ಅಥವಾ

ಒಟ್ಟು 55 ಕಡೆಗಳಲ್ಲಿ , 31 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ ಬಿಟ್ಟವಂಗಲ್ಲದೆ ಸತ್ಯವ ಸಾದ್ಥಿಸಬಾರದು. ಆರ ಬಿಟ್ಟವಂಗಲ್ಲದೆ ಆದರಿಸಬಾರದು. ಎಂಟ ಬಿಟ್ಟವಂಗಲ್ಲದೆ ಸಾಕಾರದ ಕಂಟಕವನರಿಯಬಾರದು. ರಣದಲ್ಲಿ ಓಡಿ ಮನೆಯಲ್ಲಿ ಬಂಟತನವನಾಡುವನಂತೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಸರ್ವಮಯ ನಿನ್ನ ಬಿಂದುವಾದಲ್ಲಿ ಆವುದನಹುದೆಂಬೆ, ಆವುದನಲ್ಲಾಯೆಂಬೆ? ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ? ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು. ಆರ ಹರಿದು ಇನ್ನಾರಿಗೆ ಅರ್ಪಿಸುವೆ? ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.
--------------
ದಸರಯ್ಯ
ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು. ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು. ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು. [ಮ]ಣ್ಣು ಹೊನ್ನು[ಹೆ]ಣ್ಣ ಬಿಟ್ಟು ಲಿಂಗಾಂಗ ಸಂಯೋಗವರಿಯದೆ ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ ಫಲಭೋಗಕ್ಕೊಳಗಾದರು. ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ. ಆರ ಬಿಟ್ಟು ಮೂರ ಕಂಡು ಮನ ಮುಳುಗಿ ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮೂರುವರ್ಣದ ಬೊಟ್ಟುಗ, ಆರು ವರ್ಣದ ಅಳಗ, ಐದು ವರ್ಣದ ಸಂಚಿಗ ಇವರೊಳಗಾದ ನಾನಾ ವರ್ಣದ ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ, ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ, ಐದರ ಬಟ್ಟೆಯ ಮೆಟ್ಟದೆ, ಒಂದೇ ಹೊಲದಲ್ಲಿ ಮೇದು, ಮಂದೆಯಲ್ಲಿ ನಿಂದು, ಸಂದೇಹ ಕಳೆದು, ಉಳಿಯದ ಸಂದೇಹವ ತಿಳಿದು, ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.
--------------
ವೀರ ಗೊಲ್ಲಾಳ/ಕಾಟಕೋಟ
ತನು ನಿಮ್ಮ ರೂಪಾದ ಬಳಿಕ ಆರಿಗೆ ಮಾಡುವೆ ? ಮನ ನಿಮ್ಮ ರೂಪಾದ ಬಳಿಕ ಆರ ನೆನೆವೆ ? ಪ್ರಾಣ ನಿಮ್ಮ ರೂಪಾದ ಬಳಿಕ ಆರನಾರಾಧಿಸುವೆ ? ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ಆರನರಿವೆ ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಿಂದ ನೀವೆಯಾದಿರಾಗಿ ನಿಮ್ಮನೆ ಅರಿವುತ್ತಿರ್ದೆನು.
--------------
ಅಕ್ಕಮಹಾದೇವಿ
ಕಣ್ಣು ಮೂರು, ತಲೆಯಾರು, ಬಾಯಿಯೆಂಟು, ಭಗವೊಂಬತ್ತು. ಆರ ಬಗೆಗೂ ಅಳವಡದ ಬಾಲೆ, ಬಾಲನನರಸಿ ಬಳಲುತ್ತೈದಾಳೆ. ಆ ನಾಳಕ್ಕೆ ಒಡೆಯನಿಲ್ಲದೆ, ಬಾಲನ ಬಗೆ ಎಂತಪ್ಪದು ಎನಗೆ ಹೇಳಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲರಿಯರು ! ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಲರಿಯರು ! ಐದರ ಮುಸುಕ ತೆಗೆದು ಐದರ ಕಳೆಯ ಕೆಡಿಸಿ, ಐದರ ನಿಲವನಡಗಿಸಿ ಮೂರುಸಂಕಲೆಯ ಕಳದು ಮೂರರ ಮುದ್ರೆಯನೊಡದು ಒಂದುಮುಖವಾಗಿನಿಂದಲ್ಲದೆ ಜಂಗಮವಾಗಲರಿಯರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೀವು ಹಿರಿಯರೆಂಬಿರಿ, ಕರ್ಮಿಗಳು, ನೀವು ಕೇಳಿರಿ, ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು `ಓಂ ದ್ಯಾವಾ ಭೂಮೀ ಜನಯನ್ ದೇವ ಏಕಃ' ಎಂದು ಶ್ರುತಿ ಸ್ಮøತಿಗಳು ಸಾರುತ್ತಿದ್ದಾವು. `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬುದು ಹುಸಿ, `ವರ್ಣಾನಾಂ ಗುರುಃ' ನಮ್ಮ ಕೂಡಲಸಂಗನ ಶರಣರು.
