ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ ದ್ವಿಜರೆಂಬ ಪಾತಕರು ನೀವು ಕೇಳಿ ಭೋ ! ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು, `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂದು, ಬಳ್ಳಿಟ್ಟು ಬಾಸ್ಕಳಗೆಡವುತಿಪ್ಪಿರಿ ನೋಡಾ. `ಆದಿ ಬಿಂದುದ್ಭವೇ ಬೀಜಂ' ಎಂಬ ಶ್ರುತಿಯಿಂ ತಿಳಿದು ನೋಡಲು ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ ನಿಮ್ಮ ಪಿಂಡ ಉದಯಿಸಿತ್ತು. ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ ? ಅದೂ ಅಲ್ಲದೆ ಪಿಂಡ ಒಂಬತ್ತು ತಿಂಗಳು ಒಡಲೊಳಗೆ ಕುರುಳು, ಮಲಮೂತ್ರ, ಕೀವು, ದುರ್ಗಂಧ, ರಕ್ತ ಖಂಡಕಾಳಿಜ ಜಂತುಗಳೊಳಗೆ, ಪಾತಾಳದೊಳಗಣ ಕ್ರಿಮಿಯಂತೆ ಹೊದಕುಳಿಗೊಂಬಂದು ನೀನಾವ ಕುಲ ಹೇಳಿರೆ ? ಅದುವಲ್ಲದೆ ಮೂತ್ರದ ಕುಳಿಯ ಹೊರವಡುವಾಗ, ಹೊಲೆ ಮುಂತಾಗಿ ಮುದುಡಿ ಬಿದಲ್ಲಿ, ಹೆತ್ತವಳು ಹೊಲತಿ, ಹುಟ್ಟಿದ ಮಗುವು ಹೊಲೆಯನೆಂದು ನಿಮ್ಮ ಕುಲಗೋತ್ರ ಮುಟ್ಟಲಮ್ಮದೆ, ಹನ್ನೆರಡು ದಿನದೊಂದು ಪ್ರಾಯಶ್ಚಿತ್ತವನಿಕ್ಕಿಸಿಕೊಂಡು ಬಂದು ನಿನ್ನಾವ ಕುಲ ಹೇಳಿರೆ ? ಮುಂಜಿಗಟ್ಟದ ಮುನ್ನ ಕೀಳುಜಾತಿ, ಮುಂಜಿಗಟ್ಟಿದ ಬಳಿಕ ಮೇಲುಜಾತಿಗಳು ಎಂಬ ಪಾತಕರು ನಿಮ್ಮ ನುಡಿ ಕೊರತೆಗೆ ನೀವು ನಾಚಬೇಡವೆ ? ನೀವು ನಾಚದಿರ್ದಡೆ ನಾ ನಿಮ್ಮ ಕುಲದ ಬೇರನೆತ್ತಿ , ತಲೆಕೆಳಗು ಮಾಡಿ ತೋರಿಹೆನು. ನಾನು ಉತ್ತಮದ ಬ್ರಾಹ್ಮಣರೆಂಬ ನಿಮ್ಮ ದೇಹ ಬ್ರಹ್ಮನೊ ? ನಿಮ್ಮ ಪ್ರಾಣ ಬ್ರಹ್ಮನೊ ? ಆವುದು ಬ್ರಾಹ್ಮಣ್ಯ ? ಬಲ್ಲಡೆ ಬಗುಳಿರಿ ! ಅರಿಯದಿರ್ದಡೆ ಕೇಳಿರಿ. ದೇಹ ಕುಲಜನೆಂದಡೆ ಚರ್ಮಕ್ಕೆ ಕುಲವಿಲ್ಲ, ಖಂಡಕ್ಕೆ ಕುಲವಿಲ್ಲ, ನರವಿಂಗೆ ಕುಲವಿಲ್ಲ, ರಕ್ತಕ್ಕೆ ಕುಲವಿಲ್ಲ, ಕೀವಿಂಗೆ ಕುಲವಿಲ್ಲ. ಕರುಳಿಂಗೆ ಕುಲವಿಲ್ಲ, ಮಲಮೂತ್ರಕ್ಕಂತೂ ಕುಲವಿಲ್ಲ, ಒಡಲೆಂಬುದು ಅಪವಿತ್ರವಾಯಿತ್ತು, ಕುಲವೆಲ್ಲಿಯದೊಡಲಿಂಗೆ ? ಅವಂತಿರಲಿ ; ಇನ್ನು ನಿಮ್ಮ ಪ್ರಾಣಕ್ಕೆ ಕುಲವುಂಟೆಂದಡೆ. ಪ್ರಾಣ ದಶವಾಯುವಾದ ಕಾರಣ, ಆ ವಾಯು ಹಾರುವನಲ್ಲ. ಅದುವಲ್ಲದೆ ನಿಮ್ಮ ಒಡಲನಲಗಾಗಿ ಇರಿವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳು ಉತ್ತಮ ಕುಲವೆಂಬ ಅವು ಮುನ್ನವೆ ಪಾಪಕಾರಿಗಳಾದ ಕಾರಣ, ಅವಕ್ಕೆ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಳಗಣ ಸಪ್ತವ್ಯಸನಂಗಳು ಉತ್ತಮ ಕುಲವೆಂಬ ಅವು ಮುನ್ನವೆ ದುರ್ವ್ಯಸನಂಗಳಾದ ಕಾರಣ, ಅದಕೆಂದೂ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮ ಅಷ್ಟಮದಂಗಳು ಉತ್ತಮ ಕುಲವೆಂಬ ಅವು ನಿನ್ನ ಸುರೆಯ ಸವಿದ ಕೋಡಗದ ಹಾಂಗೆ ನಿಮ್ಮ ಗಾಣಲೀಯವಾದ ಕಾರಣ, ಅವು ಕುಲವಿಲ್ಲ. ನಿಲ್ಲು ! ಬಗುಳದಿರು ! ಇನ್ನು ಒಡಲ ತಾಪತ್ರಯಂಗಳು ಉತ್ತಮ ಕುಲವೆಂಬ ಅವು ನಿಮ್ಮ ಇರಿದಿರಿದು ಸುಡುವ ಒಡಗಿಚ್ಚುಗಳು. ಅವು ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಡಲ ಮುಚ್ಚಿದ ಮಲಮೂತ್ರಂಗಳ ಕುಲವುಂಟೆ ? ಅವು ಅರಿಕೆಯಲಿ ಮಲಮೂತ್ರಂಗಳಾದ ಕಾರಣ, ಅವಕ್ಕೆ ಕುಲವಿಲ್ಲ ನಿಲ್ಲು ! ಮಾಣು ! ಇನ್ನು ಉಳಿದ ಅಂತಃಕರಣಂಗಳಿಗೆ ಉತ್ತಮ ಕುಲವೆಂಬಿರಿ. ಅವ ನೀವು ಕಾಣಿರಿ, ನಿಮ್ಮನವು ಕಾಣವು. ಅದು ಕಾರಣ ಬಯಲಭ್ರಮೆಗೆ ಉತ್ತಮ ಕುಲವುಂಟೆ ? ಇಲ್ಲ ! ಇಲ್ಲ !! ನಿಲ್ಲು ! ಮಾಣು ! ಇಂತು ನಿಮ್ಮ ಪಂಚಭೂತ ಸಪ್ತಧಾತು ಪಂಚೇಂದ್ರಿಯಂಗಳು ಉತ್ತಮ ಕುಲವೆಂಬ ಅವು ಎಲ್ಲಾ ಜೀವರಾಶಿಗೂ ನಿಮಗೂ ಒಂದೇ ಸಮಾನ. ಅದೆಂತೆಂದಡೆ : ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ನಿಮ್ಮ ದೇಹಕ್ಕೆ ಕುಲವಾವುದು ಹೇಳಿರೆ ! ಇದಲ್ಲದೆ ಆತ್ಮನು ದೇಹವ ಬಿಟ್ಟು, ಒಂದು ಘಳಿಗೆ ತೊಲಗಿರಲು ಆ ದೇಹ ಹಡಿಕೆಯಾಗಿ ಹುಳಿತು, ನಾಯಿ ನರಿ ತಿಂಬ ಕಾರಣ ನಿಮ್ಮ ದೇಹ ಅಪವಿತ್ರ ಕಾಣಿರೆ ! ಇಂತಪ್ಪ ಅಪವಿತ್ರ ಕಾರ್ಯಕ್ಕೆ ಕುಲವಿಲ್ಲ. ಆ ಕಾರ್ಯಕ್ಕೆ ಕುಲವುಂಟೆಂದಡೆ ಮೇಲುಜಾತಿಯ ದೇಹದೊಳಗೆ ಹಾಲುವುಳ್ಳಡೆ ಕೀಳುಜಾತಿಯ ದೇಹದೊಳಗೆ ರಕ್ತವುಳ್ಳಡೆ ಅದು ಕುಲವಹುದು ! ಅಂಥಾ ಗುಣ ನಿಮಗಿಲ್ಲವಾಗಿ, ಎಲ್ಲಾ ಜೀವರಾಶಿಯ ದೇಹವು, ನಿಮ್ಮ ದೇಹವು ಒಂದೇ ಸಮಾನವಾದ ಕಾರಣ ನಿಮಗೆ ಕುಲವಿಲ್ಲ ! ನಿಲ್ಲು ! ಮಾಣು ! ಒಡಲು ಕರಣಾದಿಗಳು ಕುಲವಿಲ್ಲದೆ ಹೋದಡೂ ಎಲ್ಲವೂ ಅರಿವ ಚೈತನ್ಯಾತ್ಮಕನೆ, ಸತ್ಕುಲಜನೆ ಆತ್ಮನು, ಆವ ಕುಲದೊಳಗೂ ಅಲ್ಲ. ಶರೀರ ಬೇರೆ, ಆತ್ಮ ಬೇರೆ. ಅದೆಂತೆಂದಡೆ : ಭೂದೇವಮೃದ್ಭಾಂಡಮನೇಕ ರೂಪಂ ಸುವರ್ಣಮೇಕಂ ಬಹುಭೂಷಣಾನಾಂ | ಗೋಕ್ಷೀರಮೇಕಂ ಬಹುವರ್ಣಧೇನುಃ | ಶರೀರಭೇದಸ್ತೆ ್ವೀಕಃ ಪರಮಾತ್ಮಾ || ಎಂದುದಾಗಿ, ಶರೀರಂಗಳು ಅನಂತ, ಆತ್ಮನೊಬ್ಬನೆ. ಅದು ಕಾರಣ, ಆ ಆತ್ಮನು ಆವ ಕುಲದಲ್ಲೂ ಅಲ್ಲ. ಇನ್ನು ಆವ ಠಾವಿನಲ್ಲಿ ನಿಮ್ಮ ಕುಲದ ಪ್ರತಿಷ್ಠೆಯ ಮಾಡಿ ತೋರಿವಿರೊ ? ದೇಹದ ಮೃತ್ತಿಕೆ ಆತ್ಮ ನಿರಾಕಾರನೆನುತ್ತಿರಲು, ಇನ್ನಾವ ಪರಿಯಲ್ಲಿ ನಾ ಉತ್ತಮ ಕುಲಜರೆಂಬಿರೊ ? ಜೀವಶ್ಶಿವೋ ಶಿವೋ ಜೀವಸ್ಸಜೀವಃ ಕೇವಲಃ ಶಿವಃ | ಪಾಶಬದ್ಧಸ್ಥಿತೋ ಜೀವಃ ಪಾಶಮುಕ್ತಃ ಸದಾಶಿವಃ || ಎಂಬ ಶ್ರುತಿಯಂ ತಿಳಿದು ನೋಡಲು, ನೀವೆಲ್ಲಾ ಪಾಶಬದ್ಧ ಜೀವಿಗಳಾಗುತ್ತ ಇರಲು, ನಿಮಗೆಲ್ಲಿಯ ಉತ್ತಮ ಕುಲ ? ಪಾಶಮುಕ್ತರಾದ ಎಮ್ಮ ಶಿವಭಕ್ತರೆ ಕುಲಜರಲ್ಲದೆ ನಿಮಗೆ ಉತ್ತಮ ಕುಲ ಉಂಟಾದಡೆ, ನಿಮ್ಮ ದೇಹದೊಳಗೆ ಹೊರಗೆ ಇಂಥಾ ಠಾವೆಂದು ಬೆರಳುಮಾಡಿ ತೋರಿ ! ಅದೂ ಅಲ್ಲದೆ ಒಂದು ಪಕ್ಷಿಯ ತತ್ತಿಯೊಳಗೆ ಹಲವು ಮರಿ ಹುಟ್ಟಿದಡೆ ಒಂದರ ಮರಿಯೋ, ಹಲವು ಪಕ್ಷಿಯ ಮರಿಯೋ ? ತಿಳಿದು ನೋಡಿದಡೆ ಅದಕ್ಕೆ ಬೇರೆ ಬೇರೆ ಪಕ್ಷಿಗಳೆಂಬ ಕುಲವಿಲ್ಲ. ಅಹಂಗೆ ಒಬ್ಬ ಬ್ರಹ್ಮನ ಅಂಡವೆಂಬ ತತ್ತಿಯೊಳಗೆ ಸಕಲ ಜೀವರಾಶಿ ಎಲ್ಲಾ ಉದಯಿಸಿದವು. ಅದೆಂತೆಂದಡೆ : ಪೃಥಿವ್ಯಾಕಾಶಯೋರ್ಭಾಂಡಂ ತಸ್ಯಾಂಡಂ ಜಾಯತೇ ಕುಲಂ | ಅಂತ್ಯಜಾತಿದ್ರ್ವಿಜಾತಿರ್ಯಾ ಏಕಯೋನಿಸಹೋದರಾ || ಎಂದುದಾಗಿ, ಇರುಹೆ ಮೊದಲು, ಆನೆ ಕಡೆಯಾದ ಸಚರಾಚರವೆಲ್ಲವು ಒಬ್ಬ ಬ್ರಹ್ಮನ ಅಂಡದೊಳಗೆ ಹುಟ್ಟಿ, ಏಕಯೋನಿ ಸಹೋದರರೆಂದು ಪ್ರತಿಷ್ಠಿಸುತ್ತಿರಲು, ನಿಮಗೆಲ್ಲಿಯ ಕುಲವೊ ? ಶಿವಭಕ್ತರೆ ಉತ್ತಮ ಕುಲಜರೆಂದು, ಮಿಕ್ಕಿನವರೆಲ್ಲಾ ಕೀಳುಜಾತಿ ಎಂಬುದನು ಓದಿ ಬರಿದೊರೆಯಾದಡು ನಾನು ನಿಮಗೆ ಹೇಳಿಹೆನು ಕೇಳಿ ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || ಎಂಬ ಶ್ರುತಿಗೆ ಇದಿರುತ್ತರವ ಕೊಟ್ಟಡೆ, ಬಾಯಲ್ಲಿ ಕಾಷ್ಟವ ಮೂಡುವುದಾಗಿ ನೀವೇ ಕೀಳುಜಾತಿಗಳು, ಅರಿದ ಶಿವಭಕ್ತರು ಸತ್ಕುಲಜರೆಂದು ಸುಮ್ಮನಿರಿರೋ. ಅಲ್ಲದ ಅಜ್ಞಾನರಾದುದೆಲ್ಲಾ ಒಂದು ಕುಲ. ಸುಜ್ಞಾನರಾದುದೆಲ್ಲಾ ಒಂದು ಕುಲವೆಂದು ಶಾಸ್ತ್ರಗಳು ಹೇಳುತ್ತಿದಾವೆ. ಅದೆಂತೆಂದಡೆ : ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಬ್ಥಿರ್ನರಾಣಾಂ | ಜ್ಞಾನಂ ಹಿ ತೇಷಾಂ ಅದ್ಥಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಬ್ಥಿಃ ಸಮಾನಾಃ || ಎಂದುದಾಗಿ, ಅಜ್ಞಾನತಂತುಗಳು ನೀವೆಲ್ಲರೂ ಕರ್ಮಪಾಶಬದ್ಧರು. ನಿಮಗೆಲ್ಲಿಯದೊ ಸತ್ಕುಲ ? ಇದು ಅಲ್ಲದೆ ನಿಮ್ಮ ನುಡಿಯೊಡನೆ ನಿಮಗೆ ಹಗೆಮಾಡಿ ತೋರಿಹೆನು. ಕೇಳೆಲವೊ ನಿಮಗೆ ಕುಲವು ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ, ಕೌಂಡಿಲ್ಯ, ಕಾಶ್ಯಪನೆಂಬ ಋಷಿಗಳಿಂದ ಬಂದಿತ್ತೆಂಬಿರಿ. ಅವರ ಪೂರ್ವವನೆತ್ತಿ ನುಡಿದಡೆ ಹುರುಳಿಲ್ಲ. ಅವರೆಲ್ಲಾ ಕೀಳುಜಾತಿಗಳಾದ ಕಾರಣ, ನೀವೇ ಋಷಿಮೂಲವನು, ನದಿಮೂಲವನೆತ್ತಲಾಗದೆಂಬಿರಿ. ಇನ್ನು ನಿಮ್ಮ ನುಡಿ ನಿಮಗೆ ಹಗೆಯಾಯಿತ್ತೆಂದೆ ಕೇಳಿರೊ. ಆ ಋಷಿಗಳ ಸಂತಾನವಾಗಿ ನಿಮ್ಮ ಮೂಲವನೆತ್ತಿದಡೂ ಹುರುಳಿಲ್ಲ. ಅದಂತಿರಲಿ. ನಿಮ್ಮ ಕುಲಕೆ ಗುರುವೆನಿಸುವ ಋಷಿಗಳೆಲ್ಲರೂ ಲಿಂಗವಲ್ಲದೆ ಪೂಜಿಸರು, ವಿಭೂತಿ ರುದ್ರಾಕ್ಷಿಯನಲ್ಲದೆ ಧರಿಸರು, ಪಂಚಾಕ್ಷರಿಯನಲ್ಲದೆ ಜಪಿಸರು, ಜಡೆಯನ್ನಲ್ಲದೆ ಕಟ್ಟರು. ಹಾಗೆ ನೀವು ಲಿಂಗವ ಪೂಜಿಸಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಪಂಚಾಕ್ಷರಿಯ ಜಪಿಸಿ, ಜಡೆಯ ಕಟ್ಟಿ, ಈಶ್ವರನ ಲಾಂಛನವ ಧರಿಸಿದಡೆ ನೀವು ಋಷಿಮೂಲದವರಹುದು. ಹೇಗಾದಡೂ ಅನುಸರಿಸಿಕೊಳಬಹುದು. ಅದು ನಿಮಗಲ್ಲದ ಮಟ್ಟಿಯನ್ನಿಟ್ಟು ವಿಷ್ಣುವಂ ಪೂಜಿಸಿ ಮುಡುಹಂ ಸುಡಿಸಿಕೊಂಡು, ಸಾಲಿಗ್ರಾಮ, ಶಕ್ತಿ, ಲಕ್ಷ್ಮಿ, ದುರ್ಗಿ ಎಂಬ ಕಿರುಕುಳದೈವವಂ ಪೂಜಿಸಿ, ನರಕಕ್ಕಿಳಿದು ಹೋಹರಾದ ಕಾರಣ, ನೀವೇ ಹೀನಜಾತಿಗಳು. ನಿಮ್ಮ ಋಷಿಮಾರ್ಗವ ವಿಚಾರಿಸಿ ನಡೆಯಿರಾಗಿ ನೀವೇ ಲಿಂಗದ್ರೋಹಿಗಳು. ಲಿಂಗವೆ ದೈವವೆಂದು ಏಕನಿಷ್ಠೆಯಿಂದಲಿರಿರಾಗಿ ನೀವೇ ಲಿಂಗದ್ರೋಹಿಗಳು. ಪಂಚಾಕ್ಷರಿಯ ನೆನೆಯಿರಾಗಿ ಮಂತ್ರದ್ರೋಹಿಗಳು. ರುದ್ರಾಕ್ಷಿಯ ಧರಿಸರಾದ ಕಾರಣ ನೀವು ಶಿವಲಾಂಛನ ದ್ರೋಹಿಗಳು. ಶಿವಭಕ್ತರಿಗೆರಗದ ಕಾರಣ ನೀವು ಶಿವಭಕ್ತರಿಗೆ ದ್ರೋಹಿಗಳು. ನಿಮ್ಮ ಮುಖವ ನೋಡಲಾಗದು. ಬರಿದೆ ಬ್ರಹ್ಮವನಾಚರಿಸಿ ನಾವು ಬ್ರಹ್ಮರೆಂದೆಂಬಿರಿ. ಬ್ರಹ್ಮವೆಂತಿಪ್ಪುದೆಂದರಿಯಿರಿ. ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಸತ್ಯಂ ಬ್ರಹ್ಮ ಶುಚಿಬ್ರ್ರಹ್ಮ ಇಂದ್ರಿಯನಿಗ್ರಹಃ | ಸರ್ವಜೀವದಯಾಬ್ರಹ್ಮ ಇತೈ ್ಯೀದ್ಬ್ರಹ್ಮ ಲಕ್ಷಣಂ | ಸತ್ಯಂ ನಾಸ್ತಿ ಶುಚಿರ್ನಾಸ್ತಿ ನಾಸ್ತಿ ಚೇಂದ್ರಿಯ ನಿಗ್ರಹಃ | ಸರ್ವಜೀವ ದಯಾ ನಾಸ್ತಿ ಏತಚ್ಚಾಂಡಾಲ ಲಕ್ಷಣಂ || ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಬ್ರಹ್ಮವೆ ನಿಃಕರ್ಮ, ನೀವೇ ಕರ್ಮಿಗಳು. ಮತ್ತೆಂತೊ `ಬ್ರಹ್ಮಂ ಚರೇತಿ ಬ್ರಹ್ಮಣಾಂ' ಎಂದು ಗಳವುತ್ತಿಹಿರಿ. ಗಾಯತ್ರಿಯ ಜಪಿಸಿ ನಾವು ಕುಲಜರೆಂಬಿರಿ. ಆ ಗಾಯತ್ರಿ ಕರ್ಮವಲ್ಲದೆ ಮುಕ್ತಿಗೆ ಕಾರಣವಿಲ್ಲ. ಅಂತು ಗಾಯತ್ರಿಯಿಂದ ನೀವು ಕುಲಜರಲ್ಲ. ವೇದವನೋದಿ ನಾವೇ ಬ್ರಹ್ಮರಾದೆವೆಂಬಿರಿ. ವೇದ ಹೇಳಿದ ಹಾಂಗೇ ನಡೆಯಿರಿ. ಅದೆಂತೆಂದಡೆ : ``ದ್ಯಾವಾಭೂವಿೂ ಜನಯನ್ ದೇವ ಏಕಃ'' ಎಂದೋದಿ ಮರದು, ವಿಷ್ಣು ವನೆ ಭಜಿಸುವಿರಿ. ನೀವೇ ವೇದವಿರುದ್ಧಿಗಳು. ``ವಿಶ್ವತೋ ಮುಖ ವಿಶ್ವತೋ ಚಕ್ಷು ವಿಶ್ವತೋ ಬಾಹು'' ಎಂದೋದಿ ಮತ್ತೆ , ``ಏಕೋ ರುದ್ರೋ ನ ದ್ವಿತೀಯಾಯ ತಸ್ಥೇ'' ಎಂದು ಮರದು, ಬೇರೊಬ್ಬ ದೈವ ಉಂಟೆಂದು ಗಳಹುತ್ತಿದಿರಿ. ನೀವೇ ವೇದದ್ರೋಹಿಗಳು. ``ಏಕಮೇವಾದ್ವಿತಿಯಂ ಬ್ರಹ್ಮ''ವೆಂದೋದಿ, ಕರ್ಮದಲ್ಲಿ ಸಿಕ್ಕಿದೀರಿ. ನೀವೇ ದುಃಕರ್ಮಿಗಳು. ``ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ |'' ಎಂದೋದಿ, ಅನ್ಯಪೂಜೆಯ ಮಾಡುತಿದೀರಿ. ನೀವೇ ಪತಿತರು. ``ಶಿವೋ ಮೇ ಪಿತಾ'' ಎಂದೋದಿ, ಸನ್ಯಾಸಿಗಳಿಗೆ ಮಕ್ಕಳೆಂದಿರಿ. ನೀವೇ ಶಾಸ್ತ್ರವಿರುದ್ಧಿಗಳು. ಸದ್ಯೋಜಾತದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ | ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಎಂದೋದಿ, ಸರ್ವವಿಷ್ಣುಮಯ ಎನ್ನುತ್ತಿಪ್ಪಿರಿ. ನಿಮ್ಮಿಂದ ಬಿಟ್ಟು ಶಿವದ್ರೋಹಿಗಳಾರೊ ? ``ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ |'' ಎಂದೋದಿ, ಮರದು ವಿಭೂತಿಯ ನೀಡಲೊಲ್ಲದೆ ಮಟ್ಟಿಯಂ ನೀಡುವಿರಿ. ನಿಮ್ಮಿಂದ ಪತಿತರಿನ್ನಾರೊ ? ``ರುದ್ರಾಕ್ಷಧಾರಣಾತ್ ರುದ್ರಃ'' ಎಂಬುದನೋದಿ ರುದ್ರಾಕ್ಷಿಯಂ ಧರಿಸಲೊಲ್ಲದೆ, ಪದ್ಮಾಕ್ಷಿ ತೊಳಸಿಯ ಮಣಿಯಂ ಕಟ್ಟಿಕೊಂಬಿರಿ. ನಿಮ್ಮಿಂದ ಪಾಪಿಗಳಿನ್ನಾರೊ ? ``ಪಂಚಾಕ್ಷರಸಮಂ ಮಂತ್ರಂ ನಾಸ್ತೀ ತತ್ವಂ ಮಹಾಮುನೇ '' ಎಂಬುದನೋದಿ, ಪಂಚಾಕ್ಷರಿಯ ಜಪಿಸಲೊಲ್ಲದೆ, ಗೋಪಳಾ ಮಂತ್ರವ ನೆನವಿರಿ ಎಂತೊ ? ನಿಮ್ಮ ನುಡಿ ನಿಮಗೆ ವಿರುದ್ಧವಾಗಿರಲು, ನಿಮ್ಮ ಓದು ವೇದ ನಿಮಗೆ ವಿರುದ್ಧವಾಗಿರಲು, ನಿಮ್ಮ ಉತ್ತಮ ಕುಲಜರೆಂದು ವಂದಿಸಿದವರಿಗೆ ಶೂಕರ ಜನ್ಮದಲ್ಲಿ ಬಪ್ಪುದು ತಪ್ಪದು ನೋಡಿರೆ ! ವಿಪ್ರಾಣಾಂ ದರಿಶನೇ ಕಾಲೇ ಪಾಪಂ ಭುಂಜಂತಿ ಪೂಜಕಾಃ | ವಿಪ್ರಾಣಾಂ ವದನೇನೈವ ಕೋಟಿಜನ್ಮನಿ ಶೂಕರಃ || ಇಂತೆಂದುದಾಗಿ, ನಿಮ್ಮೊಡನೆ ಮಾತನಾಡಿದಡೆ ಪಂಚಮಹಾಪಾತಕಃ ನಿಮ್ಮ ಮುಖವ ನೋಡಿದಡೆ ಅಘೋರನರಕ. ಅದೆಂತೆಂದಡೆ : ಒಬ್ಬ ಹಾರುವನ ದಾರಿಯಲ್ಲಿ ಕಂಡದಿರೆ ಇರಿದು ಕೆಡಹಿದಲ್ಲದೆ ಹೋಗಬಾರದೆಂದು ನಿಮ್ಮ ವಾಕ್ಯವೆಂಬ ನೇಣಿಂದ ಹೆಡಗುಡಿಯ ಕಟ್ಟಿಸಿಕೊಳುತಿಪ್ಪಿರಿ. ಮತ್ತು ನಿಮ್ಮ ದುಶ್ಯರೀರತ್ರಯವನೆಣಿಸುವಡೆ ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬುದ ನೀವೇ ಓದಿ, ಪ್ರಾಣಿಯಂ ಕೊಂದು ಯಾಗವನ್ನಿಕ್ಕಿ, ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ, ಕೊಬ್ಬು ಬೆಳೆದ ಸವಿಯುಳ್ಳ ಖಂಡವನೆ ತಿಂದು, ಸೋಮಪಾನವೆಂಬ ಸುರೆಯನೆ ಕುಡಿದು, ನೊಸಲಕಣ್ಣ ತೋರುವಂತಹ ಶಿವಭಕ್ತನಾದಡೂ ನಿಂದಿಸಿ ನುಡಿವುತಿಪ್ಪಿರಿ. ನಿಮ್ಮೊಡನೆ ನುಡಿವಡೆ ಗುರುಲಿಂಗವಿಲ್ಲದವರು ನುಡಿವರಲ್ಲದೆ, ಗುರುಲಿಂಗವುಳ್ಳವರು ನುಡಿವರೆ ? ಇದು ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಲು, ನೀವೇ ಪಂಚಮಹಾಪಾತಕರು. ಶಿವಭಕ್ತಿಯರಿಯದ ನರರು ಪೀನಕುರಿಗಳು. ನಿಮ್ಮಿಂದ ಏಳುಬೆಲೆ ಹೊರಗಾದ ಹೊಲೆಯನೆ ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು, ಎತ್ತಿರೊ ಸತ್ಯವುಳ್ಳಡೆ ! ಅಲ್ಲದಡೆ ನಿಮ್ಮ ಬಾಯಬಾಲವ ಮುಚ್ಚಿಕೊಳ್ಳಿರೆ. ಎಮ್ಮ ಶಿವಭಕ್ತರೇ ಅದ್ಥಿಕರು, ಎಮ್ಮ ಶಿವಭಕ್ತರೇ ಕುಲಜರು, ಎಮ್ಮ ಶಿವಭಕ್ತರೇ ಸದಾಚಾರಿಗಳು, ಎಮ್ಮ ಶಿವಭಕ್ತರೇ ಪಾಪರಹಿತರು, ಎಮ್ಮ ಶಿವಭಕ್ತರೇ ಸರ್ವಜೀವ ದಯಾಪಾರಿಗಳು, ಎಮ್ಮ ಶಿವಭಕ್ತರೇ ಸದ್ಯೋನ್ಮುಕ್ತರಯ್ಯಾ, ಘನಗುರು ಶಿವಲಿಂಗ ರಾಮನಾಥ.
--------------
ವೀರಶಂಕರದಾಸಯ್ಯ
ಗುರುವೇ, ನಿನ್ನ ಕರದಲ್ಲೆನ್ನಂ ಪುಟ್ಟಿಸಿ, ಮಂತ್ರವೆಂಬ ಜನನಿಯ ವಿವೇಕವೆಂಬ ಸ್ತನಗಳೊಳ್ ತುಂಬಿರ್ಪ ಅನುಭವಾಮೃತರಸವನೆರೆದು, ಆಚಾರಕ್ಷೇತ್ರದಲ್ಲಿ ಬೆಳೆಸುತ್ತಿರಲು, ಅನೇಕ ಕಳೆಗಳಿಂ ಕೂಡಿದ ದಿವ್ಯಜ್ಞಾನವೆಂಬ ಯೌವನಂ ಪ್ರಾದುರ್ಭವಿಸಿ, ಸತ್ಕರ್ಮವಾಸನೆಯಿಂ ಪೋಷಿತನಾಗಿರ್ಪೆನಗೆ ಮಹಾಲಿಂಗಮೊಲಿದು, ನಿನ್ನ ಭಾವದಲ್ಲಿ ಬಂದು, ಹೃದಯದಲ್ಲಿ ನಿಂದು ಕೇಳಲು, ನೀನು ಆ ಲಿಂಗಕ್ಕೆ ಮಂಗಳಸೂತ್ರಮಂ ಕಟ್ಟಿ, ಕಲಶಕನ್ನಡಿಗಳನ್ನಿಕ್ಕಿ ಪಾಣಿಗ್ರಹಣಮಂ ಮಾಡಿ ಕೊಟ್ಟಬಳಿಕ, ರತಿಯನನುಭವಿಸಿ, ಲಿಂಗಸುಖವಂ ತನಗೀವುತ್ತಿರ್ಪನಯ್ಯಾ. ಆ ಮೇಲೆ ತನ್ನ ಮನದ ಹೆದರಿಕೆಯಂ ಬಿಡಿಸಿ, ಅಂತರಂಗಕ್ಕೆ ಕರೆದುಕೊಂಡುಬಂದು, ನಿಜಪ್ರಸಾದ ರಸದಂಬುಲವಿತ್ತು, ತನ್ನೊಡನೆ ಕೂಡುವ ಚಾತುರ್ಯಮಾರ್ಗಂಗಳಂ ಕಲಿಸುತ್ತ, ಆ ಲಿಂಗಂ ತಾನೇ ತನಗೆ ಗುರುವಾದನಯ್ಯಾ. ಆ ಮೇಲೆ ಭಾವದಲ್ಲಿ ನನ್ನ ಕೂಡಣ ಚಲ್ಲಾಟದಿಂದ ಸಂಚರಿಸುತ್ತಾ, ತಾನೇ ಜಂಗಮವಾದನಯ್ಯಾ. ತನ್ನ ಭಾವದಲ್ಲಿರ್ಪ ಇಂದ್ರಿಯವಿಷಯಂಗಳೆಲ್ಲಾ ಪುಣ್ಯಕ್ಷೇತ್ರಂಗಳಾದವಯ್ಯಾ. ಶರೀರವೇ ವಿಶ್ವವಾಯಿತ್ತಯ್ಯಾ, ತಾನೇ ವಿಶ್ವನಾಥನಯ್ಯಾ. ಪಂಚಭೂತಂಗಳೇ ಪಂಚಕೋಶವಾಯಿತ್ತಯ್ಯಾ. ಆ ಲಿಂಗಾನಂದವೇ ಭಾಗೀರಥಿಯಾಯಿತ್ತಯ್ಯಾ. ಆ ಲಿಂಗದೊಳಗಣ ವಿನಯವೇ ಸರಸ್ವತಿಯಾಗಿ, ಆ ಲಿಂಗದ ಕರುಣವೇ ಯಮುನೆಯಾಗಿ, ತನ್ನ ಶರೀರವೆಂಬ ದಿವ್ಯ ಕಾಶೀಕ್ಷೇತ್ರದಲ್ಲಿ ಹೃದಯವೆಂಬ ತ್ರಿವೇಣೀ ಮಣಿಕರ್ಣಿಕಾಸ್ಥಾನದಲ್ಲಿ ನೆಲಸಿ, ಸಕಲ ಗುಣಂಗಳೆಂಬ ಪುರುಷ ಋಷಿಗಳಿಂದ ಅರ್ಚಿಸಿಕೊಳ್ಳುತ್ತಾ ನಮ್ಮೊಳಗೆ ನಲಿದಾಡುತ್ತಿರ್ದನಯ್ಯಾ. ತನ್ನ ನಿಜಮತದಿಂ ವಿಶ್ವಸ್ವರೂಪ ಕಾಶೀಕ್ಷೇತ್ರವನು ರಕ್ಷಿಸುತಿರ್ಪ ಅನ್ನಪೂರ್ಣಾಭವಾನಿಗೂ ತನಗೂ ಮತ್ಸರಮಂ ಬಿಡಿಸಿ, ತನಗೆ ಅನ್ನಪೂರ್ಣಭವಾನಿಯೇ ಆಸ್ಪದಮಾಗಿ, ಆ ಅನ್ನಪೂರ್ಣೆಗೆ ತಾನೇ ಆಸ್ಪದಮಾಗಿರ್ಪಂತನುಕೂಲವಿಟ್ಟು ನಡಿಸಿದನಯ್ಯಾ. ಇಂತಪ್ಪ ದಿವ್ಯಕ್ಷೇತ್ರದಲ್ಲಿ ನಿಶ್ಚಿಂತಮಾಗಿ ಆ ಪರಮನೊಳಗೆ ಅಂತರಂಗದರಮನೆಯಲ್ಲಿ ನಿರ್ವಾಣರತಿಸುಖವನನುಭವಿಸುತ್ತಾ ಆ ಲಿಂಗದಲ್ಲಿ ಲೀನಮಾಗಿ ಪುನರಾವೃತ್ತಿರಹಿತ ಶಾಶ್ವತ ಪರಮಾನಂದರತಿಸುಖದೊಳೋಲಾಡುತ್ತಿರ್ದೆನಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು ಸಿಡಿಲು ಮಿಂಚು ಮುಗಿಲುಗಳಿಹವು. ಅದರಿಂದ ಮೇಲೆ ಒಂದುಲಕ್ಷ ಯೋಜನದುದ್ದದಲು ಬೃಹಸ್ಪತಿ ಇಹನು. ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನದುದ್ದದಲು ಶುಕ್ರನಿಹನು. ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು (ಸಾವಿರರಿ) ಯೋಜನದುದ್ದದಲು ಶನಿಯಿಹನು. ಆ ಶನಿಯಿಂದ ಮೇಲೆ ಒಂದಕೋಟಿ ಇಪ್ಪತ್ತೆಂಟುಲಕ್ಷ ಯೋಜನದುದ್ದಲು ಆದಿತ್ಯನಿಹನು. ಆ ಆದಿತ್ಯನಿಂದ ಮೇಲೆ ಎರಡುಕೋಟಿಯುಂ ಐವತ್ತುಸಾವಿರ (ಐವತ್ತಾರುರಿ)ಲಕ್ಷ ಯೋಜನದುದ್ದದಲು ರಾಹುಕೇತುಗಳು ಪ್ರವರ್ತಿಸಿಕೊಂಡಿಹವು. ಅಲ್ಲಿಂದ ಮೇಲೆ ಐದುಕೋಟಿಯುಂ ಹನ್ನೆರಡುಲಕ್ಷ ಯೋಜನದುದ್ದದಲು ನಕ್ಷತ್ರವಿಹವು. ಆ ನಕ್ಷತ್ರಂಗಳಿಂದ ಮೇಲೆ ಹತ್ತುಕೋಟಿಯುಂ ಇಪ್ಪತ್ತುನಾಲ್ಕು (ಲಕ್ಷ) ಯೋಜನದುದ್ದದಲು