ಅಥವಾ

ಒಟ್ಟು 74 ಕಡೆಗಳಲ್ಲಿ , 4 ವಚನಕಾರರು , 74 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರ್ವಸಿ ಕರ್ಪೂರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರಲ್ಲದೆ, ಹಂದಿ ಕರ್ಪೂರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರೆ, ಹುಡುಹುಡು ಎಂದಟ್ಟುವರಲ್ಲದೆ ? ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮಚ್ಚುವರಲ್ಲದೆ, ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮಚ್ಚುವರೆ ? ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಆ ಹಂದಿಗಿಂದ ಕರಕಷ್ಟ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಸ್ವಯವಿದ್ದಂತೆ ಲಯವ ಕೂಡುವರೆ ಅಯ್ಯಾ ? ಪರುಷವಿದ್ದಂತೆ ಹೇಮವನರಸುವರೆ ಅಯ್ಯಾ ? ಸ್ವಯಂಜ್ಯೋತಿಯಿದ್ದಂತೆ ದೀಪವನರಸುವರೆ ಅಯ್ಯಾ ? ನೀನಲ್ಲಿ ಇಲ್ಲಿ ಕೂಡಿಹೆನೆಂಬ ಕೂಟದ ಭಿನ್ನವ ಹೇಳಯ್ಯಾ ? ಕಣ್ಣಿಲಿ ನೋಡಿ ಕಣ್ಣ ಮರೆದೆನೆಂದು ಆ ಭಿನ್ನಭಾವದಂತೆ ಆದಿರಲ್ಲಾ ? ಅದು ನಿಮ್ಮ ಗುಣವಲ್ಲ, ಎನ್ನ ಗುಣ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಎನಗೆ ನೀನಿಂಬುಕೊಡುವಲ್ಲಿ, ಸಕಲವ ಪ್ರಮಾಣಿಸುವುದ ಬಿಟ್ಟು ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನಿಶ್ಶಕ್ತಿನಿರ್ಲೇಪವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದ ಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡಿಹೆನೆಂದು ತೊಟ್ಟ ಠಕ್ಕು ಠವಳವ ಬಿಡು. ಸರ್ವ ರಾಗ ವಿರಾಗನಾಗಿ ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧುಸಂಪೂರ್ಣನಾಗಿ ನಿನ್ನರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ, ಇದಕ್ಕೆ ಗನ್ನಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು. ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು. ಸವಿದ ಸವಿಯನುಪಮಿಸಬಾರದೆಂದಡೆ ಜಿಹ್ವೆಯಿಂದ ಕುರುಹುಗೊಂಡಿತ್ತು. ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ, ನಾನಾ ಭೇದಂಗಳಿಂದ ರುಚಿಮಯವಾಯಿತ್ತು. ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು, ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ ? ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ ಕುರುಹುಗೊಂಡಿತ್ತೆ ? ಇದು ಕ್ರೀ ಜ್ಞಾನ ಸಂಪುಟಸ್ಥಲ. ಈ ಉಭಯಸ್ಥಲ ಲೇಪವಾದ ಮತ್ತೆ ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ ? ನಿನ್ನಲ್ಲಿಯೊ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು ?
--------------
ಮೋಳಿಗೆ ಮಹಾದೇವಿ
ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು ? ಸಸಿಯೊಳಗಣ ಲತೆ ಪರ್ಣ ತಲೆದೋರದ ನಸುಗಂಪಿನ ಕುಸುಮವ ಅದಾರು ಮುಡಿವರು ? ಇಂತೀ ಅರಿವಿನ ಅರಿವ ಕುರುಹಿಟ್ಟು ಕೂಡುವನೆ ಲಿಂಗಾಂಗಿ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಇದು ಸ್ವಾನುಭಾವಿಯ ಸನ್ನದ್ಧಸ್ಥಲ.
--------------
ಮೋಳಿಗೆ ಮಹಾದೇವಿ
ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ ? ಸಕಲ ದೇಶ ಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ, ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ ? ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ ? ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಭಿನ್ನಭಾವವುಂಟೆ ಅಯ್ಯಾ ? ಕರ್ಪೂರದ ಅರಣ್ಯವ ಕಿಚ್ಚುಹತ್ತಿ ಬೆಂದಲ್ಲಿ ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ ? ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ. ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ. ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ. ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ.
