ಅಥವಾ

ಒಟ್ಟು 95 ಕಡೆಗಳಲ್ಲಿ , 30 ವಚನಕಾರರು , 84 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಐದುಮುಖದಂಗನೆಗೆ ತನು ಮೂರು, ತದಂಗವೆರಡು, ಜೀವವೊಂದು, ಗುಣ ಇಪ್ಪತ್ತೈದು. [ವಂಶದ]ವರು ಇಪ್ಪತ್ತೈದುಮಂದಿಯ ಕೈವಿಡಿದು ಅಷ್ಟದಿಕ್ಕು ನವಖಂಡ ಜಂಬೂದ್ವೀಪವ ಮೇಲುಹೊದಿಕೆಯ ಮಾಡಿ, ಹೊದ್ದುಕೊಂಡು, ದೃಷ್ಟಜಗಕ್ಕೆ ಬಂದು ಕಷ್ಟಬಡುತಿದ್ದ ಭೇದವ ನೀನೆ ಬಲ್ಲೆ, ಉಳಿದರಿಗಸಾಧ್ಯ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ. ರೋಮ ಎಂಟುಕೋಟಿ. ಹಲ್ಲು ಹದಿನಾರು, ನಾಲಗೆ ಏಳು. ಕಿವಿ ಇಪ್ಪತ್ತೈದು, ನಾಡಿ ಶತದಶ. ಮೂಗು ಮೂವತ್ತೇಳು, ಕಾಲೆಂಟು. ಭುಜವೆರಡು, ಕೈವೊಂದೆ. ಹಿಂದೆ ಮುಂದೆ ನೋಡುವ ಕಣ್ಣು, ಅಬ್ಥಿಸಂದ್ಥಿಯೊಳಗೆ ಒಂದೆ ಅದೆ. ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಇಪ್ಪತ್ತೈದು ಕಂಬದ ಶಿವಾಲಯದೊಳಗೆ ಒಬ್ಬ ಅಂಗನೆ, ಹದಿನೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ, ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಅಂಗನೆಯ ಕೈಹಿಡಿದು ಹದಿನೆಂಟು ಕೇರಿಗಳ ಕೆಡಿಸಿ ಇಪ್ಪತ್ತೈದು ಕಂಬದ ಶಿವಾಲಯವ ಮೀರಿ ನಿಶ್ಚಿಂತ ನಿರಾಳಲಿಂಗದಲ್ಲಿ ಬೆರೆದಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ನೆಲೆಯ ಮೇಲೆ ಸುಪ್ಪಾಣಿಯ ಕಂಡೆನಯ್ಯ. ಆ ಸುಪ್ಪಾಣಿಯ ಸಂಗದಿಂದ ಕೂಗುವ ಕಪ್ಪೆಯ ಕಂಡೆನಯ್ಯ. ಆ ಕೂಗುವ ಕಪ್ಪೆ ಸರ್ಪನ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾದ ಬಿಂದು ಸಾದಾಖ್ಯ ಈಶ್ವರ ಇಂಬಾಗಿ ನಿಂದು, ವಚನಾದಿಗಳೈದು, ಶಬ್ದಾದಿಗಳೈದು, ಕರಣ ನಾಲ್ಕು, ವಾಯು ಹತ್ತು, ಪುರುಷನೊಬ್ಬ- ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು ದರ್ಶನವಂ ಮಾಡುವುದು ಪರಮಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪಿಂಡವಾಯಿತ್ತು ನಾದಬಿಂದು ಕಳೆಗಳ ಕೂಡಿ ಕೊಂಡು ಸ್ವರೂಪ ತತ್ವವಿಡಿದು ಚೆನ್ನಾಗಿ ಧರೆಯಿಂದಲೆದು ಕರ್ಮೇಂದ್ರಿಯಂಗಳ ಜನನ ಸರಸದಿಂದ ಪಂಚವಿಷಯಂಗಳುತ್ಪತ್ಯ ಮೇಣ್ ಉರಿಯಿಂದ ಬುದ್ಧೀಂದ್ರಿಯಂಗಳಾದವು ನೋಡಿರೆ. ಮರುತನಿಂದೈದು ಪ್ರಾಣವಾಯುಗಳ ಜನನ ಹಿರಿದಪ್ಪ ಗಗನದಲ್ಲಿ ಚತುರ ಕರಣವು ಆತ್ಮ ನೆರೆ ಕೂಡಿ ಪಂಚವಿಂಶತಿತತ್ವವಿಡಿದು. | 1 | ಆರೂರ್ಮೆ ಏಳುಧಾತೈದುವಿಂಶತಿ ಅಂಶ ಈ ಮೂರು ತನುಗುಣವು ಇಪ್ಪತ್ತೈದು ಎರಡಂಗ ಆರು ಚಕ್ರವು ಕಮಲದೈವತ್ತೊಂದರಕ್ಷರಗಳಿಂ ವಾರಿಜ ದಾಕ್ಷಾಯಣಿ ಹರಿ ರುದ್ರ ಈಶ್ವರ ಮೀರಿದ ಸದಾಶಿವನದ್ಥಿದೈವಂಗಳು, ನವದ್ವಾರ ಚೆನ್ನಾಗಿ ಸಕಲಾರಂಭತತ್ವವಿಡಿದು. | 2 | ಮೂರು ಕರ್ಮಗಳು ಏಳ್ನೂರು ಎಪ್ಪುತ್ತು ಲೊ ಓರಣದ ಕರಣದ ಕರಣ ಅರುವತ್ತಾರು ಕೋಟಿಯಂ ಮೂ [ರಾ]ರು ಗುಣ ಅಂತರಂಗದಷ್ಟವೇದವು ಸಹಿತದ ಮೂರು ಮಲ ದಶವಾಯು ಅಂಗದೊಳು ಚರಿಸುತಿಹ ಮಾರುತ ಮನ ಮಂತ್ರಿ ಪ್ರಾಣ ನಾಯಕನರಸು ಶ ರೀರ ಜಗದೊಳುತ್ಪತ್ಯವಾಗಿದೆ ದೇವ. | 3 | ನೆಲ ನೀರು ಶಿಲೆಯಿಂದ ಬಿತ್ತಿಗಟ್ಟಿಯೆ ಅದನು ಸಲೆ ಗೋಮಯದಿ ಶುದ್ಧಮಾಡಿ ಸಾರಿಸುವಂತೆ ಎಲು ಚರ್ಮ ನರ ತೊಗಲು ಮಾಂಸ ಮಜ್ಜೆಯ ಕೂಡಿಯೆ ಚೆಲುವಾಗಿ ಈ ಕಾಯ ಗಾಳಿ ತುಂಬಿ ವೃಕ್ಷ ಉಲಿವಂತೆ ಶಿವಬೀಜವ ಚೈತನ್ಯದಿಂದಲಿ ಇಳೆಗೆ ತೋರುತಿರೆ ನೋಡಿದ ತಿಳಿಯಿರಣ್ಣ. | 4 | ಆದಿ ಮಧ್ಯ ಅಂತ್ಯ ಭಾಂಡದೊಳು ಶಿವ ತಾನೆ ಆದಿಯಾಗಿಯೆ ನೆಲದ ಮರೆಯಲ್ಲಿಹ ಧನದಂತೆ ಭೇದಿಸದೆಯಿಪ್ಪ ಭೇದವನಾರು ಅರಿಯರಲ್ಲ ಅಭೇದ್ಯಗುರು ಪಡುವಿಡಿ ಸಿದ್ಧಮಲ್ಲಿನಾಥನ ಪಾದವಿಡಿದ ತನುವು ಸುಕೃತದೇಹಿಯಾಗಿ ಮೇದಿನಿಗೆ ತೋರುತಿದೆ ಶಿವಶರಣರಿದ ತಿಳಿಯರೆ. | 5 |
--------------
ಹೇಮಗಲ್ಲ ಹಂಪ
ಅಂಥ ಬ್ರಹ್ಮಾಂಡವ ಎಂಬತ್ತಾರುಲಕ್ಷದ ಮೇಲೆ ಸಾವಿರದ ಎಂಟುನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಉಭಯನಖವೆಂಬ ಭುವನ. ಆ ಭುವನದೊಳು ಉಪಮಾತೀತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬಯಿನೂರಾ ಇಪ್ಪತ್ತೈದು ಕೋಟಿ ಬ್ರಹ್ಮ ನಾರಾಯಣ ರುದ್ರಾದಿಗಳಿಹರು ನೋಡಾ. ಒಂಬಯಿನೂರಾ ಇಪ್ಪತ್ತೈದು ಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕುಂಡಲಿಯೆಂಬ ಆಧಾರದಲ್ಲಿ ಜಲ ತೇಜ ವಾಯುವೆಂಬ ತ್ರಿವಿಧ ಕೂಡಿ ಕಮಂಡಲ ಹುಟ್ಟಿತ್ತು. ಅದಕ್ಕೆ ಬಾಯಿ ಮೂರು ಹೆಡೆಯಾರು. ಜೂಳಿಯೊಂದರಲ್ಲಿ ಉದಕವ ಕೊಳುತಿರಲಾಗಿ ಆ ಹಸುವಿನ ತೃಷೆಯಡಗಿ ಬಯಕೆ ಸಲೆ ಬತ್ತಿದಲ್ಲಿ ಮಹಾಗಣನಾಥನ ಐವತ್ತೆರಡು ಸರ ಹರಿದವು. ಮೂವತ್ತಾರು ಮಣಿ ಕೆಟ್ಟವು; ಇಪ್ಪತ್ತೈದು ಮಣಿ ಪುಂಜವಾಯಿತ್ತು. ಆರು ನಾಯಕರತ್ನ ಎಲ್ಲಿ ಅಡಗಿತ್ತೆಂದರಿಯೆ. ಮೂರು ರತ್ನವ ಕಂಡೆ: ಒಂದು ಉಲಿವುದು, ಒಂದು ಉರಿವುದು, ಒಂದು ಬೆಳಗು ನಂದಿಹುದು. ಇಂತೀ ತ್ರಿವಿಧಂಗವ ಕಂಡು ಈ ಅಂಗದ ಮಣಿಯ ಒಂದೊಂದ ಪೋಣಿಸಲಾರದೆ ಈ ದಿನಮಣಿಯ ವಿರಳವ ತೋರಿಸಾ ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗವೆ.
--------------
ಗೋರಕ್ಷ / ಗೋರಖನಾಥ
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ.
