ಅಥವಾ

ಒಟ್ಟು 51 ಕಡೆಗಳಲ್ಲಿ , 21 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಂಖ್ಯಾತ ಆದಿಬ್ರಹ್ಮರುತ್ಪತ್ಯವಾಗದಂದು, ಅಸಂಖ್ಯಾತ ಆದಿನಾರಾಯಣರುತ್ಪತ್ಯವಾಗದಂದು, ಅಸಂಖ್ಯಾತ ಸುರೇಂದ್ರಾದಿಗಳು ಉತ್ಪತ್ಯವಾಗದಂದು, ಅಸಂಖ್ಯಾತ ಮನುಮುನಿ ದೈತ್ಯರು ಉತ್ಪತ್ಯ ಲಯವಾಗದಂದು, ಓಂಕಾರವೆಂಬ ಆದಿಪ್ರಣವವಾಗಿದ್ದನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನು ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹುಮಾತ್ರದಲ್ಲಿಯೆ ನವಪದ್ಮ ನವಶಕ್ತಿಗಳುತ್ಪತ್ಯ ಲಯವು. ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿಯೆ ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರ ಅಷ್ಟನಾದ ಉತ್ಪತ್ಯ ಲಯವು. ದಶಚಕ್ರ ಮೊದಲಾಗಿ, ಚತುರ್ವೇದ ಗಾಯತ್ರಿ ಅಜಪೆ ಕಡೆಯಾಗಿ, ಸಮಸ್ತವು ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದಲ್ಲಿ ಉತ್ಪತ್ಯ ಲಯವೆಂದು ಬೋದ್ಥಿಸಿ ಕೃತಾರ್ಥನ ಮಾಡಿದ ಮಹಾಗುರುವಿನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನರಕುಲ ಹಲವಾದಲ್ಲಿ, ಯೋನಿಯ ಉತ್ಪತ್ಯ ಒಂದೇ ಭೇದ. ಮಾತಿನ ರಚನೆ ಎಷ್ಟಾದಡೇನು ? ನಿಹಿತವರಿವುದು ಒಂದು ಭೇದ. ವಸ್ತು ಜಾತಿ ಗೋತ್ರ ವಿಶೇಷವೆಂಬಲ್ಲಿ, ದಿನರಾತ್ರಿಯೆಂಬ ಉಭಯವನಳಿವುದಕ್ಕೆ ತಮ ಬೆಳಗೆರಡೆಂಬವಲ್ಲದಿಲ್ಲ. ಕುಲ ಉಭಯಶಕ್ತಿ ಪುರುಷತ್ವವಲ್ಲದಿಲ್ಲ. ಬೇರೆ ಹಲವು ತೆರನುಂಟೆಂದಡೆ, ಮೀರಿ ಕಾಬ ಶ್ರುತ ದೃಷ್ಟ ಇನ್ನಾವುದು ? ಎಲ್ಲಕ್ಕೂ ನೀರು ನೆಲ ಸೂರ್ಯ ಸೋಮ ಆರೈದು ನೋಡುವ ದೃಷ್ಟಿಯೊಂದೆ ಬೊಂಬೆ. ಬೊಂಬೆ ಹಲವ ನೋಡಿಹೆ, ಬೊಂಬೆ ಹಲವಂದ ಕಾಣ್ಬಂತೆ, ಅದರಂಗವ ತಿಳಿದು ನಿಂದಲ್ಲಿ, ಹಲವು ಕುಲದ ಹೊಲೆಯೆಂದೂ ಇಲ್ಲವೆಂದೆ. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ
--------------
ವೀರ ಗೊಲ್ಲಾಳ/ಕಾಟಕೋಟ
ಅತಳಲೋಕ ಸುತಳಲೋಕ ತಾನಿರ್ದಲ್ಲಿ, ವಿತಳಲೋಕ ತಳಾತಳಲೋಕ ತಾನಿರ್ದಲ್ಲಿ, ರಸಾತಳಲೋಕ ಸ್ವಸ್ಥಲಲೋಕ ತಾನಿರ್ದಲ್ಲಿ, ಪಾತಾಳಲೋಕ ತಾನಿರ್ದಲ್ಲಿ, ಭೂಲೋಕ ಭುವರ್ಲೋಕ ತಾನಿರ್ದಲ್ಲಿ, ಮಹರ್ಲೋಕ ಸ್ವರ್ಲೋಕ ತಾನಿರ್ದಲ್ಲಿ, ಜನರ್ಲೋಕ ತಪರ್ಲೋಕ ತಾನಿರ್ದಲ್ಲಿ, ಸತ್ಯರ್ಲೋಕ ತಾನಿರ್ದಲ್ಲಿ, ಇಹಲೋಕ ಪರಲೋಕ ಕಾಳಾಂಧರಲೋಕ ತಾನಿರ್ದಲ್ಲಿ. ಇಂತೀ ಲೋಕಾದಿಲೋಕಂಗಳೆಲ್ಲಾ ತನ್ನಲ್ಲಿ ಉತ್ಪತ್ಯ ಸ್ಥಿತಿ ಲಯವಾದಕಾರಣ ತಾನೇ ಪರಂಜ್ಯೋತಿಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶ್ರೀಗುರುಲಿಂಗಜಂಗಮದ ಧೂಳಪಾದೋದಕದಿಂದ ಸಮಸ್ತಲೋಕದ ಪ್ರಾಣಿಗಳನೆಲ್ಲವ ಭವತ್ವವಳಿದು ಭೃತ್ಯಭಕ್ತಿಮಾರ್ಗವ ತೋರುವುದಯ್ಯ, ಶ್ರೀಗುರುಲಿಂಗಜಂಗಮದ ದೀಕ್ಷಾಪಾದೋದಕದಿಂದ ಸಮಸ್ತ ಪದಾರ್ಥಂಗಳೆಲ್ಲವ ಶಿವಗಣಪದಕ್ಕೆ ಯೋಗ್ಯವಾಗುವಂತೆ ಮಾಡುವುದಯ್ಯ. ಶ್ರೀಗುರುಲಿಂಗಜಂಗಮದ ಶಿಕ್ಷಾಪಾದೋದಕದಿಂದ ಬ್ರಹ್ಮನ ಉತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹ ತೊಡದು ಶಿವಶರಣಗಣಂಗಳ ನಿಜನಿವಾಸವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಪಾದೋದಕದಿಂದ ಷಡ್ವಿಧ ದೀಕ್ಷಾತ್ರಯವ ಕರುಣಿಸಿ, ಷಟ್ಸ್ಥಲಮಾರ್ಗವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸ್ಪರ್ಶನೋದಕ, ಅವಧಾನೋದಕ, ಆಪ್ಯಾಯನೋದಕದಿಂದ ತ್ರಿವಿಧಲಿಂಗಾಂಗ ಸಮರಸದ ಸನ್ಮಾರ್ಗಾಚಾರಕ್ರಿಯಾಜ್ಞಾನವ ತೋರುವುದಯ್ಯ. ಶ್ರಿಗುರುಲಿಂಗಜಂಗಮದ ಹಸ್ತೋದಕ-ಪರಿಣಾಮೋದಕ-ನಿರ್ನಾಮೋದಕದಿಂದ ಷಡ್ವಿಧಲಿಂಗಾಂಗ ಸಮರಸಾಚರಣೆಯ ಮಾರ್ಗದ, ಮೀರಿದ ಕ್ರಿಯಾಜ್ಞಾನವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸತ್ಯೋದಕ-ಕರುಣಜಲ- ವಿನಯಜಲ-ಸಮತಾಜಲದಿಂದ ಸಮಸ್ತಪ್ರಮಥಗಣಂಗಳೆಲ್ಲ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾರಾಧ್ಯ ಶರಣಗಣಂಗಳಾಚಾರಸಂಪದಕ್ಕೆ ಪರಬ್ರಹ್ಮ ಜ್ಯೋತಿರ್ಮಯವಸ್ತು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ನ ಎಂಬಕ್ಷರದ ಭೇದ ಜನನ ನಾಸ್ತಿಯಾದ ವಿವರ. ಮ ಎಂಬಕ್ಷರದ ಭೇದ ಮರಣ ನಾಸ್ತಿಯಾದ ವಿವರ. ಶಿ ಎಂಬಕ್ಷರದ ಭೇದ ಸ್ವೀಕರಣೆ ನಾಸ್ತಿಯಾದ ವಿವರ. ವ ಎಂಬಕ್ಷರದ ಭೇದ ವಕಾರ ನಾಸ್ತಿಯಾಗಿ ಸಾಕಾರವಳಿದ ಭೇದ. ಯ ಎಂಬಕ್ಷರದ ಭೇದ ತತ್ವಮಸಿಯೆಂಬ ಬ್ಥಿತ್ತಿಯ ಮೆಟ್ಟದೆ ಉತ್ಪತ್ಯ ಸ್ಥಿತಿ ಲಯವೆಂಬ ತ್ರಿವಿಧವ ಮುಟ್ಟದೆ ಅದು ನಿಶ್ಚಯವಾದಲ್ಲಿ ಪಂಚಾಕ್ಷರಿಯ ಭೇದ. ಇಂತೀ ಭೇದಂಗಳಲ್ಲಿ ಜಪಧ್ಯಾನವ ಧ್ಯಾನಿಸಿ ಇಷ್ಟ ಕಾಮ್ಯ ಮೋಕ್ಷಂಗಳೆಂಬ ಮೂರಂಗುಲವನರಿವುದು. ಸದೃಷ್ಟ ತನ್ನಷ್ಟವೆಂಬ ಉಭಯದ ಅಂಗುಲವ ಕಂಡು ಚತುರ್ವಿಧಫಲಪದಂಗಳಲ್ಲಿ ಭಾವಿಸಿ ಕಲ್ಪಿಸದಿಪ್ಪುದು ಜಪಧ್ಯಾನ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಉದಕವಿಲ್ಲದಿರೆ ಅಂಬುದ್ಥಿ ತಟಾಕಂಗಳೆಂಬ ನಾಮವುಂಟೆ? ಬಣ್ಣ ನಾಸ್ತಿಯಾಗಿರೆ ಬಂಗಾರವೆಂಬ ವಿಶೇಷವುಂಟೆ? ಗಂಧವಿಲ್ಲದಿರೆ ಚಂದನವೆಂಬ ಅಂಗವುಂಟೆ? ನೀನಿಲ್ಲದಿರೆ ನಾನೆಂಬ ಭಾವವುಂಟೆ? ಜಗವೆಲ್ಲ ನಿನ್ನ ಹಾಹೆ, ಉತ್ಪತ್ಯ ಸ್ಥಿತಿ ಲಯವೆಲ್ಲ ನಿನ್ನ ಹಾಯೆ. ಕ್ರೀ, ನಿಃಕ್ರೀಯೆಂಬುದೆಲ್ಲ ನಿನ್ನ ಹಾಹೆ. ಜಗಹಿತಾರ್ಥವಾಗಿ ಭಕ್ತನಾದೆ. ಭಕ್ತಿ ತದರ್ಥವಾಗಿ ಮಾಹೇಶ್ವರನಾದೆ. ಮಾಹೇಶ್ವರ ತದರ್ಥವಾಗಿ ಪ್ರಸಾದಿಯಾದೆ. ಪ್ರಸಾದಿ ತದರ್ಥವಾಗಿ ಪ್ರಾಣಲಿಂಗಿಯಾದೆ. ಪ್ರಾಣಲಿಂಗಿ ತದರ್ಥನಾಗಿ ಶರಣನಾದೆ. ಶರಣ ತದರ್ಥನಾಗಿ ಐಕ್ಯನಾದೆ. ಇಂತೀ ಷಡುಸ್ಥಲಮೂರ್ತಿಯಾಗಿ ಬಂದೆಯಲ್ಲಾ ಸಂಗನಬಸವಣ್ಣ, ಚೆನ್ನಬಸವಣ್ಣ, ನಿಮ್ಮ ಸುಖದುಃಖದ ಪ್ರಮಥರು ಸಹಿತಾಗಿ ಏಳುನೂರೆಪ್ಪತ್ತು ಅಮರಗಣಂಗಳು, ಗಂಗೆವಾಳುಕ ಸಮಾರುದ್ರರು ಮತ್ತೆ ಅವದ್ಥಿಗೊಳಗಲ್ಲದ ಸಕಲ ಪ್ರಮಥರು ಬಂದರಲ್ಲಾ. ಬಂದುದು ಕಂಡು ಎನ್ನ ಸಿರಿ ಉರಿಯೊಳಗಾಯಿತ್ತು. ಎನ್ನ [ಭ]ವದ ಉರಿಯ ಬಿಡಿಸು, [ಭ]ವವಿರಹಿತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮನ್ಯ ಓಡಿ ಆಹಾ! ಮನ್ಯ ನಿಂದು ಸರಹೆತ್ತ ಮನಕ್ಕೆ ಸರಾದಿವೊಡೆಯನಾಗಿ ಸರಶಬ್ದದಾ ಮಥನದಾ ಮಥಂತಿ ಮಥನದಾಸರ ಮಥನದಿಂದ ಲಿಂಗ ಉತ್ಪತ್ಯ, ಜಂಗಮ ಉತ್ಪತ್ಯ,ಅನುಭಾವ ಉತ್ಪತ್ಯ. ಸರದಿಂದ ನಿರವಯ, ನಿರವಯದಿಂದ ಸರ. ಸರವಯದಿಂದೆರಡರನ್ವಯದ ಆಧಾರವನು ತನ್ನ ಹೃದಯಕ್ಕೆ ತಂದು ನಿಂದಿತ್ತೆ ನಿರವಯವು. ಇಂತೆಂದಿತ್ತೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಇನ್ನು ಷಡಧ್ವದುತ್ಪತ್ಯವದೆಂತೆಂದಡೆ : ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ಜ್ಯೋತಿರೂಪದಲ್ಲಿ ಹೃದಯಮಂತ್ರ ಉತ್ಪತ್ಯ. ಆ ಪ್ರಣವದ ದರ್ಪಣಾಕಾರದಲ್ಲಿ ಶಿರೋಮಂತ್ರ ಉತ್ಪತ್ಯ. ಆ ಪ್ರಣವದ ಅರ್ಧಚಂದ್ರಕದಲ್ಲಿ ಶಿಖಾಮಂತ್ರ ಉತ್ಪತ್ಯ. ಆ ಪ್ರಣವದ ಕುಂಡಲಾಕಾರದಲ್ಲಿ ಕವಚಮಂತ್ರ ಉತ್ಪತ್ಯ. ಆ ಪ್ರಣವದ ದಂಡಕಸ್ವರೂಪದಲ್ಲಿ ನೇತ್ರಮಂತ್ರ ಉತ್ಪತ್ಯ. ಆ ಪ್ರಣವದ ತಾರಕಸ್ವರೂಪದಲ್ಲಿ ಅಸ್ತ್ರಮಂತ್ರ ಉತ್ಪತ್ಯ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಲಿಂಗೋದ್ಭವ ಐವತ್ತೆರಡು ಅಕ್ಷರಂಗಳಲ್ಲಿ ವರ್ತುಳ ಗೋಮುಖ ಗೋಳಕಾಕಾರಕ್ಕೆ ಸಂಬಂಧಿಸುವಲ್ಲಿ ಅಕಾರ ವರ್ತುಳಾಕಾರಕ್ಕೆ, ಉಕಾರ ಗೋಮುಖಕ್ಕೆ ಮಕಾರ ಗೋಳಕಾಕಾರಕ್ಕೆ. ಇಂತೀ ಆದಿ ಆಧಾರ ಆತ್ಮಬೀಜ ಓಂಕಾರದಿಂದ ಉದ್ಭವವಾದ ಅಕ್ಷರಾತ್ಮಕ ವಸ್ತುವನರಿತು ಬ್ರಹ್ಮ ವರ್ತುಲದಲ್ಲಿ ಅಡಗಿ, ವಿಷ್ಣು ಗೋಮುಖದಲ್ಲಿ ನಿಂದು ರುದ್ರ ಗೋಳಕಾಕಾರಕ್ಕೆ ಸಂಬಂಧಿತನಾಗಿ ಉತ್ಪತ್ಯ ಸ್ಥಿತಿ ಲಯಂಗಳ ಲಕ್ಷಿಸುತ್ತ ಜಗಹಿತಾರ್ಥವಾಗಿ ಸ್ವಯಂಭು ಉಮಾಪತಿಯಾದೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಾದೆಹೆನೆಂದು.
--------------
ಪ್ರಸಾದಿ ಭೋಗಣ್ಣ
ತನು ಮೂರು ಆತ್ಮವಾರು ಜೀವವೆರಡು ಜ್ಞಾನ ಎಂಬತ್ತನಾಲ್ಕು ಲಕ್ಷ ಪರಮನೊಂದೆ ಭೇದ. ಇಂತೀ ತ್ರಿವಿಧ ತನು ವರ್ಣಂಗಳಲ್ಲಿ ವಿಶ್ವಮಯವಾಗಿ ಸರ್ವ ಜೀವಂಗಳೆಲ್ಲವೂ ತಮ್ಮ ನೆಲ ಹೊಲದಲ್ಲಿ ಆಹಾರ ವ್ಯವಹಾರ ವಿಷಯಂಗಳಿಂದ ಉತ್ಪತ್ಯ ಸ್ಥಿತಿ ಲಯಂಗಳಿಂದ ಕಲ್ಪಾಂತರಕ್ಕೊಳಗಾಗಿಪ್ಪುದು ಬ್ರಹ್ಮಾಂಡಪಿಂಡ. ಇಂತಿವ ಕಳೆದುಳಿದು ಜ್ಞಾನಪಿಂಡ ಉದಯವಾದಲ್ಲಿ ಸರ್ವ ಘಟಪಟಾದಿಗಳ ಸೋಂಕು ಸರ್ವ ಚೇತನದ ವರ್ಮ ಸರ್ವ ಜೀವದ ಕ್ಷುದೆ, ಸರ್ವಾಂತ್ಮಂಗಳಲ್ಲಿ ದಯ ಕ್ರೂರಮೃಗ ಅಹಿ ಚೋರ ಹಗೆ ಇಂತಿವು ಮುನಿದಲ್ಲಿ ಸಂತತ ಭೀತಿಯಿಲ್ಲದೆ ಸಂತೈಸಿಕೊಂಡು ಸರ್ವಾತ್ಮಕ್ಕೆ ಸಂತೋಷವ ಮಾಡುವುದೆ ಜ್ಞಾನ ಪಿಂಡೋದಯ. ಶಂಭುವಿನಿಂದಿತ್ತು ಸ್ವಯಂಭುವನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು || 40 ||
--------------
ದಾಸೋಹದ ಸಂಗಣ್ಣ
ಇನ್ನು ಗುರುಸ್ಥಲದ ವಚನ : ಗುರುಹೃದಯ ಚಿನ್ಮಯಯೆನಲಂಜುವೆನಯ್ಯ! ಗುರುವೆನ್ನ ಆತ್ಮದಿಂದ ಮೊಳೆಯದೋರಿದನಾಗಿ. ನಾನು ಪಾವನವೆಂಬೆನಯ್ಯ, ಎನ್ನ ಪಾಪಕಂಜುವೆನಯ್ಯ, ಆ ಗುರುವಿನ ಕರಸ್ಥಳದಿಂದ ಉದುಭವಿಸಿದೆನಾಗಿ. ಇಂತೀ ಉಭಯದ ಉತ್ಪತ್ಯ ಸಂಗನ ಶರಣ ಬಸವಣ್ಣನ ಸಂತತಿಗಳಿಲ್ಲದೆ ಶಬ್ದಪಾಠಕರಿಗೆ ಅರಿಯಬಾರದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಹಸುವಿಂಗೆ ಸಂಜ್ಞೆ, ಎತ್ತಿಂಗೆ ಮುಟ್ಟು, ಕರುವಿಂಗೆ ಲಲ್ಲೆ. ಇಂತೀ ತ್ರಿಗುಣದ ಇರವ, ತ್ರಿಗುಣಾತ್ಮಕ ಭೇದವ, ತ್ರಿಗುಣ ಭಕ್ತಿಯ ಮುಕ್ತಿಯ, ತ್ರಿಗುಣ ಘಟಾದಿಗಳ, ತ್ರಿಗುಣ ಮಲ ನಿರ್ಮಲಂಗಳ, ತ್ರಿಗುಣ ಸ್ವಯ ಚರ ಪರಂಗಳಲ್ಲಿ ತ್ರಿವಿಧ ಶಕ್ತಿ ತ್ರಿವಿಧ ಮುಕ್ತಿ ಇಂತೀ ತ್ರಿವಿಧಂಗಳೊಳಗಾಗಿ ಉತ್ಪತ್ಯ ಸ್ಥಿತಿ ಲಯ ತ್ರಿವಿಧದ ಹೆಚ್ಚು ಕುಂದನರಿತು, ಎತ್ತು ಹಸುವಿನ ಸಂಗದಿಂದ ಕರುವಾದ ತೆರನನರಿತು ಇಂತೀ ಒಂದರಲ್ಲಿ ಒಂದು ಕೂಡಲಿಕ್ಕೆ ಬಿಂದು ನಿಂದು ಕುರುಹಾದುದ ಕಂಡು ನೆನೆದು ನೆನೆಸಿಕೊಂಬುದದೇನೆಂದು ತಿಳಿದು, ಇಂತೀ ಅಂಡ ಪಿಂಡಗಳಲ್ಲಿ ನಿರಾತ್ಮನು ಆತ್ಮನಾಗಿ, ನಾನಾರೆಂಬುದ ತಾನರಿತು ತಿಳಿದಲ್ಲಿ ತುರುಮಂದೆಯೊಳಗಾಯಿತ್ತು. ಇದು ಗೋಪತಿನಾಥನ ಕೂಟ, ವಿಶ್ವನಾಥಲಿಂಗನ ಲೀಲಾಭಾವದಾಟ.
--------------
ತುರುಗಾಹಿ ರಾಮಣ್ಣ
ಸೂತಕ ತಡೆದಲ್ಲಿ ಮಕ್ಕಳಾದಹರೆಂದು ಮಚ್ಚಿಪ್ಪುದು ಜಗ. ಸೂತಕವೇತರಿಂದೊದಗೂದು. ಜಗದ ಉತ್ಪತ್ಯ, ಈ ಕಾಯದ ಆಶೆಯ ಸೂತಕ ತಡೆದು, ನಿರಾಶೆಯ ಮಾತೆಯ ಗರ್ಭದಲ್ಲಿ, ನಿರ್ಜಾತನು ಬೆಸಲಾದ. ಭಾವವೆಂಬ ಯೋನಿಯಲ್ಲಿ , ಬಂಕೇಶ್ವರಲಿಂಗ ಅಂತುಕ ಕುಮಾರನಾದ.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->