--------------
ಮೋಳಿಗೆ ಮಹಾದೇವಿ
ಇನ್ನೇವೆನಯ್ಯಾ ನಾನು ಕೆಡೆದಿದ್ದೇನೆ. ಕಾಯವುಳ್ಳನ್ನಕ್ಕ ಕರ್ಮ ಬಿಡದು; ಜೀವವುಳ್ಳನ್ನಕ್ಕ ಪ್ರಕೃತಿ ಕೆಡದು; ಭಾವಿಸಿಹೆನೆಂಬನ್ನಕ್ಕ ವಿಶ್ವಾಸ ಬಿಡದು; ಈ ಉಭಯವುಳ್ಳನ್ನಕ್ಕ ಮನ ನಿನ್ನ ನೆನೆಯಬಿಡದು. ನೀ ನಷ್ಟವಾದಲ್ಲಿ ಎನ್ನ ಭಾವ ನಷ್ಟ; ಭಾವ ನಷ್ಟವಾದಲ್ಲಿ ಎನ್ನಯ್ಯನಿಲ್ಲ; ನೀನು ಪ್ರಿಯನಲ್ಲ; ಇಮ್ಮಡಿ ದೇವನಲ್ಲ. ನಿಃಕಳಂಕಮಲ್ಲಿಕಾರ್ಜುನನೆಂಬ ಭಾವ ಎಲ್ಲಿ ಅಡಗಿತ್ತೆಂದರಿಯೆನಲ್ಲ !
--------------
ಮೋಳಿಗೆ ಮಹಾದೇವಿ
ಸುಗಂಧದ ಮೂಲದ ಬೇರಿನ ಗಂಧ ಎಲೆ ಬಳ್ಳಿಯನೇತಕ್ಕೆ ವೇಧಿಸದು ? ಕುಸುಮದ ಸುವಾಸನೆ ತನ್ನಯ ತೊಟ್ಟು ಎಲೆ ಕೊನರು ಬೇರುವನೇಕೆ ವೇಧಿಸದು ? ಇದು ಇಷ್ಟ ಪ್ರಾಣಯೋಗದ ಭೇದ. ಗಿಡುಗಿಡುವಿಗೆ ಕುರುಹಲ್ಲದೆ ಗಂಧ ಗಂಧ ಕೂಡಿದಲ್ಲಿ ದ್ವಂದ್ವವಾಗಿ ಬೆರೆದಲ್ಲಿ, ಕದಂಬಗಂಧವಲ್ಲದೆ ಒಂದರ ಗಂಧವೆಂದು ಸಂಧಿಸಿ ತೆಗೆಯಲಿಲ್ಲ. ಅವರು ನಿಂದ ನಿಂದ ಸ್ಥಲಕ್ಕೆ ಸಂಬಂಧವಾಗಿಪ್ಪರು. ಇದು ದೃಷ್ಟಾನುಭಾವಸಿದ್ಧಿ, ಸರ್ವಸ್ಥಲಭೇದ, ವಿಶ್ವತೋಮುಖರೂಪು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ತತ್ವಭಿತ್ತಿಸ್ವರೂಪನು.
--------------
ಮೋಳಿಗೆ ಮಹಾದೇವಿ
ಕನಕಶಿಲೆಯೆನಿಸುವ ಪಾಷಾಣದಲ್ಲಿ ರತಿ ಪುಟ್ಟಲಿಕ್ಕಾಗಿ, ಆ ಮಧ್ಯದಲ್ಲಿ ಸೂತ್ರ ತೋರಲಿಕ್ಕೆ, ಆ ಸೂತ್ರ ಆ ಪಾಷಾಣವ ಗ್ರಹಿಸಿ, ಆವ ಕಡೆ ಮುಖವಾದಲ್ಲಿ ಸೂತ್ರ ಆವರಣಿಸುವಂತೆ, ಶಿವಲಿಂಗಪೂಜೆಯಲ್ಲಿ ಲಿಂಗವ ಮುಟ್ಟುವ ಕೈ, ನಟ್ಟ ದೃಷ್ಟಿ ತನ್ನಂಗದಲ್ಲಿ ಸರ್ವಾಂಗದೋಷಂಗಳ ಮರೆದು ಜಾಗ್ರದಿರವು ಸ್ವಪ್ನದಲ್ಲಿ ತೋರುವಂತೆ ಸ್ವಪ್ನದ ಸಂಗ ಸುಷುಪ್ತಿಯನೆಯಿದಿದಂತೆ ಇಪ್ಪುದು ಶಿವಪೂಜಕನ ಶಿವಮೂರ್ತಿಧ್ಯಾನ. ಈ ಗುಣ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಲಿಂಗವನರಿವವರಿಗಲ್ಲದೆ ಕಾಣಬಾರದು.
--------------
ಮೋಳಿಗೆ ಮಹಾದೇವಿ
ಮೃತ್ತಿಕೆಯ ತಿಟ್ಟದಿಂದ ಮಯಣದ ಕರುವಿಟ್ಟು, ಆ ಘಟವ ಲಕ್ಷಿಸಲಿಕ್ಕಾಗಿ, ಪುನರಪಿಯಾಗಿ ಮೃತ್ತಿಕೆಯ ಬಲಿದು ಈ ಉಭಯದ ಮಧ್ಯದಲ್ಲಿ ನಿಂದ ತಿಟ್ಟದಂತೆ ಇಂತೀ ತ್ರಿವಿಧ ಜಾರಿ ಉಳುಮೆ ಒಂದೆ ನಿಂದುದನರಿದು, ಭಕ್ತಿಯ ಮರೆಯಲ್ಲಿದ್ದ ಸತ್ಯ, ಸತ್ಯದ ಮರೆಯಲ್ಲಿ ವಿಶ್ರಮಿಸಿದ್ದ ಜ್ಞಾನ, ಜ್ಞಾನವ ವಿಶ್ರಮಿಸಿಕೊಂಡಿಹ ಶಿವಲಿಂಗಮೂರ್ತಿಧ್ಯಾನ, ಅದು ತದ್ಧ್ಯಾನವಾಗಲಿಕ್ಕಾಗಿ, ಅದು ನಿಜದ ಉಳುಮೆ; ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಸಾವಧಾನಿಯ ಸಂಬಂಧ.
