ಅಥವಾ

ಒಟ್ಟು 25 ಕಡೆಗಳಲ್ಲಿ , 2 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಥನ ಬ್ರಹ್ಮಾಂಡದಲ್ಲಿ ಮಥನಿಸುವ ಭೇದವನು ಸುಚಿತ್ತದಿಂದವೆ ಕಂಡೆ. ಸಾಕ್ಷಾತ್ ಉರುತರ ಕೈವಲ್ಯ ಪರಮ ಸೀಮೆಯ ಮೀರಿ ಒಡಲಿಪ್ಪುದದು ನಿತ್ಯ ಸಾನಂದದಾ ಆನಂದಸ್ಥಾನದಲ್ಲಿ. ಆನಿಪ್ಪ ಲೋಕದಲ್ಲಿ ತಾನಿಪ್ಪ ನಿಷ್ಕಳದ ಪುಷ್ಕರದಲ್ಲಿ ಸ್ವಾನುಭಾವ ದೀಕ್ಷೆ ನಾನಿಪ್ಪ ಸಂಯೋಗ ಮೂಱಱ ಮೇಲಿಪ್ಪ ಮುಕ್ತ್ಯಾಂಗನೆಯರ ಕೂಟ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರ
--------------
ಸಿದ್ಧರಾಮೇಶ್ವರ
ಕರವೆ ಭಾಂಡವಾಗಿ ಜಿಹ್ವೆಯೆ ಕರವಾಗಿ, ಇಂದ್ರಿಯಂಗಳೈ ಮುಖವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೋ? ಆನಂದದಲ್ಲಿ ಸಾನಂದವನರ್ಪಿಸಿ ಸಾನಂದದಲ್ಲಿ ನಯವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೊ? ತನುತ್ರಯಂಗಳ ಮೀರಿ ಮನತ್ರಯಂಗಳ ದಾಂಟಿಪ್ಪ ಪ್ರಸಾದಿಗೆ ಆವುದ ಸರಿಯೆಂಬೆ? ಬಂದುದನತಿಗಳೆಯೆ, ಬಾರದುದ ಬಯಸೆ. ತನುಮುಖವೆಲ್ಲ ಲಿಂಗಮುಖ, ಸ್ವಾದಿಸುವವೆಲ್ಲ ಲಿಂಗಾರ್ಪಿತ; ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಿಂಗಾರ್ಪಿತವಲ್ಲದೆ ಅನರ್ಪಿತವ ನೋಡ; ತಟ್ಟುವ ಮುಟ್ಟುವ ಭೇದಂಗಳೆಲ್ಲವು ಸರ್ವಾರ್ಪಿತ. ಆತನುರುತರ ಸಮ್ಯಕ್‍ಜ್ಞಾನಿಯಾದ ಕಾರಣ ಪ್ರಸನ್ನತೆಯಾಯಿತ್ತು. ಪ್ರಸನ್ನ ಪ್ರಸಾದತೆಯಲ್ಲಿ ನಿತ್ಯನಪ್ಪಾತ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಉರುತರ ಮಹಾಜ್ಯೋತಿರ್ಮಯನು.
--------------
ಸಿದ್ಧರಾಮೇಶ್ವರ
ಕಂಗಳ ಬೇಟೆಯನಾಡುವ ಕಾಮನ ಸಂಗಕ್ಕೆನ್ನ ಸಲಿಸದೆ, ಮಂಗಳಮಯವಪ್ಪ ಉರುತರ ಭಕ್ತಿಯ ಸಂಗಕ್ಕೆನ್ನ ಸಲಿಸಯ್ಯಾ, ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಗದಗಲದಲಿ ಹಬ್ಬಿ ಲಿವುತೈದುದೆ ಮಾಯೆ. ಅದ ಕೆಡಿಸಿ ಎನ್ನ ಹರುಷಿತನ ಮಾಡಿ ಉರುತರ ಕೈವಲ್ಯ ಪದವನಿತ್ತಾ ಗುರು ನೀನು ಕಪಿಲಸಿದ್ಧಮಲ್ಲಿಕಾರ್ಜುನ ದೇವ ಗುರುವಾದಿಲೈ.
