ಅಥವಾ

ಒಟ್ಟು 34 ಕಡೆಗಳಲ್ಲಿ , 22 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಸರ್ವಮಯ ನಿನ್ನ ಬಿಂದುವಾದಲ್ಲಿ ಆವುದನಹುದೆಂಬೆ, ಆವುದನಲ್ಲಾಯೆಂಬೆ? ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ? ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು. ಆರ ಹರಿದು ಇನ್ನಾರಿಗೆ ಅರ್ಪಿಸುವೆ? ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.
--------------
ದಸರಯ್ಯ
ಒಬ್ಬ ಸಹಜಗಳ್ಳನು ನಿಟಿಲಮುಂದಳ ಚಾವಡಿಯಲ್ಲಿ ನಿಂದು ರಾಜಿಸುತಿಪ್ಪನು ನೋಡಾ! ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು ಹೆಜ್ಜೆ ಹೋದವು. ಅಂಗಲಿಂಗಸಂಗಸಮರಸವೆಂಬ ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ. ಆ ತಳವಾರನು ಹೆಜ್ಜೆಯನೆತ್ತಿ ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಂಗಳ ಸೂತಕವ ಯೋನಿ ತಡೆದು, ಬಾಯ ಬಸುರಾಗಿ, ಕೈ ಬೆಸನಾಯಿತ್ತು. ಕೈಯ ಶಿಶುವ ಕಂಗಳ ತಾಯಿ ಎತ್ತಿ, ಭಾವದ ದಾದಿಯ ಕೈಯಲ್ಲಿ ಕೊಟ್ಟು, ಅರ್ಕೇಶ್ವರಲಿಂಗವು ತೊಟ್ಟಿಲಲ್ಲಿ ಬೆಳಗುತ್ತದೆ.
--------------
ಮಧುವಯ್ಯ
ತೋಹಿನ ಶಬರನಂತೆ, ಲಾಗಿನ ವ್ಯಾಘ್ರನಂತೆ, ಆಡುವ ವಿಧಾಂತನಂತೆ, ಇಂತೀ ವೇಷ ಸಹಜವೆ ? ದೊರೆವನ್ನಬರ ಭಕ್ತ, ದೊರೆವನ್ನಬರ ವಿರಕ್ತ. ಇಂತೀ ಇವರಿರವ ಕಂಡು ಬೆರಸಿದೆನಾದಡೆ, ಎನಗೆ ಘೋರ ನರಕ, ನಿಮಗೆ ಎಕ್ಕಲ ತಪ್ಪದು. ಇದಕ್ಕೆ ಮುಂಡಿಗೆಯ ಹಾಕಿದೆ, ಎತ್ತಿ ಶುದ್ಧರಾಗಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಧ್ಯಾತ್ಮ ಅಧ್ಯಾತ್ಮವೆಂಬಿರಿ ಅಧ್ಯಾತ್ಮವೆಂಬುದದು ಏನು ಹೇಳಾ? ವಾಯುಪ್ರಾಣಿಯ ಕೊಂದು, ಅಕ್ಷರವೈದರ ಎತ್ತಿ ತೋರಿದನು ಶ್ರೀಗುರುರಾಯನು. ಬಹಳ ಲಿಂಗವ ತಂದು ಸೂಕ್ಷ್ಮವ ಮಾಡೀಗ ಕೊಟ್ಟು ಬಳಿಕ ಯೋಗವುಂಟೆ? ಅಟ್ಟುದನು ಮರಳಡುವ ಮಿಟ್ಟೆಯ ಭಂಡರ, ಏನೆಂಬೆನೈ ಗುರುವಾಜ್ಞೆ ಜಡರ. ಆನಂದರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಯೋಗವಾದಲ್ಲಿ ಯೋಗವುಂಟೆ?
--------------
ಸಿದ್ಧರಾಮೇಶ್ವರ
ಗುರುವಿನಲ್ಲಿ ವಿಶ್ವಾಸಿಸಿ, ಲಿಂಗವ ಮರೆಯಬೇಕು. ಲಿಂಗದಲ್ಲಿ ವಿಶ್ವಾಸಿಸಿ, ಜಂಗಮವ ಮರೆಯಬೇಕು. ಜಂಗಮದಲ್ಲಿ ವಿಶ್ವಾಸಿಸಿ, ತ್ರಿವಿಧವ ಮರೆಯಬೇಕು. ತ್ರಿವಿಧವ ಮರೆದು ಅರಿದಲ್ಲಿ, ಲಿಂಗ ಬಿದ್ದಿತ್ತೆಂಬ ಸಂದೇಹವಿಲ್ಲದೆ, ಎತ್ತಿ ಅವಧರಿಸಿಕೊಂಡು, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ, ಅರಿವಿಂಗೆ ಎಡೆದೆರಪಿಲ್ಲದೆ ನಿಂದುದು. ಅಂಗಕ್ಕೆ ಅದೆ ಪ್ರಾಯಶ್ಚಿತ್ತ, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಣುಮಾತ್ರವಪ್ಪ ವಾಯುವ, ಮನದ ಕೊನೆಯ ಮೊನೆಯಲ್ಲಿ ಸಪ್ತಸಮುದ್ರ, ದಿಗ್ವಳಯದ ಗಿರಿಗಳು ಮುಂತಾದವ ತನ್ನ ಸತ್ವದಲ್ಲಿ ಎತ್ತುವದ ಕಂಡೆ. ಕೊಂಡು ಹೋ[ಹು]ದ ಕಂಡುದಿಲ್ಲ. ಎತ್ತಿ ಎಯ್ದಿಹೆನೆಂಬುದರಲ್ಲಿ, ವಾಯುಸತ್ವ ನಷ್ಟವಾಯಿತ್ತು. ಇಂತೀ ಗುಣವ ತ್ರಿಗುಣಾತ್ಮಕರು ತಿಳಿದು, ಜಡ ಅಜಡವೆಂಬುದ ಕಳೆದು ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಳಗು ಮಾಡಿರೆ.
--------------
ಮೋಳಿಗೆ ಮಾರಯ್ಯ
ಅತ್ತಲಿತ್ತಲು ತಿರುಗಾಡಿ ಹೊತ್ತುಗಳೆಯದೆ ನಿತ್ಯಶರಣನ ಮನೆಗೆ ಸುತ್ತಿ ಸುತ್ತಿ ಸುಳಿದು ಸತ್ತುಹೋಗದ ಕರ್ತಜಂಗಮಲಿಂಗಬಂದರೆ ಬತ್ತಲೆಬಂದಡಿಗೆರಗಿ ಸತ್ಯಸುಯಿದಾನದ ಪಾಕವ ಗಡಣಿಸಿ ಎತ್ತಿ ಎಡೆಮಾಡಿದರೆ ತುತ್ತು ಭೋಜ್ಯಾದಿಗಳ ಬತ್ತಿಸಿದಮೇಲೆ ನಿತ್ಯವಾಗಿ ಸುಖಿಸುವ ನಮ್ಮ ಗುರುನಿರಂಜನ ಚನ್ನಬಸವಲಿಂಗವು ತಾನೆಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುದುರೆಯ ಕುಪ್ಪಟ ಘನವಾಯಿತ್ತು. ಆನೆಯ ಹರಿದಾಟ ನಿಲಬಾರದು. ಒಂಟೆಯ ಕತ್ತು ನೆಟ್ಟಗಾಯಿತ್ತು. ಬಂಟರ ಹರಿದಾಟ ಉಂಟು ಕಟ್ಟಿಗೆಯವರು