ಅಥವಾ

ಒಟ್ಟು 22 ಕಡೆಗಳಲ್ಲಿ , 9 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಡಾರಣ್ಯದೊಳಗೆ ಒಬ್ಬ ಸೂಳೆ ಕರೆದು ಐವರಿಗೆ ಒತ್ತೆಯಕೊಡುವುದ ಕಂಡೆನಯ್ಯ ! ಊರೊಳಗಣ ಗೊಲ್ಲತಿ ಐವರ ಒಪ್ಪಿಸಿಕೊಟ್ಟು ಸೂಳೆ ಗೊಲ್ಲತಿ ಒಂದಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೆ ಉದಕತುಂಬಿ ಬಾಗಿಲೆಲ್ಲ ಕೆಸರಾದವು ನೋಡಾ. ಮನೆಯೊಳಗೆ ಕಸ ಹೆಚ್ಚಿ, ಶಶಿಯ ನೆಳಲೀಯದು ನೋಡಿರೆ. ಊರೊಳಗಣ ಉದಕವ ಹೊರಡಿಸಿ, ಬಾಗಿಲೊಳಗಣ ಕೆಸರ ಸುಟ್ಟು, ಮನೆಯೊಳಗಣ ಕಸವ ತೆಗೆದು, ಶಶಿಯ ಸಲಹಿಕೊಂಬುದ ನೀನೊಲಿದು ಕರುಣಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರೊಳಗಣ ದೇವಾಲಯದಲ್ಲಿ ಐವರು ಹೊಲೆಯರು ಹೊಕ್ಕು, ದೇವರ ಪೂಜಿಸುತ್ತೈದಾರೆ. ಹೊಲೆಯರು ಮುಟ್ಟಿ ದೇವಾಲಯ ಹೊರಗಾಯಿತ್ತು, ದೇವರೊಳಗದೆ. ಕುಲಜರು ಹೊಲಬುದಪ್ಪಿ ಹೊಲೆ ಒಳಗಾಯಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಊರೊಳಗಣ ಮಾನವನು ಮೇರುವೆಯೊಳಗಣ ಸೂಳೆಯ ಸಂಗವ ಮಾಡಲು ಆ ಸೂಳೆಯ ಬಸುರಲ್ಲಿ ಪಂಚಮುಖದ ಬಾಲಕ ಹುಟ್ಟಿ, ನಿರವಯವೆಂಬ ಕರಸ್ಥಲದ ಮೇಲೆ ನಿಂದು ರಾಜಿಸುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆ ನಿಜದರಿವು ತಾನೊಂದು ಬಂಧನದಿಂದ ಮರೆಯಾದುದ ತಾನರಿಯದೆ, ಮರವೆಯ ಗುಣ ಇದಿರಿಗೆ ಅದೆಯೆಂದು ಸಂಪಾದಿಸುವಾಗ, ಆ ತೆರ ಶಿಲೆಯ ನೆಳಲಿನ ಮರೆಯಲ್ಲಿ ತನ್ನಂಗ ಬಿಂಬಿಸಲಿಂತಾಗಿ, ಅರಿ ಇದಿರಾಯಿತ್ತೆಂದು, ಶಿಲೆಯ ಕೊಂಡು, ತಾನೊಂದು ಚೇತರಿಸಿಕೊಂಡು ನಿಂದ ಗಜದಂತೆ, ನಿಜದರಿವು ತ್ರಿಗುಣಾತ್ಮಕದಲ್ಲಿ ಬೆರಸಿ, ತ್ರಿದೋಷದ ದೆಸೆಯಿಂದ ನಾನಾದರುಶನ ಪಕ್ಷಪಾತಂಗಳಲ್ಲಿ ಹೊತ್ತು ಹೋರಿ, ಅಧ್ಯಾತ್ಮ, ಆದಿಭೌತಿಕ, ಆದಿದೈವಿಕಂಗಳ ತಿಳಿಯಬೇಕೆಂದು, ಭೂತಭವಿಷ್ಯದ್ವರ್ತಮಾನವ ವಿಚಾರಿಸಿಹೆನೆಂದು, ಷಡುದರುಶನವ ಸಂಪಾದಿಸಿಹೆನೆಂದು, ಪಂಚಭೌತಿಕ ಭೇದ, ಪಂಚವಿಂಶತಿತತ್ವ ಮೂವತ್ತಾರು ಕ್ರಮ, ಐವತ್ತೊಂದು ಮೆಟ್ಟು, ನೂರೊಂದರ ಲಕ್ಷ. ಇಂತಿವ ಪ್ರಮಾಣಿಸಿ ತಿಳಿದಲ್ಲಿ, ಅದಕ್ಕೆ ಬೇರೆ ಬೇರೆ ಸೂರ್ಯ ಚಂದ್ರ ಆಕಾಶ ವಾಯು ಆಗ್ನಿ ಉದಕ ಪೃಥ್ವಿ ಬೇರೊಂದು ನೆಲಹೊಲಬುಂಟೆ ? ಇಂತಿವೆಲ್ಲವು ವಸ್ತುಮಯದೊಳಗಿದ್ದ ಲಕ್ಷ. ಊರೊಳಗಣ ಹಲವು ಕುಲವೆಲ್ಲವೂ ಅರಸಿನ ದೆಸೆ ಕುಲದಲ್ಲಿ ಎಸಕವ ತಿಳಿದಡಗಿದ ತೆರದಂತೆ, ಅರಿದು ನಡೆವ ಪರಮವಿರಕ್ತಂಗೆ ಹಲವುಮಾತಿನ ಬಲೆಯ ಭ್ರಮೆಯಿಲ್ಲ. ಗೆಲ್ಲಸೋಲದ ಕಲ್ಲೆದೆಯವನಲ್ಲ. ಅಲ್ಲಿಗಲ್ಲಿಗೆ ಬಲ್ಲರಿಯರೆಂದು ಕೋಲಾಟಿಗರಂತೆ ಥೆಕಾವ್ಯವೆಲ್ಲವ ಹೇಳುವನಲ್ಲ. ತ್ರಿವಿಧಮಲವಿಲ್ಲದಡೆ ಒಲ್ಲೆನೆಂದು ತನ್ನಲ್ಲಿಗೆ ಬಂದಡೆ, ಕೂಡಿ ಕದಂಬನಾಗಿ, ಮಧು ಮಕ್ಷಿಕನಂತೆ ಸಂಸಾರದಲ್ಲಿಯೆ ಸಾವನಲ್ಲ. ಕಲ್ಲಿಯೊಳಗಣ ಮಕರದ ಜೀವದಂತೆ, ಸಂಸಾರದಲ್ಲಿಯೆ ಹೋದ ಕುಳಿಗೊಂಬನಲ್ಲ. ಆತನ ಇರವು ದಗ್ಧಪಟದಂತೆ, ರತ್ನದೀಪ್ತಿಯ ಹೊದ್ದಿಗೆಯ ತೆರದಂತೆ, ಸ್ಫಟಿಕದ ನಿರ್ದೇಹದ ವರ್ಣದ ಹೊದ್ದಿಗೆಯಂತೆ, ಇಂತು ಚಿದ್ರೂಪನ ಇರವು. ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದೊಳಗಾದವನ ಇರವು
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಊರೊಳಗಣ ಹೊಲೆಯ, ಊರ ಹೊರಗಣ ಕುಲಜ. ಇವರಲ್ಲಿ ಆರು ಹಿರಿ[ಯರೆಂಬುದ] ಬಲ್ಲಡೆ ಲಿಂಗಪ್ರಾಣಸಂಬಂಧಿಯೆಂಬೆ. ಅರಿಯದಿರ್ದಡೆ ಪ್ರಾಣಲಿಂಗಸಂಬಂಧಿಯೆಂಬೆ. ಇಂತೀ ಉಭಯವನರಿದ ಶರಣ ಸರ್ವಾಂಗಲಿಂಗಸಂಬಂಧಿ. ಆತಂಗೆ ತತ್ತುಗೊತ್ತಿಲ್ಲ, ಇಷ್ಟ ಪ್ರಾಣವೆಂಬ ಗುತ್ತಗೆಯವನಲ್ಲ. ಕರ್ಪುರ ಉರಿ ಉಭಯರೂಪು ತನ್ಮಯವಾದಂತೆ ಕಮಠೇಶ್ವರಲಿಂಗದಲ್ಲಿ ಸದಾಸನ್ನದ್ಭನಾದ ಶರಣನು.