--------------
ಸಿದ್ಧರಾಮೇಶ್ವರ
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ. ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ. ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ. ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ. ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ. ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ. ಎನ್ನ ಬಲ್ಲತನಕ್ಕೆ ಮಂಗಳವನೀಯೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ ಆನು ನಿನ್ನೊಡನೆ ಬಾರದೆ ಉಳಿದುದುಂಟೆ? ಆನೇನು ಭೇದವಾಗಿಪ್ಪೆನೆಲೆ ಅಯ್ಯಾ. ಸಂದು ಸವೆದು ಹಂಗು ಹರಿದು ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ ಗರುವತನ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಪ್ರಾಣಲಿಂಗಿಯಾದಾತನು ಪ್ರಳಯಕ್ಕೊಳಗಾಗನು. ಅನ್ಯಕ್ಕೆ ಕೈಯಾನನು ಎಲ್ಲವೂ ತನ್ನೊಳಗೆ ಇಪ್ಪವಾಗಿ. ತನ್ನ ಮೀರಿದುದೊಂದು ಆದ್ಥಿಕ್ಯ ಬೇರಿಲ್ಲಾಗಿ. ಕೈವಲ್ಯಲಿಂಗವು ಪ್ರಾಣವೆಂಬ ಸತಿಗೆ ಸಂಯೋಗ ಸಮನಿಸಿದ ಬಳಿಕ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ಉರುತರ ಪ್ರಾಣಲಿಂಗಿ.
--------------
ಸಿದ್ಧರಾಮೇಶ್ವರ
ಮಹಾಜ್ಯೋತಿಯನೊಡಗೂಡಿಪ್ಪ ಉರುತರ ಪರಮಜ್ಞಾನಿ ಘನತರದ ಸಂಯೋಗಿ ಬ್ರಹ್ಮಾಂಡಂಗಳು ನಿನ್ನ ಮರೆಸಲರಿಯವು. ಸಕಲ ಬ್ರಹ್ಮಾಂಡಂಗಳನೊಳಗು ಮಾಡಿ ಮೇಲೆ ತೊಳಗಿ ಬೆಳಗುತಿಪ್ಪೆ ಎಮ್ಮ ಶರಣರ ಕರಸ್ಥಲದಲ್ಲಿ ಸಿಕ್ಕಿ. ಮಹಾದೀಪ್ತಿಯನಿಂಬುಗೊಂಡಿತ್ತಾ ಕರಸ್ಥಲವು. ಆ ಕರಸ್ಥಲಕ್ಕೆ ಆವ ಬ್ರಹ್ಮಾಂಡಂಗಳ ಸರಿಯೆಂಬೆ? ನಿಮ್ಮ ಶರಣರ ಕರಸ್ಥಲವೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆಜ್ಞಾಸಿದ್ಧನನರ್ಚಿಸುವಲ್ಲಿ ಆರಯ್ಯಾ ಬಲ್ಲವರು, ಚೆನ್ನಬಸವಣ್ಣನಲ್ಲದೆ? ಮೂರ್ತಿಯೆಂಟು ಆಗದ ಮುನ್ನ ಮುಖಲಿಂಗವಾಗಿರ್ದ ಸುದ್ದಿಯನಾರಯ್ಯ ಬಲ್ಲವರು, ಚೆನ್ನಬಸವಣ್ಣನಲ್ಲದೆ? ಸದಮಲಜ್ಞಾನದಲ್ಲಿ ಒಪ್ಪಿಪ್ಪ ಅಕ್ಷರದ್ವಯದ ಭೇದಾ ಭೇದವ ಭೇದಿಸಿ ಲೋಕಕ್ಕೆ ಭಕ್ತಿಯ ಸಾಧಿಸಿಕೊಟ್ಟು ಲೋಕಕ್ಕೆ ಉರುತರ ಗುರುವಾದ ಕಾರಣ ಚೆನ್ನಬಸವಣ್ಣನೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಧ್ಯಾತ್ಮ ಅದ್ಯಾತ್ಮವೆಂದೆಂಬಿರಿ, ಅಧ್ಯಾತ್ಮವಾರಿಗೆ ? ಶ್ರೀಗುರು ಬಹಳವಪ್ಪ ಶಿವಲಿಂಗವ ಸೂಕ್ಷ್ಮವ ಮಾಡಿ, ಕರಸ್ಥಲದಲ್ಲಿ ಕೊಟ್ಟ ಬಳಿಕ ಬೇರೆ ಯೋಗವುಂಟೆ ? ತನ್ನ ಹಸ್ತವ ಮಸ್ತಕದಲ್ಲಿಟ್ಟು ವಾಯುಪ್ರಾಣಿಯಾಗಿರ್ದು ಕೊಂದು ಲಿಂಗಪ್ರಾಣಿಯ ಮುಕ್ತನ ಮಾಡಿದ ಬಳಿಕ, ಅಕ್ಷರವೈದರಲ್ಲಿ ಮುಕ್ತನ ಮಾಡಿದ ಬಳಿಕ, ಮರಳಿ ಯೋಗವುಂಟೆ ಶಿವಯೋಗವಲ್ಲದೆ? ಲಿಂಗಾರ್ಚನೆಯ ಮಾಡಿ ಜಂಗಮಪ್ರಸಾದವ ಕೊಂಡ ಬಳಿಕ, ಬರಿಯ ಯೋಗಕ್ಕೆ ಒಡಂಬಡುವುದೆ ಅರಿವು? ಇಂತಪ್ಪವನತಿಗಳೆದು ಶುದ್ಧಕ್ಷರದ್ವಯವ ಭೇದಿಸಿತಂದು ಕರಸ್ಥಲದಲ್ಲಿರಿಸಿ, ಇದು ಉರುತರ ಪದವೆಂದು ತೋರಿಕೊಟ್ಟು, ಎನ್ನ ತನ್ನಂತೆ ಮಾಡಿದ ಗುರು ಚೆನ್ನಬಸವಣ್ಣ, ಆನು ಚೆನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು, ಶಿವಯೋಗದಲ್ಲಿ ನಿತ್ಯನಾಗಿ, ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂಬ ಷಡುಸ್ಥಲಕ್ಕೆ ಅಧಿಕಾರಿಯಾದೆನು, ನಿನ್ನವರ ಸಲುಗೆಗೆ ಸಂದೆನು. ಚೆನ್ನಬಸವಣ್ಣನ ಕೃಪೆ ಎನ್ನನಿಂತು ಮಾಡಿತ್ತು ಕಾಣಾ, ಶ್ರೀಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶುದ್ಧವೆ ತದ್ರೂಪವಾಗಿ ಬಾರನೆ ಅಂದು ಅನಾಹತನೆಂಬ ಗಣೇಶ್ವರನು ಬಂದೆನ್ನ ಜರಿಯನೆ? ಜರಿದರೆ ನೀನು ಕೊಟ್ಟ ತಲೆಯ ಹುಣ್ಣ ಕಣ್ಣೆಂದು ತೆರೆದು ಲಜ್ಜೆಗೆಡನೆ ಆನಾ ಗಣೇಶ್ವರನ ಕೈಯಲ್ಲಿ? ಶುದ್ಧಕಾತನೊಡೆಯ, ಸಿದ್ಧಕಾತನೊಡೆಯ, ಪ್ರಸಿದ್ಧಕಾತನೊಡೆಯ! ಒಪ್ಪಿಪ್ಪಾರು ಆತನ ಸೀಮೆ. ಮೂವತ್ತಾರರ ಮೇಲಿಂದಾತನ ಸಂಯೋಗ. ಇಂತಪ್ಪಾತನ ನೀನೆನ್ನಲರಿಯದೆ ನೊಂದೆ ಕೆಲವು ದಿನ. ಈ ನೋವ ಮಾಣಿಸಿದಾತನೂ ಆತನೆ, ಎನ್ನ ಭವವ ತಪ್ಪಿಸಿದಾತನೂ ಆತನೆ, ಆತನಿಂದ ಉರುತರ ಕೈವಲ್ಯಕ್ಕೆ ಕಾರಣಿಕನಾದೆ! ಆತನ ಪ್ರಸಾದದಿಂದ ನಿನ್ನವರ ಪಾದೋದಕ ಪ್ರಸಾದಕ್ಕೆ ಯೋಗ್ಯನಾದೆ. ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನ, ಬಸವಣ್ಣನಿಂದ!