ಸಕಲ ಮಹಾಋಷಿಗಳಿಹರು. ಆ ಋಷಿಗಳಿಂದ ಮೇಲೆ ಇಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ ಯೋಜನದುದ್ದದಲು ತ್ರಿವಿಧ ದೇವತೆಗಳಿಹರು. ಆ ತ್ರಿವಿಧ ದೇವತೆಗಳಿಂದಂ ಮೇಲೆ ನಾಲ್ವತ್ತುಕೋಟಿಯುಂ ತೊಂಬತ್ತಾರುಲಕ್ಷ ಯೋಜನದುದ್ದದಲು ದೇವರ್ಕಳಿಹರು. ಆ ದೇವರ್ಕಳಿಂದಂ ಮೇಲೆ ಎಂಬತ್ತೊಂದುಕೋಟಿಯುಂ ತೊಂಬತ್ತೆರಡುಲಕ್ಷ ಯೋಜನದುದ್ದದಲು ದ್ವಾದಶಾದಿತ್ಯರಿಹರು. ಆ ದ್ವಾದಶಾದಿತ್ಯರಿಂದಂ ಮೇಲೆ ನೂರರುವತ್ತುಮೂರುಕೋಟಿಯುಂ ಎಂಬತ್ತುನಾಲ್ಕುಲಕ್ಷ ಯೋಜನದುದ್ದದಲು ಮಹಾಸೇನರಿಹರು. ಆ ಮಹಾಸೇನರಿಂದಂ ಮೇಲೆ ಮುನ್ನೂರಿಪ್ಪತ್ತೇಳುಕೋಟಿಯುಂ ಅರವತ್ತೆಂಟುಲಕ್ಷ ಯೋಜನದುದ್ದದಲು ಕೃತರೆಂಬ ಮಹಾಮುನಿಗಳಿಹರು. ಇಂತು_ಧರೆಯಿಂದಂ ಆಕಾಶ ಉಭಯಂ ಕೂಡಲು ಆರುನೂರೈವತ್ತೈದು ಕೋಟಿ ಐದು ಲಕ್ಷ ತೊಂಬತ್ತೆಂಟು ಸಾವಿರ ಯೋಜನದುದ್ದದಲು ಒಂದು ಮಹಾಲೋಕವಿಹುದು. ಆ ಲೋಕದಿಂದ ಹದಿನಾಲ್ಕು ಲೋಕವುಂಟು. ಅವು ಎಲ್ಲಿಹವೆಂದಡೆ: ಪಾತಾಳಲೋಕ ದೇವರ ಕಟಿಯಲ್ಲಿಹುದು, ರಸಾತಳಲೋಕ ದೇವರ ಗುಹ್ಯದಲ್ಲಿಹುದು, ತಳಾತಳಲೋಕ ಊರುವಿನಲ್ಲಿಹುದು, ಸುತಳಲೋಕ ಜಾನುವಿನಲ್ಲಿಹುದು, ನಿತಳಲೋಕ ಜಂಘೆಯಲ್ಲಿಹುದು, ವಿತಳಲೋಕ ಪಾದೋಧ್ರ್ವದಲ್ಲಿಹುದು, ಅತಳಲೋಕ ಪಾದತಳದಲ್ಲಿಹುದು. ಅಲ್ಲಿಂದತ್ತ ಕೆಳಗುಳ್ಳ ಲೋಕವನಾತನೆ ಬಲ್ಲ. ಭೂಲೋಕ ನಾಭಿಯಲ್ಲಿಹುದು, ಭುವರ್ಲೋಕ ಹೃದಯದಲ್ಲಿಹುದು, ಸ್ವರ್ಲೋಕ ಉರೋಮಧ್ಯದಲ್ಲಿಹುದು, ಮಹರ್ಲೋಕ ಕಂಠದಲ್ಲಿಹುದು, ಜನರ್ಲೋಕ ತಾಲವ್ಯದಲ್ಲಿಹುದು, ತಪರ್ಲೋಕ ಲಲಾಟದಲ್ಲಿಹುದು, ಸತ್ಯಲೋಕ ಬ್ರಹ್ಮರಂಧ್ರದಲ್ಲಿಹುದು. ಅಲ್ಲಿಂದತ್ತ ಮೇಲುಳ್ಳ ಲೋಕವನಾತನೆ ಬಲ್ಲ. ಇಂತೀ ಈರೇಳು ಲೋಕವು ತಾನೆಯಾಗಿಪ್ಪ ಮಹಾಲಿಂಗವನ್ನು ಅಡಗಿಸಿಹೆನೆಂಬ ಅತುಳಬಲ್ಲಿದರು ಕೆಲಬರುಂಟೆ ? ಅಡಗುವನು ಮತ್ತೊಂದು ಪರಿಯಲ್ಲಿ, ಅದು ಹೇಂಗೆ ? ಅಡರಿ ಹಿಡಿಯಲು ಬಹುದು ಭಕ್ತಿಯೆಂಬ ಭಾವದಲ್ಲಿ ಸತ್ಯಸದಾಚಾರವನರಿದು ಪಾಪಕ್ಕೆ ನಿಲ್ಲದೆ ಕೋಪಕ್ಕೆ ಸಲ್ಲದೆ ಮಾಯವನುಣ್ಣದೆ ಮನದಲ್ಲಿ ಅಜ್ಞಾನವ ಬೆರಸದೆ ಅಲ್ಲದುದನೆ ಬಿಟ್ಟು, ಬಲ್ಲುದನೆ ಲಿಂಗಾರ್ಚನೆಯೆಂದು `ಓಂ' ಎಂಬ ಅಕ್ಷರವನೋದಿ ಅರಿತ ಬಳಿಕ ಬಸುರಲ್ಲಿ ಬಂದಿಪ್ಪ, ಶಿರದಲ್ಲಿ ನಿಂದಿಪ್ಪ ಅಂಗೈಯೊಳಗೆ ಅಪ್ರತಿಮನಾಗಿ (ಸಿಲ್ಕಿಪ್ಪ) ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
-->