--------------
ಬಾಲಸಂಗಣ್ಣ
ಮೇರುವೆಯೊಳಗಣ ಪುರುಷನು ಊರೊಳಗಣ ನಾರಿಯ ಕೈವಿಡುದು, ಆರು ಕೇರಿಯ ದಾಂಟಿ, ಮೂರು ಗ್ರಾಮವ ಮೀರಿ, ಪರಕೆ ಪರವಾದ ಲಿಂಗವನಾಚರಿಸಿ ನಿಶ್ಮಿಂತ ನಿರಾಕುಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗಣ ಘನಹೇರಡವಿಯೊಳೊಂದು ಬೇರು ಮೇಲು, ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು] ಆರೈದು ನೀರನೆರೆದು ಸಲುಹಲಿಕ್ಕೆ, ಅದು ಸಾರಾಯದ ಫಲವಾಯಿತ್ತಲ್ಲಾ ! ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರ ಸಂಸಾರಭವಕ್ಕೆ ಸಿಕ್ಕಿದ. ಬೇರಿಂದಲಾದ ಫಲವ ದಣಿದುಂಡವ, ಊರಿಂದ ಹೊರಗಾದ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಊರೊಳಗಣ ಉಡು ಕೇರಿಯ ನುಂಗಿತ್ತು. ಜಾಗಟದೊಳಗಣ ಧ್ವನಿ ಆ ಜಾಗಟವ ನುಂಗಿತಹತಹತ್ತು. ಸಾರಬಂದ ಧೀರನ ಬಾರಿಕ ಕೊಂದ. ನಾಡು ಹಾಳಾಯಿತ್ತು, ಪಟ್ಟಣ ಸೂರೆಹೋಯಿತ್ತು. ಕಟ್ಟರಸು ಸಿಕ್ಕಿದ, ಪ್ರಧಾನ ತಪ್ಪಿದ. ಎಕ್ಕಟಿಗನ ಮಕ್ಕಳು ಕೆಟ್ಟೋಡಿದರು. ತಪ್ಪಿದ ಪ್ರಧಾನ ಒಪ್ಪವಿಟ್ಟ ರಾಜ್ಯವ, ಸಿಕ್ಕಿದರಸ ಬಿಡಿಸಿ, ಎಕ್ಕಟಿಗನ ಮಕ್ಕಳ ಸಂತೈಸಿ, ಹಿರಿಯರಸನ ಕೈಸೆರೆಯ ಬಿಡಿಸಿ, ತಾ ಕೈಯೊಳಗಾಗಿ ಕೆಟ್ಟ ಪ್ರಧಾನಿ, ಸಿಕ್ಕದ ಕೆಟ್ಟ ಅರಸು. ಇವರೆಲ್ಲರು ಕೆಟ್ಟ ಕೇಡ ನೋಡಿ ತಪ್ಪಿದೆನಯ್ಯಾ. ಈ ಮಾಟಕೂಟದ ಹೋರಟೆಗಂಜಿ ಬಿರಿದ ಬಿಟ್ಟ ಮೇಲೆ, ಅಲಗಿನ ಹಂಗೇಕೆ? ನಾಡಬಿಟ್ಟು ತೊಲಗಿದವಂಗೆ, ಒಂದೂರ ಸುದ್ದಿಯೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವಾಂಗಪಟ್ಟಣದೊಳಗೆ ಇರುತಿಪ್ಪ ಪರಮನ ಕಂಡೆನಯ್ಯ. ಊರೊಳಗಣ ನಾರಿ ಆರು ಸೋಪಾನಂಗಳನೇರಿ, ಮೂರು ಬಾಗಿಲ ಪೊಕ್ಕು, ಆ ಪರಮನ ಧ್ಯಾನವ ಮಾಡುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಮನೆಯ ಮೇಲೆ ಇಪ್ಪ ನಿರ್ವಾಣವ ಕಂಡೆನಯ್ಯ. ಊರೊಳಗಣ ಪುರುಷನು ಐವರ ಕೂಡಿಕೊಂಡು ನಿರ್ವಾಣಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರ ಬೆಂಕಿ ಊರ ಸುಟ್ಟಿತ್ತ ಕಂಡೆ. ಸುಟ್ಟ ಊರೊಳಗಣ ಅಗ್ನಿ ಊರ ಮುಂದಿನ ಶಿಶುವ ನುಂಗಿತ್ತ ಕಂಡೆ. ಆ ಶಿಶು ಊರ ಬೆಂಕಿಯ ನುಂಗಿ, ಸೂಳಿಯ ಸಂಗವ ಮಾಡಿ, ಆ ಶಿಶುವು ಸತ್ತಿತ್ತ ಕಂಡು ಬೆರಗಾದೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಾಲುಕುಡಿದ ಶಿಶು ಸತ್ತು ವಿಷಕುಡಿದ ಶಿಶು ಬದುಕಿದುದ ಕಂಡೆ. ಬೆಣ್ಣೆಯ ತಿಂದ ಶಿಶು ಸತ್ತು ಕೆಂಡವ ತಿಂದ ಶಿಶು ಬದುಕಿದುದ ಕಂಡೆ. ಉಂಡಾಡುವ ಶಿಶು ಸತ್ತು ಉಣ್ಣದೆ ಓಡಾಡುವ ಶಿಶು ಬದುಕಿದುದ ಕಂಡೆ. ಅಂಗೈಯೊಳಗಣ ಶಿಶು ಸತ್ತು ಬೀದಿಬಾಜಾರದಲ್ಲಿರುವ ಶಿಶು ಬದುಕಿದುದ ಕಂಡೆ. ಬೆಳದಿಂಗಳೊಳಗಿನ ಶಿಶು ಸತ್ತು ಬಿಸಿಲೊಳಗಿನ ಶಿಶು ಬದುಕಿದುದ ಕಂಡೆ. ಅರಮನೆಯೊಳಗಣ ಅರಸಿಯ ಶಿಶು ಸತ್ತು ಊರೊಳಗಣ ದಾಸಿಯ ಶಿಶು ಬದುಕಿದುದ ಕಂಡೆ. ಹುಟ್ಟಿದ ಶಿಶು ಬೇನೆಯಿಲ್ಲದೆ ಸತ್ತು ಹುಟ್ಟದೆ ಬೇನೆ ಹತ್ತಿದ ಶಿಶು ಬದುಕಿದುದ ಕಂಡೆ. ಈ ಉಭಯ ಭೇದವ ಬಲ್ಲ ಶಿಶು ಚನ್ನಮಲ್ಲಯ್ಯನಲ್ಲಿ ಬಯಲಾಯಿತ್ತು. ಮತ್ತಂ, ಈ ಉಭಯ ನಿರ್ಣಯವನರಿಯದ ಶಿಶು ಮಹಾಮಲೆಯಲ್ಲಿ ಬಯಲಾಯಿತ್ತು. ಇದರಂದಚಂದ ನಿಮ್ಮ ಶರಣರೇ ಬಲ್ಲರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಐದು ಮೇರುವೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಂದು ಲಿಂಗವ ಕಂಡೆನಯ್ಯ. ಊರೊಳಗಣ ಪುರುಷನು ಜ್ಞಾನಶಕ್ತಿಯ ಸಂಗವ ಮಾಡಿ ಆ ಲಿಂಗದಲ್ಲಿ ಕೂಡಿ ನಿಃಪ್ರಿಯವನೈದಿದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯಾ ನಾ ಉತ್ತರವನೇರಿ ನೋಡಲಾಗಿ, ಊರೊಳಗಣ ಉಲುಹೆಲ್ಲ ನಿಂದಿತ್ತು. ಪಶ್ಚಿಮಕ್ಕಿಳಿದು ನೋಡಲಾಗಿ, ಪ್ರಾಣ ಪವನನ ಸುಳುಹು ನಿಂದಿತ್ತು. ಪೂರ್ವವ ಮೆಟ್ಟಿ ನೋಡಲಾಗಿ, ಆರು ನೆಲೆ ಮೂರಾಗಿದ್ದವು. ಅಯ್ಯಾ ನಾ ದಕ್ಷಿಣಕ್ಕೆ ಬಂದು ನೋಡಲಾಗಿ ಈರೇಳು ಭವನವು ಕುಕ್ಷಿಯೊಳಗೆ ನಿಕ್ಷೇಪವಾಗಿದ್ದಿತು. ಅದು ಹೇಗೆಂದಡೆ : ಇಹಲೋಕವು ತನ್ನೊಳಗೆ, ಪರಲೋಕವು ತನ್ನೊಳಗೆ, ಸಚರಾಚರವೆಲ್ಲ ತನ್ನೊಳಗೆ, ಶಿವಶಕ್ತಿಯು ತನ್ನೊಳಗೆ, ಭುವನಾದಿ ಭುವನಂಗಳು ತನ್ನೊಳಗೆ. ಅದು ಹೇಗೆಂದಡೆ : ಅದಕ್ಕೆ ದೃಷ್ಟವ ಹೇಳಿಹೆನು, ಬಲ್ಲವರು ತಿಳಿದುನೋಡಿ, `ಒಂ ಏಕಮೇವನದ್ವಿತೀಯ' ಎಂಬ ಶ್ರುತಿ ಕೇಳಿ ಬಲ್ಲಿರೆ. ಇಂತಪ್ಪ ಮನಕ್ಕೆ ಒಂದಲ್ಲದೆ ಎರಡುಂಟೆ ? ತಾನಲ್ಲದೆ ಅನ್ಯೋನ್ಯವಿಲ್ಲಾಯೆಂದು ಅರಿದ ಮೇಲೆ ತನಗಿಂದ ಮುನ್ನ ಇವೇನಾದರು ಉಂಟೆ ? ಇದು ಕಾರಣ, ನಮ್ಮ ದೇವನೊಬ್ಬನೆ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಆತಂಗೆ ನಮೋ ನಮೋ ಎಂಬೆ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->