ಅಥವಾ

ಒಟ್ಟು 20 ಕಡೆಗಳಲ್ಲಿ , 10 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ ? ಅದು ಉಪಮಾತೀತ ! ಭಕ್ತನೊಳಗೆ ಜಂಗಮವಡಗಿದಡೆ ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ. ಜಂಗಮದೊಳಗೆ ಭಕ್ತನಡಗಿದಡೆ, ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ, ಅರಿವರತು ಮರಹು ನಷ್ಟವಾಗಿ, ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ. ಈ ಉಭಯಭಾವಸಂಗದ ಪರಿಣಾಮವ ಕಂಡು ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು
--------------
ಚನ್ನಬಸವಣ್ಣ
ತನ್ನ ತಾನರಿಹವೇ ಪರಮಾತ್ಮಯೋಗ, ತನ್ನ ತಾಮರಹವೇ ಮಾಯಾಸಂಬಂಧ. ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ಪರಮಾತ್ಮನು ಪರಬ್ರಹ್ಮಸ್ವರೂಪನು, ನಿತ್ಯ, ನಿರಂಜನ, ಉಪಮಾತೀತ ನಿಷ್ಪತಿ, ಕೇವಲ ನಿಷ್ಕಲಸ್ವರೂಪನು. ಭ್ರೂಮಧ್ಯದಲ್ಲಿ ಪರಮಾತ್ಮನೇ ಅಂತರಾತ್ಮನೆನಿಸಿ ಸಕಲ ನಿಷ್ಕಲನಾಗಿಪ್ಪ. ಹೃದಯಸ್ಥಾನದಲ್ಲಿ ಆ ಪರಮಾತ್ಮನೇ ಜೀವಾತ್ಮನಾಗಿ ಕೇವಲ ಸಕಲನಾಗಿಪ್ಪ. ಬ್ರಹ್ಮರಂಧ್ರಸ್ಥಾನದಲ್ಲಿ ನಿಷ್ಕಳಗುರುಮೂತಿರ್ಲಿಂಗ ಭ್ರೂಮಧ್ಯದಲ್ಲಿ ಸಕಲನಿಷ್ಕಲ ಪರಂಜ್ಯೋತಿರ್ಲಿಂಗ ಹೃದಯಸ್ಥಾನದಲ್ಲಿ ಕೇವಲ ಸಕಲ ಜಂಗಮಲಿಂಗ ಇಂತು ಪರಮಾತ್ಮನೇ ಪರಬ್ರಹ್ಮ, ಪರಮಾತ್ಮನೇ ಅಂತರಾತ್ಮ, ಪರಮಾತ್ಮನೇ ಜೀವಾತ್ಮ. ಬಹಿರಂಗದಲ್ಲಿ ಪರಮಾತ್ಮನೇ ಗುರುಲಿಂಗ ಪರಮಾತ್ಮನೇ ಶಿವಲಿಂಗ ಪರಮಾತ್ಮನೇ ಜಂಗಮಲಿಂಗ. ಇಂತು, ಪರಮಾತ್ಮನೇ ಪರಬ್ರಹ್ಮ, ಪರಮಾತ್ಮನೇ ಸರ್ವಾತ್ಮ, ಪರಮಾತ್ಮನೇ ಸರ್ವಗತ, ಪರಮಾತ್ಮನೇ ಆತ್ಮಗತ. ಇದು ಕಾರಣ, ಪರಮಾತ್ಮನೇ ಅಂತರಂಗ, ಬಹಿರಂಗಭರಿತ ಪ್ರಾಣಲಿಂಗ. ಇಂತು ಅರಿವುದೇ ಪರಮಾತ್ಮಯೋಗ, ಮರವೇ ಮಾಯಾ ಸಂಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ ? ಲಿಂಗ ಸಂಸಾರಿ, ಲಿಂಗವಿಲ್ಲೆಂಬೆನೆ ? ಅಂಗ ಸಂಸಾರಿ, ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ, ತಾಳಸಂಪುಟಕ್ಕೆ ಬಾರದ ಘನವ ? ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ, ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ ವಾಯುವಾಕುದಲ್ಲಿ, ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ.
--------------
ಚನ್ನಬಸವಣ್ಣ
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮಗಳು ಇಲ್ಲದಂದು, ಅತ್ತತ್ತಲೆ ನಿರಾಮಯಲಿಂಗವು ತಾನೇ ನೋಡಾ. ಆ ಲಿಂಗವು ಮನೋತೀತ, ವಾಚಾತೀತ, ಭಾವಾತೀತ, ಉಪಮಾತೀತ, ನಿಃಕಲಾತೀತ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ. ಆ ಪುರುಷನ ಮುಟ್ಟಿ ಹಿಡಿದು, ದರುಶನ ಸ್ವರುಷನವ ಮಾಡಿ ಕೂಡಿ ನೆರೆದಿಹೆನೆಂದರೆ ಚಿತ್ತ ಮನಕ್ಕೆ ಅಗೋಚರವಾಗಿಪ್ಪನಯ್ಯ. ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ. ಆತನ ರೂಪು ಲಾವಣ್ಯ ಯುಕ್ತಿ ವಿಧಾನವ ಏನೆಂದುಪಮಿಸುವೆನಯ್ಯ? ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿಭೋ. ಕೆಂಜೆಡೆಯ ಭಾಳನೇತ್ರಂ ರಂಜಿಪ ರವಿಕೋಟಿತೇಜದಿಂದುರವಣಿಸುತ್ತಿದಾನೆ ನೋಡಾ. ಕಂಜಪದಯಗಳದೊಳು ಹೊಳವುತ್ತಿದಾನೆ ನಂಜುಗೊರಳಭವ ಕಾಣಿಭೋ. ಭವರೋಗವೈದ್ಯ, ಭವಹರ, ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನು, ಎನ್ನ ಹೃದಯದಲ್ಲಿ ಕಂಡು, ಮನೋಭಾವದಲ್ಲಿ ಆರಾದ್ಥಿಸುತ್ತಿರ್ದೆನಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯಜೀವದ ಕೀಲವನರಿದು ಜನನ ಮರಣಂಗಳಾಯಾಸವಳಿದು ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ : ಪಂಚಭೂತಂಗಳ ಪೂರ್ವಾಶ್ರಯವನಳಿದು ಪಂಚಕರಣಂಗಳ ಹಂಚುಹರಿಮಾಡಿ, ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ, ದಶವಾಯುಗಳ ಹಸಗೆಡಿಸಿ ಕರಣಚತುಷ್ಟಯಂಗಳ ಕಾಲಮುರಿದು ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು ಹತ್ತುನಾಡಿಗಳ ವ್ಯಕ್ತೀಕರಿಸಿ ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ ಅಂತರಂಗದ ಅಷ್ಟಮದಂಗಳ ಸಂತರಿಸಿ, ಬಹಿರಂಗದ ಅಷ್ಟಮಂದಗಳ ಬಾಯಟೊಣೆದು, ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ ಷಡೂರ್ಮೆ ಷಡ್‍ವರ್ಗಂಗಳ ಕೆಡೆಮೆಟ್ಟಿ ಷಡ್‍ಭ್ರಮೆ ಷಡ್‍ಭಾವವಿಕಾರಂಗಳ ಗಂಟಸಡಲಿಸಿ, ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ ಅಂಗಚತುಷ್ಟಯಂಗಳ ಶೃಂಗಾರವಳಿದು ಗುಣತ್ರಯಂಗಳ ಗೂಡಮುಚ್ಚಿ ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ ತಾಪತ್ರಯಂಗಳ ತಲ್ಣಣಗೊಳಿಸಿ ತನುತ್ರಯಂಗಳ ತರಹರಮಾಡಿ ಜೀವತ್ರಯಂಗಳ ಜೀರ್ಣೀಕರಿಸಿ, ಆತ್ಮತ್ರಯಂಗಳ ಧಾತುಗೆಡಿಸಿ, ಅವಸ್ಥಾತ್ರಯಂಗಳ ಅವಗುಣವಳಿದು, ತ್ರಿದೋಷಂಗಳ ಪಲ್ಲಟಗೊಳಿಸಿ, ಭಾವತ್ರಯಂಗಳ ಬಣ್ಣಗೆಡಿಸಿ , ದುರ್ಭಾವತ್ರಯಂಗಳ ದೂರಮಾಡಿ, ಮನತ್ರಯಂಗಳ ಮರ್ದನಮಾಡಿ, ತ್ರಿಕರಣಂಗಳ ಛಿದ್ರಗೊಳಿಸಿ, ಪಂಚಾಗ್ನಿಗಳ ಸಂಚಲವನತಿಗಳೆದು, ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷಿ*ಕಭಾವಂಬುಗೊಂಡು, ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು, ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು ಷಡಾಧಾರಚಕ್ರಂಗಳಲ್ಲಿ ಷಡ್‍ವಿಧ ಲಿಂಗವಾಗಿ ನೆಲೆಗೊಂಬುದು. ಆ ಷಡ್‍ವಿಧ ಲಿಂಗಕ್ಕೆ ಷಡಿಂದ್ರಿಯಗಳನೆ ಷಡ್‍ವಿಧಮುಖಂಗಳೆನಿಸಿ, ಆ ಷಡ್‍ವಿಧ ಮುಖಂಗಳಿಗೆ ಷಡ್‍ವಿಧವಿಷಯಂಗಳನೆ ಷಡ್‍ವಿಧ ದ್ರವ್ಯಪದಾರ್ಥವೆನಿಸಿ, ಆ ಪದಾರ್ಥಂಗಳು ಷಡ್‍ವಿಧಲಿಂಗಕ್ಕೆ ಷಡ್‍ವಿಧ ಭಕ್ತಿಯಿಂದೆ ಸಮರ್ಪಿತವಾಗಲು, ಅಂಗವೆಂಬ ಕುರುಹು ಅಡಗಿ ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ ತೊಳಗಿ ಬೆಳಗುತ್ತಿರ್ಪುದು. ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ ಚಿದಂಗವೆ ಚಿತ್‍ಪಿಂಡವೆನಿಸಿತ್ತು. ಇಂತಪ್ಪ ಅತಿಸೂಕ್ಷ್ಮವಾದ ಚಿತ್‍ಪಿಂಡದ ವಿಸ್ತಾರವನು ಚಿದ್‍ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು, ಆ ಚಿದ್‍ಬ್ರಹ್ಮಾಂಡದ ಅತಿಬಾಹುಲ್ಯವನು ಆ ಚಿತ್‍ಪಿಂಡದಲ್ಲಿ ವೇಧಿಸಿ ಕಂಡು, `ಪಿಂಡಬ್ರಹ್ಮಾಂಡಯೋರೈಕ್ಯಂ' ಎಂಬ ಶ್ರುತಿ ಪ್ರಮಾಣದಿಂದ ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು, ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ, ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ, ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ, ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ, ಆ ಮಹಾಜ್ಞಾನವನು ಪರಾತ್ಪರವಾದ ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ, ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ. ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ. ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ. ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ. ಭವಬಂಧನಂಗಳು ಇಲ್ಲವಾಗಿ, ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು. ಇದು ಕಾರಣ, ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ ನಿರ್ದೇಹಿಯಾದ ಕಾರಣ ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತ್ರಿಕೂಟದ ಶಿವಾಲಯದೊಳಗಿಪ್ಪ ಉಪಮಾತೀತ ಲಿಂಗವನು ಮಹಾಜ್ಞಾನದಿಂದ ತಿಳಿದು ನಿರವಯವೆಂಬ ಕರಸ್ಥಲದಲ್ಲಿ ನಿಂದು ಪರಕೆಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಧಾರದಲ್ಲಿ ಬ್ರಹ್ಮ ಸ್ವಾಯತವಾದ, ಸ್ವಾದಿಷಾ*ನದಲ್ಲಿ ವಿಷ್ಣು ಸ್ವಾಯತವಾದ. ಮಣಿಪೂರಕದಲ್ಲಿ ರುದ್ರ ಸ್ವಾಯತವಾದ, ಅನಾಹತದಲ್ಲಿ ಈಶ್ವರ ಸ್ವಾಯತವಾದ. ವಿಶುದ್ಧಿಯಲ್ಲಿ ಸದಾಶಿವ ಸ್ವಾಯತವಾದ, ಆಜ್ಞೆಯಲ್ಲಿ ಉಪಮಾತೀತ ಸ್ವಾಯತವಾದ._ ಇವರೆಲ್ಲರು; ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು, ಬಯಲಲಿಂಗವನೆ ಧರಿಸಿಕೊಂಡು, ಬಯಲನೆ ಆರಾಧಿಸಿ ಬಯಲಾಗಿ ಹೋಯಿತ್ತ ಕಂಡೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಉಪಮಾತೀತ ವಾಙ್ಮನಕ್ಕಗೋಚರನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಶ್ರುತಿತತಿಯ ಶಿರದ ಮೇಲೆ ಅತ್ಯತಿಷ*ದ್ದಶಾಂಗುಲನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಭಾವಭರಿತ ಜ್ಞಾನಗಮ್ಯನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಅಖಂಡೇಶ್ವರನೆಂಬ ಅನಾದಿಪರಶಿವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
--------------
ಷಣ್ಮುಖಸ್ವಾಮಿ
ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ, ಎನ್ನ ಪದವ ಈಗ ಅರಿದೆನು, ಬಳಲಿಕೆ ಹೋಯಿತ್ತು ಪರಿಣಾಮವಾಯಿತ್ತು. ಶಿವ ಶಿವಾ, ಶಿವನೆ ಕರ್ತನು, ನಾನು ಭೃತ್ಯನು ಮಿಕ್ಕುವೆಲ್ಲಾ ಮಿಥ್ಯವೆಂದರಿದು ಈ ಮಹಾಜ್ಞಾನಪದಕ್ಕೆ ಈ ಘನತರಸುಖಕ್ಕೆ ಈ ಮಹಾಪರಿಣಾಮಕ್ಕೆ ಇನ್ನಾವುದೂ ಸರಿಯಲ್ಲ. ಉಪಮಾತೀತ ವಾಙ್ಮನೋತೀತ ನೀನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಾದಬಿಂದುಕಳಾತೀತವಾದ ಪರವಸ್ತುವೆ ಮಹಾಂತು ನೋಡಾ. ಶ್ರುತಿತತಿಗಸಾಧ್ಯವಾದ ಪರವಸ್ತುವೆ ಮಹಾಂತು ನೋಡಾ. ಆದಿ ಮಧ್ಯಾಂತವಿಲ್ಲದ ಪರವಸ್ತುವೆ ಮಹಾಂತು ನೋಡಾ. ಉಪಮಾತೀತ ವಾಙ್ಮನಕ್ಕಗೋಚರವಾದ ಪರವಸ್ತುವೆ ಮಹಾಂತು ನೋಡಾ. ಇಂತಪ್ಪ ಮಹಾಂತಿನ ಅತೀತ ಘನಮಹಾಜಂಗಮದ ಶ್ರೀಪಾದವ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಕಾರುಣ್ಯವ ಪಡೆದು ಲಿಂಗವೇ ಪ್ರಾಣವಾಗಿ ಶ್ರೀಗುರು ಲಿಂಗ ಪ್ರಾಣ ಒಂದಾಗಿ ಕರಸ್ಥಲದಲ್ಲಿ ಶ್ರೀಗುರು ಲಿಂಗವನು ಬಿಜಯಂಗೈಸಿ ಕೊಟ್ಟ ಬಳಿಕ ಲಿಂಗದ ಅಂಗ, ಲಿಂಗದ ನೇತ್ರ, ಲಿಂಗದ ಶ್ರೋತ್ರ ಲಿಂದ ಘ್ರಾಣ, ಲಿಂಗದ ಜಿಹ್ವೆ, ಲಿಂಗದ ಹಸ್ತ ಲಿಂಗದ ಪಾದ, ಲಿಂಗದ ಶಿರ, ಲಿಂಗದ ಮನ ಲಿಂಗದ ಬುದ್ಧಿ, ಲಿಂಗದ ಚಿತ್ತ, ಲಿಂಗದ ಅಹಂಕಾರ. ಅಂಗತತ್ತ್ವವೆಲ್ಲ ಲಿಂಗತತ್ತ್ವ, ಅಂಗಕ್ರೀಯೆಲ್ಲ ಲಿಂಗಕ್ರೀ. ಇದು ಕಾರಣ, ಸೋಹಂಕ್ರೀ ಸೋಹಂಭಾವ ಶ್ರೀಗುರು ಮಾಡಿದ ಕ್ರೀ ಉಪಮಾತೀತ. ವೇದಶಾಸ್ತ್ರ ಪುರಾಣಾಗಮಂಗಳ ಕ್ರೀಯಲ್ಲ, ವಿಷ್ಣ್ವಾದಿಗಳ ಹವಣಲ್ಲ, ಲೋಕಾದಿ ಲೋಕಂಗಳ ಪರಿಯಲ್ಲ. ಇವೆಲ್ಲವ ಮೀರಿದ ವಿಪರೀತ ಮಹಾಘನ ಕ್ರೀಯ ಶ್ರೀಗುರು ತಾನೆ ಬಲ್ಲನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ, ಶಾಸ್ತ್ರದ ಅನುಭಾವದ ಮಾತಲ್ಲ. ಒಳಗಣ ಮಾತಲ್ಲ ಹೊರಗಣ ಮಾತಲ್ಲ. ಇದರಂಗ (ತು?) ವನರಿಯರೆ, ಅನುಭಾವವ ಮಾಡಿ ಫಲವೇನಯ್ಯಾ ? ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !
--------------
ಅಲ್ಲಮಪ್ರಭುದೇವರು
ಜೀವಂಗೆ ಜೀವವಾದಾತನೆ ಪರಮಾತ್ಮನು, ಪರಬ್ರಹ್ಮವು. ಉಪಮೆಗೆ ಉಪಮಾತೀತ, ಭಾವಕ್ಕೆ ಭಾವಾತೀತ, ಅರಿವಿಂಗೆ ಅಗೋಚರ ಅತಕ್ರ್ಯನಗಣಿತನ ಪ್ರಮೇಯ ನಿತ್ಯನಿರಂಜನ ನೀನೇ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಇನ್ನಷ್ಟು ... -->