ಅಥವಾ

ಒಟ್ಟು 103 ಕಡೆಗಳಲ್ಲಿ , 19 ವಚನಕಾರರು , 68 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಏನೂ ಏನೂ ಇಲ್ಲದಂದು, ಆದಿಕುಳದುತ್ಪತ್ಯವಾಗದಂದು, ಚಂದ್ರಧರ ವೃಷಭವಾಹನರಿಲ್ಲದಂದು, ಕಾಲಸಂಹರ ತ್ರಿಪುರಸಂಹರರಿಲ್ಲದಂದು, ಕಾಮನ ಭಸ್ಮವ ಪೂಸದಂದು ದೇವಿಯರಿಬ್ಬರಿಲ್ಲದಂದು, ಹರಿಯ ಹತ್ತವತಾರದಲ್ಲಿ ತಾರದಂದು, ಬ್ರಹ್ಮನ ಶಿರವ ಹರಿಯದಂದು, ಇವಾವ ಲೀಲೆಯದೋರದಂದು, ನಿಮಗನಂತನಾಮಂಗಳಿಲ್ಲದಂದು, ಅಂದು ನಿಮ್ಮ ಹೆಸರೇನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು, ಆಕಾಶ ಆತ್ಮವಿಲ್ಲದಂದು, ರವಿ ಶಶಿಗಳಿಲ್ಲದಂದು, ಸಪ್ತೇಳುಸಾಗರವಿಲ್ಲದಂದು, ಅಷ್ಟಕುಲಪರ್ವತಂಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿಶ್ಚಿಂತ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ರವಿ ಶಶಿಗಳಿಲ್ಲದಂದು, ಕತ್ತಲೆ ಕಾಳಾಂಧಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳು ಇಲ್ಲದಂದು, ಅತ್ತತ್ತಲೆ ತಾನೆ ತಂದೆಯಾಗಿದ್ದೆಯಯ್ಯ. ತನಗೆ ಮಕ್ಕಳು ಬೇಕಾಗಿ ನೆನಹಂಗೈಯಲು. ಓಂಕಾರವೆಂಬ ಪ್ರಣವ ಪುಟ್ಟಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರಂಗಳಾದವು ನೋಡಾ. ಅಕಾರ ಉಕಾರ ಮಕಾರಂಗಳೊಡನೆ ಷಡಕ್ಷರಂಗಳು ಆದವು ನೋಡಾ. ಆ ಷಡಕ್ಷರಂಗಳೊಡನೆ ಷಟ್ಚಕ್ರಂಗಳಾದವು ನೋಡಾ. ಆ ಷಟ್ಚಕ್ರಂಗಳೊಡನೆ ಷಡ್ವಿಧಮೂರ್ತಿಗಳಾದವು ನೋಡಾ. ಆ ಷಡ್ವಿಧಮೂರ್ತಿಗಳೊಡನೆ ಷಡ್ವಿಧಲಿಂಗವಾದವು ನೋಡಾ. ಆ ಷಡ್ವಿಧಲಿಂಗದೊಡನೆ ಷಡ್ವಿಧಶಕ್ತಿಯರಾದರು ನೋಡಾ. ಆ ಷಡ್ವಿಧಶಕ್ತಿಯರೊಡನೆ ಷಡ್ವಿಧಭಕ್ತಿಯಾಯಿತು ನೋಡಾ. ಆ ಷಡ್ವಿಧಭಕ್ತಿಯನರಿತು ನಾದಬಿಂದುಕಲೆಗಳ ಮೀರಿ ಪರಕೆ ಪರವಾದ ಲಿಂಗವನಾಚರಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜಗವಿದ್ದಂದು ನೀನೆ, ಜಗವಿಲ್ಲದಂದು ನೀನೆ ; ಪಂಚಶತಕೋಟಿ ವಿಸ್ತೀರ್ಣ ಭೂಮಂಡಲವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಈರೇಳುಭುವನ ಹದಿನಾಲ್ಕು ಲೋಕವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆದಿ ಇದ್ದಂದು ನೀನೆ, ಆದಿ ಇಲ್ಲದಂದು ನೀನೆ ; ಅನಾದಿ ಇದ್ದಂದು ನೀನೆ, ಅನಾದಿ ಇಲ್ಲದಂದು ನೀನೆ ; ನಾದ ಬಿಂದು ಕಳೆ ಇದ್ದಂದು ನೀನೆ, ಅವು ಇಲ್ಲದಂದು ನೀನೆ ; ಸಾವಯವ ನಿರವಯವವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆದಿಮೂಲ ಅನಾದಿಮೂಲವಿಲ್ಲದಂದು, ಅಜಾಂಡ ಬ್ರಹ್ಮಾಂಡವಿಲ್ಲದಂದು, ವೇದಾಂತ ಸಿದ್ಧಾಂತವಿಲ್ಲದಂದು, ವ್ಯೋಮ ವ್ಯೋಮಾಕಾಶವಿಲ್ಲದಂದು, ಜೀವಹಂಸ ಪರಮಹಂಸರಿಲ್ಲದಂದು, ಅಜಪೆ ಗಾಯತ್ರಿ ಇಲ್ಲದಂದು, ಅನಂತಕೋಟಿ ವೇದಾಗಮ ಶಾಸ್ತ್ರಪುರಾಣಂಗಳಿಲ್ಲದಂದು, ಭಾವ ನಿರ್ಭಾವವಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಆದಿ ಅನಾದಿಗಳಿಲ್ಲದಂದು, ನಾದ ಬಿಂದು ಕಳೆ ಮೊಳೆದೋರದಂದು, ದೇಹ ದೇಹಿಗಳುತ್ಪತ್ತಿಯಾಗದಂದು, ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು, ಸಕಲ ಸಚರಾಚರಂಗಳ ಸುಳುಹಿಲ್ಲದಂದು, ಇವೇನುಯೇನೂ ಇಲ್ಲದಂದು, ನೀನು ಶೂನ್ಯನಾಗಿರ್ದೆಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಹಂಕಾರಗಳಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ಸತ್ವ ರಜ ತಮಗಳಿಲ್ಲದಂದು, ಅಂತಃಕರಣಚತುಷ್ಟಯಂಗಳಿಲ್ಲದಂದು, ಪಂಚೇಂದ್ರಿಯಂಗಳಿಲ್ಲದಂದು, ಅರಿಷಡ್ವರ್ಗಂಗಳಿಲ್ಲದಂದು, ಸಪ್ತವ್ಯಸನಂಗಳಿಲ್ಲದಂದು, ಅಷ್ಟಮದಂಗಳಿಲ್ಲದಂದು, ದಶವಾಯುಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿರುಪಮ ಮಹಾಘನ ಅಘಟಿತಘಟಿತ ಅಪರಂಪರ ವಿಶ್ವಂಭರಿತ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಿರಿಯರಾದಡೇನು ? ಹಿರಿಯರಾದಡೇನು ? ಅರಿವಿಂಗೆ ಹಿರಿದು ಕಿರಿದುಂಟೆ ? ಆದಿ ಅನಾದಿ ಇಲ್ಲದಂದು, ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಆದಿ ಅನಾದಿ ಇಲ್ಲದಂದು, ಸ್ಥಿತಿಗತಿ ಉತ್ಪನ್ನವಾಗದಂದು ಭಕ್ತಿಯನುಭಾವಿಯ ಬಸುರೊಳಗೆ ಸತ್ಯಜ್ಞಾನವೆಂಬ ಶಾಸ್ತ್ರಂಗಳು ಹುಟ್ಟಿದವು. ಆ ಶಾಸ್ತ್ರದೊಳಡಗಿದವು ವೇದಪುರಾಣಾಗಮಂಗಳು. ಆ ಆಗಮಂಗಳೊಳಡಗಿದವು ಐವತ್ತೆರಡಕ್ಷರಂಗಳು