ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಧಾರಾದಿ ಷಡುಚಕ್ರಂಗಳು ಇವಕ್ಕೆ ವಿವರ: ಆಧಾರಸ್ಥಾನದಲ್ಲಿ ಚತುರ್ದಳ ಪದ್ಮವಿಹುದು ಅದು ಸುವರ್ಣವರ್ಣ ಅದಕ್ಕೆ ಅಕ್ಷರ ವಶಷಸ ಎಂಬ ನಾಲ್ಕಕ್ಷರ, ಅಧಿದೈವ ಬ್ರಹ್ಮನು. ಸ್ವಾಧಿಷ್ಠಾನ ಸ್ಥಾನದಲ್ಲಿ ಷಡ್ದಳ ಪದ್ಮವಿಹುದು, ಅದು ಕಪ್ಪುವರ್ಣ ಅದಕ್ಕೆ ಅಕ್ಷರ ಬಭಮಯರಲ ಎಂಬ ಷಡಕ್ಷರ, ವಿಷ್ಣು ಅಧಿದೈವ. ಮಣಿಪೂರದ ಸ್ಥಾನದಲ್ಲಿ ದಶದಳ ಪದ್ಮವಿಹುದು, ಅದು ಕೆಂಪುವರ್ಣ ಅದಕ್ಕೆ ಅಕ್ಷರ ಡಢಣ ತಥದಧನ ಪಫ ಎಂಬ ದಶ ಅಕ್ಷರ, ರುದ್ರನಧಿದೈವ. ಅನಾಹತಸ್ಥಾನದಲ್ಲಿ ದ್ವಾದಶದಳದ ಪದ್ಮವಿಹುದು, ಅದು ನೀಲವರ್ಣ, ಅದಕ್ಕೆ ಅಕ್ಷರ ಕಖಗಘಙ ಚ ಛ ಜಝಞ ಠ ಎಂಬ ದ್ವಾದಶ ಅಕ್ಷರ ಅದಕ್ಕೆ ಮಹೇಶ್ವರ ಅಧಿದೈವ. ವಿಶುದ್ಧಿಸ್ಥಾನದಲ್ಲಿ ಷೋಡಶದಳ ಪದ್ಮವಿಹುದು, ಅದು ಸ್ಪಟಿಕವರ್ಣ ಅದಕ್ಕೆ ಅಕ್ಷರ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಷೋಡಶಾಕ್ಷರ, ಅದಕ್ಕೆ ಸದಾಶಿವ ಅಧಿದೈವ. ಆಜ್ಞಾಸ್ಥಾನದಲ್ಲಿ ದ್ವಿದಳದ ಪದ್ಮವಿಹುದು. ಅದು ಮಾಣಿಕ್ಯವರ್ಣ, ಅದಕ್ಕೆ ಅಕ್ಷರ `ಹಕ್ಷ ಎಂಬ ದ್ವಯಾಕ್ಷರ. ಅದಕ್ಕೆ ಮಹಾಶ್ರೀಗುರು ಅಧಿದೈವ. ಅಲ್ಲಿಂದ ಮೇಲೆ ಬ್ರಹ್ಮರಂಧ್ರಸ್ಥಾನದಲ್ಲಿ ಸಹಸ್ರದಳ ಪದ್ಮವಿಹುದು. ಅದು ಹೇಮವರ್ಣ ಅಲ್ಲಿಗೆ ಓಂಕಾರವೆಂಬ ಅಕ್ಷರ ಪರಂಜ್ಯೋತಿ ಪರಬ್ರಹ್ಮ ಅದು ಅನಂತಕೋಟಿ ಸೂರ್ಯಪ್ರಕಾಶವಾಗಿ ಬೆಳಗುತ್ತಿಹುದು. ಅಲ್ಲಿಗೆ ಅಧಿದೈವ ಶ್ರೀಗುರು ಮೂರ್ತಿಯೇ ಕರ್ತನು. ಇಂತೀ ಷಟ್ ಚಕ್ರಂಗಳಂ ತಿಳಿದು ಪರತತ್ವದಲ್ಲಿ ಇರಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.
