ಅಥವಾ

ಒಟ್ಟು 43 ಕಡೆಗಳಲ್ಲಿ , 10 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚಗೋಮಯವ ತಂದು ಪಂಚಪ್ರಣವ ಶಿಖಾಗ್ನಿಯಿಂದೆ ದಹಿಸಿ, ವಂಚನೆಯಳಿದುಳಿದು ವರ್ಮವರಿದು ಸ್ಥಾನವು ಧೂಳನ ಧಾರಣವಾದ ಮಹಾಘನಮಹಿಮ ಶಿವಶರಣಂಗೆ ನಮೋ ನಮೋ ಎಂಬೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೀಗುರುವಿನಿಂದದ್ಥಿಕರು ಆವ ಲೋಕದೊಳಗಿಲ್ಲವಯ್ಯಾ. ಶ್ರೀಗುರುವಿನಂತೆ ಪರೋಪಕಾರಿಗಳ ಮತ್ತಾರನೂ ಕಾಣೆನಯ್ಯಾ. ಅದೆಂತೆಂದೊಡೆ : ಎನ್ನ ಕಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕಿವಿಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ನಾಸಿಕ ನಾಲಗೆಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕರಚರಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ತನುಮನಪ್ರಾಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಸಕಲಕರಣೇಂದ್ರಿಯಂಗಳ ಭಕ್ತರ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಇಂತಿವು ಮೊದಲಾಗಿ ಎನ್ನ ಸರ್ವ ಅವಯವಂಗಳನೆಲ್ಲ ಸದ್ಭಕ್ತರ ಮಾಡಿ ಲಿಂಗಾರ್ಪಿತಕ್ಕೆ ಅನುಗೊಳಿಸಿದ ಶ್ರೀಗುರುವಿನ ಮಹಾಘನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪರಮಚೈತನ್ಯ ಜಂಗಮವ ನೆರೆಯರಿದು ಇರವಿನೊಳು ಹಿರಿದು ಹೆಚ್ಚಿ ನಿತ್ಯಕಾಲದಿಂದಿತ್ತು ಕೊಂಬ ಪರಿಣಾಮಿಯ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಿರಕ್ತನೆನಿಸುವಂಗಾವುದು ಚಿಹ್ನೆವೆಂದೊಡೆ : ವಿಷಯವಿಕಾರವ ಸುಟ್ಟಿರಬೇಕು. ಬಯಕೆ ನಿರ್ಬಯಕೆಯಾಗಿರಬೇಕು. ಸ್ತ್ವರಜತಮವೆಂಬ ತ್ರೈಗುಣಂಗಳನಿಟ್ಟೊರಸಿರಬೇಕು. ಅದೆಂತೆಂದೊಡೆ : ``ವಿಕಾರಂ ವಿಷಯಾತ್‍ದೂರಂ ರಕಾರಂ ರಾಗವರ್ಜಿತಂ | ತಕಾರಂ ತ್ರೈಗುಣಂ ನಾಸ್ತಿ ವಿರಕ್ತಸ್ಯ ಸುಲಕ್ಷಣಂ ||'' ಇಂತಪ್ಪ ವಿರಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ. ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ. ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ. ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ. ಎನ್ನ ನೇತ್ರದಲ್ಲಿ ಶಿಕಾರವಾಗಿದ್ದಾತ ಬಸವ. ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ. ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ. ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ. ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ ಗುರುವಿನ ಗುರು ಚೆನ್ನಬಸವ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅರಿಯಬಲ್ಲಡೆ ವಿರಕ್ತನೆಂಬೆನು. ಆಚಾರವನರಿದಡೆ ಅಭೇದ್ಯನೆಂಬೆನು. ಸ್ತುತಿ ನಿಂದೆಗೆ ಹೊರಗಾದಡೆ ಸುಮ್ಮಾನಿ ಎಂಬೆನು. ಘನತತ್ವವನರಿದು ಶಿಶುಕಂಡ ಕನಸಿನಂತೆ ಇದ್ದಡೆ ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಚರಾಚರಾತ್ಮಕ ಪ್ರಪಂಚವೆಲ್ಲ ಶಿವನ ಚಿದ್ಗರ್ಭದಿಂದುಯಿಸಿಪ್ಪವೆಂದು, ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು, ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ. ತನಗೆ ಬಂದ ಅಪವಾದ ನಿಂದೆ ಎಡರಾಪತ್ತುಗಳಲ್ಲಿ ಎದೆಗುಂದದೆ ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು ಶಿವಾಜ್ಞೆಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ. ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ ಅನಾದಿ ಪರಶಿವನು ಪ್ರಸನ್ನತ್ವವನುಂಟುಮಾಡುವ ಅನಾದಿ ಬೋಧ ಶಕ್ತಿಯನು ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ. ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು ತನ್ನಾಶ್ರಯದಲ್ಲಿ ನಡೆದು ತಾನು ಆವುದನ್ನೂ ಆಶ್ರಯಿಸದೆ ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ ಸ್ವತಂತ್ರ ಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ. ತನ್ನಾಶ್ರಯವ ಪಡೆದ ದೃಶ್ಯಮಾನ ದೇಹಾದಿ ಜಗವೆಲ್ಲ ಅನಿತ್ಯವೆಂಬ ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ ಕಾರಣನಪ್ಪ ಪತಿಪರಶಿವಲಿಂಗವೇ ನಿತ್ಯವೆಂಬರಿವನುಂಟುಮಾಡುವ ಅಲುಪ್ತ ಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ. ಅಂಗಲಿಂಗಗಳ ಸಂಯೋಗವ ತೋರಿ, ಅಖಂಡ ಪರಶಿಲಿಂಗೈಕ್ಯವನುಂಟುಮಾಡಿ ಕೊಡುವ ಅನಂತ ಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ. ಇದಕ್ಕೆ ಶಿವರಹಸ್ಯೇ ; 'ಯದ್ಭಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ ೀ ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ || ಯತ್ಪ್ರಸಾದಾಭಿದಂ ಸ್ಥಾನಂ ತದ್ಬೋಧೋ ನಿರಂಕುಶಃ ೀ ಯತ್ಪ್ರಣಲಿಂಗಕಂ ನಾಮ ತತ್ಸ್ವಾತಂತ್ರೈಮುದಾಹೃತಂ || ಯದಸ್ತಿ ಶರಣಂ ನಾಮ ಹ್ಯಲುಪ್ತಾ ಶಕ್ತಿರುಚ್ಯತೇ ೀ ಯದೈಕ್ಯಸ್ಥಾನಮೂರ್ಧಸ್ಥಾ ಹ್ಯನಂತಾಶಕ್ತಿರುಚ್ಯತೇ ||ú ಎಂದುದಾಗಿ, ಇಂತಪ್ಪ ಷಟ್‍ಸ್ಥಲಗಳಲ್ಲಿ ಷಡ್ವಿಧ ಶಕ್ತಿಗಳ ಸ್ಥಳಕುಳಂಗಳ ತಿಳಿದು, ಷಡ್ವಿಧ ಲಿಂಗಗಳಲ್ಲಿ ಧ್ಯಾನ ಪೂಜಾದಿಗಳಿಂದ ಅಂಗಗೊಂಡು ಭವದ ಬಟ್ಟೆಯ ಮೆಟ್ಟಿ ನಿಂದಲ್ಲದೆ ಷಟ್‍ಸ್ಥಲಬ್ರಹ್ಮಿಗಳಾಗರು. ಇಂತಲ್ಲದೆ ಅಪವಾದ ನಿಂದೆಗಳ ಪರರ ಮೇಲೆ ಕಣ್ಗಾಣದೆ ಹೊರಿಸುತ್ತ ಪರದಾರ ದಾಶಿ ವೇಶಿ ಸೂಳೆಯರ ಕೂಡಿ ಭುಂಜಿಸಿ ತೊಂಬಲತಿಂಬ ಹೇಸಿ ಮೂಳರು ಪೋತರಾಜ, ಜೋಗಿ, ಕ್ಷಪಣರಂತೆ ಜಟಾ, ತುರುಬು, ಬೋಳುಮುಂಡೆಗೊಂಡು ಕೂಳಿಗಾಗಿ ತಿರುಗುವ ಮೂಳ ಚುಕ್ಕೆಯರ ವಿರಕ್ತ ಷಟ್‍ಸ್ಥಲಬ್ರಹ್ಮಿಗಳೆನಬಹುದೇನಯ್ಯ ? ಅಂತಪ್ಪ ಅನಾದಿ ಷಟ್‍ಸ್ಥಲಬ್ರಹ್ಮದ ಷಡ್ವಿಧಶಕ್ತಿಯನರಿದು ವಿರಕ್ತ ಜಂಗಮ ಷಟ್‍ಸ್ಥಲ ಬಾಲಬ್ರಹ್ಮಿ ನಿರಾಭಾರಿಯಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅರ್ಥ ಪ್ರಾಣ ಅಬ್ಥಿಮಾನವ ಗುರುಲಿಂಗಜಂಗಮಕ್ಕೆ ಸವೆದು, ಸಂಸಾರಬಂಧನವ ಕಳೆದ ಸಂಸಾರಿಗಳಿಗೆ ಸದ್ಭಕ್ತರಿಗೆ ಸಂಸಾರಿಗಳೆನಬಹುದೆ ? ಎನಲಾಗದು. ಅದು ಎಂತೆಂದರೆ : ಚಂದ್ರಮನ ಕಿರಣದೊಳು ಬಿಸಿಯುಂಟೇನಯ್ಯಾ ? ಪರಮಾತ್ಮನ ಬೆರೆದ ನಿಬ್ಬೆರಗಿ[ನ] ಶರಣರಿಗೆ ಸಂಸಾರ ಉಂಟೇನಯ್ಯಾ ? ತನುಸಂಸಾರಂಭವ ಗುರುವಿಂಗಿತ್ತು, ಮನಸಂಸಾರಂಭವ ಲಿಂಗಕ್ಕಿತ್ತು , ಧನಸಂಸಾರಂಭವ ಜಂಗಮಕ್ಕಿತ್ತು ನಿಃಸಂಸಾರಿಯಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮುಖ್ಯವಾದ ಪ್ರಮಥಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮದ ಕಳವಳದಲ್ಲಿ ಕಂಗೆಡುವನಲ್ಲ ಶರಣ. ಜೀವನುಪಾದ್ಥಿಕೆಯ ಹೊದ್ದವನಲ್ಲ ಶರಣ. ಭಾವದ ಭ್ರಮೆಯಲ್ಲಿ ಸುಳಿವನಲ್ಲ ಶರಣ. ಮನದ ಮರವೆಯಲ್ಲಿ ಮಗ್ನನಲ್ಲ ಶರಣ. ಕರಣಂಗಳ ಕತ್ತಲೆಯಲ್ಲಿ ಸುತ್ತಿ ಬೀಳುವನಲ್ಲ ಶರಣ. ಇಂದ್ರಿಯಂಗಳ ವಿಕಾರದಲ್ಲಿ ಹರಿದಾಡುವನಲ್ಲ ಶರಣ. ಪರತರಲಿಂಗದ ಬೆಳಗಿನೊಳಗೆ ಬೆರೆದು ತೆರಹಿಲ್ಲದೆ ಬೆಳಗುವ ಪರಮಗಂಬ್ಥೀರ ಶರಣನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೆನೆವ ಜಿಹ್ವೆ[ಗೆ] ಕಾಮನ ನೆನಸಿದೆ, ನೋಡುವ ಕಂಗಳಿಗೆ ಕಾಮನ ನೋಡಿಸಿದೆ, ಕೇಳುವ ಕರ್ಣಕ್ಕೆ ಕಾಮವನೆ ಕೇಳಿಸಿದೆ, ವಾಸಿಸುವ ನಾಸಿಕಕ್ಕೆ ಕಾಮವನೆ ವಾಸಿಸಿದೆ, ಮುಟ್ಟುವ ಹಸ್ತಕ್ಕೆ ಕಾಮವನೆ ಮುಟ್ಟಿಸಿದೆ. ಅದು ಎಂತೆಂದೊಡೆ : ನೆನೆವ ಜಿಹ್ವೆ ಪರಧನ ಪರಸ್ತ್ರೀಯರ ನೆನೆವುದು, ನೋಡುವ ಕಂಗಳು ಪರಧನ ಪರಸ್ತ್ರೀಯರನೆ ನೋಡುವವು, ಕೇಳುವ ಕರ್ಣ ಪರಧನ ಪರಸ್ತ್ರೀಯರ ಪರನಿಂದ್ಯವನೆ ಕೇಳುವವು, ವಾಸಿಸುವ ನಾಸಿಕ ಪರಧನ ಪರಸ್ತ್ರೀಯರ ವಾಸಿಸುವುದು, ಮುಟ್ಟುವ ಹಸ್ತ ಪರಧನ ಪರಸ್ತ್ರೀಯರನೆ ಮುಟ್ಟುವುದು. ಇಂತೀ ಪಂಚೇಂದ್ರಿಯಮುಖದಲ್ಲಿ ಕಾಮವೆ ಮುಖ್ಯವಾಗಿಪ್ಪುದಯ್ಯ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗೆಳಸದ ನಿಸ್ಸೀಮ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರೆಯಮೇಲೆ ಮಳೆ ಹೊಯಿದಂತೆ, ಅರಿವುಳ್ಳವರಲ್ಲಿ ಅಗಮ್ಯವುಂಟೆ ? ವಾಯು ರೂಪಾದುದುಂಟೆ ? ಸರ್ವಸಂಬಂಧವ ಅರಿದ ಶರಣನ ಕಣ್ಣಿನಲ್ಲಿಕಂಡವರುಂಟೆ ? ತಿಪ್ಪೆಯ ಮೇಲಣ ಅರುವೆಯ ಸುಟ್ಟಡೆ ದಗ್ಧವಾದಂತೆ ಇರಬೇಕು. ಹೀಂಗಿರಬಲ್ಲಡೆ ಅನುಭಾವಿ ಎಂಬೆನಯ್ಯಾ, ಅಭೇದ್ಯರೆಂಬೆನಯ್ಯಾ, ಅಂಗಲಿಂಗ ಸಂಬಂದ್ಥಿಗಳೆಂಬೆನಯ್ಯಾ. ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ. ಹೀಂಗಲ್ಲದೆ ಆತ್ಮತೇಜಕ್ಕೆ ಹೋರಾಡುವ ಘಾತಕರ ನಿಜವಿರಕ್ತರೆಂಬರೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಕಾಮವು ಲಿಂಗಮುಖವಾಗಿ, ಕ್ರೋಧವು ಲಿಂಗಮುಖವಾಗಿ, ಲೋಭವು ಲಿಂಗಮುಖವಾಗಿ, ಮೋಹವು ಲಿಂಗಮುಖವಾಗಿ, ಮದವು ಲಿಂಗಮುಖವಾಗಿ, ಮತ್ಸರವು ಲಿಂಗಮುಖವಾಗಿ ಇಪ್ಪಾತನೆ ನಿರ್ಮೋಹಿ. ಅದು ಎಂತೆಂದೊಡೆ : ಪರಧನ ಪರಸ್ತ್ರೀಯ ಕಾಮಿಸುವಂತೆ ಲಿಂಗವ ಕಾಮಿಸುವುದೆ ಕಾಮ. ಪರರೊಳು ಕ್ರೋದ್ಥಿಸುವಂತೆ ಕರ್ಮವಿರಹಿತನಾದರೆ ಕ್ರೋಧ. ಅರ್ಥ ಸ್ತ್ರೀಯರ ಮೇಲೆ ಲೋಭವಿಡುವಂತೆ ಲಿಂಗದೊಡನೆ ಲೋಭವಿಟ್ಟು ಲಿಂಗವ ಕೂಡಬಲ್ಲರೆ ಲೋಭ. ಅನ್ಯರ ಮೋಹಿಸುವಂತೆ ಲಿಂಗವ ಮೋಹಿಸಬಲ್ಲರೆ ಮೋಹ. ಅನ್ನಮದ ಪ್ರಾಯಮದ ತಲೆಗೇರುವಂದದಿ ಲಿಂಗಮದನಾಗಿರಬಲ್ಲರೆ ಮದ. ಅನ್ಯರೊಡನೆ ಮತ್ಸರಿಸುವಂತೆ ಲಿಂಗದೊಡನೆ ಮತ್ಸರಿಸಿ ಶರಣಕೃಪೆಯ ಪಡೆಯಬಲ್ಲರೆ ಮತ್ಸರ. ಇಂತಪ್ಪ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಲ್ಲಿ ಲಿಂಗಮುಖವಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಣಿಮಾಡದೊಳಡಗಿಹ ಮಾಣಿಕಕ್ಕೆ ಮಣಿ ಇಡಲಳವಲ್ಲ. ಮಾಣಿಕದ ಪ್ರಭೆಯಲ್ಲಿ ಕಾಣಬಹುದಾಕಾರಮೂರ್ತಿಯ. ಅಂತರಂಗದ ಜ್ಞಾನ ಬಹಿರಂಗದ ಕ್ರಿಯೆಯೊಳೊಮ್ಮೆ ಸರ್ವಾಂಗದೊಳು ಲಿಂಗವ ಸಂತೈಸಿಪ್ಪ ಸದ್ಭಕ್ತರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ, ಷಕಾರವೇ ಜೇಷೆ*, ಶಕಾರವೇ ರೌದ್ರಿ, ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ, ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ, ಔಕಾರವೇ ಶರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಲೂೃಕಾರವೇ ಭೀಮ, ಲೃಕಾರವೇ ಉಗ್ರ, Iೂಕಾರವೇ ಪಶುಪತಿ, ಋಕಾರವೇ ಉಮೇಶ್ವರ, ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ, ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ, ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ, ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ. ಟಕಾರವೇ ಯಮ, ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ, ಢಕಾರವೇ ವಾಯುವ್ಯ, ಣಕಾರವೇ ಕುಬೇರ, ತಕಾರವೇ ಈಶಾನ್ಯ, ಥಕಾರವೇ ಧರಾ, ದಕಾರವೇ ಧ್ರುವ, ಧಕಾರವೇ ಸೋಮ, ನಕಾರವೇ ಅಪ್ಪು, ಪಕಾರವೇ ಅನಿಲ, ಫಕಾರವೇ ಅನಲ, ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು, ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ, ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ, ಗಣೇಶ್ವರ, ವೃಷಭೇಶ್ವರ, ಅನಂತ, ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*, ಮಹಾಕಾಳ, ಭೃಂಗರೀಟಿ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ, ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ, ಉಮೇಶ್ವರ, ಪಶುಪತಿ, ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ, ಅರುಣ, ಅಸುರ, ಗಂಹ್ವರ, ವೇಗ, ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ, ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ, ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ, ರುದ್ರ, ಶರ್ವ, ಸೋಮ, ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ, ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ, ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ, ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಯಭೋಗಾಧಿಕಾರವನುಳ್ಳ ಪರಶಿವನು ತಾನೆ ತತ್ವಪ್ರಭಾವಮೂರ್ತಿಯೆನಿಸಿನದಫವ್ಯಯ ಅಪ್ರಮಾಣ ಅಸಾಧ್ಯ ನಿಷ್ಕಲತತ್ವವೆ ಪಂಚಸಂಜ್ಞೆಯಿಂದಿಪ್ಪುದು, ಅದೆಂತೆಂದಡೆ: ಜಗತ್‍ಸೃಷ್ಟಿಗಾದಿ, ಅಷ್ಟತನುಗಳಿಗಾದಿ, ತ್ರಿಮೂರ್ತಿಗಳಿಗಾದಿ, ಷಟ್ತ್ರಿಂಶತತ್ವಕ್ಕಾದಿ, ಈಶ್ವರ ಸದಾಶಿವಗಾದಿಯಾಗಿಪ್ಪ, ಮೇಲಣ ಪರತತ್ವವೆ ಪರ ಅನಂತಕೋಟಿ ಬ್ರಹ್ಮಾಂಡಗಳೊಳಗೆಡವಿಡದೆ ಚರಾಚರವೆನಿಸುವ ಪ್ರಾಣಿಗಳೊಳಗೆ ಸೂಕ್ಷ್ಮವಾಗಿ, ವಟವೃಕ್ಷದೊಳಡಗಿಪ್ಪ ಬೀಜದಂತೆ ಗೂಢವಾಗಿ, ಆರಿಗೂ ಹಡೆಯಬಾರದೆ ವಿಶ್ವಕ್ಕೆ ಕಾರಣವಾಗಿಹುದೆ ಗೂಢ. ತನ್ನೊಳಗೆ ಶಿವಶಕ್ತಿಗಳ ಶರೀರ ಘಟಿಸಿ ಚರಾಚರಂಗಳು ಸ್ತ್ರೀಪುಂನನಪುಂಫಸಕವೆಂಬ ಮುದ್ರೆಯಿಂದ ಬಹುನಾಮಂಗಳಿಂದ ತನ್ನೊಳಗಿಪ್ಪ ಕಾರಣ ಶರೀರಸ್ಥ. ತನ್ನೊಳಗಿಹ ಮಾಯೆಯಿಂದ ಜಗತ್‍ಸೃಷ್ಟಿ ಮೊದಲಾದ ಸಕಲಪ್ರಪಂಚ ತೋರಿ ಆ ಪ್ರಪಂಚಿಂಗೆ ತಾನೆ ಭೂಮಿಯಾಗಿ ಎಲ್ಲವ ತನ್ನೊಳಗಿಂಬಿಟ್ಟು ತಾನೆನ್ನದ ಅಭಿನ್ನದಿಂದಹುದೆ ಲಿಂಗಕ್ಷೇತ್ರ. ಈಶ್ವರ ಸದಾಶಿವರು ಮೊದಲಾದ ಅನಂತದೇವಾತ್ಮಮೂರ್ತಿಗಳ ಜನನಂಗಳಾದಿಯಿಂದತ್ತತ್ತಲಿಪ್ಪುದೆ ಅನಾದಿ. ಇಂತಪ್ಪ ಪಂಚಸಂಜ್ಞೆಯನುಳ್ಳ ಲಿಂಗವನರಿತ ಲಿಂಗೈಕ್ಯಂಗೆ ನಮೋ ನಮೋ ಎಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಇನ್ನಷ್ಟು ... -->