ಅಥವಾ

ಒಟ್ಟು 6 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ಕಾಯದ ಕೀಲನರಿತು ಕವಿತ್ವವನು ಮಾಡುವಂಥ ಭೇದವನು ಬಲ್ಲರೆ ಹೇಳಿ, ಅರಿಯದಿರ್ದರೆ ಕೇಳಿ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತು ಕೊಟ್ಟು ಇಳಿಯ ತೆಗೆದು ಜನ್ಮದಲ್ಲಿ ನುಡಿಸಬಲ್ಲರೆ ಆತನೀಗ ಪಂಚತತ್ವದ ಮೂಲವ ತಿಳಿದು ಮನವೆಂಬ ಗದ್ದಿಗೆಯ ಅಜ್ಞಾನವೆಂಬ ನಾದಸ್ವರವನು ಹಿಡಿದುಕೊಂಡು ಅದರ ಅನುವರಿತು ಊದಿ, ಪಿಂದೆ ದಾಡೆಯಿಂದ ಪೃಥ್ವಿಯ ಎತ್ತಿದ ಸರ್ಪನ ಎಬ್ಬಿಸಿ ಬ್ರಹ್ಮಾಂಡಕ್ಕೆ ಮುಖ ಮಾಡಿ ನಿಲ್ಲಿಸಬಲ್ಲರೆ ಆತನಿಗಾಗಿ ಗೀತ ಗಾಯನ ವಾದ್ಯ ಪ್ರಾಸ ದೀರ್ಘ ಗುರು ಲಘುಗಳೆಂಬ ಭೇದವ ಬಲ್ಲೆನೆಂದೆನ್ನಬಹುದು. ನಿಮ್ಮ ಅಂಗ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಕಾಣಿರೋ ! ಗುಡಿಸ ಕೊಟ್ಟು, ಗುಡಿಸಿನ ಒಳಗೆ ಸುಳಿದು ಜಿಹ್ವೆಯಲ್ಲಿ ನುಡಿಸಬಲ್ಲರೆ ಅಂತಹವನಿಗೆ ತನ್ನ ತನುವೆಂಬ ಹುತ್ತದ ಒಂಬತ್ತು ಹೆಜ್ಜವನು ಮುಚ್ಚಿದ ದ್ವಾರಂಗಳನ್ನೆಲ್ಲ ಬಳಿದು ಅಂಬರಮಂಟಪದೊಳಗೆ ಸುಳಿದಾಡುವಂಥ ಶಂಭುಲಿಂಗವನು ನೋಡಿಕೊಂಡು ಸಂತೈಸಿ, ವರುಷ ವರುಷಕ್ಕೆ ಒಂದು ಸಂಭ್ರಮದ ಜಾತ್ರೆಯ ನೆರೆಯಬಲ್ಲರೆ ಆತನಿಗೆ ಮಹಾಪ್ರೌಢನೆಂದೆನ್ನಬಹುದು ಕಾಣಿರೋ. ನಿಮ್ಮ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಕೊಂಬಿನಿಂದಿಳಿಯ ತೆಗೆದು ಆತನಿಗೆ ಆರು ಮೂರುಗಳೆಂಬ ನವರಸವಿದ್ಯ ನಾದವನೆಬ್ಬಿಸುವಂಥ ತಾಳಗತಿಯ ಪದಕಾರಣವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಮೇಲೆತ್ವವಂ ಕೊಟ್ಟು, ಕೆಳಗೈತ್ವವಂ ಕೊಟ್ಟು, ಇವೆರಡನು ಕೂಡಿ ಒಂದಮಾಡಿ ನುಡಿಸಬಲ್ಲರೆ ಆತನಿಗೆ ಸ್ವರ್ಗ ಮತ್ರ್ಯ ಪಾತಾಳ ಇಂತೇಳು ಭುವನ, ಹದಿನಾಲ್ಕು ಲೋಕ, ಸಪ್ತೇಳುಸಾಗರ, ಅಷ್ಟಲಕ್ಷ ಗಿರಿಪರ್ವತಗಳನ್ನೆಲ್ಲ ತನ್ನ ಅಂತರಂಗವೆಂಬ ಕುಕ್ಷಿಯೊಳಗೆ ಇಂಬಿಟ್ಟುಕೊಂಡು ಪರರಿಗೆ ಕಾಣಬಾರದಂತಹ ಕುರೂಪಿಯಾಗಿ ಇರಬಲ್ಲರೆ ಆತನಿಗೆ ಮಹಾಶಿವಜ್ಞಾನಿಯೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಉತ್ವ ಔತ್ವ ಕೊಟ್ಟು, ಉತ್ವ ಔತ್ವವೆರಡನು ಕೂಡಿ ಒಂದುಮಾಡಿ ನಿಲಿಸಿ ಜಮ್ಮೆದಲ್ಲಿ ನುಡಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮುಡಿಯಂ ಮಂದಿರ ಮನೆಯೊಳಗೆ ಮುಹೂರ್ತವ ಮಾಡಿಕೊಂಡಿಹುದು. ಓಂಕಾರವೆಂಬುವದೊಂದು ಅಕ್ಷರವ ನೋಡಿ ಅನಂತ ಪರಿಪರಿಯ ವಚನಗಳ ಮಾಡಬಲ್ಲರೆ ಆತನಿಗೆ ಮಹಾ ಉತ್ತಮ ಶಿವಕವೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಒಂದು ಸೊನ್ನೆಯ ಕೊಟ್ಟರೆ `ವಂ' ಎಂದು ಅಂತರಂಗದಲ್ಲಿ ತಿಳಿದು, ಜಿಹ್ವೆಯಲ್ಲಿ ನುಡಿಯಬಲ್ಲರೆ ಆತನಿಗೆ ಕಾಯಪುರವೆಂಬ ಪಟ್ಟಣದೊಳಗೆ ಹರಿದಾಡುವಂಥ ಆರುಮಂದಿ ತಳವಾರರ ತಲೆಯ ಕುಟ್ಟಿ, ಮೂರುಮಂದಿ ಗರ ಬೆರೆದ ನೆಂಟರ ಮೂಗ ಕೊಯ್ದು, ಸಾವಿರೆಸಳಿನ ಕಮಲದೊಳಗೆ ಪೊಕ್ಕು, ತನ್ನ ಸಾವು ಮರಣ ತಪ್ಪಿಸಿಕೊಳ್ಳಬಲ್ಲರೆ ಆತನಿಗೆ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಎರಡು ಸೊನ್ನೆಯ ಕೊಟ್ಟರೆ `ವಃ' ಎಂದು ಅಂತರಂಗದಲ್ಲಿ ತಿಳಿದು ಜಿಹ್ವೆಯಲ್ಲಿ ನುಡಿಯಬಲ್ಲರೆ, ಆತನಿಗೆ ತನ್ನ ಅಂತರಂಗವೆಂಬ ಹರಿವಾಣದೊಳಗೆ ತುಂಬಿಟ್ಟಿದ್ದಂತಹ ಷಡುರಸ ಪಂಚಾಮೃತ ಪಂಚಕಜ್ಜಾಯಗಳೆಲ್ಲ ಸವಿದುಂಡು ಚಪ್ಪರಿಸಿ ಹಿಪ್ಪೆಯ ಮಾಡಿ ಬೀದಿಯೊಳಗೆ ಬಿಸುಟಬಲ್ಲರೆ ಆತನಿಗೆ ಕಾಯದ ಕೀಲನರಿತು ಕವಿತ್ವವನು ಮಾಡುವಂತಹ ಪ್ರೌಢನೆಂದೆನ್ನಬಹುದು ಕಾಣಿರೋ. ಇಂತೀ ಕಾಯದ ಕೀಲನರಿಯದ ಕವಿಗಳು ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹೆಂಚ ಹೊಡೆದು ನೆತ್ತಿಯ ಮೇಲೆ ಹೊತ್ತುಕೊಂಡು ತಿರುಗುವ ಕವಿಗಳೆಂಬ ಚಾತುರ್ಯದ ಮಾತ ನಿಟ್ಟಿಸಲು ಆಡ ಸವಿವ ಜಾತಿಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರು ಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಬೇವಿನಮರಕ್ಕೆ ಬೆಲ್ಲದ ಕಟ್ಟೆಯ ಕಟ್ಟಿ, ಚಿನ್ನಿ ಸಕ್ಕರೆಯ ಖಾತವ ಹಾಕಿ, ಜೇನುತುಪ್ಪ ನೊರೆವಾಲೆಂಬ ನೀರೆರೆದರೆ, ಬೇವಿನಮರವಳಿದು ಬೆಲ್ಲದ ಮರವಾಗಬಲ್ಲುದೆ ? ಮಾವಿನಮರಕ್ಕೆ ವಿಷದ ಕಟ್ಟೆಯ ಕಟ್ಟಿ, ಉಪ್ಪಿನ ಖಾತವ ಹಾಕಿ, ಬೇವಿನ ಈಚಲ ತಾಡಿನ ಹಣ್ಣು ಮೊದಲಾದ ತ್ರಿವಿಧ ಹಣ್ಣಿನ ರಸವೆಂಬ ನೀರೆರೆದರೆ ಮಾವಿನಮರವಳಿದು ಬೇವು ಈಚಲ ತಾಡ ಮೊದಲಾದ ತ್ರಿವಿಧ ವೃಕ್ಷವಾಗುವುದೆ ? ಇಂತೀ ದೃಷ್ಟಾಂತದಂತೆ ಲೋಕದ ಮಧ್ಯದಲ್ಲಿ ಸಂಸಾರವಿಷಯರಸಪೂರಿತವಾದ ಕಡುಪಾತಕ ಜಡಜೀವಿಗಳಾದ ಕುರಿಮನುಜರ ತಂದು ಭಿನ್ನಜ್ಞಾನಿಗಳಾದ ಆಶಾಬದ್ಭ ಗುರುಮೂರ್ತಿಗಳು ಅಂತಪ್ಪ ಜಡಮತಿಗಳಿಗೆ ವಿಭೂತಿಯ ಪಟ್ಟವಗಟ್ಟಿ, ರುದ್ರಾಕ್ಷಿಯ ಧರಿಸಿ, ಅವನ ಮಸ್ತಕದ ಮೇಲೆ ಪತ್ರಿ ಪುಷ್ಪವನಿಟ್ಟು, ಮೂರೇಳು ಪೂಜೆಯ ಮಾಡಿ, ಇದಕ್ಕೆ ದೃಷ್ಟಾಂತ : ಹಸಿಯ ಕುಳ್ಳಲ್ಲಿ ಬೆಂಕಿಯನಿಟ್ಟು ಊದಿ ಪುಟುಮಾಡುವ ಮರುಳರಂತೆ, ಬರಡು ಆವಿನ ಹಾಲ ಕರಸಿಹೆನೆಂಬ ಅಧಮನಂತೆ, ದುಮ್ಮಡಿಯ ಹಚ್ಚಿ ಊದಿ ಕಿವಿಯೊಳಗಣ ತೊನಸಿ ತೆಗೆವ ಗಂಧಿಗಾರನಂತೆ, ಅಂತಪ್ಪ ಮಲತ್ರಯಯುಕ್ತವಾದ ಜೀವಾತ್ಮರ ದಕ್ಷಿಣ ವಾಮಭಾಗದ ಕರ್ಣದಲ್ಲಿ ತಾರಕಮಂತ್ರದುಪದೇಶವನು ತಮ್ಮ ನಿಲವ ತಾವರಿಯದ ಭಿನ್ನಭಾವದ ಗುರುಮೂರ್ತಿಗಳು ಊದಿ ಊದಿ ಬಾಯಾರಿ ಗಂಟಲೊಣಗಿ ಧ್ವನಿಬಿದ್ದು ದಣಿದು ಹೋದರಲ್ಲದೆ ಸದ್ಭಕ್ತ ಶರಣಜನಂಗಳು ಮಾಡಲರಿಯರು. ಮತ್ತಂ, ಚಿದಂಶಿಕನಾದಾತ್ಮನು ಶಿವಕೃಪೆಯಿಂ ಸುಜ್ಞಾನೋದಯವಾಗಿ, ಸಕಲಪ್ರಪಂಚವನ್ನೆಲ್ಲ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದ ಲಿಂಗಾಂಗಸಂಬಂಧಿಯಾದ ಸದಾಚಾರಸದ್ಭಕ್ತ ಶರಣಜನಂಗಳಿಗೆ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಸಕಲ ಭಿನ್ನಭಾವದ ಜೀವಾತ್ಮರು ವೇದಾಗಮ ಶಾಸ್ತ್ರ ಪುರಾಣ ತರ್ಕ ತಂತ್ರಗಳೆಲ್ಲವು ತಮ್ಮ ವೇದಾಗಮ ಬೋಧಿಸಿ ಶಿವಾಗಮವನೋದಿದ ಶಿವಶರಣರಿಗೆ ಹೇಳಿ ಹೇಳಿ ತಾವೇ ಬೇಸತ್ತು ಬಳಲಿ ಬೆಂಡಾಗಿ ಮುಖಭಂಗಿತರಾಗಿ ಹೋದರಲ್ಲದೆ ಅವರೇನು ಮರಳಿ ಜಡಮತಿಜೀವರಾಗಲರಿಯರು. ಅಂತಪ್ಪ ಶಿವಜ್ಞಾನಸಂಪನ್ನರಾದ ಶರಣಜನಂಗಳು ಎಷ್ಟು ಪ್ರಪಂಚವ ಮಾಡಿದಡೂ ಮಲತ್ರಯಯುಕ್ತವಾದ ಜೀವರಾಗಲರಿಯರು. ಅವರು ಎಷ್ಟು ಕ್ರೀಯವನಾಚರಿಸಿದೊಡೆಯು ಫಲಪದವಿಯ ಪಡೆದು ಭವಭಾರಕ್ಕೆ ಬರುವ ಜಡಮತಿ ನರಕಜೀವಿಗಳಾಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚಲೋಹದ ಕಬ್ಬಿಣವ ಬೆಂಕಿಯಿಲ್ಲದೆ ಇದ್ದಲಿಯ ಹಾಕಿ ತಿದಿಯಿಲ್ಲದೆ ಊದಿ, ಕಬ್ಬಿಣವಕಾಸಿ, ಅಡಗಲ್ಲಿನ ಮೇಲಿಟ್ಟು ಹೊಡೆಯಲು ಲೋಹವಳಿದು ಚಿನ್ನವಾಯಿತ್ತು. ಚಿನ್ನ ಚಿನ್ಮಯಂಗೆ ಮಾರಿ ಕೊಟ್ಟು ಪಡಿಯ ಕೊಂಡುಂಡು ಕಾಯಕವ ಮಾಡುತ್ತಿರ್ಪರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->