್ದ ನಿರಾಳವ ನಟಿಸಬೇಕಯ್ಯ. ಜ್ಞಾನಕಾರಣವಾದರೇನಯ್ಯ? ಆ ಜ್ಞಾನಕಾರಣಕ್ಕೆ ಸ್ವಾನುಭವಸಿದ್ಭಾಂತವ ನಟಿಸಬೇಕಯ್ಯ. ಇಂತೀ ಷಡ್ವಿಧ ಅಂಗವನರಿತು ಆಚರಿಸಬಲ್ಲ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಮನವ ನಿಲಿಸಬಲ್ಲ ಶರಣನ ಅಂತರಂಗದಲ್ಲಿ ಪರಬ್ರಹ್ಮಲಿಂಗವಿರ್ಪುದು ನೋಡಾ. ಆ ಲಿಂಗದಲ್ಲಿ ತನ್ನ ಮರೆದು ಇರಬಲ್ಲ ಹಿರಿಯರ ಎನಗೊಮ್ಮೆ ತೋರಿಸಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಣವವೇ ಪರಬ್ರಹ್ಮವು. ಪ್ರಣವವೇ ಪರಾಪರವಸ್ತು. ಪ್ರಣವವೇ ಪರತತ್ವವು ಪ್ರಣವವೇ ಪರಂಜ್ಯೋತಿ ಪ್ರಕಾಶವು. ಪ್ರಣವವೇ ಪರಶಿವ. ಪ್ರಣವವೇ ಶುದ್ಧಪ್ರಸಾದ. ಪ್ರಣವವೇ ಪರಮಪದ. ಪ್ರಣವವೇ. ವೇದಶಾಸ್ತ್ರ ಪುರಾಣಾಗಮಂಗಳುತ್ಪತ್ತಿಗೆ ಕಾರಣ ನೋಡಾ. ಪ್ರಣವವೇ ಸಪ್ತಕೋಟಿ ಮಹಾಮಂತ್ರ, ಅನೇಕಕೋಟಿ ಉಪಮಂತ್ರಂಗಳಿಗೆ ಮಾತೃಸ್ಥಾನ ನೋಡಾ. ಇಂತಪ್ಪ ಶಿವಸ್ವರೂಪವಪ್ಪ ಪ್ರಣವಮಂತ್ರವನೇ ಶುದ್ಧಮಾಯಾಸಂಬಂಧವೆಂಬ ಅಬದ್ಧರ ಎನಗೊಮ್ಮೆ ತೋರದಿರಯ್ಯ. ಮಂತ್ರ ಜಡವಾದಲ್ಲಿಯೆ ಗುರು ಜಡ. ಗುರು ಜಡವಾದಲ್ಲಿಯೆ ಲಿಂಗವು ಜಡ. ಲಿಂಗವು ಜಡವಾದಲ್ಲಿಯೆ ಜಂಗಮವು ಜಡ. ಜಂಗಮವು ಜಡವಾದಲ್ಲಿಯೇ ಪ್ರಸಾದವು ಜಡ. ಪ್ರಸಾದವು ಜಡಯೆಂಬುವರಿಗೆ ಮುಕ್ತಿಯೆಂಬುದು ಎಂದೂ ಇಲ್ಲ. ಮಂತ್ರ ಗುರು ಲಿಂಗ ಜಂಗಮ ಪ್ರಸಾದ ಮುಕ್ತಿ ಈ ಆರು ಸಾಕ್ಷಾತ್ ಶಿವ ತಾನೆಯಲ್ಲದೆ ಬೇರಿಲ್ಲ. ಶಿವ ಬೇರೆ ಇವು ಬೇರೆಯೆಂಬ ಅಜ್ಞಾನ ಕರ್ಮಕಾಂಡಿಗಳ ಪಶುಮತ(ದ)ವರಯೆನಗೊಮ್ಮೆ ತೋರದಿರು. ಇದು ಕಾರಣ, ಪ್ರಣವವೇ ಪರವಸ್ತು. ಪಂಚಾಕ್ಷರವೇ ಪಂಚಮುಖವನ್ನುಳ್ಳ ಪರಮೇಶ್ವರ ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರಣನಾದಡೆ ಮುರಿದ ಬಂಗಾರವ ಬೆಳಗಾರದಲ್ಲಿ ಬೆಚ್ಚಂತಿರಬೇಕು ಲಿಂಗದಲ್ಲಿ, ಶರಣನಾದಡೆ ಶುಭ್ರವಸ್ತ್ರಕ್ಕೆ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ. ಶರಣನಾದಡೆ ಕರಕುಕಟ್ಟಿರದ ಲೋಹದ ಪುತ್ಥಳಿಯಂತಿರಬೇಕು ಲಿಂಗದಲ್ಲಿ. ಇಂತೀ ಸಮರಸಭಾವವನರಿಯದೆ ಹುಸಿಹುಂಡನಂತೆ ವೇಷವ ಧರಿಸಿ ಗ್ರಾಸಕ್ಕೆ ತಿರುಗುವ ವೇಷಗಳ್ಳರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಸಿವುಳ್ಳನ್ನಕ್ಕ ವ್ಯಾಪಾರ ಬಿಡದು, ಸೀತ ಉಳ್ಳನ್ನಕ್ಕ ಉಪಾಧಿಕೆ ಬಿಡದು, ಮಾತುಳ್ಳನ್ನಕ್ಕ ಬೂಟಾಟಿಕೆ ಬಿಡದು, ನಿದ್ರೆಯುಳ್ಳನ್ನಕ್ಕ ಸತಿಯ ಸಂಗ ಬಿಡದು. ಇದು ಕಾರಣ_ ಕ್ಷುತ್ತಿಂಗೆ ಭಿಕ್ಷೆ, ಸೀತಕ್ಕೆ ರಗಟೆ, ಮಾತಿಂಗೆ ಮಂತ್ರ, ಶಯನಕ್ಕೆ ಶಿವಧ್ಯಾನವೆಂದು ಹೇಳಿಕೊಟ್ಟ ಗುರುವಚನವ ಮೀರಿ ನಡೆವವರಿಗೆ ಪರದಲ್ಲಿ ಪರಿಣಾಮ ದೊರೆಕೊಳ್ಳದು ನೋಡಾ. ಇದು ಕಾರಣ_ ಗುರುವಾಜ್ಞೆಯ ಮೀರಿ ಮನಕ್ಕೆ ಬಂದಂತೆ ನಡೆವವರ ಎನಗೊಮ್ಮೆ ತೋರದಿರಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವಂ ಬಿಗಿದು, ಹಂಸನೆಂಬ ಎರಡೆತ್ತನ್ನೇ ಹೂಡಿ, ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ : ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ : ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಣ್ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರು ತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.
--------------
ಪುರದ ನಾಗಣ್ಣ
ಜಂಗಮದ ಪಾದತೀರ್ಥವು ಭವರೋಗವೈದ್ಯವಯ್ಯಾ. ಜಂಗಮದ ಪಾದತೀರ್ಥವು ಶಿವಸಾಯುಜ್ಯವಯ್ಯಾ. ಜಂಗಮದ ಪಾದತೀರ್ಥವು ಜೀವನ್ಮುಕ್ತಿಯಯ್ಯಾ. ಜಂಗಮದ ಪಾದತೀರ್ಥವು ಆದ್ಥಿ ವ್ಯಾದ್ಥಿ ವಿಪತ್ತು ರೋಗರುಜಿನಂಗಳ ಶೋದ್ಥಿಸಿ ಕಿತ್ತು ಬಿಸುಟುವುದಯ್ಯಾ. ಜಂಗಮದ ಪಾದತೀರ್ಥವು ಅಂಗದ ಅವಗುಣವ ಕಳೆವುದಯ್ಯಾ. ಜಂಗಮದ ಪಾದತೀರ್ಥವು ಲಿಂಗಕ್ಕೆ ಕಳೆಯನಿಪ್ಪುದಯ್ಯಾ. ಇಂತಪ್ಪ ಜಂಗಮದ ಪಾದತೀರ್ಥಕ್ಕೆ ಭಕ್ತನಾದಡೂ ಆಗಲಿ ಮಹೇಶ್ವರನಾದಡೂ ಆಗಲಿ ಆರಾದಡೇನು ಅಡಿಯಿಟ್ಟು ನಡೆದು ಬಂದು ಭಯಭಕ್ತಿಯಿಂದೆ ಅಡ್ಡಬಿದ್ದು, ಜಂಗಮದ ಪಾದತೀರ್ಥವನು ಶುದ್ಧ ಸಾವಧಾನದಿಂದೆ ತನ್ನ ಲಿಂಗಕ್ಕೆ ಅರ್ಪಿಸಿ, ಅಂಗಕ್ಕೆ ಕೊಳ್ಳಬಲ್ಲಡೆ, ಆ ಮಹಾತ್ಮನೆ ಆದಿಪುರಾತನನೆಂಬೆ; ಅಭೇದ್ಯ ಭೇದಕನೆಂಬೆ. ಹೀಗಲ್ಲದೆ ಭಕ್ತಿಹೀನನಾಗಿ, ಯುಕ್ತಿಶೂನ್ಯನಾಗಿ, ಗರ್ವದ ಪರ್ವತವನೇರಿ ಹೆಮ್ಮೆ ಹಿರಿತನವು ಮುಂದುಗೊಂಡು ಆ ಜಂಗಮದ ಪಾದತೀರ್ಥವನು ಕಾಲಿಲ್ಲದ ಹೆಳವನಂತೆ ತಾನಿದ್ದಲ್ಲಿಗೆ ತರಿಸಿಕೊಂಡು ಅವಿಶ್ವಾಸದಿಂದೆ ಕೊಂಬ ಜೀವಗಳ್ಳರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->