--------------
ಸಿದ್ಧರಾಮೇಶ್ವರ
ಅಂಗವಿಸನನ್ಯಕ್ಕೆ ಹಿಂಗಿಹ ಮಾಯಕ್ಕೆ ಸಂದ ಸುಖವೆ ಶಿವನ ಅಂಘ್ರಿಗಾಗಿ, ಮಂಗಳ ಉರುತರ ಬೆಳಗು ಪ್ರಕಾಶಿಸುವ ನಿಸ್ಸಂಗ ಗುರುವು ಚೆನ್ನಬಸವಣ್ಣನು ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
`ನಾಟಿ ಭುಕ್ತಂ ಕ್ಷೀಯತೇ ಕರ್ಮ' ಎಂದುದಾಗಿ ಬಾಳದಕ್ಷರವ ತೊಡೆಯಲಿಕೆ ಆರಳವಯ್ಯಾ, ಗುರುಕಾರುಣ್ಯವುಳ್ಳವರಿಗಲ್ಲದೆ? ಗುರವೆ, ಎನ್ನ ಭವಕ್ಕೆ ಬಾರದಂತೆ ತಪ್ಪಿಸಿದೆ; ತೋರಿಸಿದೆ ಉರುತರ ಪಾದೋದಕ-ಪ್ರಸಾದವ; ನಿನ್ನ ಗುಣದಿಂದ ತನುಗುಣ ನಾಸ್ತಿಯಾದೆ. `ನಾಟಿಭುಕ್ತಂ' ಎಂಬುದ ಮೀರಿ ಶಿವಭೋಕ್ತೃವಾದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿನ್ನ ಕೂಡಿದೆ.
--------------
ಸಿದ್ಧರಾಮೇಶ್ವರ
ಮಹಾವಿಂಧ್ಯಪರ್ವತದಲ್ಲಿ ಜ್ಯ್ಕೋರ್ಮಯವೆಂಬ ಪ್ರಜ್ವಲ ಸ್ಫಟಿಕ ಘಟದಲ್ಲಿ ಒಪ್ಪಿ ತೋರುವ ಜ್ಯೋತಿರ್ಮಯ ಲಿಂಗವೇ ನೀನು, ಸೂಕ್ಷ ್ಮವೇ ನೀನು. ಉರುತರ ಸಕಲ ಬ್ರಹ್ಮಾಂಡಂಗಳೆಲ್ಲ ನಿನ್ನ ರೋಮಕೂಪದ ಕೊನೆಯ ಮೊನೆಯ ಮೇಲೆ. ಸಕಲ ವ್ಯಾಪಿಯಡಗಿಪ್ಪಂಥ ಬ್ರಹ್ಮಾಂಡಂಗಳನ್ನು ಧರಿಸಿಪ್ಪ ನಿನ್ನ ಅನಂತ ವೇದಂಗಳೆಲ್ಲವು ನಿನ್ನೊಳಗೆ. ನೀನು ಸರ್ವವ್ಯಾಪ್ತಿಗೆ ಒಳಗಾದುದಿಲ್ಲ. ನಿನ್ನ ಮೀರಿದ ಆಧಿಕ್ಯ ಒಂದೂ ಇಲ್ಲ. ಘನತರಲಿಂಗವೆ ಗುರುಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಸೂಕ್ಷ ್ಮವಾದೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಶುದ್ಧ ಸಿದ್ಧ ಪ್ರಸಿದ್ಧ ಪಂಚಮಹಾವಾಕ್ಯಂಗಳನರಿದೆನೆಂಬ ಯೋಗಿ ಕೇಳಾ ನೀನು. ಶುದ್ಧವಾವುದು? ಸಿದ್ಧವಾವುದು? ಪ್ರಸಿದ್ಧವಾವುದು? ಹೇಳಿರೇ ಬಲ್ಲರೆ. ಪ್ರಾಣಾಯಾಮದಲಿ ಪ್ರವೇಶಿಸಬಲ್ಲಡೆ ಅದು ಶುದ್ಧ, ಪ್ರತ್ಯಾಹಾರದಲಿ ಪ್ರಕಟಿಸಬಲ್ಲಡೆ ಸಿದ್ಧ. ಪಂಚಬ್ರಹ್ಮದಲಿ ಪ್ರವೇಶಿಸಬಲ್ಲಡೆ ಪ್ರಸಿದ್ಧ. ಕೋಹಂ ತತ್ವಾರ್ಥವಂ ಮೀರಿದ, ಆಜ್ಞಾಸೀಮೆಯ ಸಮನಿಸಿದ, ಪ್ರಸಿದ್ಧಬ್ರಹ್ಮವನು ಮೀರಿದ, ಅನಾಹತವನಾನಂದವ ಮಾಡಿದ, ಆಶಕ್ತಿಯ ಸಂಯೋಗವಂ ಮಾಡಿದ, ಉರುತರ ಪರಮಸೀಮೆಯಂ ದಾಂಟಿದ. ಮಾತೆಯಿಲ್ಲದ ಜಾತನ, ಗಮನವಿಲ್ಲದ ಗಮ್ಯನ, ಆ ಯಾರೂ ಅರಿಯದ ಅನಾಥನ, ಹಮ್ಮಿನ ಸೊಮ್ಮಳಿದ ನಿತ್ಯನ, ಅನಂತ ಬ್ರಹ್ಮಾಂಡವಳಿವಲ್ಲಿ ಏನೆಂದರಿಯದ ಸತ್ಯನ, ಸಕಳ ನಿಷ್ಕಳಾತ್ಮಕದ ಪೂರ್ಣನಪ್ಪ ಮುಕ್ತನ, ಬ್ರಹ್ಮಯೋಗವನರಿವರನೇಡಿಸುವ ಶಕ್ತನ, ಅವ್ವೆಯ ಮನದ ಕೊನೆಯ ಮೊನೆಯ ಮೇಲೆ ನಿತ್ಯನಾಗಿಪ್ಪ ಒಡೆಯನ, ಪ್ರಾಣಶೂನ್ಯನಪ್ಪ ಭಕ್ತಂಗೆ ಪ್ರಾಣನಾಗಿಪ್ಪ ಲಿಂಗನ, ಷಡ್ವಿಧ ಭಕ್ತಿಯಲ್ಲಿ ಸಂಯೋಗವ ಮಾಡುವ ಶರಣನ, ಇಹಪರ ಏಕವಾಗಿಪ್ಪಾತನ ತೋರಿದನೆನ್ನ ಗುರು ಬಸವಣ್ಣನ ಕಂಡೆನಾತನ ಕೊಂಡೆ, ಆತನ ಪಾದೋದಕ ಪ್ರಸಾದವ ಹಿಂದೆ ಉಂಡ ಹಂಗೆ ಇನ್ನು ಉಂಡೆನಾಯಿತ್ತಾದೊಡೆ, ಹಿಂದೆ ಬಂದ ಹಂಗೆ ಇನ್ನು ಬಂದೆನಾಯಿತ್ತಾದೊಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮ್ಮಾಣೆ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->