ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ ಹಂಸನ ಕಟ್ಟಬೇಕೆಂಬರು. ಈ ಹೊಟ್ಟೆಯ ಕೂಳ ಅಣ್ಣಗಳೆಲ್ಲರೂ ಕಟ್ಟಬಲ್ಲರೆ ನಿಜಹಂಸನ ? ಬೆಟ್ಟಬೆಟ್ಟವನೇರಿದ ಭೃಗು ದದ್ಥೀಚಿ ಅಗಸ್ತ್ಯ ಕಶ್ಯಪ ರೋಮಜ ಕೌಂಡಿಲ್ಯ ಚಿಪ್ಪಜ ಮುಂತಾದ ಸಪ್ತ ಋಷಿಗಳೆಲ್ಲರೊಳಗಾದ ಋಷಿಜನಂಗಳು, ಬೆಟ್ಟವನೇರಿ ಕಟ್ಟಿದುದಿಲ್ಲ. ಮತ್ತೆಯೂ ಬಟ್ಟೆಗೆ ಬಂದು ಮತ್ತರಾದರಲ್ಲದೆ, ಸುಚಿತ್ತವನರಿದುದಿಲ್ಲ. ವಿಷರುಹಕುಸುಮಜನ ಕಪಾಲವ ಹಿಡಿದಾತನ ಕೈಯಲ್ಲಿ ಗಸಣೆಗೊಳಗಾದರು. ಆತ್ಮನ ರಸಿಕವನರಿಯದೆ, ಈ ಹುಸಿಗರ ನೋಡಿ ದೆಸೆಯ ಹೊದ್ದೆನೆಂದೆ, ಪಶುಪತಿದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
`ಮನೋವಾಕ್ಕಾಯಮೇಕಸ್ಯ ಗುರುಶ್ಚರಃ ಶಿವಸ್ತಥಾ' ಶ್ರೀಗುರುಪೂಜೆಯ ಬೊಟ್ಟಿನಷ್ಟು ವಿಭೂತಿಯನಿಟ್ಟಡೆ ಬೆಟ್ಟದಷ್ಟು ಪಾಪ ಹರಿವುದು. ನೆಟ್ಟನೆಯರಿದು ಸರ್ವಾಂಗದಲ್ಲಿ ಭಸ್ಮವ ಧರಿಸಿದ ಶರಣಂಗೆ ಮುಂದೆ ಹುಟ್ಟಲು ಹೊಂದಲು ಇಲ್ಲ ನೋಡಾ. ಅಷ್ಟಾಷಷಿ*ತೀರ್ಥವಂ ಮಿಂದ ಫಲ ಒಂದು ದಿನದ ಭಸ್ಮಸ್ನಾನಕ್ಕೆ ಸರಿಬಾರದು. ಮುನ್ನ ಆದಿಯ ಋಷಿಜನಂಗಳು ಭಸ್ಮಸ್ನಾನದಿಂದ ಕೃತಕೃತ್ಯರಾದರು. ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ ಭಸ್ಮಸ್ನಾನದಿಂದ ಕೃತಕೃತ್ಯರಾದರು ನೋಡಾ.
