ಅಥವಾ

ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷುತ್ಪಿಪಾಸೆ ಶೋಕ ಮೋಹ ಜನನ ಮರಣ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಂ ಬಿಟ್ಟು ಅಷ್ಟವಿಧಾರ್ಚನೆ, ಷೋಡಶೋಪಚಾರವಿಲ್ಲದಿರುವ ಕ್ಷೀರದೊಳಗಣ ಘೃತದಂತೆ, ತಿಲದೊಳಗಣ ತೈಲದಂತೆ, ಪುಷ್ಪದೊಳಗಣ ಪರಿಮಳದಂತೆ, ಉಪ್ಪು ಉದಕವ ಕೂಡಿದಂತೆ, ವಾರಿಕಲ್ಲು ವಾರಿಯ ಕೂಡಿದಂತೆ, ಕರ್ಪುರವು ಜ್ಯೋತಿಯ ಕೂಡಿದಂತೆ, ಮನ ಲಿಂಗದಲ್ಲಿ ಲೀಯವಾಗಿಹುದೀಗ ಐಕ್ಯಸ್ಥಲ ನೋಡಾ, ಇದಕ್ಕೆ ಈಶ್ವರ್ದೋವಾಚ : ``ಷಡೂರ್ಮಯಶ್ಚ ಷಡ್ವರ್ಗೋ ನಾಸ್ತಿ ಅಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಯೋಗವತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಷಟ್ಸ್ಥಲದ ಭೇದವೆಂತೆಂದಡೆ : ಸದಾಚಾರದಲ್ಲಿ ನಡಹ, ಶಿವನಲ್ಲಿ ಭಕ್ತಿಯಾಗಿಹ, ಲಿಂಗಜಂಗಮ ಒಂದೆಯೆಂಬ ಬುದ್ಧಿಯಾಗಿಹ, ಲಾಂಛನಧಾರಿಗಳ ಕಂಡಡೆ ಒಂದಿಸುವುದೀಗ ಭಕ್ತಸ್ಥಲ ನೋಡಾ. ಇದಕ್ಕೆ ಈಶ್ವರ್ದೋವಾಚ : ``ಸದಾಚಾರಂ ಶಿವೇ ಭಕ್ತಿಃ ಲಿಂಗಜಂಗಮೇ ರತಿಃ | ಲಾಂಛನಂ ಚ ಶರಣ್ಯಂ ಚ ಭಕ್ತಿಸ್ಥಲಸುಬುದ್ಧಿಮಾನ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನೊಂದು ಪ್ರಕಾರದ ಅಂಗಸ್ಥಲವೆಂತೆಂದಡೆ : ಐಕ್ಯ ಶರಣಸ್ಥಲವೆರಡು ಯೋಗಾಂಗ. ಪ್ರಾಣಲಿಂಗಿ ಪ್ರಸಾದಿಸ್ಥಲವೆರಡು ಭೋಗಾಂಗ. ಮಾಹೇಶ್ವರ ಭಕ್ತಸ್ಥಲವೆರಡು ತ್ಯಾಗಾಂಗ. ಇದಕ್ಕೆ ಈಶ್ವರ್ದೋವಾಚ : ``ಯೋಗಾಂಗಮೈಕ್ಯಂ ಶರಣಂ ಸ್ಥಲಮಿತ್ಯುಭಯಂ ಭವೇತ್ | ಪ್ರಾಣಲಿಂಗಂ ಪ್ರಸಾದೀತಿ ದ್ವಯಂ ಭೋಗಾಂಗಮಿಷ್ಯತೇ || ಮಾಹೇಶ್ವರಸ್ಥಲಂ ಭಕ್ತಸ್ಥಲಮಿತ್ಯುಭಯಸ್ತಥಾ | ತ್ಯಾಗಾಂಗಂ ಭವೇನ್ನಿತ್ಯಂ ಪ್ರೋಚ್ಯತೇ ಪಾರಮಾರ್ಥಿಕೈಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನೊಂದು ಪ್ರಕಾರದ ಷಡ್ಲಿಂಗನ್ಯಾಸಸ್ಥಲವೆಂತೆಂದಡೆ : ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿ ಆಚಾರಲಿಂಗ ನ್ಯಾಸವಾಗಿಹುದು. ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿ ಗುರುಲಿಂಗ ನ್ಯಾಸವಾಗಿಹುದು. ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿ ಚರಲಿಂಗ ನ್ಯಾಸವಾಗಿಹುದು. ವ್ಯೋಮಾಂಗವಾದ ಶರಣನ ಸುಜ್ಞಾನಹಸ್ತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮಾಂಗವಾದ ಐಕ್ಯನ ಭಾವಹಸ್ತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ಚಿತ್ತಹಸ್ತಂ ಚ ಬುದ್ಧಿಹಸ್ತೇ ಗುರುಸ್ತಥಾ | ಶಿವಲಿಂಗಂ ಚ ಅಹಂಕಾರೇ ಚರಲಿಂಗ ಮನೇ ತಥಾ || ಪ್ರಸಾದಂ ಜ್ಞಾನಹಸ್ತೇ ಚ ಭಾವಹಸ್ತೇ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ರುದ್ಥಿರದಲ್ಲಿ ಆಚಾರಲಿಂಗವಿಹುದು. ಮಾಂಸದಲ್ಲಿ ಗುರುಲಿಂಗವಿಹುದು. ಮೇದಸ್ಸಿನಲ್ಲಿ ಶಿವಲಿಂಗವಿಹುದು. ಅಸ್ಥಿಯಲ್ಲಿ ಚರಲಿಂಗವಿಹುದು. ಮಜ್ಜೆಯಲ್ಲಿ ಪ್ರಸಾದಲಿಂಗವಿಹುದು. ಶುಕ್ಲದಲ್ಲಿ ಮಹಾಲಿಂಗವಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ರುದ್ಥಿರಾಂಗೇತು ಮಾಂಸಾಂಗೇ ಗುರುಲಿಂಗಕಂ | ಮೇಧಾಂಗೇ ಶಿವಲಿಂಗಂ ಚ ಅಸ್ಥ್ಯಂಗೇ ಚರಂ ತಥಾ || ಮಜ್ಜೇ ಪ್ರಸಾದಲಿಂಗಂ ಚ ಶುಕ್ಲಾಂಗೇ ಮಹಾಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನೊಂದು ಪ್ರಕಾರದ ಲಿಂಗೋತ್ಪತ್ಯವದೆಂತೆಂದಡೆ : ಮಹಾಲಿಂಗದಲ್ಲಿ ಪ್ರಸಾದಲಿಂಗ ಹುಟ್ಟಿತ್ತು. ಆ ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು. ಆ ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು. ಆ ಶಿವಲಿಂಗದಲ್ಲಿ ಗುರುಲಿಂಗ ಹುಟ್ಟಿತ್ತು. ಆ ಗುರುಲಿಂಗದಲ್ಲಿ ಆಚಾರಲಿಂಗ ಹುಟ್ಟಿತ್ತು. ಈ ಆರು ಲಿಂಗವು ಒಂದೇ ಲಿಂಗ ನೋಡಾ. ಇದಕ್ಕೆ ಈಶ್ವರ್ದೋವಾಚ : ``ಮಹಾಲಿಂಗ ಸಮಾಖ್ಯಾತಂ ಪ್ರಸಾದಂ ಲಿಂಗಮುದ್ಭವಂ | ತತಃ ಪ್ರಸಾದಲಿಂಗೇ ಚ ಜಂಗಮಂ ಲಿಂಗಮುದ್ಭವಂ || ತಥಾ ಜಂಗಮಲಿಂಗಂ ಚ ಶಿವಲಿಂಗ ಸಮುದ್ಭವಂ | ಶಿವಲಿಂಗ ಯಥಾಚೈವ ಗುರುಲಿಂಗಸಮುದ್ಭವಂ | ಷಟ್ಸ್ಥಲಂ ಚ ಪರಿಜ್ಞೇಯಂ ಏಕೀಭಾವಂ ವಿಶೇಷತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆತ್ಮನೆ ಅಂಗವಾದ ಐಕ್ಯ ಭಾವವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ ಪರಿಣಾಮ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆತ್ಮಾಂಗೋ ಭಾವಹಸ್ತೇನ ಐಕ್ಯಶ್ಚಾಪಿ ಮಹಾತ್ಮನೇ | ಹೃನ್ಮುಖೀ ಅರ್ಪಿತಂಚೈವ ಪದಾರ್ಥಂ ತೃಪ್ತಿಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->