ಉಗ್ಗಡಿಸುತ್ತ, ಭಟರುಗಳು ಪೊಗಳುತ್ತ , ಸಕಲವಾದ್ಯ ರಭಸದೊಳಗೆ ಸಂದಳಿಯೆಂಬ ಅಂದಳದ ಮೇಲೆ ಚಂದವಾಗಿ ಮನೋರಾಜ್ಯಂಗೆಯ್ವುತ್ತಿರಲು, ಈ ಸುಖವನೊಲ್ಲದೆ, ಮುಂದೆ ದುಃಖ ಉಂಟೆಂದು ಶರಣನರಿದು, ತಲೆ ಎತ್ತಿ ನೋಡಿ, ಘನಗುರುವಿನ ಹಸ್ತದಿಂದ ಅನುಜ್ಞೆಯಂ ಪಡೆದು, ಧ್ಯಾನ ಧಾರಣ ಸಮಾಧಿಯಿಂದ ತಿಳಿದು ನೋಡಲಾಗಿ, ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗ ಅರಸು, ಆ ಅರಸಿನ ಗೊತ್ತುವಿಡಿದು ಇತ್ತಲೆ ಮನವೆಂಬ ಅರಸನು ಹಿಡಯಲಾಗಿ ಹಿಡಿದು, ಆನೆ, ಕುದುರೆ, ಸೇನೆಯನೆಲ್ಲ ಸೂರೆಗೊಂಡು, ಭಂಡಾರ ಬೊಕ್ಕಸ ಅರಮನೆಯನೆಲ್ಲ ಸುಟ್ಟು ಬಟ್ಟಬಯಲಮಾಡಿದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಇಷ್ಟ ಬಿದ್ದಲ್ಲಿ ಎತ್ತಿ ಕಟ್ಟಿಕೊಳಲಾಗದು. ವ್ರತ ಕೆಟ್ಟುದ ಕಂಡು, ಇನ್ನು ತಪ್ಪೆನೆಂದಡೆ ಒಪ್ಪಿ ಕೂಡಿಕೊಳ್ಳಬಾರದು. ಸತಿ ಕೆಟ್ಟು ನಡೆದುದ ಕಂಡು ಆ ಗುಣ ಶುನಕಸ್ವಪ್ನದಂತೆ. ಇಂತೀ ಇವ ಕಂಡು ಮತ್ತೆ ಹಿಂಗದಿದ್ದೆನಾದಡೆ ಇಹಪರಕ್ಕೆ ಹೊರಗು, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಹಂದಿ, ಮೊಲ, ಪಶುವ ತಿಂದವನೇ ಭಕ್ತ. ಆನೆ, ಕುದುರೆ, ನಾಯಿಯ ತಿಂದವನೇ ಮಹೇಶ್ವರ. ಕೋಣ, ಎಮ್ಮೆ, ಹುಲಿಯ ತಿಂದವನೇ ಪ್ರಸಾದಿ. ಕೋಡಗ, ಸರ್ಪ, ಉಡವ ತಿಂದವನೇ ಪ್ರಾಣಲಿಂಗಿ. ಬೆಕ್ಕನು, ಹರಿಣವನು, ಕರುಗಳನು ತಿಂದವನೇ ಶರಣನು. ಹದ್ದು, ಕಾಗೆ, ಪಿಪೀಲಿಕನ ತಿಂದವನೇ ಐಕ್ಯ. ಇಂತೀ ಎಲ್ಲವ ಕೊಂದು ತಿಂದವನ ಕೊಂದು ಯಾರೂ ಇಲ್ಲದ ದೇಶಕ್ಕೆ ಒಯ್ದು ಅಗ್ನಿ ಇಲ್ಲದೇ ಸುಟ್ಟು, ನೀರಿಲ್ಲದೆ ಅಟ್ಟು, ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಪರಿಮಾಣವಿಲ್ಲದ ಹರಿವಾಣದಲ್ಲಿ ಗಡಣಿಸಿಕೊಂಡು, ಹಿಂದು ಮುಂದಿನ ಎಡಬಲದ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಸ್ವಸ್ಥ ಪದ್ಮಾಸನದಲ್ಲಿ ಮುಹೂರ್ತವ ಮಾಡಿ, ಏಕಾಗ್ರಚಿತ್ತಿನಿಂದ ಹಲ್ಲು ಇಲ್ಲದೆ ಮೆಲ್ಲಬಲ್ಲರೆ ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದಿ ಎಂಬೆನಯ್ಯಾ. ಇಂತೀ ಭೇದವನು ತಿಳಿಯದೆ ಭಕ್ತರ ಮನೆಯಲ್ಲಿ ಉನ್ನತಾಸನದ ಗದ್ದುಗೆಯ ಮೇಲೆ ಕುಳಿತು, ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ಗುರುಮೂರ್ತಿಗಳು, ಚರಮೂರ್ತಿಗಳು ಇಂತೀ ಉಭಯರು ಸತ್ತ ಶವದಿಂದತ್ತತ್ತ ನೋಡಾ. ಇಂತೀ ವಿಚಾರವನು ತಿಳಿಯದೆ ನಾವು ಪರಮವಿರಕ್ತರು, ಪಟ್ಟದಯ್ಯಗಳು, ಚರಮೂರ್ತಿಗಳು, ಗುರುಸ್ಥಲದ ಅಯ್ಯತನದ ಮೂರ್ತಿಗಳೆಂದು ಪಾದಪೂಜೆಯ ಮಾಡಿಸಿಕೊಂಡು ಪಾದವ ಪಾಲಿಸುವರೆಂದು ಭಕ್ತರಿಗೆ ತೀರ್ಥವೆಂದು ಕೊಡುವಂಥವರು ಬೀದಿಬಾಜಾರದಲ್ಲಿ ಕುಳಿತು ಸೆರೆಯ ಮಾರುವ ಹೆಂಡಗಾರರು ಇವರಿಬ್ಬರು ಸರಿ ಎಂಬೆ. ಇಂತೀ ನಿರ್ಣಯವನು ತಿಳಿಯದೆ ಭಕ್ತರನಡ್ಡಗೆಡಹಿಸಿಕೊಂಡು. ಪ್ರಸಾದವೆಂದು ತಮ್ಮ ಎಡೆಯೊಳಗಿನ ಕೂಳ ತೆಗೆದು ಕೈಯೆತ್ತಿ ನೀಡುವರು. ಪೇಟೆ ಬಜಾರ, ಬೀದಿಯಂಗಡಿ ಕಟ್ಟೆಯಲ್ಲಿ ಕುಳಿತು ಹೋತು ಕುರಿಗಳನು ಕೊಂದು ಅದರ ಕಂಡವನು ಕಡಿದು ತಕ್ಕಡಿಯಲ್ಲಿ ಎತ್ತಿ ತೂಗಿ ಮಾರುವ ಕಟುಕರು ಇವರಿಬ್ಬರು ಸರಿ ಎಂಬೆ. ಇಂತೀ ಭೇದವ ತಿಳಿಯದೆ ಗುರುಲಿಂಗಜಂಗಮವೆಂಬ ತ್ರಿಮೂರ್ತಿಗಳು ಪರಶಿವಸ್ವರೂಪರೆಂದು ಭಾವಿಸಿ ಪಾದೋದಕ ಪ್ರಸಾದವ ಕೊಂಬ ಭಕ್ತನು ಕೊಡುವಂತ ಗುರುಹಿರಿಯರು ಇವರ ಪಾದೋದಕ ಪ್ರಸಾದವೆಂತಾಯಿತಯ್ಯಾ ಎಂದಡೆ. ಹಳೆನಾಯಿ ಮುದಿಬೆಕ್ಕು ಸತ್ತ ಮೂರುದಿನದ ಮೇಲೆ ಆರಿಸಿಕೊಂಡು ಬಂದು ಅದರ ಜೀರ್ಣಮಾಂಸವನು ತಿಂದು