--------------
ಮೋಳಿಗೆ ಮಹಾದೇವಿ
ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ. ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ. ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ. ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಚಿತ್ರದ ಬೊಂಬೆಯ ಹಾಹೆ ಎಲ್ಲಕ್ಕೂ ಆತ್ಮನಿಂದ ಚೇತನಿಸಿ ನಡೆಯುತ್ತಿಹವೆ ? ಅವು ಸೂತ್ರಾಧಿಕನ ಭೇದ, ಎನ್ನ ಶಕ್ತಿಜಾತಿಯ ಲಕ್ಷಣ. ನಿಮ್ಮ ಭಕ್ತಿಸೂತ್ರದಿಂದ ಎನ್ನ ಸ್ತ್ರೀಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು. ಎನಗೆ ಭಿನ್ನದ ಮಾತಿಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬವರು ನೀವೆ ?
--------------
ಮೋಳಿಗೆ ಮಹಾದೇವಿ
ತುಷರಸವಿದ್ದುದಕ್ಕಲ್ಲದೆ ಫಲ ಫಲಿಸಲಿಲ್ಲ. ಕ್ರಿಯಾಸದ್ಭಾವವಿದ್ದಲ್ಲದೆ ಸತ್ಪಥಭಾವಿಯಲ್ಲ. ತ್ರಿಸಂಧ್ಯಾಕಾಲಂಗಳಲ್ಲಿ ಉಚಿತ ವೇಳೆಯನರಿತು ರಾಜಸ ತಾಮಸಂಗಳಿಲ್ಲದೆ ಪರಸೇವೆ ನಿಶ್ಚಯವಂತನಾಗಿ, ಅನಲ ಅಹಿ ವ್ಯಾಘ್ರ ಚೋರ ರಾಜಭಯ ಮುಂತಾದುವೆಲ್ಲವ ಲಿಂಗ ಕರಸ್ಥಲಕ್ಕೆ ಬಂದಿರಲಿಕ್ಕಾಗಿ, ಆ ಲಿಂಗದ ಮೂರ್ತಿ ಮನಸ್ಥಲದಲ್ಲಿ ನಿರತಿಶಯದಿಂದ ನಿಂದಿರಲಿಕ್ಕಾಗಿ, ಇಂತೀ ಭಾವಂಗಳೆಲ್ಲವು ಮೂರ್ಛೆಯಲ್ಲಿ ಮೂರ್ತಿಗೊಂಡು ಅಮೂರ್ತಿಯಪ್ಪ ವಸ್ತು ಭಿನ್ನಭೇದವಿಲ್ಲದೆ ಸ್ವಯ ಕ್ರಿಯಾಪೂಜೆ ಸರ್ವಜ್ಞಾನ ಸಂತೋಷ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಕ್ರಿಯಾಸಂಭವಕೂಟ.
--------------
ಮೋಳಿಗೆ ಮಹಾದೇವಿ
ಕಾಲಿದ್ದಂತೆ ತಲೆ ನಡೆದುದುಂಟೆ ಅಯ್ಯಾ ? ಕಣ್ಣಿದ್ದಂತೆ ಕರ್ಣ ನೋಡಿದುದುಂಟೆ ಅಯ್ಯಾ ? ಬಾಯಿದ್ದಂತೆ ನಾಸಿಕ ಉಂಡುದುಂಟೆ ಅಯ್ಯಾ ? ತಾಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ ? ನಿಮ್ಮ ಸೇವೆಯ ತೊತ್ತಿನ ಭಾವವ ಕೇಳಲೇತಕ್ಕೆ ? ಪಟದೊಳಗಣ ಬಾಲಸರಕ್ಕೆ ಪ್ರತಿಸೂತ್ರ ನೇಣುಂಟೆ ? ನಿಮ್ಮಲ್ಲಿಯೆ ಎನ್ನ ಭಾವಲೇಪ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿಯೆ.
--------------
ಮೋಳಿಗೆ ಮಹಾದೇವಿ
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ ? ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ ? ನಿತ್ಯ ಅನಿತ್ಯವ ತಿಳಿದು, ಮತ್ರ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ. ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ, ಆ ಬಚ್ಚಬಯಲ ಬೆಳಗ ನಿನ್ನ ನೀನೆ ನೋಡಿಕೊ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
--------------
ಮೋಳಿಗೆ ಮಹಾದೇವಿ
ಇನ್ನಷ್ಟು ... -->