ಅಥವಾ

ಒಟ್ಟು 48 ಕಡೆಗಳಲ್ಲಿ , 7 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳ ಮುಂದಣ ಬಯಲಿನೊಳಗೊಂದು ಪ್ರಕಾಶಾನ್ವಿತವಾದ ಮಹಾಚೋದ್ಯತರವಾದ ಗಗನಕೋಶವುಂಟು. ಅಲ್ಲೊಂದು ದಿವ್ಯತರವಾದ ಕಮಲವುಂಟು. ಆ ಕಮಲದ ಮಧ್ಯದಲ್ಲಿ ಆಣವತ್ರಯಾನ್ವಿತವಾದ ಮಹತ್ಕರ್ಣಿಕೆಯುಂಟು. ಮತ್ತದರಗ್ರದಂತರ್ವರ್ಣತ್ರಯಂಗಳೊಳಗೆ ನೀಲವಿದ್ರುಮರತ್ನ ಚಂದ್ರಪ್ರಕಾಶ ದಿವ್ಯಸಿಂಹಾಸನದ ಮೇಲೆ ಬೆಳಗುತ್ತಿರ್ಪ ಶಿವಲಿಂಗವನನುಸಂಧಾನಿಸಿ ಪೂಜಿಸುವ ಕ್ರಮವೆಂತೆಂದೊಡೆ : ಶ್ರೀಗುರುಕರುಣಕಟಾಕ್ಷವೀಕ್ಷಣಬಲದಿಂದ ಕಲ್ಮಷ ಕಂಟಕಾದಿಗಳಂ ತೊಲಗಿಸಿ, ಶಿವಲೋಕದ ಮಾರ್ಗವಿಡಿದು ಹೋಗಿ, ಆ ಶಿವಲೋಕದ ಸಮೀಪಕ್ಕೆ ಸೇರಿ, ಪರೀಕ್ಷೆಯ ಮಾಡಿ ನೋಡಲು, ಆ ಶಿವಲೋಕದ ಬಹಿರಾವರಣದಲ್ಲಿ ಮೂವತ್ತೆರಡು ಬಹಿರ್ಮುಖರು ಸಂಸ್ಥಿತರಾದ ವಿವರ : ಈಶಾನ್ಯ ಪರ್ಜನ್ಯ ಜಯಂತ ಮಹೇಂದ್ರ ಆದಿತ್ಯ ಸತ್ಯ ಭೃಂಷ ಅಂತರಿಕ್ಷ ಅಗ್ನಿ ವಿಮಾಷ ಥತ ಗ್ರಹಕ್ಷತ ಯಮ ಗಂಧರ್ವ ಭೃಂಗುರಾಜ ಮೃಗ ನಿರುತಿ ದೌವಾರಿಕ ಸುಗ್ರೀವ ಪುಷ್ಪದತ್ತ ವರುಣ ಅಸುರ ಶೇಷ ಋಭು ವಾಯು ನಾಗ ಮುಖ ಪಲಾಟಕ ಸೋಮ ಭೂತ ಅದಿತ ದಿತರೆಂಬುವರೇ ಮೂತ್ತೆರಡು ವಸ್ತುದೇವತೆಯರ ಒಡಂಬಡಿಸಿಕೊಂಡು ಅವರಿಂದೊಳಗಿರ್ಪ ಸೂರ್ಯವೀಥಿಯೆನಿಸುವ ತೃತೀಯವರ್ಣದ ಮೂವತ್ತೆರಡುದಳದಲ್ಲಿ ಎಂಟು ಶೂನ್ಯದಳಗಳನುಳಿದು, ಮಿಕ್ಕ ಇಪ್ಪತ್ತುನಾಲ್ಕುದಳಗಳಲ್ಲಿರುವ ಇಪ್ಪತ್ತುನಾಲ್ಕು ವಿಕಲಾಕ್ಷರಂಗಳೇ ಅಷ್ಟವಿಧೇಶ್ವರರು, ಅಷ್ಟದಿಕ್ಪಾಲಕರು, ಅಷ್ಟವಸುಗಳಾದ ವಿವರ : ಕ ಕಾರವೆ ಅನಂತ, ಖ ಕಾರವೆ ಇಂದ್ರ, ಗಕಾರವೆ ಧರ, ಘಕಾರವೆ ಸೂಕ್ಷ್ಮ , ಓಂಕಾರವೆ ಅಗ್ನಿ, ಚಕಾರವೆ ಧ್ರುವ, ಛಕಾರವೆ ಶಿವೋತ್ತಮ, ಜಕಾರವೆ ಯಮ, ಝಕಾರವೆ ಸೋಮ, ಞಕಾರವೆ ಏಕನೇತ್ರ, ಟಕಾರವೆ ನಿರುತಿ, ಠಕಾರವೆ ಆಪು, ಡಕಾರವೆ ರುದ್ರ, ಢಕಾರವೆ ವರುಣ, ಣಕಾರವೆ ಅನಿಲ, ತಕಾರವೆ ತ್ರಿಮೂರ್ತಿ, ಥಕಾರವೆ ವಾಯು, ದಕಾರವೆ ಅನಲ, ಧಕಾರವೆ ಶ್ರೀಕಂಠ, ನಕಾರವೆ ಕುಬೇರ, ಪಕಾರವೆ ಪ್ರತ್ಯೂಷ, ಫಕಾರವೆ ಶಿಖಂಡಿ, ಬಕಾರವೆ ಈಶಾನ, ಬಕಾರವೆ ಪ್ರಭಾಸ. ಇಂತೀ [ಅಷ್ಟ] ವಿಧೇಶ್ವರಾದಿಗಳಿಗಬ್ಥಿವಂದಿಸಿ, ಅದರಿಂದೊಳಗಿರ್ಪ ಚಂದ್ರವೀಥಿಯೆನಿಪ ದ್ವಿತೀಯಾವರಣದ ಷೋಡಶದಳದಲ್ಲಿರುವ ಷೋಡಶ ಸ್ವರಾಕ್ಷರಂಗಳೆ ಷೋಡಷರುದ್ರರಾದ ವಿವರ : ಅಕಾರವೆ ಉಮೇಶ್ವರ, ಆಕಾರವೆ ಭವ, ಇಕಾರವೆ ಚಂಡೇಶ್ವರ, ಈಕಾರವೆ ಶರ್ವ, ಉಕಾರವೆ ನಂದಿಕೇಶ್ವರ, ಊಕಾರವೆ ರುದ್ರ, ಋಕಾರವೆ ಮಹಾಕಾಳ, Iೂಕಾರವೆ ಉಗ್ರ, ಲೃಕಾರವೆ ಭೃಂಗಿರೀಟಿ, ಲೂೃಕಾರವೆ ಬ್ಥೀಮ, ಏಕಾರವೆ ಗಣೇಶ್ವರ, ಐಕಾರವೆ ಈಶಾನ, ಓಕಾರವೆ ವೃಷಭೇಶ್ವರ, ಔಕಾರವೆ ಪಶುಪತಿ, ಅಂ ಎಂಬುದೆ ಷಣ್ಮುಖಿ, ಅಃ ಎಂಬುದೆ ಮಹಾದೇವನು. ಇಂತಪ್ಪ ಷೋಡಶರುದ್ರರಿಗೆ ಸಾಷ್ಟಾಂಗವೆರಗಿ ಬಿನ್ನವಿಸಿಕೊಂಡು, ಅದರಿಂದೊಳಗಿರ್ಪ ಅಗ್ನಿವೀಥಿಯೆನಿಸುವ ಪ್ರಥಮಾವರಣ ಅಷ್ಟದಳಗಳಲ್ಲಿರ್ಪ ಅಷ್ಟವ್ಯಾಪಕಾಕ್ಷರಂಗಳೆ ಅಷ್ಟಶಕ್ತಿಯರಾದ ವಿವರ : ಸಕಾರವೆ ಉಮೆ, ಷಕಾರವೆ ಜ್ಯೇಷ್ಠೆ, ಶಕಾರವೆ ರೌದ್ರೆ, ವಕಾರವೆ ಕಾಳೆ, ಲಕಾರವೆ ಬಾಲೆ, ರಕಾರವೆ ಬಲಪ್ರಮಥಿನಿ, ಯಕಾರವೆ ಸರ್ವಭೂತದಮನೆ, ಮಕಾರವೆ ಮನೋನ್ಮನಿ. ಇಂತಪ್ಪ ಶಿವಶಕ್ತಿಯರ ಪಾದಪದ್ಮಂಗಳಿಗೆ ಸಾಷ್ಟಾಂಗವೆರಗಿ, ಪೊಡಮಟ್ಟು ಅದರಿಂದೊಳಗಿರ್ಪ ಅತಿರಹಸ್ಯವಾದ ಮೂವತ್ತೆರಡು ಕ್ಲೇಶಂಗಳಿಗಾಶ್ರಯವಾದ ಶಾಂತಿಬಿಂದುಮಯವಾದ ಅಂತರ್ಮಂಡಲದ ಚತುರ್ದಳದಲ್ಲಿರುವ ಚತುರಕ್ಷರಂಗಳೇ ಚತುಃಶಕ್ತಿಯರಾದ ವಿವರ : ಸಂ ಎಂಬುದೆ ಅಂಬಿಕೆ, ಅಂ ಎಂಬುದೆ ಗಣಾನಿ, ಡಿಂ ಎಂಬುದೆ ಈಶ್ವರಿ, ಕ್ಷುಂ ಎಂಬುದೇ ಉಮೆ. ಇಂತಪ್ಪ ಪರಶಕ್ತಿಯರ ಪಾದಾರವಿಂದವನು ಅನೇಕ ಪ್ರಕಾರದಿಂ ಸ್ತುತಿಮಾಡಿ ಬೇಡಿಕೊಂಡು ಅವರಪ್ಪಣೆವಿಡಿದು ಒಳಪೊಕ್ಕು, ಅಲ್ಲಿ ಕದಂಬಗೋಳಕಾಕಾರ ಸ್ಫುರಶಕ್ತಿದೀದ್ಥಿಕಾಯೆಂದುಂಟಾಗಿ ರಹಸ್ಯಕ್ಕೆ ರಹಸ್ಯವಾದ ಷಡಧ್ವಜನ್ಮಭೂಮಿಯಾದ ಶಕ್ತಿಶಿರೋಗ್ರದಲ್ಲಿ ಪಂಚಾಕಾಶ ಷಟ್ತಾರಕ ತ್ರಿವಿಧಲಿಂಗಾಂಗಗಳೆ ಕಕಾರವಾದ ಪರಬ್ರಹ್ಮದ ನೆಲೆಯನರಿಯುವುದೇ ಮುದ್ವೀರಪ್ರಿಯ ಸಂಗಮೇಶ್ವರನಲ್ಲಿ ಬೆರೆವಂಥ ನಿಜಯೋಗ ಕಾಣಿರೊ.