ಬೆಕ್ಕು, ನಾಯಿ, ಹಂದಿಯ ಉಚ್ಚಿಯ ಕುಡಿದಂತಾಯಿತಯ್ಯಾ. ಇಂತಿದರನುಭಾವವನು ಸ್ವಾನುಭಾವಗುರುಮೂರ್ತಿಗಳಿಂದ ತನ್ನ ಸ್ವಯಾತ್ಮಜ್ಞಾನದಿಂದ ವಿಚಾರಿಸಿ ತಿಳಿದು ನೋಡಿ, ಇಂತಿವರೆಲ್ಲರೂ ಕೂಳಿಗೆ ಬಂದ ಬೆಕ್ಕು ನಾಯಿಗಳ ಹಾಗೆ ಅವರ ಒಡಲಿಗೆ ಕೂಳನು ಹಾಕಿ, ಬೆಕ್ಕು ನಾಯಿಗಳ ಅಟ್ಟಿದ ಹಾಗೆ ಅವರನು ಅಟ್ಟಬೇಕು ನೋಡಾ. ಇಂತಿವರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು. ಈ ಹೊಲೆಯ ಮಾದಿಗರ ಮೇಳಾಪವನು ಬಿಟ್ಟು ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಕೊಳಬಲ್ಲರೆ ಆ ಭಕ್ತರಿಗೆ ಮೋಕ್ಷವೆಂಬುದು ಕರತಳಾಮಳಕ ನೋಡೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊಲಕ್ಕೆ ಹೋಗುತಿರ್ಪವನ ಕಂಡು, ಊರೆಲ್ಲರು ನೆರೆದು, ಬೇಡ ಬದುಕೆಂದಡೆ ಆರೆನೆಂದ. ಅದೇತಕ್ಕೆ ಆಕೆಯ ದೂರೆಂದಡೆ ಅವ ಬಾತಿಗೇಡಿ. ಅವಳ ತಾಯ ಕೊಟ್ಟಡೆ ಇರ್ಪೆನೆಂದು ಕೂಡಿಕೊಂಡ. ಅಜಾತರೊಂದಿಗೆ ಹೇಳೆ, ನೀತಿ ಲೇಸಾಯಿತ್ತು ಅತ್ತೆ ಅಳಿಯಂಗೆ. ಅತ್ತೆ ಅಳಿಯನ ಒಲ್ಲೆನೆಂದು ಹೊತ್ತುಹೋರುತ್ತಿರಲಾಗಿ, ಅಳಿಯ ಅತ್ತೆಯ ಹಿಡಿದು ಅಳಿದನುಟ್ಟ ಸೀರೆಯ. ಮೊತ್ತದ ಭಗವ ಕಂಡು ಒತ್ತಿಹಿಡಿಯಲಾಗಿ, ಸತ್ತಳು ಅತ್ತೆ ಅಳಿಯನ ಕೈಯಲ್ಲಿ. ಅತ್ತೆಯ ಕಾಲುದೆಸೆಯಲ್ಲಿ ಕುಳಿತು, ಎತ್ತಿ ನೋಡಲಾಗಿ, ನಿಶ್ಚಯವಾಯಿತ್ತು ಅತ್ತೆಯ ಭಗ. ಹುಟ್ಟಿದರು ಮೂವರಲ್ಲಿ, ಕೆಲದಲ್ಲಿ ಇಬ್ಬರು, ನಡುವೆ ಒಬ್ಬನಾಗಿ. ಇಬ್ಬರ ಬಿಟ್ಟು, ಒಬ್ಬನ ಹಿಡಿದು ಅಬ್ಬರಿಸಲಾಗಿ, ಅವನೆದ್ದು ಬೊಬ್ಬೆಯ ಹೊಯ್ದ. ಹೊಯ್ದ ಹೊಯ್ಗಳಿನಲ್ಲಿ ಅತ್ತೆಯ ತಂದ ಅಳಿಯ, ನಾಮನಷ್ಟವಾದ. ಇಂತಿದನೆತ್ತಲೆಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->