ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈರೇಳುಲೋಕವ ಕೋಡಗ ನುಂಗಿತ್ತ ಕಂಡೆ. ನುಂಗಿದ ಕೋಡಗವ ಗುಂಗುರ ನುಂಗಿತ್ತು. ಗುಂಗುರ ಬಂದು ಕಣ್ಣ ಕಾಡಲಾಗಿ, ಕಣ್ಣಿನ ಕಾಡಿಗೆ ಅಳಿಯಲಾಗಿ, ಕಣ್ಣಿನ ಬಣ್ಣ ಕೆಟ್ಟಿತ್ತು. ಕಣ್ಣಿನ ಒಡೆಯ ನೋಡಿ ಗುಂಗುರ ಒರಸಲಾಗಿ, ಆ ಗುಂಗುರ ಸತ್ತು, ಕೋಡಗ ಉಳಿಯಿತ್ತು. ಆ ಕೋಡಗವನಾಡಿಸಿಕೊಂಡುಂಬ ಜೋಗಿಗಳಿಗೇಕೆ, ಆ ರೂಢನ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಚ್ಛಾಶಕ್ತಿ ತನ್ನ ಗರ್ಭದಲ್ಲಿ ಈರೇಳುಲೋಕವ ಹೆತ್ತಳು ನೋಡಾ. ಆ ಲೋಕಾಧಿಲೋಕಂಗಳೊಳಗೆ ತಾನೇಕಾಕಿಯಾಗಿ ಆ ಲೋಕದ ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗದೆ ನಿತ್ಯಳಾಗಿಪ್ಪಳು ನೋಡಾ. ಆ ಇಚ್ಛಾಶಕ್ತಿ ನಿಶ್ಚಿಂತನ ನೆರೆದು ನಿರಾಳವಾದುದು ತಾನೆಂದು ಕಂಡಾತನ[ನು] ಸರ್ವಜ್ಞ ಶರಣೆನೆಂಬೆನು. ಆತನ ಅಲ್ಲಮಪ್ರಭುವೆಂಬೆನು. ಆ ಪರಮ ನಿರಂಜನಪ್ರಭುವಿಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರ ಹೊರಗಣ ಮನೆಯೊಳಗೊಂದು ಉರಿಗಣ್ಣು ಹುಟ್ಟಿ, ಈರೇಳುಲೋಕವ ನುಂಗಿ ಊರೆಲ್ಲವ ಸುಟ್ಟಿತ್ತು ನೋಡಾ. ಊರ ಸುಟ್ಟ ಉರಿಗಣ್ಣು ಅದು ಆರಿಗೂ ಕಾಣಬಾರದು. ಅದು ಮಾರಾರಿ ತಾನೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->