ಅಥವಾ

ಒಟ್ಟು 29 ಕಡೆಗಳಲ್ಲಿ , 20 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರನನೇರಿ ಹಣ್ಣನರಸಹೋದಡೆ ಮರ ಮುರಿದುಬಿದ್ದ ಮರುಳುಮಾನವನಂತೆ, ಕೆಸರಿನೊಳಗಣ ಹುಲ್ಲ ಮೇಯಹೋದ ಪಶುವಿನಂತೆ, ಕೊಂಬೆ ಕೊಂಬೆಗೆ ಹಾರುವ ಕೋಡಗನಂತೆ, ಉಂಡ ಮನೆಯ ದೂರುವ ಒಡೆಕಾರನಂತೆ, ಹಳ್ಳ ಹಳ್ಳ ತಿಬ್ಬಳಿ ತಿರುಗುವ ಬಳ್ಳುವಿನಂತೆ, ಮಾತಿನಲ್ಲಿ ಬ್ರಹ್ಮವ ನುಡಿವ ವೇಷಧಾರಿಗಳ ಲಿಂಗಾಂಗಿಗಳೆಂದಡೆ ಮಾರಿಗೆತಂದ ಹಂದಿಯ ನಾಯಿ ನರಿ ತಿಂಬಂತೆ ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ, ತುಂಬಿದ ಘಟ, ಅರಿದು ಕೊಂಡ ಆತ್ಮ ಇವ ಹಿಡಿದಡೆ ಭಂಗ. ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.
--------------
ಕರುಳ ಕೇತಯ್ಯ
ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ, ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ, ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ ಅನೇಕ ದುಃಖವಂತಿರಲಿ. ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ : ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ, ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ ಅವಯವಂಗಳು ಬಲಿದು ಪಿಂಡವರ್ಧನವಾಗಿ, ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ, ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು ಮುಚ್ಚಿದ ಕಣ್ಣು, ಮುಗಿದ ಬಾಯಾಗಿ, ಕುಕ್ಕುಟಾಸನದಲ್ಲಿ ಕುಳ್ಳಿರ್ದು, ಕಡಿವ ಜಂತುಜಂಗುಳಿಯ ಬಾಧೆ, ಸುಡುವ ಜಠರಾಗ್ನಿಯ ಬಾಧೆ, ಎಡದಲ್ಲಿ ಮೂತ್ರದ ತಡಿಕೆಯ ಬಾಧೆ, ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ, ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ ದಿನದಿನಕ್ಕೆ ದುಃಖಮಂಬಡುತಿರ್ದು, ಆ ಮೇಲೆ ಜಾತಿಸ್ಮರತ್ವ ಉದಯವಾಗಿ, ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ ಅರಹು ಮರಹುಗಳನಾರೈದು ನೋಡಿ, ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ, ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ ಸರ್ವರಿಗೆ ಪರಮೇಶ್ವರನೇ ಕರ್ತನು, ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು, ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು, ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ ದಿಗ್‍ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು ಗಿರ್ರನೆ ತಿರುಗಿ ತಲೆಕೆಳಗಾಗಿ ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ, ಬಚ್ಚಲಹುಳುವಿನಂದದಿ ಯೋನಿಯೆಂಬ ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ, ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ ಬಾಲಲೀಲೆಯ ಸುಖದುಃಖಂಗಳನನುಭವಿಸಿ, ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ, ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ ಮದಮತ್ಸರಂಗಳಲ್ಲಿ ಮುಂದುಗೆಟ್ಟು ನಾನಾ ವ್ಯಾಪಾರವನಂಗೀಕರಿಸಿ ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ, ಕಾಮವಿಕಾರ ತಲೆಗೇರಿ ವಿಷಯಾತುರನಾಗಿ, ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ, ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ, ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ, ಆದ್ಥಿ ವ್ಯಾದ್ಥಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು, ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು, ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ. ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ. ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ. ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ. ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ, ಒಂದು ಜ್ಯೋತಿ ಬಿಳಿಯ ವರ್ಣ. ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ. ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ. ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ. ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ, ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯವಿಡಿದು ಮಾಯೆ ಬಿಡಬೇಕೆಂಬ ಹೆಡ್ಡರಿಗೆ ಮಾಯೆ ಬಿಡುವುದು ಹೇಂಗಯ್ಯ ? ದೇಹವಿಡಿದು ನೋಡಿ ಕಂಡು ಆ ಅಮೃತ ಉಂಡೆನೆಂದು ನುಡಿವರು. ಆ ಅಮೃತ ಉಂಡ ಬಳಿಕ ಹಸಿವುಂಟೆ ಹೇಳಾ. ಪ್ರಳಯವಿದ್ಯೆ ವಾತ ಪಿತ್ಥ ಶ್ಲೇಷ್ಮಂಗಳ ಕುಡಿದು ಆ ಅಮೃತವ ಉಂಡೆನೆಂದು ನುಡಿವವರಿಗೆ ಎಂದೆಂದಿಗೂ ದೊರಕದು ಕಾಣಾ. ಇಂಥ ಭ್ರಾಂತಭ್ರಮಿತರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ. ಚಿತ್ತೇ ತಾನಾದ ಮಹಾತ್ಮಂಗೆ ಲಯವಿಲ್ಲ ಭಯವಿಲ್ಲ ಅನುವಿಲ್ಲ. ದೇಹದಿ ನೋಡುವ ಕಪಿಚೇಷ್ಟೆಗಳಿಗೆ ಎಂದೆಂದಿಗೂ ಇಲ್ಲ. ಮಹತೋತ್ತಮನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ತತ್ತ್ವ ಸಾಂಗತ್ಯಂದತ್ತಲಾಗಿಹ ಬ್ರಹ್ಮ ಸುತ್ತಿಪ್ಪ ಕ್ರೀ ತಾನು ಭಕ್ತಿಯಾಗಿ ತ್ವಮಸಿ ಸಂಗಮದಂಗಪಾಶದ ತದ್ರೂಪವಾದ ಈಷಣತ್ರಯಗಳನು ಮೀರಿರ್ಪುದು ಬಂದ ಬಟ್ಟೆಯ ಬಾರ, ಉಂಡ ಊಟವನುಣ್ಣ ಹಿಂದುಮುಂದರಿದಾತ ಸಂದಿಲ್ಲದೆ ಶಿವಭಕ್ತಿಯನರಿದು ನೀವಿಪ್ಪೆಡೆಗೆ ಬಂದ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ. ಅದೇಕೆಂದಡೆ ಶಿವನು ದೀನನು. ಅದು ಹೇಗೆಂದಡೆ: ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು. ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು, ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು. ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ ಕನ್ನವನಿಕ್ಕಿ ಒಯ್ದು, ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ, ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ. ದಿನದಿನಕ್ಕೆ ಇದೇ ಚಿಂತೆ ನಿಮಗೆ. ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು. ಅದು ಹೇಗೆಂದಡೆ: ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ ಇಂದಿನ ಕಾಸು ಉದಯಕ್ಕೆ ತಂಗಳೆಂಬರು. ನಾಳಿನ ಚಿಂತೆ ನನಗೇಕೆಂಬರು. ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು, ನಮ್ಮ ಕರಿಕಾಲಚೋಳನ ಮನೆಯಲ್ಲಿ ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ? ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ, ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು. ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು. ಇದ ನೀವು ಬಲ್ಲಿರಿಯಾಗಿ, ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಬಣ್ಣವ ಬಯಲು ನುಂಗಿದಾಗ ಅಣ್ಣಗಳೆಲ್ಲಕ್ಕೂ ಮರಣವಹಾಗ ಮದವಳಿಗೆಯ ಮದವಳಿಗೆ ಹೋದನೆಂದುಕೊಂಡ. ಒಂದು ಕಡೆಯಲ್ಲಿ ತಾ ಒಂದು ಕಡೆಯಾದ ಪರಿಯ ನೋಡಾ! ಗಂಡನೊಂದಾಗಿ ಹೋದವರ ಮಿಂಡ ಉಳುಹಿಸಿಕೊಂಡ ಪರಿಯ ನೋಡಾ! ಮಿಂಡನೊಂದಾಗಿ ಗಂಡನ ಕೂಡಿಕೊಂಬ ಉಂಡ ಮುಂಡೆಯರತನವ ಕಂಡು ನಾನಂಜುವೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅರಣ್ಯದೊಳಗರಸಿಯರ ಪ್ರಾಣವಲ್ಲಭರು ಬಂದುಣುತ್ತೈದಾರೆ, ನೀ ಬೇಗನೇಳೆಂದಡೆ ಏಳದ ಮೊದಲೆ ಉಂಡ, ನಮ್ಮ ಕಪಿಲಸಿದ್ಧಮಲ್ಲಿನಾಥಯ್ಯ
--------------
ಸಿದ್ಧರಾಮೇಶ್ವರ
ಜಂಗಮಪ್ರಸಾದವ ಲಿಂಗಕ್ಕೆ ಸಲಿಸಬಾರದೆಂಬ ಮಾತ ಕೇ?ಲಾಗದು. ಪ್ರಸಾದವೆ ಲಿಂಗ, ಆ ಲಿಂಗವೆ ಅಂಗ; ಆ ಜಂಗಮವೆ ಚೈತನ್ಯ, ಆ ಚೈತನ್ಯವೆ ಪ್ರಸಾದ. ಇಂತೀ ಉಭಯದ ಬೇಧವನರಿಯರು ನೋಡಾ ! ಜಿಹ್ವೆಯಲ್ಲಿ ಉಂಡ ರಸ ಸರ್ವೇಂದ್ರಿಯಕ್ಕೆ ಬೇರೆಯಾಗಬಲ್ಲುದೆ ? ಪ್ರಾಣಲಿಂಗದಲ್ಲಿ ಸವಿದು ಭಾವಲಿಂಗದಲ್ಲಿ ತೃಪ್ತಿಯಾದ ಬಳಿಕ ಇಷ್ಟಲಿಂಗಕ್ಕೆ ಭಿನ್ನವುಂಟೆ ? ಇದನರಿದು ಅರ್ಪಿಸಿ ಸುಖಿಸಲೊಲ್ಲರು. ದೇಹಭಾವದಲ್ಲಿ ಕೊಂಬುದು ಅನರ್ಪಿತವೆಂದರಿಯರು. ಲಿಂಗಕ್ಕೂ ಭಕ್ತಂಗೂ ಭೇದವಿಲ್ಲೆಂಬುದನರಿಯಲರಿಯರು. ಜಂಗಮಮುಖದಿಂದೊಗೆದುದು ಪ್ರಸನ್ನಪ್ರಸಾದವೆಂದರಿಯರು. ಸರ್ವೇಂದ್ರಿಯಮುಖದ್ವಾರೇ ಸದಾ ಸನ್ನಿಹಿತಃ ಶಿವಃ ಪ್ರಾಣೇ ಲಿಂಗಸ್ಥಿತಿಂ ಮತ್ವಾ ಯೋ ಭುಂಕ್ತೇ ಲಿಂಗವರ್ಜಿತಃ ಸಃ ಸ್ವಮಾಂಸಂ ಸ್ವರುಧಿರಂ ಸ್ವಮಲಂ ಭಕ್ಷಯತ್ಯಹೋ ತಸ್ಮಾಲ್ಲಿಂಗಪ್ರಸಾದಂ ಚ ನಿರ್ಮಾಲ್ಯಂ ತಜ್ಜಲಂ ತಥಾ ನೈವೇದ್ಯಂ ಚರಲಿಂಗಸ್ಯ ಶೃಣು ಷಣ್ಮುಖ ಸರ್ವದಾ ಇದು ಕಾರಣ, ಪ್ರಸಾದವೆ ಇಷ್ಟ ಪ್ರಾಣ ಭಾವವಾಗಿ ನಿಂದುದನರಿಯರು. ಇಂತೀ ಮರ್ಮವ ನಮ್ಮ ಬಸವಣ್ಣ ಬಲ್ಲ. ಇದನೆಲ್ಲರಿಗೆ ತೋರಿ, ಲಕ್ಷದ ಮೇಲೆ ತೊಂಬತ್ತುಸಾವಿರ ಜಂಗಮದ ಒಕ್ಕುದನೆತ್ತಿಕೊಂಬ; ಅಚ್ಚಪ್ರಸಾದವ ಲಿಂಗಕ್ಕಿತ್ತುಕೊಂಬ. ಪ್ರಸಾದಿಗಳು ಮೂವತ್ತಿರ್ಛಾಸಿರದೊಳಗೆ ತಾನೊಬ್ಬನಾಗಿ ಸುಖಿಸುವುದ ನಾನು ಬಲ್ಲೆನಾಗಿ, ಸಂದೇಹವಳಿದು ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬಣ್ಣವುಂಡ ಚಿನ್ನದಂತೆ, ಬೆಣ್ಣೆ ಉಂಡ ಘೃತದಂತೆ, ಪ(ಸ್ವ?)ರವುಂಡ ಶಬ್ದದಂತೆ, ಪರಿಮಳವುಳ್ಳ ಪುಷ್ಪದಂತೆ, ಗುಹೇಶ್ವರಲಿಂಗದಲ್ಲಿ ಹೊರೆಯಿಲ್ಲದಿರ್ಪ ಸಂಗನಬಸವಣ್ಣನ ಭಕ್ತಿಯಾಚಾರದ ಮಹಾತ್ಮೆಯೆಂತು ಪೇಳಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಮೇರುಮಂದಿರದಲ್ಲಿ ಈರೈದರತಲೆ, ಧಾರುಣಿಯ ಜನರೆಲ್ಲ ಬಣ್ಣಿಸುತ್ತಿಪ್ಪರು. ಜ್ಞಾನಾಮೃತರಸದಲ್ಲಿ ಓಗರವ ಮಾಡಿ ಆರೋಗಣೆಯ ಮಾಡಿದೆನು. ವಿಷಮಾಕ್ಷ ಹರ ಭಸ್ಮವಿಭೂಷಣ ಶಶಿಧರ ಶರಣು ಶರಣೆನುತಿದ್ದೆನು. ಇಂದ್ರಾಗ್ನಿಯ ಪುರಪಟ್ಟಣದಲ್ಲಿ ಚಂದ್ರಾಹಾರವ (ಚಂದ್ರಹಾರ?) ಬೇಡಿದಡೆ ಖಂಡಕಪಾಲದಲ್ಲಿ ಉಂಡ ತೃಪ್ತಿ, ಅಖಂಡ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ ಅಕ್ಕಿಯ ತುಂಬಿ, ಪರಮಾನಂದವೆಂಬ ಜಲವನೆರೆದು, ಸ್ವಯಂ ಪ್ರಕಾಶವೆಂಬ ಅಗ್ನಿಯಿಂದ ಪಾಕವಾದ ಲಿಂಗದೋಗರವು ಮಹಾಘನದಲ್ಲಿ ನಿಂದು ಘನತೃಪ್ತಿಯನೀವುತ್ತಿದ್ದಿತ್ತು ಕಾಣಿರೆ ! ಅದ ಕಣ್ಣಿಲ್ಲದೆ ಕಂಡು ಕೈಯಿಲ್ಲದ ಕೊಂಡು ಬಾಯಿಲ್ಲದೆ ಉಂಡ ತೃಪ್ತಿಯ, ಅರಿವಿಲ್ಲದ ಅರಿವಿನಿಂದ ಅರಿದು, ಸುಖಿಯಾದೆ ನಾನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯಾ ಅಯ್ಯಾ, ನೀವು ಬಾರದಿರ್ದಡೆ ಅಂತು ಹಂಬಲಿಸುತ್ತಿದ್ದೆ. ನೀನೆನ್ನ ಹಂಬಲ ಕೇಳಿ ಕರುಣದಿಂದ ಭೋರನೆ ಬಂದಡೆ, ಆನು ತಳವೆಳಗಾಗಿ ಅವಗುಣವೆಂಬ ರಜವ ಕಳೆದು ಕಂಬಳಿಯ ಪೀಠವನೊಲ್ಲದೆ ಹೃದಯಪೀಠವನಿಕ್ಕಿ ಮೇಲುಪ್ಪರಿಗೆಯೊರತೆಯ ಅಗ್ಗಣಿಯ ತಂದು ಪಾದಾರ್ಚನೆಯ ಮಾಡಿ, ಎರಡೆಸಳ ಕಮಲವನೆರಡು ಪಾದಕ್ಕೆ ಪೂಜಿಸಿ, ಕಂಗಳ ತಿರುಳ ತೆಗೆದು ಆರತಿಯನ್ನೆತ್ತಿ, ಉಸುರ ನುಂಗಿದ ಪರಿಮಳದ ಧೂಪವ ಬೀಸಿ, ನ್ನೆತ್ತಿಯ ಪರಿಯಾಣದೊಳಿಟ್ಟು ಬೋನವ ಗಡಣಿಸಿದಡೆ, ಸಯದಾನ ಸವೆಯದೆ ಆರೋಗಣೆಯ ಮಾಡಿ, ಉಂಡ ಬಾಯ ತೊಳೆದಡೆ ಸಂದೇಹವಾದುದೆಂದು ಮೇಲುಸೆರಗಿನೊಳು ತೊಡೆದುಕೊಂಡು ಬಾಯ ಮುಚ್ಚಳ ತೆಗೆಯದೆ, ಕರಣವೆಂಬ ತಾಂಬೂಲವನವಧರಿಸಿದ, ಭಾವದ ಕನ್ನಡವ ಹರಿದುಹಾಯ್ಕಿದ, ಆತನ ಪಾದಕ್ಕೆ ನಾನು ಶರಣೆಂದು ಪಾದೋದಕವ ಕೊಂಡೆ. ಆತನ ಪ್ರಸಾದಕ್ಕೆನ್ನ ಸೆರಗ ಹಾಸಿ ಆರೋಗಿಸಿ ಸುಖಿಯಾದೆನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಪ್ರಭುದೇವರ ಕರುಣವೆನಗೆ ಸಾಧ್ಯವಾದ ಪರಿಯನೇನೆಂದುಪಮಿಸುವೆ!
--------------
ಸಿದ್ಧರಾಮೇಶ್ವರ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ ಎನ್ನಂಗದ ಭಂಗ ಹಿಂಗಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಲಿಂಗದ ಸಂಯೋಗವಾಯಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಪ್ರಸಾದದ ಪರುಷವ ಕಂಡೆ, ಆ ಪರುಷದ ಮೇಲೆ ಮೂರು ಜ್ಯೋತಿಯ ಕಂಡೆ, ಆ ಜ್ಯೋತಿಯ ಬೆಳಗಿನಲ್ಲಿ ಒಂಬತ್ತು ರತ್ನವ ಕಂಡೆ, ಆ ರತ್ನಂಗಳ ಮೇಲೆ ಒಂದು ಅಮೃತದ ಕೊಡನ ಕಂಡೆ. ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ, ಕರದವನೆ ನೆರದ, ನೆರದವನೆ ಕುರುಹನರಿದ, ಅರಿದವನೆ ನಿಮ್ಮನರಿದವ ಕಾಣಾ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಇನ್ನಷ್ಟು ... -->