ಅನಂತಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶಮಯವಾಗಿಹ
ಪರಂಜ್ಯೋತಿ ಉದಯವಾಗದಂದು,
ರಾಜಸ ತಾಮಸ ಸಾತ್ವಿಕ ಗುಣತ್ರಯಂಗಳುತ್ಪತ್ಯವಾಗದಂದು,
ಅಕ್ಷರತ್ರಯಂಗಳುತ್ಪತ್ಯವಾಗದಂದು,
ಮಹಾಶೇಷನ ಮೇಲೆ ಭೂಮಿ ಹಾಸದಂದು,
ಹೇಮಾದ್ರಿ ಕೈಲಾಸವಿಲ್ಲದಂದು,
ಗಂಗೆವಾಳುಕ ಸಮಾರುದ್ರರಿಲ್ಲದಂದು,
ಸ್ವರ್ಗ ಮತ್ರ್ಯ ಪಾತಾಳಲೋಕವಿಲ್ಲದಂದು,
ಭೂಲೋಕ ಭುವರ್ಲೋಕ, ಮಹರ್ಲೋಕ, ಜನರ್ಲೋಕ,
ತಪರ್ಲೋಕ, ಸತ್ಯಲೋಕ, ಸ್ವರ್ಲೋಕ
ಇಂತೀ ಮೇಲೇಳು ಲೋಕಂಗಳಿಲ್ಲದಂದು,
ಅತಲ ವಿತಲ ಸುತಲ ತಲಾತಲ ರಸಾತಲ
ನಿರಾತಳ ಪಾತಾಳಲೋಕಂಗಳೆಂಬ ಕೆಳಗೇಳುಲೋಕಂಗಳಿಲ್ಲದಂದು.
ಮಲಯ ಸಂಸ್ಥಲ ಶಕ್ತಿಮಾನ್ ವಿಂಧ್ಯ ಮಹೇಂದ್ರ ಋಕ್ಷದಂತ, ಸಹ್ಯವೆಂಬ
ಸಪ್ತಕುಲಪರ್ವತಂಗಳಿಲ್ಲದಂದು,
ಲವಣ ಇಕ್ಷು ಸುರೆ ಘೃತ ದಧಿ ಕ್ಷೀರ ಶುದ್ಧಜಲವೆಂಬ
ಸಪ್ತಸಮುದ್ರಂಗಳಿಲ್ಲದಂದು,
ಜಂಬೂದ್ವೀಪ, ಪ್ಲಕ್ಷದ್ವೀಪ, ಕುಶದ್ವೀಪ, ಶಾಕದ್ವೀಪ,
ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ
ಸಪ್ತದ್ವೀಪಂಗಳಿಲ್ಲದಂದು,
ನಾಲ್ವತ್ತೆಂಟುಸಾವಿರ ಮುನಿಗಳಿಲ್ಲದಂದು,
ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು,
ಸರ್ವಶೂನ್ಯನಿರಾಲಂಬವಾಗಿದ್ದಂದು,
ನಿರಂಜನಾತೀತನಾಗಿದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವ.