ಅಥವಾ

ಒಟ್ಟು 20 ಕಡೆಗಳಲ್ಲಿ , 13 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಕ್ಷುತ್ಪಿಪಾಸೆ ಶೋಕ ಮೋಹ ಜನನ ಮರಣ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಂ ಬಿಟ್ಟು ಅಷ್ಟವಿಧಾರ್ಚನೆ, ಷೋಡಶೋಪಚಾರವಿಲ್ಲದಿರುವ ಕ್ಷೀರದೊಳಗಣ ಘೃತದಂತೆ, ತಿಲದೊಳಗಣ ತೈಲದಂತೆ, ಪುಷ್ಪದೊಳಗಣ ಪರಿಮಳದಂತೆ, ಉಪ್ಪು ಉದಕವ ಕೂಡಿದಂತೆ, ವಾರಿಕಲ್ಲು ವಾರಿಯ ಕೂಡಿದಂತೆ, ಕರ್ಪುರವು ಜ್ಯೋತಿಯ ಕೂಡಿದಂತೆ, ಮನ ಲಿಂಗದಲ್ಲಿ ಲೀಯವಾಗಿಹುದೀಗ ಐಕ್ಯಸ್ಥಲ ನೋಡಾ, ಇದಕ್ಕೆ ಈಶ್ವರ್ದೋವಾಚ : ``ಷಡೂರ್ಮಯಶ್ಚ ಷಡ್ವರ್ಗೋ ನಾಸ್ತಿ ಅಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಯೋಗವತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ ? ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
--------------
ಅಲ್ಲಮಪ್ರಭುದೇವರು
ಉಪ್ಪು ಅಪ್ಪು ಕೂಡಿದಂತೆ, ಉರಿ ಕರ್ಪುರ ಕೂಡಿದಂತೆ, ಮಾರುತ ಪರಿಮಳವ ಕೂಡಿದಂತೆ, ಆಕಾಶ ಬಯಲ ಕೂಡಿದಂತೆ, ತಾನು ತಾನಾದುದ ತಾನೇ ಕೂಡಿದಂತೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇವರದೇವ ಮಹಾಪ್ರಸಾದ ತ್ರಿಕರಣಶುದ್ಧವಾಗಿ ಎನ್ನ ಭಾವದ ನಂಬಿಗೆಯ ಬಣ್ಣಿಸುತಿರ್ಪೆನಯ್ಯ, ಅವಧರಿಸಯ್ಯ ಸ್ವಾಮಿ. ಗುರುಲಿಂಗಜಂಗಮದ ಪರಮಪ್ರಸಾದವನು ಪರಬ್ರಹ್ಮವೆಂದು ನಂಬಿ ಪರಮಾನಂದದಿಂ ಕೈಕೊಂಡು ಪರಿಣಾಮ ತುಂಬಿ ಆರೋಗಣೆಯ ಮಾಡುವಾಗ, ಆ ಪ್ರಸಾದದಲ್ಲಿ ಉಪ್ಪು ಸಪ್ಪೆ ಹುಳಿ ಕಹಿ ಒಳಿತು ಹೊಲ್ಲ ಉಚ್ಚ ನೀಚವನರಸಿದೆನಾದಡೆ ನಿಮ್ಮಾಣೆಯಯ್ಯಾ. ಮುಂದಿರ್ದ ಶಿವಪ್ರಸಾದದ ಘನವ ಮರೆದು ಎನ್ನೊಡಲ ಕಕ್ಕುಲತೆಗೆ ಮನವೆಳಸಿದೆನಾದಡೆ ಅಖಂಡೇಶ್ವರಾ, ನಿಮ್ಮಾಣೆಯಯ್ಯಾ, ನಿಮ್ಮ ಪ್ರಮಥರಾಣೆಯಯ್ಯ.
--------------
ಷಣ್ಮುಖಸ್ವಾಮಿ
ಮುತ್ತು ನೀರಲಾಯಿತ್ತು, ವಾರಿಕಲ್ಲು ನೀರಲಾಯಿತ್ತು, ಉಪ್ಪು ನೀರಲಾಯಿತ್ತು. ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು, ಮುತ್ತು ಕರಗಿದುದನಾರೂ ಕಂಡವರಿಲ್ಲ. ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು. ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು. ಶೀಲದ ಹೊಲಬನಾರೂ ಅರಿಯರಲ್ಲ. ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ? ಕೊಡಕ್ಕೆ ಪಾವಡವ ಹಾಕಿ ಚಿಲುಮೆಯ ಶೀತಳವ ತಂದಡೆ ಶೀಲವೆ ? ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ? ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ? ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ? ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ. ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು. ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ. ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ. ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ. ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ. ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ. ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ ಚಿತ್‍ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ. ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ, ಸಂಸಾರದ ಮಾಯಾಮೋಹವ ನೀಗಲಿಲ್ಲ. ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭವಿ ಮಾಡಿದುದನುಂಡರೆ ಪಾಕ ಕಿಲ್ಬಿಷವೆಂಬಿರಿ. ಶಿವಭಕ್ತರು ಪಾದೋದಕ ಪ್ರಸಾದವ ಕೊಂಬುವಲ್ಲಿ ಭವಿಮಿಶ್ರವೆಂದು ವಿಚಾರಿಸಿ ಕೇಳುವಿರಿ. ಬೆಲ್ಲ, ಸಕ್ಕರೆ, ಉಪ್ಪು, ತೈಲ, ತುಪ್ಪ, ಭವಿಪಾಕವ ಭುಂಜಿಸುವಿರಿ. 'ಯಥಾ ದೇಹಂ ತಥಾಹಂಚ ಲಿಂಗವಾಯತೆ' ಭವಿಪಾಕ ಕಿಲ್ಬಿಷವೆಂದು ಕಿಲ್ಬಿಷವ ಭುಂಜಿಸಿದ ಬಳಿಕ ಅಚ್ಚಲಿಂಗಾಗವೆಲ್ಲಿಹುದೊ ವ್ರತಗೇಡಿಗಳಿರಾ ? ನಿಮ್ಮ ದೇವಭಕ್ತರೆಂದು ಪೂಜಿಸಿದವರಿಗೆ ಭವ ತಪ್ಪದು. ನಮ್ಮ ಶಿವಗಣಂಗಳು ಅಚ್ಚಲಿಂಗೈಕ್ಯರು. ಅವರು ಅನಾದಿ ಪಾದೋದಕ ಪ್ರಸಾದವ ಕೊಂಬುವರು. ಅವರು ಅನಾದಿಲಿಂಗಾಂಗಿಗಳು. ಅವರು ಮುಟ್ಟಿದ್ದೆಲ್ಲ ಪಾವನ ಅವರು ನೋಡಿದ್ದೆಲ್ಲ ಪವಿತ್ರವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ; ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು. ಅದೆಂತೆಂದಡೆ ; ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು. ಇಂತು ಅಂಗವ ಕುರಿತು ಮೂರು ತೆರನಾಯಿತ್ತು. ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು. ಅದು ಹೇಗೆಂದಡೆ; ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು, ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು, ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು, ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು. ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗಂದಡೆ; ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ. ಅದೆಂತೆಂದಡೆ, ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ; ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ; ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ; ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ, ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೇಂದ್ರಿಯಕ್ಕೂ ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅಧಿದೇವತೆ. ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅಧಿದೇವತೆ. ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೇಂದ್ರಿಯಕ್ಕೂ ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅಧಿದೇವತೆ. ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೇಂದ್ರಿಯಕ್ಕೂ ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅಧಿದೇವತೆ, ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅಧಿದೇವತೆ. ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು. ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ; ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ; ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ; ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ. ಈ ಆರು ಲಿಂಗಕ್ಕೆ ಅಂಗಸ್ಥಲ ಆರು; ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ ಎಂದೀ ಆರು ಅಂಗಸ್ಥಲಗಳು. ಇವಕ್ಕೆ ವಿವರ; ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ. ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ. ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ. ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ, ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು ನೈಷಿ*ಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ. ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ. ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ, ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ, ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ, ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ, ಎಂದು ಆರು ತೆರನಾಗಿಹವು. ಅದೆಂತೆಂದಡೆ; ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ; ತ್ವಙ್ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ, ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ, ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ. ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ, ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು. ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ. ಅದು ತಾನೆ ಶಿವನ ವಿಶ್ರಾಮಸ್ಥಾನ. ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ. ಇಂತೀ ಷಟ್ಸ್ಥಲಬ್ರಹ್ಮವೆಂಬುದು ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ, ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು. ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ, ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
--------------
ಚನ್ನಬಸವಣ್ಣ
