ಅಥವಾ

ಒಟ್ಟು 48 ಕಡೆಗಳಲ್ಲಿ , 17 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಉಲಿವ ಉಯ್ಯಲೆಯ ಹರಿದು ಬಂದೇರಲು, ತಾಗದೆ ತೂಗುವುದು, ಭವಸಾಗರ ಮರಳಿ ಬಾರದಂತೆ ! ಹಂಸೆಯ ಮೇಲೆ ತುಂಬಿ ಕುಳ್ಳಿರ್ದು ಸ್ವರ ಗೆಯ್ಯುವ ಘೋಷವಿದೇನೊ ? ಆತನಿರ್ದ ಸರ ಹರಿಯದೆ ಇದ್ದಿತ್ತು. ದೇಹಿಗಳೆಲ್ಲ ಅರಿವರೆ, ಗುಹೇಶ್ವರನ ಆಹಾರಮುಖವ ?
--------------
ಅಲ್ಲಮಪ್ರಭುದೇವರು
ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು. ಇಲ್ಲದುದ ಇದ್ದುದೆಂದು ನೋಡಲಿಕಾಗಿ, ಇದ್ದಲ್ಲಿಯೆ ತಲ್ಲೀಯವಾಯಿತ್ತು ಇಂತು ಉಭಯವ ಕಡೆಗಾಣಿಸಲಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಇದ್ದಿತ್ತು.
--------------
ಮೋಳಿಗೆ ಮಾರಯ್ಯ
ಕಾಮಧೇನುವಿನ ನಡುವೆ ಒಂದು ಕೋಣ ಕಟ್ಟಿ ಇದ್ದಿತ್ತು. ಕೋಣನ ಗವಲು ತಾಗಿ ಕಾಮಧೇನು ಕೆಡುತ್ತದೆ. ಕೋಣನ ಡೋಣಿಗೆ ತಳ್ಳಿ ಕಾಮಧೇನುವ ಕಾಣದಂತೆ ಮಾಡು. ಅರಿವು ಅಜ್ಞಾನವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬೆಣ್ಣೆಯ ಕಂದಲ ಕರಗಲಿಟ್ಟಡೆ ಕಂದಲು ಕರಗಿತ್ತು ಬೆಣ್ಣೆ ಉಳಿಯಿತ್ತು ! ತುಂಬಿ ಇದ್ದಿತ್ತು ಪರಿಮಳವಿಲ್ಲ, ಪರಿಮಳವಿದ್ದಿತ್ತು ತುಂಬಿಯಿಲ್ಲ. ತಾನಿದ್ದನು ತನ್ನ ಸ್ವರೂಪವಿಲ್ಲ; ಗುಹೇಶ್ವರನಿದ್ದನು ಲಿಂಗವಿಲ್ಲ
--------------
ಅಲ್ಲಮಪ್ರಭುದೇವರು
ಮತಿಯೊಳಗೆ ದುರ್ಮತಿ ಹುಟ್ಟಿ, ಕಲಿ ಗಸಣಿಗೊಳಗಾದ ಪರಿಯ ನೋಡಾ ! ಜ್ಞಾನವನು ಅಜ್ಞಾನ ಬಂದು ನುಂಗಿದಡೆ, ಭಾನು ಗ್ರಹಣಕ್ಕೆ ಒಳಗಾದಂತೆ ಆದುದಲ್ಲಾ ! ಕ್ಷೀರವುಳ್ಳ ಪಶು ಕರುವನಗಲಿ ಅರಿಯದ ಮೋಹದಂತಿದ್ದುದಲ್ಲಾ. ಹೇಳುವಲ್ಲಿ ಯುಕ್ತ ಕೇಳುವಲ್ಲಿ ಮುಕ್ತನೆಂಬುದೆಲ್ಲವೂ, ಅಜ್ಞಾನಭಾವಕ್ಕೆ ಬಂದುದಲ್ಲಾ ! ನೀರ ಮೇಲಣ ಲಿಪಿಯ ಓದಬಲ್ಲವರುಂಟೆ ? ಸಾರಾಯ ವೇದ್ಯರಿಗಲ್ಲದೆ ? ಕನ್ನಡಿಯೊಳಗೆ ನೋಡೆ ಭಿನ್ನವಿದ್ದುದೆ ಅಯ್ಯಾ ? ತನ್ನಕಣ್ಣಿಂಗೆ ಕಾಣದಂತೆ ಇದ್ದಿತ್ತು ದರ್ಪಣದೊಳಗಣ ಬೆಳಗು. ಬೆಳಗಿನೊಳಗಣ ಬೆಳಗು, ಗುಹೇಶ್ವರನಿಪ್ಪೆಡೆಯ ತಿಳಿದು ನೋಡಿರೆ !
--------------
ಅಲ್ಲಮಪ್ರಭುದೇವರು
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಭಕ್ತ ಮಾಹೇಶ್ವರಸ್ಥಲ ಏಕವಾದಲ್ಲಿ, ಶಿಲೆ ಬಿಂದುವಿನ ಚಂದ್ರನ ಬಿಂಬದಂತೆ ಇದ್ದಿತ್ತು. ಪ್ರಸಾದಿಯ ಪ್ರಾಣಲಿಂಗಿಯ ಸ್ಥಲ ಏಕವಾದಲ್ಲಿ, ಅರಗಿನ ಪುತ್ಥಳಿಯ ಅವಯವಂಗಳ ಉರಿ ಹರಿದು, ಪರಿಹರಿಸಿದಂತೆ ಇದ್ದಿತ್ತು. ಶರಣನ ಐಕ್ಯಸ್ಥಲದ ಭಾವ ಕರ್ಪುರವ ಅಗ್ನಿ ಆಹುತಿಯ ಕೊಂಡಂತೆ ಇದ್ದಿತ್ತು. ಇಂತೀ ಆರು ಮೂರರಲ್ಲಿ ಅಡಗಿನಿಂದ ಕೂಟಸ್ಥಲ. ಲೆಪ್ಪದ ಮೇಗಣ ಚಿತ್ರದ ದೃಕ್ಕಿನ ದೃಶ್ಯದಂತೆ ಇದ್ದಿತ್ತು. ಇಂತೀ ತ್ರಿವಿಧಸ್ಥಲ ಏಕರೂಪವಾದಲ್ಲಿ, ಆಕಾಶದ ವರ್ಣದ ಬಹುರೂಪ ಗಬ್ರ್ಥೀಕರಿಸಿದ ನಿರಾಕಾರದಂತೆ ಇದ್ದಿತ್ತು. ನಾಮವಿಲ್ಲದ ರೂಪು, ಭಾವವಿಲ್ಲದ ಮಾತು, ನೀ ನಾನೆಂಬ ಸ್ಥಲ ಅದೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ, ಕಾಳಾಂಧರ, ವಾರಿದ್ಥಿ, ಆತ್ಮಾನಾತ್ಮ ಇಂತಿವೇನೂ ಇಲ್ಲದಂದು, ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು. ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು. ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು. ಆ ಚಿಚ್ಛಕ್ತಿ ಸಕಲಚೈತನ್ಯಾತ್ಮಕ ಶರಣನಾಯಿತ್ತು. ಆ ಶರಣನೊಳಗೊಂದು ಕೋಳಿ ದ್ವಾದಶವರ್ಣದ ಸುನಾದವಾಗಿ ಕೂಗಿತ್ತು. ಆ ಸುನಾದಂಗಳ ಝೇಂಕಾರವು ಚತುರ್ದಶ ಸಾವಿರಕ್ಷರ ರೂಪಕವಾಗಿ, ಆ ಶರಣನ ಸಪ್ತಚಕ್ರದ ಕಮಲದೊಳಗೆ ಪ್ರವೇಷ್ಟಿಸಿ, ಗೋಪ್ಯವಾಗಿದವು. ಆ ಶರಣನಲ್ಲಿ ಷಡುಶಿವಮೂರ್ತಿಗಳುದಯಿಸಿದರು. ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯೆಗಳು ತೋರಿದವು. ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ, ತೊಂಬತ್ತಾರುಸಾವಿರ ಶಿವಮೂರ್ತಿಗಳುದಯಿಸಿದರು. ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ ಇಂತಿವೆಲ್ಲ ತೋರಿದವು. ಇವನೆಲ್ಲವ, ಶಿವಗಣಂಗಳಲ್ಲಿ ಆ ಶರಣನು, ಉಪದೇಶಮಾರ್ಗದಿಂ ಧರಿಸಿಕೊಂಡು, ನೂರೊಂದರ ಮೇಲೆ ನಿಂದು, ದ್ವಾದಶ ಸಪ್ತವಿಂಶತಿ ಛತ್ತೀಸದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚಜಪಮಾಲೆಗಳಿಗೆ ಹನ್ನೆರಡು ಸಿಡಿಲ ಸುನಾದವನೊಡದು, ತ್ರಿ ಆರುವೇಳೆ ಕೂಡಿ, ನೂರೆಂಟಕ್ಕೆ ಸಂದಾನಿಸಿ ಜಪಿಸುತ್ತಿಪ್ಪ ಅನಂತ ಪ್ರಮಥರಂ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು ಸುಖಿಯಾದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಸಕಲದ್ರವ್ಯಂಗಳೆಂದು ಕಲ್ಪಿಸಿ, ಇದಿರಿಟ್ಟು ಅರ್ಪಿಸಿಕೊಂಬುದು, ಅರ್ಪಿಸಿಹೆನೆಂಬುದು, ಅದಾವ ಚಿತ್ತ ? ಅದು ಉದಕ ವರ್ಣದ ಭೇದ, ವರ್ಣಕೂಟದ ಭಾವ. ಲೆಪ್ಪವ ಲಕ್ಷಿಸಿದಂತೆ, ಅದೆಂತೆಯಿದ್ದಿತ್ತು ಚಿತ್ತವಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ತನ್ನೊಳಗಣ ಅರಿವು ತನ್ನಲ್ಲಿಯೇ ತೋರಿದಲ್ಲದೆ ಅನ್ಯರಲ್ಲಿ ತೋರಬಲ್ಲದೆ? ತನ್ನಲ್ಲಿ ತಾನೆ ಇದ್ದಿತ್ತು. ತನ್ನ ತಾನೆ ಪಕ್ಷಕ್ಕೆ ಬಂದು ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನೇನೆಂಬೆನಯ್ಯಾ ರಾಮನಾಥ.
--------------
ಜೇಡರ ದಾಸಿಮಯ್ಯ
ಭಕ್ತನೆನಿಸಿಕೊಂಡು ಜಂಗಮದೊಡನೆ ದುರುಳತನವ ನುಡಿದರೆ ಅವ ಭಕ್ತನಲ್ಲ, ಲಿಂಗವಿರಳ ನೋಡಾ. ಕಾಯದಲ್ಲಿ ವಿಶ್ವಾಸ, ಪ್ರಾಣದಲ್ಲಿ ಅವಿಶ್ವಾಸ ಕಾಯಪ್ರಾಣದಂತೆ ಇದ್ದಿತ್ತು, ಜಂಗಮಲಿಂಗದ ನಿಲವು. ಆತ್ಮಸ್ತುತಿ ಪರನಿಂದೆವುಳ್ಳನ್ನಕ್ಕ ಕೂಡಲಚೆನ್ನಸಂಗಮದೇವ. ಕುರುಡನ ಕೈಯ ದರ್ಪಣದಂತೆ
--------------
ಚನ್ನಬಸವಣ್ಣ
ಕೇಡಿಲ್ಲದ ಗುರುವಿಂಗೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಲಿಂಗಕ್ಕೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಜಂಗಮಕ್ಕೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಮಂತ್ರಕ್ಕೆ ಕೇಡಕಟ್ಟಿ, ಆಹ್ವಾನಿಸಿದಲ್ಲಿ ಇದ್ದಿತ್ತು, ವಿಸರ್ಜಿಸಿದಲ್ಲಿ ಮಂತ್ರ ಭಿನ್ನವಾಯಿತ್ತೆಂದು, ಸಂದೇಹದಲ್ಲಿ ಮುಳುಗಿ ಮೂಡುತ್ತಿಪ್ಪರಯ್ಯ. ತನು ಮನ ಭಾವದಲ್ಲಿ ವಜ್ರಲೇಪದಂತೆ ಲೇಪಿಸಿಕೊಂಡು ಒಳಹೊರಗೆ ಓಂನಮಶ್ಯಿವಾಯಯೆನುತ ಸದಾ ಸನ್ನಿಹಿತನಾಗಿಪ್ಪುದನರಿಯದೆ, ಕೆಟ್ಟಿತ್ತು ಇದ್ದಿತ್ತು ಎನ್ನಲೇಕೆ? ಕೆಡುವಾಗ ಹಾಲಂಬಿಲವೇ? ಬಳಸುವಾಗ ಹಾಲೋಗರವೇ? ಅದು ಕೆಡುವುದು ಅಲ್ಲ; ಅಳಿವುದೂ ಅಲ್ಲ. ನಿಮ್ಮ ಸಂಕಲ್ಪ ವಿಕಲ್ಪವೆಂಬ ಸಂದೇಹವೇ ಕೆಡಿಸುತ್ತ ಅಳಿಸುತ್ತ ನಿಮ್ಮ ಕಾಡುತ್ತಿಪ್ಪವು ಕಾಣಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಿತ್ತಿ ಮೂರರ ಮೇಲೆ ಚಿತ್ರ ಬರೆಯಿತ್ತು; ಪ್ರಥಮ ಭಿತ್ತಿಯ ಚಿತ್ರ ಚಿತ್ರದಂತೆ ಇದ್ದಿತ್ತು; ಎರಡನೆಯ ಭಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು, ಮೂರನೆಯ ಭಿತ್ತಿಯ ಚಿತ್ರ ಹೋಯಿತ್ತು ಮರಳಿ ಬಾರದು. ಗುಹೇಶ್ವರಾ_ನಿಮ್ಮ ಶರಣ ತ್ರಿವಿಧದಿಂದತ್ತತ್ತಲೆ !
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->