ಅಥವಾ

ಒಟ್ಟು 24 ಕಡೆಗಳಲ್ಲಿ , 15 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರನಾಶ್ರಯಿಸುವನೆ ಉಪಜೀವಿಗಳಂತೆ? ಕಾಡನಾಶ್ರಯಿಸುವನೆ ಕರಡಿಯಂತೆ? ಊರನಾಶ್ರಯಿಸುವನಲ್ಲ, ಕಾಡಾನಶ್ರಯಿಸುವನೂ ಅಲ್ಲ ನೋಡಾ. ಊರಾವುದು ಕಾಡುವುದು ಎಂದರಿಯದೆ ಕಳವಳಿಸುತ್ತಿಪ್ಪರು ನೋಡಾ. ಊರೆಂದರೆ:ಮಾಯಾಸಂಬಂಧವಾದ ಪಂಚಭೌತಿಕ ಗ್ರಾಮ. ಕಾಡೆಂದರೆ:ಆ ಕಾಯವನಾಶ್ರಯಿಸಿಕೊಂಡಿಪ್ಪ ಸಕಲ ಕರಣಂಗಳು ಕಾಣಮರುಳೆ. ಕಾಯದ ಕರಣಂಗಳಿಗೆ ವಶಗತವಾಗಿರ್ದು ಊರಿಗೆ ಹೊರಗಾಗಿದ್ದೆನೆಂಬ ಉಪಜೀವಿಗಳನೇನೆಂಬೆನಯ್ಯ? ಇದುಕಾರಣ ನಿಮ್ಮ ಶರಣರು ಕಾಯವನು ಜೀವವನು ಕರಣವನು ಕೇವಲ ಪರಂಜ್ಯೋತಿಲಿಂಗದೊಳಗೆ ಬೆರಸಿ ಬೇರಿಲ್ಲದೆ ಕಾಯವನು ಜೀವವನು ಕರಣವನು ಹೊದ್ದದೆ ಮಹಾಘನಲಿಂಗಪದದೊಳಗಿಪ್ಪರಯ್ಯ ಪ್ರಾಣಲಿಂಗ ಸಂಬಂದ್ಥಿಗಳು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರಿಗೆ ಹೋಹ ದಾರಿಯಲ್ಲಿ ಒಂದು ಕೋಡಗ ಕುಳಿತಿಪ್ಪುದ ಕಂಡೆನಯ್ಯ. ಊರಿಗೆ ಹೋಹ ಅಣ್ಣಗಳ ಏಡಿಸಿ ಕಾಡುತ್ತಿದೆ ನೋಡಾ. ಕೋಡಗನ ಹಿಡಿದು ಕೊಡತಕ್ಕೆ ಹಾಕಿಹೆನೆಂದು ಹೋದರೆ, ಊರನೆಲ್ಲ ನುಂಗಿತ್ತು. ಆರಿಗೂ ಕಾಣಿಸದಿದೆ ಇದೇನು ಸೋಜಿಗವೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಾಗರದೊಳಿಪ್ಪ ಊರಿಂಗೆ ದ್ವಾರವತಿಯ ಭಯ. ದ್ವಾರವತಿಗೆ ಅಗ್ರಗಿರಿಯ ಚಂದ್ರ ಸೂರ್ಯರ ಭಯ. ಚಂದ್ರಸೂರ್ಯರಿಬ್ಬರಿಗೆ ನಡೆಗೋಟಿಯ ಭಯ. ನಡೆಗೋಟಿಗೆ ಸ್ಪರುಷನಪುರದ ಭಯ. ಇವು ನಾಲ್ಕನೂ ಮೂರುಮುಖದ ಪಕ್ಷಿ ನುಂಗಿಕೊಂಡಿಪ್ಪುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ. ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ ವಿಷವನುಗುಳುತಿಪ್ಪುದು ನೋಡಾ. ಆ ವಿಷವ ಕೆಡಿಸಿ, ಉರಗನ ಕೊಂದು, ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನ ತಾಯಿ ಹೊಲೆಯನ ಸಂಗವಮಾಡಿ ಎನ್ನ ಹಡದು ಊರಲ್ಲಿಟ್ಟಳು. ಆ ಊರಿಗೆ ಒಡೆಯನಾಗಿ ತಲೆಯಿಲ್ಲದ ಸ್ತ್ರೀಸಮ್ಮೇಳನದಲ್ಲಿರುತ್ತಿರಲು, ಎನ್ನ ಕುಲದವರು ಬಂದು ಈ ಊರವ ನೀನಲ್ಲ, ಹೊಲೆಯನೆಂದು ಪೇಳಿದಾಕ್ಷಣವೆ ತಲೆಯಿಲ್ಲದ ಸ್ತ್ರೀಯ ಕೊಂದು, ಊರ ಸುಟ್ಟು ಮನುಜರ ಬಿಟ್ಟು, ಕುಲದವರ ಕೂಡಿ ಕಾಯಕವ ಮಾಡುತಿರ್ದರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಊರ ನಡುವೆ ಒಂದು ಬೇಂಟೆ ಬಿದ್ದಿತ್ತು. ಆರು ಕಂಡವರು ತೋರಿರಯ್ಯಾ. ಊರಿಗೆ ದೂರುವೆನಗುಸೆಯನಿಕ್ಕುವೆ ಅರಸುವೆನೆನ್ನ ಬೇಂಟೆಯ. ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು. ಅರಸಿಕೊಡಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಊರಿಗೆ ಹೋಗುವ ದಾರಿಯೊಳಗೊಬ್ಬ ಉಲುಗಿರಿ ಮನೆಯ ಮಾಡಿಕೊಂಡು, ದಾರಿಗೊಂಡು ಹೋಗುವ ಅಯ್ಯಗಳ ಬಾರಿಭೋ ಬಾರಿಭೋ ಎನುತ್ತೆ ೈದಾಳೆ ನೋಡಾ. ನಾರಿಯ ವಿಲಾಸವ ನೋಡಿ ದಾರಿಯ ತಪ್ಪಿದರು ನೋಡಾ ಅಯ್ಯಗಳು. ನಾರಿಯ ಕೊಂದಲ್ಲದೆ ದಾರಿಯ ಕಾಣಬಾರದು. ನಾರಿಯ ಕೊಂದು ದಾರಿಹಿಡಿದು ನಡದು ಊರ ಹೊಕ್ಕಲ್ಲದೆ ಉಪಟಳವಡಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಡಿಯ ರಾಜಬೀದಿಯಲ್ಲಿ ಶಿಶುವಿಪ್ಪುದ ಕಂಡೆನಯ್ಯ. ಆ ಶಿಶುವಿಂಗೆ ಮೂವರು ಮಕ್ಕಳು ಹುಟ್ಟಿದರು ನೋಡಾ ! ಈ ಮಕ್ಕಳ ಕೈ ಬಾಯೊಳಗೆ ಮೂರು ಲೋಕಂಗಳೆಲ್ಲ ನಚ್ಚುಮಚ್ಚಾಗಿಪ್ಪವು ನೋಡಾ ! ಅದು ಕಾರಣ, ಆದಿಯಲ್ಲಿ ಗುರುನಿರೂಪಣವಂ ಪಡೆದು ಚಿತ್ತಾಜ್ಞೆಪ್ರಭೆದೋರಲು ಮೂರು ನಚ್ಚುಮಚ್ಚುಗಳು ಕರಗಿ ಮೂರು ಮಕ್ಕಳು ಬಿಟ್ಟುಹೋದವು ನೋಡಾ ! ಆ ಶಿಶುವಿಂಗೆ ನಿರಾಳವೆಂಬ ದಾರಿಯ ತೋರಿ, ಊರಿಂಗೆ ಹೋಗಲೊಡನೆ ಅಲ್ಲಿ ಮಂಜಿನ ಕೊಡದ ಅಗ್ಗವಣಿಯ ಕಂಡು ಲಿಂಗಕೆ ಮಜ್ಜನವ ನೀಡಿ, ನಿರಾವಲಂಬಲಿಂಗದೊಳು ಬೆರೆದು ನಿಃಪ್ರಿಯವೆನಿಸಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರಿಗೆ ಹೊಸಬರು ಬಂದರೆ ಪುರದೊಳಗಣ ಶ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು ದೂಷಕರು ದೂಷಿಸದಿಪ್ಪರೇ ಅಯ್ಯ ? ದೂಷಕರ ಧೂಮಕೇತುಗಳು ನಿಮ್ಮ ಶರಣರು, ಕೂಡಲಸಂಗಮದೇವಾ.