ಎಲೋ ಮಾನವ ಕೇಳೆಲೊ, ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ: ಹಣ್ಣುಗಳು ಸಣ್ಣ ಜಾತಿಯ ಎಂಜಲು, ಹಾಲು ಕರುವಿನ ಎಂಜಲು, ಮೊಸರು ಗೊಲ್ಲತಿಯ ಎಂಜಲು, ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು, ನೀರು ಮೀನು ಕಪ್ಪೆಗಳ ಎಂಜಲು, ಉಪ್ಪು ಉಪ್ಪಾರನ ಎಂಜಲು, ಎಣ್ಣೆ ಸರ್ವಮಾನವರ ಎಂಜಲು, ಸಕಲಪದಾರ್ಥವು ಅನಂತ ಹುಳುಗಳ ಎಂಜಲು. ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ, ಮಾಡುವ ದುರಾಚಾರವ ಆರು ಬಣ್ಣಿಸಬಹುದುರಿ ಅರಿವು ಇಲ್ಲದವರು ಅರಮನೆಗೆ ಮಾಡಿದರು, ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು. ಇಂತಪ್ಪ ಸರ್ವರ ಎಂಜಲು ತಿಂದು ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ, ಕಾಲಿಗೆ ಬಂದಂತೆ ಕುಣಿದು, ಬಾಯಿಗೆ ಬಂದಂತೆ ಅಂದು, ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು? ಆಚರಣೆ ಎಲ್ಲಿಹುದುರಿ ಕುಲವೆಲ್ಲಿಹುದು? ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತಟ್ಟು ಗೋಣಿಸೊಪ್ಪು ಸಕಲಾತಿ ಅಲ್ಲ[ವು], ತೊತ್ತಿನ ಮಗ ಭಕ್ತನಲ್ಲವಯ್ಯಾ, ಹಿರಿಯ ದೇವತೆಗೆ ಬಿಟ್ಟ ಕೋಣ ಗೂಳಿಯಲ್ಲವಯ್ಯಾ. ಕಂಡ ತೊತ್ತಿಗೆ ಹುಟ್ಟಿದವ ಜಂಗಮವಲ್ಲವಯ್ಯಾ. ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ. ಈ ಮೂ[ಳ]ರಿಗೆ ಆದಿಯಲ್ಲಿ ಗುರುಉಪದೇಶ[ವ] ತುಂಬಿಲ್ಲ. ಈ ಮೂ[ಳ]ರ ಮೂಗು ಕೊಯ್ದು ಉಪ್ಪು ಸಾರು ತುಂಬಿ, ನೆತ್ತಿಯ ಬೋಳಿಸಿ ಕತ್ತೆಯನೇರಿಸಿ, ಮೇಲೆ ನಿಂಬೆಯ ಹುಳಿಯ ಬಿಟ್ಟು, ಪಡುವ ದಾರಿಗೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ
--------------
ಅಂಬಿಗರ ಚೌಡಯ್ಯ
ಎತ್ತಿನ ಮರೆಯ ಒತ್ತುಗಾರರಂತೆ, ಉಪ್ಪು ದೋಷವೆಂದು ಸಪ್ಪೆಯನುಂಡಡೆ, ಮತ್ತೆ ರೊಚ್ಚೆಯ ಬಚ್ಚಲ ಮುಟ್ಟುತ್ತಿಪ್ಪ ಸತ್ತನಾಯಿಗೇಕೆ ವ್ರತ ? ಇಂತಪ್ಪವರು ನಿಷೆ*ಹೀನರು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಉಪ್ಪು ಉದಕವ ಬೆರೆಸಿದಂತೆ ವಾರಿಕಲ್ಲು ವಾರಿಯ ಬೆರಸಿದಂತೆ ಕರ್ಪೂರ ಅಗ್ನಿಯ ಬೆರಸಿದಂತೆ ಮನ ಲಿಂಗದಲ್ಲಿ ಲೀಯವಾಗಿಹುದೆ ಭಾವಲಿಂಗದ ಪೂಜೆ. ಇದಕ್ಕೆ ಈಶ್ವರೋýವಾಚ : ``ಮನೋಲಯ ನಿರಂಜನ್ಯಂ ಭಾವಲಿಂಗಸ್ಯ ಪೂಜನಂ | ಯತ್ತೇ ಲಿಂಗಾರ್ಚನಂ ಜ್ಞಾದ್ವಿಶೇಷಂ ಶ್ರುಣು ಪಾರ್ವತಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯ, ಇಂತು ನಿರಾವಯ ಶೂನ್ಯಲಿಂಗಾನುಭಾವ ಸ್ಥಲಾಚರಣೆಯ ಕರ್ತೃ ಗುರುಬಸವೇಶ್ವರಸ್ವಾಮಿಗಳ ಪಾದೋದಕ ಪ್ರಸಾದದ ಬೆಳಗಿನೊಳಗೆ ಬೆಳಗಾದರು ನೋಡ ಪ್ರಭುಸ್ವಾಮಿಗಳು. ಪ್ರಭುಸ್ವಾಮಿಗಳ ಪಾದೋದಕ-ಪ್ರಸಾದದ ನಿಜಚಿದ್ಬೆಳಗಿನೊಳಗೆ ಬೆಳಗಾದರು ನೋಡ ಗುರುಬಸವೇಶ್ವರಸ್ವಾಮಿಗಳು. ಇವರಿಬ್ಬರ ಪಾದೋದಕ-ಪ್ರಸಾದದ ಚಿದ್ದೆಳಗಿನೊಳಗೆ ಚಿನ್ನಬಸವಣ್ಣ, ನಿರ್ಲಜ್ಜಶಾಂತಲಿಂಗೇಶ್ವರ, ಸಿದ್ಧರಾಮ ಮೊದಲಾದ ಸಕಲಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ. ಇಂತು ಜೋಗೈಸಿ ಏಕಸಮರಸವಾದ ಬಸವ-ಪ್ರಭು-ಚನ್ನಬಸವಣ್ಣ-ಪ್ರಮಥಗಣಂಗಳ ಪಾದೋದಕ-ಪ್ರಸಾದನೆ ರೂಪಾಗಿ, ಗುರುಸಿದ್ಧ-ಸಂಗನಬಸವಣ್ಣನೆಂಬಭಿಧಾನದಿಂದವತರಿಸಿ ಚಿದ್ಘನ ಮಹಾಂತ ಪ್ರಮಥಗಣಂಗಳ ಕೃಪಾದೃಷ್ಟಿಯಿಂದ ಸರ್ವಸಂಗಪರಿತ್ಯಾಗಸ್ಥಲ ಮೊದಲಾಗಿ ನಿರಾವಯ ಶೂನ್ಯಲಿಂಗಾನುಭಾವಸ್ಥಲ ಕಡೆಯಾದ ನವಸ್ಥಲಂಗಳೊಳಗೆ ಎರಡೆಂಬತ್ತೆಂಟುಕೋಟಿ ವಚನಾನುಭಾವದ ಸುಧಾರಸ್ವಾನುಭಾವ ಸೂತ್ರಕ್ಕೆ ಬೆಟ್ಟದ ನೆಲ್ಲಿ ಘಟ್ಟದ ಉಪ್ಪು ಕೂಡಿದೋಪಾದಿಯಲ್ಲಿ ಯೋಗ್ಯವಾದೇವು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಉಪ್ಪು ಹುಳಿಯನು ಬಿಟ್ಟು ಸಪ್ಪೆ ಆಯತವೆಂಬ ಹಿಪ್ಪೆಗಳ್ಳರು ನೀವು ಕೇಳಿರೊ. ಉಪ್ಪಲ್ಲವೆ ನಿಮ್ಮುದರದಾಸೆ ? ಹುಳಿಯಲ್ಲವೆ ನಿಮ್ಮುದರದಾಸೆ ? ತುಪ್ಪವಲ್ಲವೆ ನಿಮ್ಮ ತುದಿನಾಲಿಗೆಯ ಸವಿಯು ? ಇಂತಪ್ಪ ಉಪ್ಪು ಹುಳಿಯನು ಬಿಟ್ಟು ತಪ್ಪದು ಸಪ್ಪೆಯ ಶೀಲ ನೀವಿಪ್ಪುದು ಗುರುಪಾದದಲ್ಲಿ ಸರ್ಪಭೂಷಣ ನಿಮಗೊಲಿವ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಇನ್ನಷ್ಟು ... -->