ಅಥವಾ

ಒಟ್ಟು 15 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಧಾರಚಕ್ರದಲ್ಲಿ ನಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಬ್ರಹ್ಮನು ಉತ್ತರಖಂಡಣೆಯೆಂಬ ವೇದವನುಚ್ಚರಿಸುತ್ತಿಹನು. ಸ್ವಾದ್ಥಿಷ್ಠಾನಚಕ್ರದಲ್ಲಿ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ವಿಷ್ಣು ಪ್ರೌಢಲಕ್ಷಿತವೆಂಬ ವೇದವನುಚ್ಚರಿಸುತ್ತಿಹನು. ಮಣಿಪೂರಕಚಕ್ರದಲ್ಲಿ ಶಿಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ರುದ್ರನು ಋಗ್ವೇದವನುಚ್ಚರಿಸುತ್ತಿಹನು. ಅನಾಹತಚಕ್ರದಲ್ಲಿ ವಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಈಶ್ವರನು ಯಜುರ್ವೇದವನುಚ್ಚರಿಸುತ್ತಿಹನು. ವಿಶುದ್ಧಿಚಕ್ರದಲ್ಲಿ ಯಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಸದಾಶಿವ ಸಾಮವೇದವನುಚ್ಚರಿಸುತ್ತಿಹನು. ಆಜ್ಞಾಚಕ್ರದಲ್ಲಿ ಒಂಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಉಪಮಾತೀತನು ಅಥರ್ವಣವೇದವನುಚ್ಚರಿಸುತ್ತಿಹನು. ಬ್ರಹ್ಮರಂಧ್ರದಲ್ಲಿ ಅಕಾರ ಉಕಾರ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಪ್ರಕೃತಿ ವಿಕೃತಿಗಳು ಗಾಯತ್ರಿಯನುಚ್ಚರಿಸುತ್ತಿಹವು. ಇಂತಿವೆಲ್ಲವನರಿದು ಮರದು, ನಿಜಲಿಂಗ ನಿಜಮಂತ್ರಂಗಳಲ್ಲಿ ಪರವಶವಾಗಿರ್ದೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಆಧಾರಲಿಂಗ ಕುಂಡಲಿವಿಡಿದು; ಹೃದಯಕಮಲದಲ್ಲಿ ಬ್ರಹ್ಮ, ನಾಳದಲ್ಲಿ ವಿಷ್ಣು, ನಾಳಾಗ್ರದಲ್ಲಿ ರುದ್ರ, ಭ್ರೂಮಧ್ಯದ ಮೇಲೆ ಈಶ್ವರನು, ಬ್ರಹ್ಮರಂಧ್ರದ ಮೇಲೆ ಸದಾಶಿವನು. ಶಿಖಾಗ್ರದಲ್ಲಿ ಸರ್ವಗತ ಶಿವನು._ ಆದಿ ಅನಾದಿಯಿಲ್ಲದಂದು ಗುಹೇಶ್ವರಲಿಂಗ ನಿರಾಳನು.
--------------
ಅಲ್ಲಮಪ್ರಭುದೇವರು
ಈಶ್ವರನು ಅಲಂಕೃತರೂಪಾಗಿ ಜಗವ ತಾಳಿ ಬಂದಲ್ಲಿ ಮಾಯೆಯೆಂಬ ಶಕ್ತಿ ಜ್ಯೋತಿ ಕಾಣದ ಮರೆಯಲ್ಲಿ ತಮವಡಗಿಪ್ಪ ಭೇದದಂತೆ. ಚಿತ್ತಶುದ್ಧವಿಲ್ಲದವರ ಕರ್ತೃ ಭೃತ್ಯ ಸಂಬಂಧ ಉಭಯಕ್ಕೂಸರಿ. ಅರಿದು ಮಾಡುವಲ್ಲಿ ಅವನ ಅನುವನರಿದು ಮಾಡಿಸಿಕೊಂಬಲ್ಲಿ ಲಾಗಿನ ಪಶುವಿನಂತೆ ಉಭಯಗುಣ ಭೇದ. ಉಭಯಸ್ಥಲ ನಿರತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಮನಕ್ಕೆ ಬಂದಂತೆ ಹಲವುಪರಿಯ ವೇಷವ ತೊಟ್ಟು ಹರಿದಾಡುವ ಜಾತಿಕಾರರ ಈಶ್ವರನು ಮೆಚ್ಚನು; ಸದಾಶಿವನು ಸೈರಣೆಯ ಮಾಡನು. ಬಸವಾದಿ ಪ್ರಮಥರು ಬನ್ನಿ ಕುಳ್ಳಿರಿ ಎನ್ನರು. ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ಕಂಡಡೆ ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು.
--------------
ಅಮುಗೆ ರಾಯಮ್ಮ
ಆದಿಯಲ್ಲಿ ಈಶ್ವರನು ಕೂಗಿದ ಕೂಗ ತ್ರೆ ೈಜಗವೆಲ್ಲಾ ಕೂಗುತ್ತಿದೆ ನೋಡ. ಮುದಿಬಳ್ಳು ಕೂಗಿದ ಕೂಗ ಮರಿಬಳ್ಳುಗಳೆಲ್ಲ ಬಳ್ಳಿಟ್ಟು ಬಗುಳುತ್ತಿಪ್ಪವು ನೋಡ. ಮರಿಬಳ್ಳುಗಳು ಬಗುಳಿದ ಬಗುಳು ಮುದಿಬಳ್ಳುವ ಮುಟ್ಟದಿದೇನು ಸೋಜಿಗವೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ವಾಙ್ಮನಕ್ಕಗೋಚರನಾದ ಕಾರಣ, ಅವರ ನಡೆಯು ನುಡಿಯು ಮುಟ್ಟವು ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
`ಶುದ್ಧ ಶೈವಮಿತಿ ಪ್ರೋಕ್ತಂ| ವೀರಶೈವಮತ ಃ ಶ್ರುಣು':ಈ ಪ್ರಕಾರದಿಂದ ಶುದ್ಧಶೈವವು ನಿರೂಪಿಸಲ್ಪಟ್ಟಿತ್ತು. ಅಲ್ಲಿಂದ ಮೇಲೆ ವೀರಶೈವವನು ಕೇಳು:`ವೀರತಂತ್ರೇ ಸರ್ವೇಷಾಮಪಿ ಶೈವಾನಾಂ ವೀರಶೈವಂ ಮಹೋತ್ತಮಂ|| ಸಲಭಾದೇವ ಪೂಜಾ ಸು | ಸುಲಭಂ ಚ ಕ್ರಿಯಾವಹಂ'|| ಎಲೆ ದೇವಿಯೆ, ಸಮಸ್ತಶೈವಂಗಳೊಳಗೆ ವೀರಶೈವವೆ ಅತ್ಯುತ್ತಮವಾದುದು. ಆ ವೀರಶೈವ ಮಾಡುವ ಶಿವಪೂಜೆ ಲೇಸಾಗಿ ಸುಲಭವಾದಂಥಾದು. ಪೂಜಾದಿಗಳ ಮಾಟವು ಸುಲಭವಹಂಥಾದುದು. ಈಶ್ವರನು ದೇವಿಯರಿಗೆ ನಿರೂಪಿಸುತ್ತಿರ್ದನಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು. ಆ ಘನಲಿಂಗದ ನೆನಹಿನ ಕೊನೆಯಲ್ಲಿ ನಿರವಯವು. ಆ ನಿರವಯದ ನೆನಹಿನ ಕೊನೆಯಲ್ಲಿ ನಿರಾಲಂಬವು. ಆ ನಿರಾಲಂಬದ ನೆನಹಿನ ಕೊನೆಯಲ್ಲಿ ನಿರಾಳವು. ಆ ನಿರಾಳದ ನೆನಹಿನ ಕೊನೆಯಲ್ಲಿ ಆದಿಮಹಾಲಿಂಗವು. ಆ ಆದಿ ಮಹಾಲಿಂಗದ ನೆನಹಿನ ಕೊನೆಯಲ್ಲಿ ಚಿತ್‍ಶಕ್ತಿ. ಆ ಚಿತ್‍ಶಕ್ತಿಯ ನೆನಹಿನ ಕೊನೆಯಲ್ಲಿ ಪರಮೇಶ್ವರನು. ಆ ಪರಮೇಶ್ವರನ ನೆನಹಿನ ಕೊನೆಯಲ್ಲಿ ಪರಾಶಕ್ತಿ. ಆ ಪರಾಶಕ್ತಿಯ ನೆನಹಿನ ಕೊನೆಯಲ್ಲಿ ಸದಾಶಿವನು. ಆ ಸದಾಶಿವನ ನೆನಹಿನ ಕೊನೆಯಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ನೆನಹಿನ ಕೊನೆಯಲ್ಲಿ ಈಶ್ವರನು. ಆ ಈಶ್ವರನ ನೆನಹಿನ ಕೊನೆಯಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ನೆನಹಿನ ಕೊನೆಯಲ್ಲಿ ಮಹೇಶ್ವರನು. ಆ ಮಹೇಶ್ವರನ ನೆನಹಿನ ಕೊನೆಯಲ್ಲಿ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ನೆನಹಿನ ಕೊನೆಯಲ್ಲಿ ಶ್ರೀರುದ್ರಮೂರ್ತಿ. ಆ ಶ್ರೀರುದ್ರಮೂರ್ತಿಯ ನೆನಹಿನ ಕೊನೆಯಲ್ಲಿ ವಿಷ್ಣುವು. ಆ ವಿಷ್ಣುವಿನ ನೆನಹಿನ ಕೊನೆಯಲ್ಲಿ ಮಹಾಲಕ್ಷ್ಮಿ. ಆ ಮಹಾಲಕ್ಷ್ಮಿಯ ನೆನಹಿನ ಕೊನೆಯಲ್ಲಿ ಬ್ರಹ್ಮನು. ಆ ಬ್ರಹ್ಮನ ನೆನಹಿನ ಕೊನೆಯಲ್ಲಿ ಸರಸ್ವತಿ. ಆ ಸರಸ್ವತಿಯ ನೆನಹಿನ ಕೊನೆಯಲ್ಲಿ ಸಕಲ ಚರಾಚರಂಗಳು. ಇಂತಿವೆಲ್ಲವು ಶರಣನ ನೆನಹುದೋರಿದಲ್ಲಿಯೇ ತೋರುತಿರ್ಪವು, ಆ ಶರಣನ ನೆನಹು ನಿಂದಲ್ಲಿಯೇ ಅಡುಗುತಿರ್ಪುವಾಗಿ, ಅಖಂಡೇಶ್ವರಾ, ನಿಮ್ಮ ಶರಣನು ಘನಕ್ಕೆ ಘನಮಹಿಮ, ವಾಙ್ಮನಕ್ಕಗೋಚರನು, ಉಪಮೆಗೆ ಉಪಮಾತೀತನು ನೋಡಾ.
--------------
ಷಣ್ಮುಖಸ್ವಾಮಿ
ಅರಿದರಿದರಿದು ! ಸಮಗಾಣಿಸಬಾರದು, ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದಡೆ ಈಶ್ವರನು ಒಡೆಯಿಕ್ಕದೆ ಮಾಣುವನೆ ಪಾತ್ರ ಅಪಾತ್ರವೆಂದು ಕಂಡಡೆ ಶಿವನೆಂತು ಮೆಚ್ಚುವನು ಜೀವ ಜೀವಾತ್ಮವ ಸರಿಯೆಂದು ಕಂಡಡೆ ಸಮವೇದಿಸದಿಪ್ಪನೆ ಶಿವನು ತನ್ನ ಮನದಲ್ಲಿ `ಯತ್ರ ಜೀವಃ ತತ್ರ ಶಿವ'ನೆಂದು ಸರ್ವಜೀವದಯಾಪಾರಿಯಾದಡೆ, ಕೂಡಲಸಂಗಮದೇವನು ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ
--------------
ಬಸವಣ್ಣ
ಎಲೆ ವೈದಿಕರಿರಾ, ನಿಮಗೆ ಸತ್ವಬಲ ವೇದವಲ್ಲದೆ ಮತ್ತೇನೂ ಇಲ್ಲ. ಆ ವೇದವೆ ಸ್ವಯಂಭುಯೆಂದು ನುಡಿವಿರಿ, ನಾ ನಿಮಗೆ ತಿಳಿಯ ಪೇಳುವೆ. ಆದಿಸಿದ್ಧಾಂತವಿಡಿದು ವೇದ ಸ್ವಯಂಭುವಲ್ಲ. ಆದಿಮೂಲ ಶಿವನಿಂದಾದವೀ ವೇದಂಗಳು ಕೇಳಿರೆ. ಶಿವನಿಂದಾದ ಮೂವತ್ತಾರುತತ್ತ್ವದೊಳೈದನೆಯದು ಆಕಾಶತತ್ತ್ವವು. ಆ ಆಕಾಶತತ್ತ್ವದಿಂದಾದ ಶಬ ವಿಷಯವು ನಿತ್ಯವೆ ಹೇಳಿರೆ. ಪಂಚಭೂತಂಗಳೊಳಗೊಂದು ಭೂತವಿಷಯವಾ ಶಬ್ಧ. ಆ ಶಬ್ದ ಸಂಬಂಧವಾದ ವೇದಕ್ಕೆ ನಿತ್ಯವೆಲ್ಲಿಯದು ಹೇಳಿರೆ. ಆ ವೇದ ತನಗೆ ತಾನಾದುದೆಂಬಿರೆ. ಎಂಬಿರಾದಡೆ ಪ್ರಳಯಾಂತಕಾಲದಲ್ಲಿ ಅಳಿಯವೀ ವೇದಾದಿ ವಿದ್ಯೆಗಳು. ಜಗತ್ ಸೃಷ್ಟಿಕಾಲದಲ್ಲಿ ಆದಿಕರ್ತಾರ ಸೃಷ್ಟಿ ಸ್ಥಿತಿ ಲಯ ಪ್ರೇರಕಶಿವನಿಂದಾದವು ಕೇಳಿರೆ. ಚರಣಬಹ ಸೂಕ್ತಿಗಳಲ್ಲಿ ಕೇಳ್ದರಿಯಿರೆ. ಋಗ್ವೇದಕ್ಕೆ ದೇಹ ಉರುವರ್ಣ, ಅತ್ರಿಗೋತ್ರ, ಗಾಯತ್ರಿ ಛಂದ, ಅಧಿದೇವತೆ ಬ್ರಹ್ಮ. ಯಜುರ್ವೇದಕ್ಕೆ ಅಬ್ಜದಳಾಯತ ನೇತ್ರ, ಕುಂಚಿತ ಚಿಬುಕು ಮುಂಗೂರ ಮೀಸೆ, ತಾಮ್ರವರ್ಣದೇಹ, ಭಾರದ್ವಾಜಗೋತ್ರ, ತ್ರಿಷ್ಟುಪ್ ಛಂದ, ಅಧಿದೇವತೆ ವಿಷ್ಣು. ಸಾಮವೇದಕ್ಕೆ ದೇಹ ಶ್ವೇತವರ್ಣ, ಕಾಶ್ಯಪಗೋತ್ರ, ಜಗತಿ ಛಂದ, ಅಧಿದೇವತೆ ಈಶ್ವರನು. ಧವಳಶೃಂಗವೆರಡು ಅಥರ್ವಣವೇದಕ್ಕೆ ದೇಹ, ಕೃಷ್ಣವರ್ಣ, ವೈಭಾನುಗೋತ್ರ, ಅನುಷ್ಟುಪ್ ಛಂದ, ಅಧಿದೇವತೆ ಇಂದ್ರನು. ಇಂತು ಶ್ರುತಿಗಳಿಗೆ ಶರೀರವರ್ಣ, ಗೋತ್ರ, ಛಂದ, ಅಧಿದೇವತೆಗಳಿಂತಿರಲು, ತಮಗೆ ತಾವಾದವೆಂದು ನೀವು ನುಡಿವ ಪರಿ ಹೇಗೆ ಹೇಳಿರೆ ವೈದಿಕರಿರಾ. ಇವೇ ನಿತ್ಯವೆಂಬಿರಾದಡೆ ಲಯಗಮನಸ್ಥಿತಿಯುಂಟು ಕೇಳಿರೆ. ಹೃದಯ ದೈವ ಗಾಯಿತ್ರಿ ಸರ್ವವೇದೋತ್ತಮೋತ್ತಮ ಲಿಯಂಕೇ ಮೂದ್ರ್ನಿ ವೈವೇದಾಸಷದೊ ಎನಲು, ಆತ್ಮದೃಷ್ಟಿ ನೇತ್ರದೃಷ್ಟಿಯ ಪ್ರಮಾಣದಿಂ ನಮ್ಮ ಟರುರಿವಿಂದರಿದೆವೆಂಬರೆ, ನಿಮ್ಮ ನೀವರಿಯದವರು ಈ ಜಗದಾದಿಯನೆಂತರಿದಿರೆನಲು, ಜ್ಞಾನಸಾಧನವಹ ಶಾಸ್ತ್ರಾದಿಗಳಿಂದ ಜ್ಞಾನೇಂದ್ರಿಯ ಪ್ರಮಾಣ ನೇತ್ರದಿಂದರಿದವೆನಲು, ನಿಮಗೆ ಜ್ಞಾನೇಂದ್ರಿಯ ಸಾಧನ ನೇತ್ರಗಳೆಲ್ಲಿಯವು. ಈಶ್ವರನ ನಯನಾಶ್ವವೆನಿಸುವ ರವಿಚಂದ್ರಾಗ್ನಿ ತೇಜಸ್ಸಿಂದಲ್ಲದೆ, ಜಾತ್ಯಂಧರು ನೀವು ನಿಮಗೆಲ್ಲಿಯ ದೃಷ್ಟಿವಾಳತನ. ಅತಿಮತಿವಂತರೆನಿಸುವ ದೇವತೆಗಳುಂ ಕಾಣಲರಿಯರು. ಮತಿವಿಕಳರು ನೀವು ಕಾಣಲರಿದಿರೆಂತು ಜಗದಾಗುಹೋಗುಗಳ. ನೋಡಿಯರಿದೆವೆನಲು ಜಗವನಾಡಿ ನೀವು ಮೊನ್ನಿನವರು, ಸಾಮಾನ್ಯಮನುಜರು : ಜಗದನಾದಿಯ ನೀವೆಂತರಿದಿರೆನಲು, ಅದು ಕಾರಣ, ಜಗ ನಿರ್ಮಾಣಕ ಜಗ ಭ್ರಮಣ ಲೀಲಾಲೋಲ ಜಗದಂತರ್ಯಾಮಿ ಜಗತ್ರೈರಕ್ಷಕನೊಬ್ಬನೆಯರಿವ ನಿಮಗರುವಿಲ್ಲೆನಲು, ವೇದ ಶಾಸ್ತ್ರಾಗಮಾದಿಗಳಿಂ ಪ್ರಮಾಣಿಸಿ ಅರಿದೆವೆನಲು, ನಿಮಗೆ ಶ್ರುತಿ ಪ್ರಮಾಣ ಯೋಚನೆಯದೆಲ್ಲಿಯದು `ಜಗತಾಂ ಪತಯೇ ನಮಃ' ಎಂದು ಶ್ರುತಿಯಿರಲು, ಇದು ಕಾರಣ, ವೇದಾದಿಶಾಸ್ತ್ರಂಗಳಿಂದ ನಿಮಗೇನು ಆಗದು, ಪಾಠಕರರುಹಿರಲ್ಲದೆ. ಶ್ರುತಿಃ `ಶಿವೋ ಮಾಯೇವ ಪಿತರೌ' ಎನಲು, ಶಿವನೇ ವೇದಂಗಳಿಗೆ ತಂದೆ ತಾಯಾಗಿರಲು, ಜಗತ್ತಿಂಗೊಡೆಯನಾಗಿರಲು, `ಪಿತಾತದಸ್ಯಮಾ' ಎಂದು ಪಿತನೆ ಶಿವನು ತಾಯಿಪುತ್ರರೆಂದೆನಲು, ವೇದಸ್ವಯಂಭು ಜಗನಿತ್ಯವೆಂಬ ಪರಿಯೆ ಹೇಂಗೆ ಹೇಳಿರೆ. ಪೂರ್ವದಲ್ಲಿ ವೇದಪುರುಷರು, ಶಾಂಭವವ್ರತಿಗಳು, ಪಾಶುಪತವ್ರತಸ್ಥರು, ಶಿವಸಿದ್ಧಾಂತ ಭಕ್ತಿನಿಷಾ* ಸಾವಧಾನವ್ರತರು. ವೇದಾಧಾರಯಂತಿ ಎನಲು, ರುದ್ರಾಕ್ಷಧಾರಣ ಚತುರ್ವಿಧವ್ರತಿಗಳಿಗೆ ಮುಖ್ಯ ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯತ್ರಿಯಾಯುಷಂ | ಅಗಸ್ತಸ್ಯ ತ್ರಿಯಾಯುಷಂ ಯದ್ದೇವಾನಾಂ ತ್ರಿಯಾಯುಷಂ | ತನ್ಮೇ ಅಸ್ತು ತ್ರಿಯಾಯುಷಂ' ಎನಲು, ಭಸ್ಮಾವಾಲಿಪ್ತರು ತ್ರಿಪುಂಡ್ರಾಂಕಿತನಿಷ*ರಾಗಿರದೆ, `ವೇದಾಶ್ಚಕಾವಯಂತಿ' ಎನಲು, `ತದಾಸ್ಮಾಮಿ' ಎನಲು, ತದಾಸ್ಮಾಮಿಯನೆ ಶಿವಚರಣಸಲಿಲ ಪ್ರಸಾದ ಸುಭೋಗ ಸಾವಧಾನಿಗಳೆಂದು ತಾವೆ ಹೇಳುತ್ತಿರಲು, ವೇದಾಗಮಶಾಸ್ತ್ರಗಳಿಗೂ ಪಂಚಾಕ್ಷರಿಮಂತ್ರಗಳಲ್ಲಿಯೆ ಉದಯ ಸ್ಥಿತಿಲಯವೆನ್ನುತಿರಲು, ನೀವಾ ವೇದಂಗಳ ಸ್ವಯಂಭೂಯೆಂದೂ ನಿತ್ಯವೆಂದೂ ಜಗವನೆನಬಹುದೆ. ಅದು ಕಾರಣ, ಈ ಜಗಂಗಳನು ತನ್ನ ಲೀಲೆಯಿಂದಲೆ ನಿರ್ಮಿಸುವ ಭವನೆನಿಸಿ, ತನ್ನ ಲೀಲೆಯಿಂದಲೆ ರಕ್ಷಿಸುವ ಮೃಡನಾಗಿ, ತನ್ನ ಲೀಲೆ, ಈ ಲೀಲೆಯಿಂದಲೆ ಸಂಹರಿಸುವ ಹರನಾಗಿ, ಲೀಲಾತ್ರಯರಹಿತನಾಗಿ ಶಿವನೆನಿಸುವ, || ಶ್ರುತಿ || `ಆದಿ ವೇದಸ್ಯ ಶಾಸ್ತ್ರಾಣಿ ಮಂತ್ರ ಪಂಚಾಕ್ಷರೇ ಸ್ಥಿತಾ' ಎಂದುದಾಗಿ, ಇದು ಕಾರಣ, ಉದ್ದೈಸುವ ರಕ್ಷಿಸುವ ಸಂಹರಿಪ ಭವಮೃಡಹರನಾದ ಶಿವನಿರಲು, ನೀವು ವೇದಸ್ವಯಂಭು ಜಗನಿತ್ಯವೆನಲಾಗದು. ||ಶ್ರುತಿ|| `ಪರವೋ ಭವಂತಿ' ಎನಲು, ವೇದ ದೇವತಾ ಸೃಷ್ಟಿಯೆನಲು, ಈಹಿಂಗೆ ವೇದಂಗಳು ಶಿವನಿಂದ ತಮಗೆ ಉದಯಸ್ಥಿತಿಲಯವೆನಲು, ಈ ಜಗ ಸೃಷ್ಟಿಸ್ಥಿತಿಲಯ ಕಾರಣ ಸರ್ವಜ್ಞ ಸರ್ವೇಶ್ವರ ಸರ್ವಕರ್ತು `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎನಲು, ಒಬ್ಬನೆ ಶಿವನು ಎರಡೆನಿಪ ದೇವರಾರುಯಿಲ್ಲವೆಂದರಿದಿರಿ. ವೈದಿಕರಿರಾ, ವೇದಸ್ವಯಂಭುವಲ್ಲ ಶಿವನ ಶಿಶುಗಳು. ಜಗವು ನಿತ್ಯವಲ್ಲ. ಶಿವನ ಆಜ್ಞಾವಶವರ್ತಿಗಳು. ಅಹಂಗಾಗಲದಕ್ಕೇನು ವೈದಿಕಾಚರಣೆಯನಾಚರಿಸುವ ವೈದಿಕ ವ್ರತಿಗಳಿಗೆ ಸಾಧನವೆನಿಸುವ ವೇದಮಂತ್ರಂಗಳೆ ದೈವವೆನಲು, ವೇದಂಗಳೆ ದೈವವಾದಡೆ ಪಕ್ಷೀಶ್ವರನ ಕೈಯ ಸಿಲುಕುವುದೆ. ವೇದವೆ ದೈವವಾದಡೆ ಮುನೀಶ್ವರನಿಂದ ಅಳಿದುಹೋಗಿ ವೇದವ್ಯಾಸನಿಂದ ಪ್ರತಿಷಿ*ತವಹುದೆ. ವೇದವೆ ದೈವವಾದಡೆ ಶುನಕನಪ್ಪುದೆ, ವೇದವೆ ದೈವವಾದಡೆ ದಕ್ಷನಳಿವನೆ. ವೇದವೆ ದೈವವಾದಡೆ ತಮ್ಮಜನ ಶಿರಹೋಹಂದು ಸುಮ್ಮನಿಹವೆ. ವೇದವೆ ದೈವವಾದಡೆ ಕವಿತೆಗೊಳಗಾಹುದೆಯೆಂದು ಎನಲು, `ಆಘ್ರಾಯಘ್ರಾಯಾವದಂತಿ ವೇದ ಶ್ವಾನಶ್ಶನೈಶ್ಚನೈಃ ಯತ್ಸದಾನಿಮಹಾದಿವಾಂತಂ ವಂದೇ ಶಭರೇಶ್ವರಂ' ಇಂತೆಂದುದಾಗಿ, ಇದು ಕಾರಣ, ಶಿವನೇ ಸ್ವಯಂಭು ನಿತ್ಯವೆಂದರಿದ ವಿಪ್ರರೇ ವೈದಿಕೋತ್ತಮರು, ಬಸವಪ್ರಿಯ ಕೂಡಲಚೆನ್ನಸಂಗಯ್ಯ.