--------------
ಬಸವಣ್ಣ
ಎತ್ತ ಸುತ್ತಿ ಬಂದಡೂ ಊರಿಗೆ ಬಪ್ಪುದು ತಪ್ಪದು. ಹಲವು ಮಾತನಾಡಿದಡೇನು? ಮೂರು ಮಲವ ಮರೆದಿರಬೇಕು. ಹೊಲಬುದಪ್ಪಿದ ಮೃಗ ಬಲೆಯೊಳಗೆ ಬಿದ್ದಂತಾಗಬೇಡ. ಇದನರಿತು ಬದುಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶೃಂಗಾರದ ಊರಿಗೆ ಒಂಬತ್ತು ಹಾಗಿಲು, ಐದು ದಿಡ್ಡಿ , ಎರಡು ತೋರಗಂಡಿ, ಐವರು ತಳವಾರರು, ಮೂವರು ಪ್ರಧಾನರು, ಇಬ್ಬರು ಸೇನಬೋವರು, ಒಬ್ಬ ಅರಸು. ಅರಸಿಂಗೆ ಐವರು ಸೊಳೆಯರು, ಅವರ ಬಾಗಿಲ ಕಾವರು ಹತ್ತು ಮಂದಿ. ಅವರ ಪಾ[ಲಿ]ಪ ಡಕ್ಕಣದವರು ಇಪ್ಪತ್ತೈದು ಮಂದಿ. ಅವರ ಭಂಡಾರ ಬೊಕ್ಕಸ ಅಟ್ಟುಮಣಿಹ, ಹರಿಮಣಿಹ, ಕಟ್ಟಿಗೆಯವರು, ಬೋಹೋ ಎಂದು ಕೊಂಡಾಡುವರು, ಮೂವತ್ತಾರುಮಂದಿ ಚೂಣಿಯರು. ಹುಯ್ಯಲ ಕಾಲಾಳುಗಳು ನೂರನಾಲ್ವತ್ತೆಂಟು. ಈ ಸಂಭ್ರಮದಲ್ಲಿ ಆ ಮನವೆಂಬ ಅರಸು ಸುಖಸಂತೋಷದಲ್ಲಿ ರಾಜ್ಯಂಗೆಯ್ಯುತ್ತಿರಲು, ಇತ್ತ ಶರಣ ತನ್ನ ತಾನೆ ಎಚ್ಚೆತ್ತು ನೋಡಿ, ಪಶ್ಚಿಮ ಕದವ ಮುರಿದು ಒಳಹೊಕ್ಕು, ಒಳಗೆ ತೊಳಗಿ ಬೆಳಗುವ ಜ್ಯೋತಿರ್ಮಯ ಲಿಂಗವನೆ ಕಂಡು, ಆ ಲಿಂಗದಂಘ್ರಿವಿಡಿದು ಸಂಗಸುಖದೊಳಗೆ ಒಂಬತ್ತು ಬಾಗಿಲಿಗೂ ಲಿಂಗವನೆ ಸ್ಥಾಪ್ಯವ ಮಾಡಲಾಗಿ, ಮನವೆಂಬ ಅರಸು ಒಳಗೆ ಸಿಕ್ಕಿದ ಅಗಳ ಮುರಿದು ಬರುತ್ತಿರಲು, ದಾರಿಯ ಕಾಣದೆ ಕಣ್ಣುಗೆಟ್ಟು ಹೋದರು. ಮನವೆಂಬ ಅರಸು ತನ್ನ ಸೊಳೆಯರೈವರು, ಪ್ರಧಾನರು, ಸೇನಬೋವರು, ಪಾಲಿಪ ಡಕ್ಕಣದವರು, ಬೋಹೋ ಎಂದು ಉಗ್ಘಡಿಸುವವರು, ಆನೆ ಕುದುರೆ ಇವರೆಲ್ಲರನು ಹಿಡಿದು ಕಟ್ಟಿಕೊಂಡು ಮಹಾಲಿಂಗವೆಂಬ ಅರಸಿಂಗೆ ತಂದೊಪ್ಪಿಸಿದನು. ಆ ಲಿಂಗವ ಕಂಡವರೆಲ್ಲ ಲಿಂಗದಂತೆ ಆದರು. ಇದು ಕಾರಣ, ಶರಣಂಗೆ ಅಂಗಭೋಗವೆಲ್ಲ ಲಿಂಗಭೋಗವಾಯಿತ್ತು . ಲಿಂಗಭೋಗವೆ ಅರ್ಪಿತವಾಯಿತ್ತು , ಅರ್ಪಿತವೆ ಪ್ರಸಾದವಾಯಿತ್ತು , ಪ್ರಸಾದದೊಳಗೆ ಪರಿಣಾಮಿಯಾದ. ಇದು ಕಾರಣ, ಎನ್ನ ಅಂಗ ಉರಿವುಂಡ ಕರ್ಪುರದಂತಾಯಿತ್ತಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಊರಿಗೆ ಹೋಹಾತ ದಾರಿಯ ಭಯಂಗಳನರಿದು ಆರೈಕೆಯಿಂದ ಹೋಗಬೇಕು. ಕುರಿತ ಕುರುಹ ಹಿಡಿವನ್ನಕ್ಕ ಭೇದ ವಿವರವ ಸೋಧಿಸಬೇಕು. ಸೋಧಿಸಿ ಸ್ವಸ್ಥವಾಗಿ ನಿಜನಿಂದಲ್ಲಿ ಉಭಯದ ಕುರುಹು ಅನಾದಿಯಲ್ಲಿ ಅಡಗಿತ್ತು. ಅಡಗಿದ ಮತ್ತೆ ವೀರಶೂರ ರಾಮೇಶ್ವರಲಿಂಗವ ಕುರುಹಿಡಲಿಲ್ಲ.