--------------
ಉರಿಲಿಂಗಪೆದ್ದಿ
ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ. ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ, ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ, ಪರಬ್ರಹ್ಮವನರಿಯದೆ ನುಡಿವಿರಿ, ಬ್ರಹ್ಮದೊಡಕು ಅರಿದು ಕಂಡಿರಣ್ಣಾ. ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ ದೇವಜಾತಿಗಳು ಋಷಿಜನಂಗಳು ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು ಸರ್ವಪುರಾಣಪ್ರಸಿದ್ಧ, ಇನ್ನೂ ತಲೆಯ ಮೋಟು ಕಾಣಬರುತ್ತದೆ. ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ. ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು ಸ್ಕಂದ ಪುರಾಣಪ್ರಸಿದ್ಧ. ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ: ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ, `ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವ ಇತಿ ಈ ಪ್ರಕಾರದಲೆ ಯಜುರ್ವೇದ ಹೇಳುತ್ತಿದ್ದಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ. ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು ಎಂದುದಾಗಿ ಲಿಂಗವೇ ಪರಬ್ರಹ್ಮ. ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು. ಲೈಂಗ್ಯ ಪುರಾಣದಲ್ಲಿ, ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ, ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೇದ ನುಡಿಯುತ್ತಿದೆ. ಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾಧಿಪತಿ ಬ್ರಹ್ಮಣೋ[s]ಧಿಪತಿಬ್ರ್ರಹ್ಮಾ ಶಿವೋ ಮೇ[s]ಸ್ತು ಸದಾಶಿವೋಂ ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ: ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ ಭಗವಾನ್ ಮಹೇಶ್ವರಸ್ವಾಕ್ಷಾನ್ಮಹಾದೇವೋ ನ ಸಂಶಯಃ ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್ ಬ್ರಹ್ಮೇತಿ ಯಂ ಜಹುರ್ವೇದಾಃ ಸರ್ವೇ ತಂ ಶರಣಂ ವ್ರಜೇತ್ ಕೂರ್ಮ ಈಶ್ವರಗೀತೆಯಲ್ಲಿ, ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ ಅಹಮೇವ ಪರಬ್ರಹ್ಮ ಮತ್ತೋ[s]ನ್ಯಂ ಹಿ ನ ವಿದ್ಯತೇ ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು: ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮವೀಶ್ವರಂ ಊಧ್ರ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ ಹರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ ತೈತ್ತಿರೀಯ ಶ್ರುತಿ, `ಸದ್ವಿಪ್ರಾಹಿ..... ಎಂದುದಾಗಿ, ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು, ಬಹಳ ಬಹಳ ಬಾಹು, ಬಹಳ ಪಾದನು, ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ. `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ. ಇದು ಕಾರಣ, ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ. ಕಲಿಯುಗದಲ್ಲಿ ದೃಷ್ಟ: ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ ಮಹದಾನಂದಮುಕ್ತಿಯನೈದಿದರಣ್ಣಾ.
--------------
ಉರಿಲಿಂಗಪೆದ್ದಿ
ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ ಮಹರ್ಷಿಭಿರ್ಮಹಾದೇವೋ ಮಹನೀಯಃ ಪ್ರತಿಷಿ*ತಃ ಇಂತೆಂದುದಾಗಿ ಪುರಾತನರಲ್ಲಿ ಆದ್ಯಂತರಾಗಿದ್ದ ಮಹಾಋಷಿಗಳೆಲ್ಲರೂ ರತ್ನಸುವರ್ಣ ರಜತ ತಾಮ್ರ ಚಂದ್ರಕಾಂತ ಸ್ಫಟಿಕ ಪವಳಲಿಂಗಂಗಧ ಆರಾಧಿಸಿದರು. ಅಗಸ್ತ್ಯದಧೀಚಿ ಕಂಕದ ಬಾಣಾಸುರ ಪುರಂದರ ಬ್ರಹ್ಮವಿಷ್ಣು ದೂರ್ವಾಸ ನಂದಿಕೇಶ್ವರ ಸ್ಕಂದ ಭೃಂಗಿರಿಟಿ ವೀರಭದ್ರಾದಿಗಣಂಗಳೆಲ್ಲರೂ ರುದ್ರೇಣ ದೀಕ್ಷಿತೋ ಭೂತ್ವಾ ಸ್ಕಂಧಃ ಶಿವಸಮುದ್ಭವಃ ಶಿವಾಚಾರರಹಸ್ಯಸ್ಯ ಪಾತ್ರತಾಂ ಪರಮಾಂ ಗತಃ [ಇಂತೆಂದುದಾಗಿ] ಇದನರಿದು ಪರಶುರಾಮ ಪರಾಶರ ವಶಿಷ* ವಾಲ್ಮೀಕಿ ಕಮಲಾಕರ ವಿಶ್ವಾಮಿತ್ರ ಮಹಾಮುನಿಗಳೆಲ್ಲರೂ ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ ಇಂತೆಂದುದಾಗಿ ಇದು ಕಾರಣ ಕೂಡಲಚೆನ್ನಸಂಗಮದೇವರನಾರಾಧಿಸಿ, ಪ್ರಸಾದ ಪಾದೋದಕವ ಕೊಂಡು ಅತಿಶುದ್ಧರಾದರು ಎಲ್ಲಾ ದೇವರುಗಳು, ಎಲ್ಲಾ ಋಷಿಜನಂಗಳು.
--------------
ಚನ್ನಬಸವಣ್ಣ
-->