--------------
ಮುದ್ವೀರ ಸ್ವಾಮಿ
ಓಂ ನಮಃ ಶಿವಾಯ ಎಂಬುದೆ ವೇದ, ಓಂ ನಮಃ ಶಿವಾಯ ಎಂಬುದೆ ಶಾಸ್ತ್ರ, ಓಂ ನಮಃ ಶಿವಾಯ ಎಂಬುದೆ ಪುರಾಣ, ಓಂ ನಮಃ ಶಿವಾಯ ಎಂಬುದೆ ಆಗಮ, ಓಂ ನಮಃ ಶಿವಾಯ ಎಂಬುದೆ ಸಕಲಕಲೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸರ್ವಜ್ಞ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಯ್ಯಾ, ನೀನು ಅನಾಹತ ಲೋಕದಲ್ಲಿ ಪ್ರವೇಶಿಸುವಾಗ ಅಕ್ಷರವೆರಡರ ತದ್ರೂಪವಾಗಿರ್ದೆಯಯ್ಯಾ. ನೀನಾ ಬ್ರಹ್ಮಾಂಡವನರಿವಾಗ ಶಕ್ತಿತ್ರಯದ ಶಾಖೆಯಾಗಿರ್ದೆಯಯ್ಯಾ. ನೀನು ಸಕಲದಲ್ಲಿ ನಿಃಕಲದ್ಲ ಸ್ವಾನುಭಾವಸಂಬಂಧದಲ್ಲಿ ಅಕ್ಷರವೆರಡರಲ್ಲಿ ಆಂದೋಳನವಾಗಿ ಪ್ರವೇಶಿಸುವಾಗ ಶುದ್ಧ ನೀನಾಗಿ, ಸಿದ್ಧ ನೀನಾಗಿ, ಪ್ರಸಿದ್ಧ ನೀನಾಗಿ ಪಂಚ ಮಹಾವಾಕ್ಯಂಗಳೆ ನಿನ್ನ ಮನೆಯಾಗಿ ಓಂ ಎಂಬುದೆ ನಿನ್ನ ತನುವಾಗಿ, ಆನಂದವೆಂಬುದೆ ನಿನ್ನ ಮೂರ್ತಿಯಾಗಿ ಪರಾಪರ ರೂಪೆ ನಿನ್ನವಯವವಾಗಿ ನೀನಿಪ್ಪೆಯಯ್ಯಾ ನಿತ್ಯಮಂಗಳರೂಪನಾಗಿ, ಸ್ವತಂತ್ರವಾಗಿ ಪರಮಸೀಮೆಯ ಮೀರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಏಕಾರ್ಥವ ಮಾಡಿದ ಬಸವಣ್ಣ ಗುರುವೇ, ಶರಣು
--------------
ಸಿದ್ಧರಾಮೇಶ್ವರ
ಓಂ ನಮಃ ಶಿವಾಯ ಎಂಬುದೆ ಋಷಿ, ಓಂ ನಮಃ ಶಿವಾಯ ಎಂಬುದೆ ಮಂತ್ರ, ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನೆ ಸದ್ಯೋನ್ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಭಕ್ತಂಗೆ ಭಕ್ತಿಯೆ ಲಿಂಗಾರ್ಚನೆ; ಮಹೇಶಂಗೆ ಜ್ಞಾನ ವೈರಾಗ್ಯವೆ ಲಿಂಗಾರ್ಚನೆ. ಪ್ರಸಾದಿಗೆ ಸಮದೃಷ್ಟಿಯೆ ಲಿಂಗಾರ್ಚನೆ; ಪ್ರಾಣಲಿಂಗಿಗೆ `ಪಂಚಪ್ರಾಣಾಃ' ಎಂಬುದೆ ಲಿಂಗಾರ್ಚನೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
`ನ' ಎಂಬುದೆ ನಂದಿಯಾಗಿ, `ಮ' ಎಂಬುದೆ ಮಹತ್ತಾಗಿ, `ಶಿ' ಎಂಬುದೆ ರುದ್ರನಾಗಿ, `ವಾ' ಎಂಬುದೆ ಹಂಸೆಯಾಗಿ, `ಯ' ಎಂಬುದೆ ಅರಿವಾಗಿ, `ಓಂ' ಕಾರವೆ ಗುರುವಾಗಿ, ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ, ಎರಡೂ ಒಂದಾಗಿ ಗುಹೇಶ್ವರಲಿಂಗಸಂಬಂಧಿ