--------------
ಸಂಗಮೇಶ್ವರದ ಅಪ್ಪಣ್ಣ
ಕುರುಡಂಗೆ ಕನ್ನಡಿಯ ತೋರಿದಡೆ ಆ ಕುರುಡಂಗೆ ಮುಖ ಕಾಣಲಾರದು ನೋಡಾ. ತುಡುಗಂಗೆ ಜ್ಞಾನವ ಹೇಳಿದರೆ ಆ ತುಡುಗ ಗಡಣದ ಬೆಳಗ ಬಲ್ಲನೇನಯ್ಯ ? ಪೊಡವಿಗೊಡೆಯ ಈಶ್ವರನು ತನ್ನ ಮಾರ್ಗದಲ್ಲಿ ನಡೆವರ ಕಂಡು, ಕೂಡಿಕೊಂಡಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
`ಇತಿ ವ್ರತಸಮಾಯುಕ್ತೋ ವೀರಶೈವೋ' ವಿಶಿಷ್ಟತೇ ಇತ್ಯಾದಿ ವ್ರತಂ ಗಳೊಡನೆ ಮಾಡಿ ದಾತನೆ ವೀರಶೈವವನೆಂದು ವಿಶೇಷಿಸಲ್ಪಡುತ್ತಿಹನಯ್ಯ. `ವಿಶೇಷ ಶೈವಮಾಖ್ಯಾತಂ ನಿರಾಭಾರಂ ತತಃ ಶ್ರುಣು' ಎಂದುದಾಗಿ, ಈ ಪ್ರಕಾರದಿಂ ವಿಶೇಷ ವೀರಶೈವವೆಂಬ ಭಕ್ತಸ್ಥಲವು ಹೇಳಲ್ಪಟ್ಟಿತ್ತು. ಆನಂತರದಲ್ಲಿ ನಿರಾಭಾರಿವೀರಶೈವವೆಂಬ ಜಂಗಮಸ್ಥಲಮಂ ಕೇಳೆಂದು ಈಶ್ವರನು ಷಣ್ಮುಖ ದೇವರಿಗೆ ನಿರೂಪಿಸುತ್ತಿರ್ದನಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
`ಏಕಕಾಲಂ ದ್ವಿಕಾಲಂ ವಾ ತ್ರಿಕಾಲಂ ವಾ ಸಮರ್ಚಯೇತ್ | ಓಂ' ಎಂದು ಒಂದು ವೇಳೆಯಾದರೆಯೂ ಎರಡು ವೇಳೆಯಾದರೆಯೂ ಮೂರು ವೇಳೆ ಯಾದರೆಯೂ ಶಿವಪೂಜೆಯ ಮಾಡುವುದು ಎಂದು ಈಶ್ವರನು ನಿರೂಪಿಸಿ ದನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಶಿವನು ಸರ್ವಗತನು, ಸಕಲಬ್ರಹ್ಮಾಂಡಗಳಿಗೆಲ್ಲ ಸಕಲನೆಂದು ಹೇಳಿತ್ತು ಶ್ರುತಿ. `ವಿಶ್ವತಶ್ಚಕ್ಷುರುತ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂದು ಶ್ರುತಿ ಸಕಲಜೀವಚೈತನ್ಯ ಶಿವನೆಂದು ಹೇಳಿತ್ತು, ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಸದ್ಭಕ್ತರ ಶ್ರೀಮೂರ್ತಿಗಿನ್ನು ಸರಿ ಉಂಟೆ ? ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯಂ ತತ್ಪರಮಂ ಪದಂ ಇಂತಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿ ನುಡಿಸಿ ಏಕರಾತ್ರಿ ಸಂಭಾಷಣೆಯ ಮಾಡಿದಡೆ ಜನ್ಮಕರ್ಮನಿವೃತ್ತಿ, ಜೀವನ್ಮುಕ್ತನಹನು ಇದು ಸತ್ಯ ಕೇಳಿರಣ್ಣಾ. ದರ್ಶನಾತ್ ಶಿವಭಕ್ತಾನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ ಎಂದು ನಾರದೀಯ ಬೋಧೆಯಲ್ಲಿ ಈಶ್ವರನು ಹೇಳಿಹನು. ಇಂತಪ್ಪ ಈಶ್ವರನ ಕಾಣವು ವೇದಂಗಳು. ಇಂತು ವೇದಕ್ಕತೀತವಹಂತಹ ಶಿವಶರಣರ ಮಹಾತ್ಮೆಯ ಹೊಗಳಲಿಕ್ಕೆ ವೇದಕ್ಕಳವಲ್ಲ, ಮಂದಮತಿ ಮಾನವರ ಮಾತದಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎನುತಿಪ್ಪೆ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
`ತತ್ರಾದೌ ಪ್ರವಕ್ಷ್ಯಾಮಿ ವೀರಸಾಮಾನ್ಯಲಕ್ಷಣಂ':ಈ ತ್ರಿವಿಧ ವೀರಶೈವ ದಲ್ಲಿ ಮೊದಲು ಸಾಮಾನ್ಯವೀರಶೈವ ಲಕ್ಷಣವನು ಲೇಸಾಗಿ ಹೇಳಿಹೆನೆಂದು ಷಣ್ಮುಖದೇವರಿಗೆ ಈಶ್ವರನು ಉಪದೇಶಿಸುತ್ತಿರ್ದರಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು ಬ್ರಹ್ಮನು. ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತನು ವಿಷ್ಣುವು. ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತನು ರುದ್ರನು. ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತನು ಈಶ್ವರನು. ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಸದಾಶಿವನು. ಅಂಗಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಉಪಮಾತೀತನು_ ಇವರೆಲ್ಲರೂ ಬಯಲನೆ ಪೂಜಿಸಿ ಬಯಲಾಗಿ ಹೋದರು. ನಾನು ನಿತ್ಯವ ಪೂಜಿಸಿ ಮಿಥ್ಯವಳಿದ ಇರವಿನಲ್ಲಿ ಸುಖಿಯಾದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->