ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗರ್ಭದೊಳಗಣ ಶಿಶುವಿಂಗೆ ತಾಯಿ ಉಂಡಲ್ಲಿಯೆ ಪರಿಣಾಮವಲ್ಲದೆ, ಬೇರೊಂದೆಡೆಮಾಡಿ ಉಣ್ಣೆಂದರೆ ಉಣ್ಣಬಲ್ಲುದೇ ಅಯ್ಯ? ಪ್ರಾಣದೊಳಗೆ ಪ್ರಾಣವಾಗಿಪ್ಪ ಲಿಂಗಕ್ಕೆ, ಆ ಶರಣನುಂಡಲ್ಲಿಯೆ ತೃಪ್ತಿಯಲ್ಲದೆ, ಬೇರೆ ಊಡಿಸಿದರೆ ಉಣಬಲ್ಲುದೇ ಅಯ್ಯ? ಸಂಯೋಗ ವಿಯೋಂಗಗಳಲ್ಲಿ, ತಟ್ಟುವ ಮುಟ್ಟುವ, ಅಣುಬಿಂದು ಸುಖಾರ್ಥವನು, ಅರಿವವನು, ಅರ್ಪಿಸುವವನು, ಭೋಗಿಸುವವನು, ನೀನೆಯಲ್ಲದೆ, ನಾ(ನ)ಲ್ಲ ನೋಡಾ. ಲಿಂಗದೊಳಗಿರ್ದು, ಲಿಂಗಕ್ಕೆ ಲಿಂಗವನರ್ಪಿಸಿ, ಲಿಂಗಪ್ರಸಾದದೊಳಗೆ, ಒಡಗೂಡಿ ಮಹಾಪ್ರಸಾದಿಯಾಗಿ, ಮಹಕ್ಕೆ ಮಹವಾಗಿ, ಪರಕ್ಕೆ ಪರವಾಗಿ, ಸಾವಧಾನ ಪ್ರಸಾದಿಯಾಗಿರ್ದೇನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಡದ ಕೈಯಲ್ಲಿ ಲಿಂಗವ ಹಿಡಿದುಕೊಂಡು, ಬಲದ ಕೈಯಲ್ಲಿ ಮುದ್ದೆಯ ಮಾಡಿ, `ಉಣ್ಣು ಉಣ್ಣೆಂ'ದು ಊಡಿಸಿದರೆ ಒಲ್ಲದು ಕಾಣಿರಯ್ಯ. ದೇವರುಂಡಿತೆಂದು ಬಿಗಿಬಿಗಿದು ಕಟ್ಟಿಕೊಂಬರಯ್ಯ. ದೇವರಿಗೆ ಹಿಪ್ಪೆಯ ತೋರಿ, ರಸವ ನೀವು ಉಂಡು, ದೇವರನೇಕೆ ದೂರುವಿರಯ್ಯ? ದೇವರು ಹೀಂಗೆ ಒಲ್ಲದು. ಉಂಬ ಕ್ರಮವ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ರೂಪ ಕೊಟ್ಟಲ್ಲಿ, ನೋಡಿ ಪರಿಣಾಮಿಸುವದಲ್ಲದೆ ಸವಿದು ಪರಿಣಾಮಿಸುವುದಲ್ಲ. ಸವಿದು ಪರಿಣಾಮಿಸುವುದೆಲ್ಲಿಯೆಂದರೆ; ಜಿಹ್ವೆಯ ಕೊನೆಯ ಮೊನೆಯಲ್ಲಿ ತಟ್ಟುವ ಮುಟ್ಟುವ ಷಡುರಸ್ನಾನದ ರುಚಿಯ ತಾನೆನ್ನದೆ ಲಿಂಗವೇ ಸ್ವೀಕರಿಸುತ್ತದೆಯೆಂಬ ನಿಶ್ಚಯವುಳ್ಳರೆ ಸವಿದು ಪರಿಣಾಮಿಸುವದಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವ ಷಡ್ವಿಧಗಂಧಂಗಳ ಭೋಗವನರಿದು ಭೋಗಿಸುವದು ಲಿಂಗ ತಾನೆ. ನೇತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧರೂಪಿನ ಭೋಗಂಗಳ ಭೋಗಿಸಿ ಸುಖಿಸುವುದು ಲಿಂಗ ತಾನೆ, ನೋಡಾ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವ ಷಡ್ವಿಧ ಸ್ಪರ್ಶನದ ಭೋಗಂಗಳ ಭೋಗಿಸಿ ಸುಖಿಸುವದು ಲಿಂಗ ತಾನೆ, ನೋಡಾ. ಶ್ರೋತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧ ಶಬ್ದಂಗಳ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ ಪರಿಣಾಮಿಸುವದು ಲಿಂಗ ತಾನೆ ನೋಡಾ. ಭಾವದ ಕೊನೆಯ ಮೊನೆಯಲ್ಲಿ ತೀವಿ ಪರಿಪೂರ್ಣವಾಗಿರ್ಪ ಷಡ್ವಿಧತೃಪ್ತಿಯ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ, ಪರಿಣಾಮಿಸುವಾತನು ಲಿಂಗದೇವನೆಂದರಿದು, ಸರ್ವೇಂದ್ರಿಯಮುಖದಲ್ಲಿ ಬಂದ ಸರ್ವತೋಮುಖಪದಾರ್ಥವ, ಸರ್ವತೋಮುಖಲಿಂಗಕ್ಕೆ ಅರ್ಪಿಸಿ, ಸರ್ವಾಂಗವೆಲ್ಲವು ಬಾಯಾಗಿ, ಸರ್ವತೋಮುಖಪ್ರಸಾದವ ಕೊಂಡು, ಆ ಸರ್ವಜ್ಞಪ್ರಸಾದದೊಳಡಗಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->