--------------
ಸಿದ್ಧರಾಮೇಶ್ವರ
ಅಂಗವೆಂಬ ಗದ್ದುಗೆಯ ಮೇಲೆ ಸಂಗಮೇಶ್ವರನೆಂಬ ಲಿಂಗವ ಕಂಡೆನಯ್ಯ. ಆ ಲಿಂಗದ ಸುಳುವಿನಲ್ಲಿ ಮೂವರ ಕಂಡೆನಯ್ಯ. ಒಬ್ಬ ಸತಿಯಳು ಇಪ್ಪತ್ತೈದು ಗ್ರಾಮಂಗಳ ಮೀರಿ ಸಂಗಮೇಶ್ವರನೆಂಬ ಲಿಂಗವ ಪೂಜಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಬೀಜವ ಬಿತ್ತಿದಡೆ ಮೂರುಫಲವಾಯಿತ್ತು. ಆ ಫಲ ಬಲಿದು ಬೆಳೆದ ಮತ್ತೆ, ಒಂದ ಉದಯದಲ್ಲಿ ಕೊಯ್ದೆ, ಒಂದ ಮಧ್ಯಾಹ್ನದಲ್ಲಿ ಕೊಯ್ದೆ, ಒಂದ ಹೊತ್ತು ಸಂದ ಮತ್ತೆ ಕೊಯ್ದೆ. ಈ ಮೂರರೆಯನೊಂದು ಮಾಡಿ ಮೆಟ್ಟಿಸಿದೆ. ಭಕ್ತಿಜ್ಞಾನವೈರಾಗ್ಯವೆಂಬ ಎತ್ತಿನ ಕೈಯಲ್ಲಿ ತೂರಿದೆ ಕೊಂಗವನೆತ್ತಿ ಅಂಗವೆಂಬ ಹೊಳ್ಳು ಹಾರಿತ್ತು. ಸಂಸಾರವೆಂಬ ಚೊಳ್ಳು ನಿತ್ಯಾನಿತ್ಯ ವಿವೇಕವೆಂಬ ಕೊಳಗವ ಹಿಡಿದಳೆಯಲಾಗಿ, ನೂರೊಂದು ಕೊಳಗವಾಯಿತ್ತು. ಹೆಡಗೆಗೆ ಅಳವಡಿಸುವಾಗ ಐವತ್ತೊಂದು ಕೊಳಗವಾಯಿತ್ತು. ನಡುಮನೆಯಲ್ಲಿ ಸುರಿವಾಗ ಇಪ್ಪತ್ತೈದು ಕೊಳಗವಾಯಿತ್ತು. ಪಡುವಣ ಕೋಣೆಯಲ್ಲಿ ಮಡಗಿರಿಸುವಾಗ, ಪಡಿಯ ನೋಡಲಾಗಿ ಐಗಳವಾಯಿತ್ತು. ಅದು ಬಿಡುಬಿಸಿಲಿನಲ್ಲಿ ಒಣಗೆ, ಅದು ಪಡಿಪುಚ್ಚಕ್ಕೆ ಮೂಗಳವಾಯಿತ್ತು. ಆ ಮೂಗಳವ ನಡುಮೊರದಲ್ಲಿ ಸುರಿಯೆ, ಪಡಿಗಣಿಸುವಾಗ ಒಕ್ಕುಳವಾಯಿತ್ತು. ಈ ಒಕ್ಕುಳವ ಕುಟ್ಟಿ, ಮಿಕ್ಕುದ ಕೇರೆ ಮತ್ತೆ ಒಬ್ಬಳವಾಯಿತ್ತು. ಒಬ್ಬಳವ ಕುಡಿಕೆಯಲ್ಲಿ ಹೊಯ್ದು ನಿರುತದಿಂ ನೋಡೆ, ಮೂರು ಮಾನವ ನುಂಗಿ, ಒಂದು ಮಾನವಾಯಿತ್ತು. ಒಂದು ಮಾನವನಟ್ಟು ಕುಡಿಕೆಯಲ್ಲಿ ಕುಸುರೆ ಕೂಳೊಡೆದು ಬಾಲಗೋಗರವಾಯಿತ್ತು. ಉಂಡವರತ್ತ, ನಾನಿತ್ತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಪ್ಪತ್ತೈದು ದೇಗುಲದ ಮೇಲೆ ಒಂದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಒಬ್ಬ ಪೂಜಕನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ. ಆ ಪೂಜಕನ ಹಿಡಿದು ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ಅಂಥ ಬ್ರಹ್ಮಾಂಡವ ಅರವತ್ತ್ತೈದು ಸಾವಿರದ ಆರುನೂರಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಬ್ಥೀಮವೆಂಬ ಭುವನ. ಆ ಭುವನದೊಳು ಬ್ಥೀಮೇಶ್ವರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ಇಪ್ಪತ್ತೈದು ಕೋಟಿ ರುದ್ರ-ಬ್ರಹ್ಮ-ನಾರಾಯಣರು, ಮುನ್ನೂರಾ ಇಪ್ಪತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->