--------------
ಚನ್ನಬಸವಣ್ಣ
ಈ ಪ್ರಕಾರದಲ್ಲಿ ಗುರುವಿನ ಹಸ್ತದಲ್ಲಿ ಹುಟ್ಟಿ ಲಿಂಗದೇಹಿಯೆನಿಸಿಕೊಂಡ ಜ್ಞಾನಿಪುರುಷನು ತನ್ನ ಜ್ಞಾನಸ್ವರೂಪವನರಿಯಬೇಕಯ್ಯ. ಆ ಜ್ಞಾನವೇ ಆರುತೆರನಾಗಿಪ್ಪುದು. ಅವಾವವೆಂದಡೆ: ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗವೆಂದು ಇಂತೀ ಆರುತೆರನಾಗಿಪ್ಪುದು. ಈ ಷಡ್ವಿಧವ್ರತವನರಿದು ಆಚರಿಸುವ ಕ್ರಮವೆಂತುಟಯ್ಯಯೆಂದಡೆ: ಆಧಾರಚಕ್ರಸ್ಥಾನದಲ್ಲಿ ನಾಲ್ಕೆಸಳಕಮಲದ ವ ಶ ಷ ಸಯೆಂಬ ನಾಲ್ಕು ಬೀಜಾಕ್ಷರದ ಪೃಥ್ವಿತತ್ವದ ಕೆಂಪುವರ್ಣದ ನೆಲೆಯನರಿಯಬೇಕಯ್ಯ. ಸ್ವಾಧಿಷಾ*ನಚಕ್ರದಲ್ಲಿ ಆರೆಸಳಕಮಲದ ಬ ಭ ಮ ಯ ರ ಲಯೆಂಬ ಆರು ಬೀಜಾಕ್ಷರ ಯುಕ್ತವಾದ ಅಪ್ಪುತತ್ವದ ನೀಲವರ್ಣದ ನೆಲೆಯನರಿಯಬೇಕಯ್ಯ. ಮಣಿಪೂರಕಚಕ್ರಸ್ಥಾನದಲ್ಲಿ ಹತ್ತೆಸಳಕಮಲದ ಡ ಢ ಣ ತ ಥ ದ ಧ ನ ಪ ಫ ಯೆಂಬ ಹತ್ತು ಬೀಜಾಕ್ಷರ ಸ್ವಾಯತವಾಗಿಪ್ಪ ಅಗ್ನಿತತ್ವದ ಕುಂಕುಮವರ್ಣದ ನೆಲೆಯನರಿಯಬೇಕಯ್ಯ. ಅನಾಹತಚತ್ರಸ್ಥಾನದಲ್ಲಿ ಹನ್ನೆರಡೆಸಳಕಮಲದ ಕ ಖ ಗ ಘ ಙ ಚ ಛ ಜ ರುsು ಞ ಟ ಠಯೆಂಬ ಹನ್ನೆರಡು ಬೀಜಾಕ್ಷರಯುಕ್ತವಾಗಿರ್ಪ ವಾಯುತತ್ವದ ಶ್ವೇತವರ್ಣದ ನೆಲೆಯನರಿಯಬೇಕಯ್ಯ. ವಿಶುದ್ಧಿಚಕ್ರಸ್ಥಾನದಲ್ಲಿ ಹದಿನಾರೆಸಳಕಮಲದ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಹದಿನಾರು ಬೀಜಾಕ್ಷರ ಸ್ವಾಯತವಾಗಿಪ್ಪ ಆಕಾಶತತ್ವದ ಸ್ಫಟಿಕವರ್ಣದ ನೆಲೆಯನರಿಯಬೇಕಯ್ಯ. ಆಜ್ಞಾಚಕ್ರಸ್ಥಾನದಲ್ಲಿ ಎರಡೆಸಳಕಮಲದ ಹಂ ಸ ಯೆಂಬ ಎರಡು ಬೀಜಾಕ್ಷರಯುಕ್ತವಾಗಿಪ್ಪ ಆತ್ಮತತ್ವದ ಮಾಣಿಕ್ಯವರ್ಣದ ನೆಲೆಯನರಿಯಬೇಕಯ್ಯ. ಇವೆಲ್ಲವಕ್ಕೂ ಮೇಲಣತತ್ವವೆನಿಸುವ ಬ್ರಹ್ಮರಂದ್ರದಲ್ಲಿ ಸಾವಿರೆಸಳಕಮಲದ, ಸಾವಿರ ಬೀಜಾಕ್ಷರ ಸರ್ವತೋಮುಖವಾಗಿಪ್ಪ ಭೇದವನರಿಯಬೇಕಯ್ಯ. ಇನ್ನೀ ಚಕ್ರಂಗಳಿಗೆ ಲಿಂಗಸ್ವಾಯತಯುಕ್ತವಾಗಿಪ್ಪ ಭೇದವ ಹೇಳಿಹೆನು: ಆಧಾರಚಕ್ರದ ನಾಲ್ಕೆಸಳಕಮಲದ ಮಧ್ಯದಲ್ಲಿ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷಾ*ನಚಕ್ರದ ಆರೆಸಳಕಮಲದ ಮಧ್ಯದಲ್ಲಿ ಗುರುಲಿಂಗವ ಮೂರ್ತಿಗೊಳಿಸಿ ಮಣಿಪೂರಕಚಕ್ರದ ಹತ್ತೆಸಳಕಮಲದ ಮಧ್ಯದಲ್ಲಿ ಶಿವಲಿಂಗವ ಸಂಬಂಧಿಸಿ ಅನಾಹತಚಕ್ರದ ಹನ್ನೆರಡೆಸಳಕಮಲದ ಮಧ್ಯದಲ್ಲಿ ಪ್ರಸಾದಲಿಂಗವ ಮೂರ್ತಿಗೊಳಿಸಿ ಆಜ್ಞಾಚಕ್ರದ ಎರಡೆಸಳಕಮಲದ ಮಧ್ಯದಲ್ಲಿ ಮಹಾಲಿಂಗವ ನೆಲೆಗೊಳಿಸಿ ಪ್ರಾಣದಲ್ಲಿ ಆಚಾರಲಿಂಗವ ಸಂಬಂಧಿಸಿ ಜಿಹ್ವೆಯಲ್ಲಿ ಗುರುಲಿಂಗವ ಸ್ವಾಯತವಮಾಡಿ ನೇತ್ರದಲ್ಲಿ ಶಿವಲಿಂಗವ ಮೂರ್ತಿಗೊಳಿಸಿ ತ್ವಕ್ಕಿನಲ್ಲಿ ಜಂಗಮಲಿಂಗವ ನೆಲೆಗೊಳಿಸಿ ಶ್ರೋತ್ರದಲ್ಲಿ ಪ್ರಸಾದಲಿಂಗವ ಸಂಬಂಧಿಸಿ ಭಾವದಲ್ಲಿ ಮಹಾಲಿಂಗವ ನೆಲೆಗೊಳಿಸಿ ಬ್ರಹ್ಮರಂಧ್ರದಲ್ಲಿರ್ಪ ಪರಿಪೂರ್ಣಲಿಂಗವು ಸರ್ವಾಂಗದಲ್ಲಿಯು ಸ್ವಾಯತವಾಗಲು ಅಂಗಸಂಗಗಳೆಲ್ಲವು ಲಿಂಗಸಂಗಗಳಾಗಿ ಲಿಂಗ ದೃಕ್ಕೇ ನಿರಂತರ ಪ್ರಕಾಶಿಸುತಿಪ್ಪುದಯ್ಯ. ಲಿಂಗಪ್ರಭೆಯೊಳಗೆ ಶಿವಶಿವಾಯೆನುತಿರ್ದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->