--------------
ಬಾಲಬೊಮ್ಮಣ್ಣ
ಮೂರೈದುತನುವಿಡಿದ ನರಗುರಿಗಳೆಲ್ಲಾ ಭಕ್ತರಪ್ಪರೆ? ಅಲ್ಲಲ್ಲ. ನಮ್ಮ ಶಿವಭಕ್ತರ್ಗೆ ಸದ್ಗೋಷಿ* ಸದಾಚಾರಂಗಳೇ ಪಾದಗಳು. ಗುರುವೇ ಸ್ಥೂಲತನು. ಲಿಂಗವೇ ಸೂಕ್ಷ ್ಮತನು. ಜಂಗಮವೇ ಕಾರಣತನು. ಸಮ್ಯಜ್ಞಾನವೇ ಪ್ರಾಣ. ತೀರ್ಥ ಪ್ರಸಾದವೇ ನೇತ್ರಂಗಳು. ಇಂತಪ್ಪ ತನುವಿಡಿದು ತಾವು ತಮ್ಮ ಊರಿಗೆ ಹೋಗುವಂತೆ ಮುಕ್ತಿಪುರಕ್ಕೆ ಹೋಗಿ ನೊಸಲಕಣ್ಣು ಪಂಚಮುಖ ದಶಭುಜದ ಉಮಾವಲ್ಲಭನಾದ ಪರಶಿವನ ಓಲಗದಲ್ಲಿ ಗಣಂಗಳ ಮಧ್ಯದಲ್ಲಿ ಓಲಾಡುತ್ತಿಪ್ಪರಯ್ಯ ನಮ್ಮವರು. ಇಂತಪ್ಪ ತನುವಿಡಿಯದ ಅಜ್ಞಾನಿಗಳು ಕಿರುಬಟ್ಟೆಯಲ್ಲಿ ಹರಿದು ಕಂಗೆಟ್ಟು ಕಾಡ ಹೊಕ್ಕು ಕಣ್ಣು ಕಾಣದೆ ಕಮರಿಯ ಬಿದ್ದು ಬಳಲುತ್ತಿಪ್ಪರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಹಲವು ಬಣ್ಣದ ಊರೊಳಗೆ ಉರಿವ ಜ್ಯೋತಿಯ ಹಿಡಿದು ಪರಿಪರಿಯ ಕೇರಿಯಲ್ಲಿ ಸುಳಿದಾಡುವಳಿವಳಾರೋ? ಈ ಊರಿಗೆ ನಾನೊಡತಿ; ಇಲ್ಲಿ ಸುಳಿಯುವುದಕ್ಕೆ ನಿನಗೇನು ಕಾರಣ ಹೇಳಾ? ಈ ಊರಿಗೂ ನಿನಗೂ ನಾನೊಡತಿಯೆನುತ ಊರ ಸುಟ್ಟು ನಾರಿಯ ಕೊಂದವಳು ನಾನು ಪರಾಪರಾಂಗನೆಯೆನುತ ಸ್ವಪತಿಯ ನೆರೆದು ನಿಷ್ಪತಿಯನೆಯಿದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸರ್ವಸಂಗ ಪರಿತ್ಯಾಗವ ಮಾಡಿ, ಅರಣ್ಯದಲ್ಲಿದ್ದರೆ ಮೃಗವೆಂಬರು. ಊರಿಗೆ ಬಂದರೆ ಸಂಸಾರಿ ಎಂಬರು. ಭೋಗಿಸಿದರೆ ಕಾಮಿ ಎಂಬರು. ಹೆಣ್ಣ ಬಿಟ್ಟರೆ ಹೊನ್ನಿಲ್ ಎಂಬರು. ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು. ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು. ಮಾತನಾಡದಿದ್ದರೆ ಮೂಗನೆಂಬರು. ಸಹಜವ ನುಡಿದರೆ ಅಂಜುವನೆಂಬರು. ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯ ನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು.
--------------
ವಿಶ್ವಪತಿ ವಿಶ್ವನಾಥ
ಇನ್ನಷ್ಟು ... -->