--------------
ಅಲ್ಲಮಪ್ರಭುದೇವರು
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ
ಕಲ್ಪಿತವೆಂಬ ಭಕ್ತ ಮಾಡಿದ ಸಯಧಾನವ ನೋಡಾ ! ಅನಂತಕೋಟಿ ಅಜಾಂಡಗಳೆ ಸಯಧಾನವಾಗಿ ಸವಿಕಲ್ಪ ವಿಷಯಂಗಳೆ ಶಾಕವಾಗಿ ಸರ್ವವಾಸನೆ ಎಂಬುದೆ ಅಭಿಘಾರವಾಗಿ_ ಇವೆಲ್ಲವನೂ ಜ್ಞಾನವೆಂಬ ಭಾಜನದಲ್ಲಿ ಎಡೆಮಾಡುತ್ತಿರಲು ಉಣ ಬಂದ ಹಿರಿಯರು ಉಣುತ್ತಿದ್ದುದ ನೋಡಿರೆ ! ನಿರ್ವಿಕಲ್ಪಿತವೆಂಬ ಮಹಂತ ಬರಲು, ಸಯಧಾನವಡಗಿತ್ತು, ಭಾಜನ ಉಳಿಯಿತ್ತು. ಆ ಭಾಜನವನುತ್ತಮಾಂಗದಲ್ಲಿ ಅಳವಡಿಸಿಕೊಳಲು ನಿಶ್ಚಿಂತವಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಕಟಕಟಾ ಬೆಡಗು ಬಿನ್ನಾಣ ಒಂದೇ ನೋಡಾ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ಯಂತ್ರ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ತಂತ್ರ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ಮಂತ್ರ. ಪ್ರಣಮಪಂಚಾಕ್ಷರಿಯ ಮಂತ್ರವನುಚ್ಚರಿಸುವರೆಲ್ಲರೂ ಅಪ್ರಮಾಣಿಕರು ನೋಡಾ, ಅಪ್ರಣಮ ಪಂಚಾಕ್ಷರ ಮಂತ್ರವ ವಿಶ್ವಾಸದಿಂದವಗ್ರಹಿಸಿ ಮಂತ್ರಾರ್ಥವ ತಿಳಿದು ಉಚ್ಚರಿಸಲರಿಯದ ಕಾರಣ ಮತ್ತೆ ಆಕಾರ ಉಕಾರ ಮಕಾರದ ಮೂಲವಂ ಭೇದಿಸಿ, ಓಂಕಾರದ ನೆಲೆಯಂ ತಿಳಿದು, ಆ ಓಂಕಾರದಲ್ಲಿ ಪಂಚವರ್ಣದ ಲಕ್ಷಣವನರಿದು, ಓಂ ನಮಃ ಶಿವಾಯ ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಸ್ಮರಿಸಬಲ್ಲಡೆ ಇದೆ ಜಪ, ಇದೇ ತಪ, ಇದೇ ಸರ್ವಸಿದ್ಧಿಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಛಂದ. . ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಋಷಿ ತಾನು. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಅಧಿದೇವತೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸದ್ಯೋನ್ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಗುರುವಿಂದನ್ಯ ದೈವವಿಲ್ಲೆಂಬುದಕ್ಕೆ ಆಗಮವಾಣಿಯೆ ಸಾಕ್ಷಿ. ಅದೆಂತೆಂದಡೆ: ``ಗುರುದೇವೋ ಮಹಾದೇವೋಗುರುದೇವಸ್ಸದಾಶಿವಃ| ಗುರುದೇವಾತ್ಪರಂ ನಾಸ್ತಿ ತಸ್ಮೆ ೈ ಶ್ರೀಗುರುವೆ ನಮಃ|| ಗುರುಃ ಶಂಭುರ್ಗುರುಜ್ರ್ಞಾನಂ ಗುರುರ್ಮಾತಾ ಗುರುಃ ಪಿತಾ| ಗುರುರ್ಬಂಧುರ್ಗುರುಃ ಸಾಕ್ಷಾದ್ದೇವತಾಗಣಪುಂಗವಃ|| ಅನುಷಾ*ನಾಕಾಂ ಪೂಜಾಂ ಯಃ ಕರೋತಿ ಗುರುಂ ವಿನಾ| ಯಾತಿ ನೀಚಾನಿ ಜನ್ಮಾನಿ ತಸ್ಮಾದ್ಗುರುವರಂ ಭಜೇತ್|| ಷಣ್ಮಾಸೇ ವ್ಯಾಪಿ ವರ್ಷೇ ವಾ ವರ್ಷೇ ವಾ ದ್ವಾದಶಾತ್ಮಕೇ| ಗುರೋರಾಲೋಕನಂ ಯಸ್ತು ನ ಕರೋತಿ ಸ ಪಾಪವಾನ್||' ಎಂಬುದೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಬೋಧವೆಂದಡೆ, ಕರ್ಣವನೂ ಮಂತ್ರವ ಹೇಳಿದುದು ಭೋಧವೆ? ಅಲ್ಲಲ್ಲ! ಬೋಧವೆಂದಡೆ, ತನುತ್ರಯಸಾಕ್ಷಿ ನೀನೆ ಪರವಸ್ತು ಎಂಬುದೆ ನಿಜಬೋಧ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಓಂ ನಮಃ ಶಿವಾಯ ಎಂಬುದೆ ಮಂತ್ರ, ಓಂ ನಮಃ ಶಿವಾಯ ಎಂಬುದೆ ತಂತ್ರ, ಓಂ ನಮಃ ಶಿವಾಯ ಎಂಬುದೆ ಯಂತ್ರ, ಓಂ ನಮಃ ಶಿವಾಯ ಎಂಬುದೆ ವಶ್ಯ. ಇದು ಕಾರಣ, ಓಂ ನಮಃ ಶಿವಾಯ ಎಂಬುದೆ ಸಕಲಸಿದ್ಧಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಓಂ ನಮಃ ಶಿವಾಯ ಎಂಬುದೆ ಆಚಾರಲಿಂಗ, ಓಂ ನಮಃ ಶಿವಾಯ ಎಂಬುದೆ ಗುರುಲಿಂಗ, ಓಂ ನಮಃ ಶಿವಾಯ ಎಂಬುದೆ ಶಿವಲಿಂಗ, ಓಂ ನಮಃ ಶಿವಾಯ ಎಂಬುದೆ ಚರಲಿಂಗ, ಓಂ ನಮಃ ಶಿವಾಯ ಎಂಬುದೆ ಪ್ರಸಾದಲಿಂಗ, ಓಂ ನಮಃ ಶಿವಾಯ ಎಂಬುದೆ ಮಹಾಲಿಂಗ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನಲು ಪರಶಿವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಉರಿಲಿಂಗದೇವ ನಿನ್ನನಗಲದ ಪರಿಯನು ಹೇಳಿಹೆನು, ಕೇಳಾ ನಿನಗೆ ಸಖಿಯೆ: ಉರಿಲಿಂಗದೇವ ಎಂಬುದೆ ಮಂತ್ರ , ಉರಿಲಿಂಗದೇವ ಎಂಬುದೆ ಯಂತ್ರ , ಉರಿಲಿಂಗದೇವ ಎಂಬುದೆ ತಂತ್ರ, ಉರಿಲಿಂಗದೇವ ಎಂಬುದೆ ವಶ್ಯ. ಉರಿಲಿಂಗದೇವಾ, ಉರಿಲಿಂಗದೇವಾ, ಎನ್ನುತ್ತಿದ್ದೇನೆ.
--------------
ಉರಿಲಿಂಗದೇವ
ಇನ್ನಷ್ಟು ... -->