ಆ ಅಕ್ಷರಂಗಳೊಳಡಗಿದವು ಇಪ್ಪತ್ತೇಳು ನಕ್ಷತ್ರಂಗಳು. ಆ ಇಪ್ಪತ್ತೇಳು ನಕ್ಷತ್ರಂಗಳೊಳಡಗಿದವು ಈರೇಳು ಲೋಕದ ಗಳಿಗೆ ಜಾವ ದಿನ ಮಾಸ ಸಂವತ್ಸರಂಗಳು. ಇಂತಿವೆಲ್ಲವನು ಒಳಗಿಟ್ಟುಕೊಂಡಿಹಾತ `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಹೊರಗಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಉಳಿದಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಮತ್ತಿದ್ದ ಯೋನಿಜರೆಲ್ಲರೂ ಶಾಪಹತರಾಗಿ ಹೋದರು. ಇದು ಕಾರಣ- `ಓಂ ನಮಃ ಶಿವಾಯ ಎಂಬಾತನೆ ಲಿಂಗವು ಪಂಚಾಕ್ಷರಿಯೆ ಪರಮೇಶ್ವರನು, ಪಂಚಾಕ್ಷರಿಯೆ ಪರಮತತ್ವ, ಪಂಚಾಕ್ಷರಿಯೆ ಪರಮಯೋಗ, ಪಂಚಾಕ್ಷರಿಯೆ ಪರಂಜ್ಯೋತಿ, ಪಂಚಾಕ್ಷರಿಯೆ ಪಾಪಾಂತಕ. `ನ ಎಂಬಕ್ಷರವೆ ದೇವರ ಚರಣ, `ಮ ಎಂಬಕ್ಷರವೆ ದೇವರ ಒಡಲು, `ಶಿ ಎಂಬಕ್ಷರವೆ ದೇವರ ಹಸ್ತ, `ವಾ ಎಂಬಕ್ಷರವೆ ದೇವರ ನಾಸಿಕ, `ಯ ಎಂಬಕ್ಷರವೆ ದೇವರ ನೇತ್ರ. ಮತ್ತೆ ; `ನ ಎಂಬಕ್ಷರವೆ ದೇವರ ದಯೆ, `ಮ ಎಂಬಕ್ಷರವೆ ದೇವರ ಶಾಂತಿ, `ಶಿ ಎಂಬಕ್ಷರವೆ ದೇವರ ಕ್ರೋಧ, `ವಾ ಎಂಬಕ್ಷರವೆ ದೇವರ ದಮನ, `ಯ ಎಂಬ ಅಕ್ಷರವೆ ದೇವರ ಶಬ್ದ, ಮತ್ತೆ ; `ನ ಎಂಬಕ್ಷರವೆ ಪೃಥ್ವಿ, `ಮ ಎಂಬಕ್ಷರವೆ ಅಪ್ಪು, `ಶಿ` ಎಂಬಕ್ಷರವೆ ಅಗ್ನಿ, `ವಾ ಎಂಬಕ್ಷರವೆ ವಾಯು, `ಯ ಎಂಬಕ್ಷರವೆ ಆಕಾಶ. ಮತ್ತೆ; `ನ ಎಂಬಕ್ಷರವೆ ಬ್ರಹ್ಮ, `ಮ ಎಂಬಕ್ಷರವೆ ವಿಷ್ಣು, `ಶಿ ಎಂಬಕ್ಷರವೆ ರುದ್ರ, `ವಾ ಎಂಬಕ್ಷರವೆ ಶಕ್ತಿ, `ಯ ಎಂಬಕ್ಷರವೆ ಲಿಂಗ, ಇಂತು ಪಂಚಾಕ್ಷರದೊಳಗಳಿವಕ್ಷರ ನಾಲ್ಕು, ಉಳಿವಕ್ಷರ ಒಂದು. ಈ ಪಂಚಾಕ್ಷರವನೇಕಾಕ್ಷರವ ಮಾಡಿದ ಬಳಿಕ ದೇವನೊಬ್ಬನೆ ಎಂದರಿದು, ಬ್ರಹ್ಮ ದೈವವೆಂಬ ಬ್ರಹ್ಮೇತಿಕಾರರನೇನೆಂಬೆನಯ್ಯ ! ವಿಷ್ಣು ದೈವವೆಂಬ ವಿಚಾರಹೀನರನೇನೆಂಬೆನಯ್ಯ ! ಅಶ್ವಿನಿ ಭರಣಿ ಕೃತ್ತಿಕೆ ಮೊದಲಾದ ಇಪ್ಪತ್ತೇಳು ನಕ್ಷತ್ರಂಗಳೊಳಗೆ, ಮೂಲಾನಕ್ಷತ್ರದಲ್ಲಿ (ವಿಷ್ಣು) ಹುಟ್ಟಿದನಾಗಿ ಮೂಲನೆಂಬ ಹೆಸರಾಯಿತ್ತು. ದೇವರ ಸೇವ್ಯಕಾರ್ಯಕ್ಕೆ ಪ್ರಾಪ್ತನೆಂದು ವೇದಂಗಳು ಬಿನ್ನೈಸಲು, ಜ್ಯೋತಿಷ್ಯಜ್ಞಾನ ಶಾಸ್ತ್ರಂಗಳು ಹುಸಿಯಾದೆವೆಂದು ನಿಮ್ಮ ಹರಿಯ ಅಡವಿಯಲ್ಲಿ ಬೀಸಾಡಲು, ಅಲ್ಲಿ ಆಳುತ್ತಿದ್ದ ಮಗನ ಭೂದೇವತೆ ಸಲಹಿ, ಭೂಕಾಂತನೆಂಬ ಹೆಸರುಕೊಟ್ಟು, ಭೂಚಕ್ರಿ ತನ್ನ ಪ್ರತಿರೂಪ ತೋಳಲ್ಲಿ ಸೂಡಿಸಿ ಶಿವಧರ್ಮಾಗಮ ಪೂಜೆ ಭಕ್ತಿಯಲ್ಲಿ ಯುಕ್ತನ ಮಾಡಿದ ಬಳಿಕ, ಮತ್ತೆ ನಮ್ಮ ದೇವರ ಶ್ರೀಚರಣದಲ್ಲಿರ್ದು ಒಳಗೆ ತೋರಲು ದೇವರು ಪುರಾಣಂಗ? ಕರೆದು ವಿಷ್ಣುವಿನ ಪಾಪಕ್ಷಯವ ನೋಡಿ ಎಂದರೆ ಆ ಪುರಾಣಂಗಳಿಂತೆಂದವು; ``ಪಾಪಂತು ಮೂಲನಕ್ಷತ್ರಂ ಜನನೀವರಣಂ ಪುನಃ ಪಾಪಂ ತು ಪರ್ವತಸ್ಥೂಲಂ ಶಿವೇ ವೈರಮತಃ ಪರಂ ಶಿವದಾಸೋಹಭಾವೇನ ಪಾಪಕ್ಷಯಮವಾಪ್ನುಯಾತ್ ಎಂದು ಪುರಾಣಂಗಳು ಹೇಳಲಾಗಿ; ವಿಷ್ಣು ಕೇಳಿ, ಪುರಾಣದ ಕೈಯಲು ದೀಕ್ಷಿತನಾಗೆ, ಪುರಾಣ ಪುರುಷೋತ್ತಮನೆಂಬ ಹೆಸರು ಬಳಿಕಾಯಿತ್ತು. ಮತ್ತೆ ನಮ್ಮ ದೇವರ ಪಾದರಕ್ಷೆಯ ತಲೆಯಲ್ಲಿ ಹೊತ್ತುಕೊಂಡು ಭೂತಂಗಳಿಗಂಜಿ ಶಂಖಮಂ ಪಿಡಿದುಕೊಂಡು, ದುರಿತಂಗಳಿಗಂಜಿ ನಾಮವನಿಟ್ಟು, ಪ್ರಳಯಂಗಳಿಗಂಜಿ ವೇಷವ ತೊಟ್ಟು. ರಾಕ್ಷಸರಿಗಂಜಿ ಚಕ್ರಮಂ ಪಿಡಿದು, ಶಿವನ ದಾಸೋಹದ ದಾಸಿಯೆಂದು ಕಸಕಿಲಂ ಪಿಡಿದು ಬಯಲನುಡುಗಿ, ಹೊತ್ತ ನೀರಲ್ಲಿ ಪುತ್ಥಳಿಯ ¸õ್ಞಖ್ಯಮಂ ಮಾಡಿ ಇಪ್ಪತ್ತೇಳು ಲಕ್ಷವರುಷ ಶಿವನ ಸೇವೆಯಂ ಮಾಡಿ ಮತ್ತೆ ಗರುಡವಾಹನ ಸತಿಲಕ್ಷ್ಮಿ ವಾರ್ಧಿಜಯಮಂ ಪಡೆದು ದೇವರ ಎಡದ ಗದ್ದುಗೆಯನೋಲೈಸಿಪ್ಪವನ ದೇವರೆಂದರೆ ನೀವೆಂದಂತೆ ಎಂಬರೆ ? ಕೇಳಿರಣ್ಣಾ ! ವಚನಶುದ್ಧ ಭಾವದಲ್ಲಿ ಭಕ್ತಿಯುಳ್ಳವರು ನೀವು ಹೊತ್ತಿದ್ದ ವೇಷದಲ್ಲಿ ತಿಳಿದು ನೋಡಿ. ತಂದೆತಾಯಿ ಇಂದ್ರಿಯದಲ್ಲಿ ಬಂದವರು ದೇವರೆ ? ಸಂದೇಹ ಭ್ರಮೆಯೊಳಗೆ ಸಿಕ್ಕಿದವರು ದೇವರೆ ? ಶುಕ್ಲ ಶೋಣಿತದೊಳಗೆ ಬೆಳೆದವರು ದೇವರೆ ? ಆ ತಂದೆ ತಾಯ ಹುಟ್ಟಿಸಿದರಾರೆಂದು ಕೇಳಿರೆ; ಹಿಂದೆ ಸಂದ ಯುಗಂಗಳು ಶತಕೋಟಿ ಸಂಖ್ಯೆಯ ಮೇಲೆ ಏಳುನೂರೆಪ್ಪತ್ತುಸಾವಿರ ಯುಗಂಗಳು, ಇದಕ್ಕೆ ನವಕೋಟಿ ನಾರಾಯಣರಳಿದರು, ಶತಕೋಟಿ ಸಂಖ್ಯೆ ಬ್ರಹ್ಮರಳಿದರು ಉಳಿದವರ ಪ್ರಳಯವ ಹೊಗಳಲಿನ್ನಾರ ವಶ ? ಇಂತಿವೆಲ್ಲವನು ಬಿಟ್ಟು ಉಳಿದಿಪ್ಪಾತನೊಬ್ಬನೆ, ಆತಂಗೆ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಷಡ್ವಿಧ ಚಕ್ರಂಗಳಿಲ್ಲದಂದು, ಷಡ್ವಿಧ ಮೂರ್ತಿಗಳಿಲ್ಲದಂದು, ಷಡ್ವಿಧ ಲಿಂಗಂಗಳಿಲ್ಲದಂದು, ಷಡ್ವಿಧ ಶಕ್ತಿಗಳಿಲ್ಲದಂದು, ಷಡ್ವಿಧ ಭಕ್ತಿಯಿಲ್ಲದಂದು, ಷಡ್ವಿಧ ಹಸ್ತಂಗಳಿಲ್ಲದಂದು, ಷಡ್ವಿಧ ಕಲೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಕಾರ ಉಕಾರ ಮಕಾರಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಗುರು ಲಿಂಗ ಜಂಗಮವಿಲ್ಲದಂದು, ಇಷ್ಟ ಪ್ರಾಣ ಭಾವಂಗಳಿಲ್ಲದಂದು, ಧ್ಯಾನ ಧಾರಣ ಸಮಾದ್ಥಿಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಮನ ನಿರ್ಮನಂಗಳಿಲ್ಲದಂದು, ಭಾವ ನಿರ್ಭಾವಂಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಆತ್ಮ ನಿರಾತ್ಮಂಗಳಿಲ್ಲದಂದು, ನಾನು ನೀನಿಲ್ಲದಂದು, ಅತ್ತತ್ತಲೆ. ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ಅಪರಂಪರ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯಾಕಾಶವಿಲ್ಲದಂದು, ಅಂದೇನೊ ಅಂದೇನೊ! ಎಂಬತ್ತುನಾಲ್ಕು ಲಕ್ಷ ಜೀವಜಂತುಗಳಿಲ್ಲದಂದು, ಅಂದೇನೊ ಅಂದೇನೊ! ಸಚರಾಚರಂಗಳು ರಚಿಸದಂದು, ಅಂದೇನೊ ಅಂದೇನೊ! ಇಹಪರಂಗಳಿಲ್ಲದಂದು, ಅಂದೇನೊ ಅಂದೇನೊ! ಸ್ವರ್ಗನರಕಾದಿಗಳಿಲ್ಲದಂದು, ಅಂದೇನೊ ಅಂದೇನೊ! ಸುರಾಳನಿರಾಳಗಳಿಲ್ಲದಂದು, ಅಂದೇನೊ ಅಂದೇನೊ! ಸೌರಾಷ್ಟ್ರ ಸೋಮೇಶ್ವರಾ, ಆನೂ ನೀನೂ ಇಲ್ಲದಂದು ಅಂದೇನೊ ಅಂದೇನೊ!!
--------------
ಆದಯ್ಯ
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮಗಳು ಇಲ್ಲದಂದು, ಅತ್ತತ್ತಲೆ ನಿರಾಮಯಲಿಂಗವು ತಾನೇ ನೋಡಾ. ಆ ಲಿಂಗವು ಮನೋತೀತ, ವಾಚಾತೀತ, ಭಾವಾತೀತ, ಉಪಮಾತೀತ, ನಿಃಕಲಾತೀತ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನವಿರೂ ನೆಳಲೂ ಇಲ್ಲದಂದು, ಷಡುಶೈವರಿಲ್ಲದಂದು ಬ್ರಹ್ಮಾಂಡ ಭಾಂಡ ಭಾಂಡಾವಳಿಗಳಿಲ್ಲದಂದು ಪಿಂಡಾಂಡ ಅಂಡ ಪಿಂಡಾವಳಿಗಳಿಲ್ಲದಂದು ಅಖಂಡಿತ ಜ್ಯೋತಿರ್ಮಯಲಿಂಗ ! ಶರಣನ ಲೀಲೆಯಿಂದಾದ ಏಳು ತೆರದ ಗಣ[ಘನ?] ಪಿಂಡವಂ ಕಂಡು ಅಖಂಡಿತನಾಗಿ ಬದುಕಿದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->