ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನ ಬುದ್ಧಿ ಚಿತ್ತ ಅಹಂಕಾರವೆಂಬ, ಎನ್ನ ಚತುರ್ವಿಧ ಮಂತ್ರಿ ಪ್ರಧಾನರು ಕೇಳಿರಯ್ಯ, ನಾನು ಕೆಟ್ಟು ಭ್ರಷ್ಟನಾಗಿ ಹೋದ ಕರ್ಮದ ಅಂಡಲೆಯ ಬಗೆಯ. ನಾನು ಸ್ವರ್ಗ ಮತ್ರ್ಯ ಪಾತಾಳದೊಳಗುಳ್ಳ ಭೋಗರಾಜ್ಯಕ್ಕೆ ಅರಸಾಗಿ ಅನಂತಕಾಲ ಪಟ್ಟವನಾಳಿ ಎನ್ನ ಚತುರಂಗಬಲಕ್ಕೆ ಬೇಡಿದ ಪಡಿ ಕಂದಾಯಮಂ ಕೊಟ್ಟು ಕೊಟ್ಟು ನಷ್ಟವಾಗಿ ಎನಗೆ ಎರಡುನಲವತ್ತೆರಡುಲಕ್ಷದಭವರಾಟಳದ ಋಣಬಿದ್ದಿತ. ಆ ಋಣಕ್ಕಂಜಿ ಭೋಗರಾಜ್ಯಮಂ ಬಿಟ್ಟು ದರಿದ್ರನಾದೆನು. ಎನಗೆ ನೀವು ಮಾಡುವ ರಾಜಕಾರ್ಯದ ಮಣಿಹ ನಿಮಗೆ ತೆಗೆಯಿತು. ಎನ್ನ ನಂಬಿ ಕೆಡಬೇಡ, ಕೆಡಬೇಡ. ನಿಮ್ಮ ಪೂರ್ವಾಶ್ರಯಕ್ಕೆ ನೀವು ಹೋಗಿರೆಲೆ. ಅಜ್ಞಾನತಮಕ್ಕೆ ಜ್ಯೋತಿಃಪ್ರಕಾಶವನುಳ್ಳ ಸಮ್ಯಜ್ಞಾನವೇ ನೀನು ಕೇಳಯ್ಯ. ಆತ್ಮನು ಜ್ಞಾನಸ್ವರೂಪನೆಂದು ವೇದಾಗಮಂಗಳು ಸ್ಮೃತಿ ಸಾರುತ್ತಿವೆ. ನಾನು ಜೀವತ್ವಮಂ ಅಳಿದು ಶರಣತ್ವಮಂ ಕೈವಿಡಿದೆ. ಎನ್ನೊಳಗೆ ನೀನು, ನನೆಯೊಳಗಣ ಪರಿಮಳದಂತೆ ಹುದುಗಿಪ್ಪೆಯಾಗಿ, ನೀನೂ ನಾನೂ, ಗೋಳಕಾಕಾರಸ್ವರೂಪವಾದ ನಿಷ್ಕಲಬ್ರಹ್ಮದಲ್ಲಿ, ಉದಯವಾದ ಸಹೋದರರು. ಎಂಟುಬೀದಿಯ ಪಟ್ಟಣದ ಚೌದಾರಿಯ ಏಕಾಂತವೀಥಿಯ, ಸುವರ್ಣವರ್ಣದ ಸಿಂಹಾಸನದ ಮೇಲಿಪ್ಪ, ಮನೋನಾಥನೆನಗೆ ಕಾಣಿಸಿ, ``ನಿನ್ನ ಶ್ರೀ ಚರಣಮಂ ಎಂದೆಂದೂ ಪೂಜೆಮಾಡುವ ಭೃತ್ಯ'ನೆಂದು, ಭಯಭಕ್ತಿಯಿಂದ ಬಣ್ಣಿಸಿ, ಎನ್ನ ಮಾಯಾಪಾಶಮಂ ಸುಡುವಂತೆ ಛಲವನ್ನುಂಟು ಮಾಡು. ಚಿದಾಕಾಶದಲ್ಲಿ, ಆರು ಮೂರಾಗಿ, ಮೂರು ಒಂದಾಗಿ, ಎರಡುವೀಥಿಯ ಮಾಣಿಕ್ಯಪುರದ ಸಂಗಮಸ್ಥಾನವೆಂಬ, ಅರಮನೆಯಲ್ಲಿ ನೆಲೆಸಿಪ್ಪ ಮಹಾರಾಯನ ಮುಂದೆ, ಎನ್ನನಿಕ್ಕಿ ``ನಿನ್ನ ಆದಿ ಅನಾದಿಯ ಹಳೆಯ' ನೆಂದು ಬಿನ್ನಪಂಗೈದು ಕರುಣಾರಸಮಂ ಬೀರಿಸಿ, ಎನಗೆ ಮುಕ್ತಿರಾಜ್ಯಮಂ ಕೊಡು'ವಂತೆ ಸಂಧಾನಮಂ ಮಾಡು. ಆ ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿಸಿ ಅಭಯ ಹಸ್ತಮಂ ಕೊಡಿಸಿ ಎನ್ನ ಎಂಬತ್ತುನಾಲ್ಕು ಲಕ್ಷ ಭವರಾಟಾಳದ ಋಣವ ತಿದ್ದುವಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
-->