--------------
ಬಸವಣ್ಣ
ಎಲೆ ನಾಥಾ, ಎಲೆ ನಾಥಾ, ಅಂಗದಾಶ್ರಯವ ಮಾಡಿಕೊಂಡೆಯಲ್ಲಾ, ಯಂತ್ರವಾಹಕ ಸಂಚನಾದೆಯಲ್ಲಾ. ನಿನ್ನ ಸಂಚವ ಹರಿಬ್ರಹ್ಮಾದಿಗಳರಿಯರು, ದಾನವ ಮಾನವರರಿಯರು, ಸಮಸ್ತ ಮೂರ್ತಿಗಳರಿಯರು, ಸುಭಾಷಿತರು ಶಿವನಾಮಿಗಳರಿಯರು, ಅಷ್ಟವಿಧಾರ್ಚಕರರಿಯರು, ವೇಷಭಾಷಿತರರಿಯರು, ಸುಳುಹು ನಿಂದವರರಿಯರು, ಜಡೆಯ ಮುಡಿಯ ಬೋಳರರಿಯರು, ಆರ ತೊಟ್ಟವನೆ ಮೂರ ಸುಟ್ಟವನೆ ನಾಕನೆಂದವನೆ ಎಂಟು, ಐದು, ಹತ್ತರಲ್ಲಿ ನಿತ್ಯನಾದೆಯಲ್ಲಾ! ಶತಪತ್ರ ಪದದಲ್ಲಿ ನಿವಾಸಿಯಾದೆಯಲ್ಲಾ! ಎನ್ನ ನಿನ್ನೆಡೆಗೆ ಏನೂ ಭೇದವಿಲ್ಲ ಸಲಿಸ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಭಕ್ತಿಸ್ಥಲವಾರು, ಮಹೇಶ್ವರಸ್ಥಲವಾರು, ಪ್ರಸಾದಿಸ್ಥಲವಾರು, ಪ್ರಾಣಲಿಂಗಿಸ್ಥಲವಾರು, ಶರಣಸ್ಥಲವಾರು, ಐಕ್ಯನ ಐಕ್ಯ ಆರೆಂಬಲ್ಲಿ, ನೇತಿಗಳೆದು ಸ್ಥಲನಿಂದ ಮತ್ತೆ ಐಕ್ಯನ ಆರುಕೂಟವಾವುದಯ್ಯಾ ? ಅದು ದರ್ಪಣದ ಭಾವದೊಪ್ಪ. ಅದು ಭಾಗೀರಥಿಯ ಅಪ್ಪುವಿನ ಭೇದ. ಇದು ಆರ ಭಾವಕ್ಕೂ ತಪ್ಪದ ಸ್ಥಲ. ಸಂದೇಹವುಳ್ಳನ್ನಕ್ಕ ಷಟ್ಸ್ಥಲ, ಸಂದೇಹ ನಿಂದು ಒಂದೆಂದಲ್ಲಿ ಏಕಸ್ಥಲ. ಏಕಸ್ಥಲ ಪ್ರತಿರೂಪಾಗಿ ಕರ್ತೃಭೃತ್ಯನೆಂಬ ಉಭಯರೂಪಾಯಿತ್ತು. ಉಭಯದ ರೂಪಿಂದ ಹಲವುಸ್ಥಲ ಒಲವರವಾಯಿತ್ತು. ಆ ಹೊಲಬ ತಿಳಿದು, ಸಲೆ ವಸ್ತು ಒಂದೆಂದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆಂಬ ಕುರುಹಡಗಿದಲ್ಲಿ.
--------------
ಮೋಳಿಗೆ ಮಾರಯ್ಯ
ನೇಮಸ್ಥ ಲಿಂಗವನರಿಯ, ಸೂಳೆಯ ಮಗ ತಂದೆಯನರಿಯ. ಪಿತೃಕಾರ್ಯ ಮಹಳವ ಮಾಡುವಲ್ಲಿ ಆರ ಹೆಸರ ಹೇಳಿ ಮಾಡುವನಯ್ಯಾ ? ಗುಹೇಶ್ವರಾ, ನಿಮ್ಮನರಿಯದವರನು ಉಭಯಭ್ರಷ್ಟರೆಂಬೆ.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗ ಗುರುವಿನ ಹಂಗು, ಚಿತ್ತ ಕಾಮನ ಹಂಗು, ಪೂಜೆ-ಪುಣ್ಯ ಮಹಾದೇವನ ಹಂಗು; ಎನ್ನ ದಾಸೋಹ ಆರ ಹಂಗೂ ಇಲ್ಲ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ, ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ.
--------------
ನುಲಿಯ ಚಂದಯ್ಯ
ಅಯ್ಯಾ, ಏನನಹುದೆಂಬೆ, ಏನನಲ್ಲಾ ಎಂಬೆ. ಕಾಯವುಳ್ಳನ್ನಕ್ಕ ಕರ್ಮ ಬಿಡದು, ಜೀವವುಳ್ಳನ್ನಕ್ಕ ಕಾರ್ಪಣ್ಯ ಕೆಡದು. ಆರ ಕೇಳಿ ಆರಿಗೆ ಹೇಳಿಹೆನೆಂದಡೂ ಭಾವದ ಭ್ರಮೆ ಬಿಡದು. ಮಹಾಸಮುದ್ರವನೀಜುವವನಂತೆ ಕರ ಕಾಲು ಆಡುವನ್ನಕ್ಕ ಜೀವಭ್ರಮೆ ನಿಂದಲ್ಲಿ ನಿಂದಿತ್ತು. ಭಾವಭ್ರಮೆ ಒಂದನರಿತು ಒಂದನರಿದೆಹೆನೆಂಬನ್ನಕ್ಕ ಬಂದಿತ್ತು ದಿನ, ಅಂಗವ ಹರಿವುದಕ್ಕೆ. ಈ ಸಂದೇಹದ ಸಂದಿಯಲ್ಲಿ ಕೆಡಹದೆ ನಿಜದಂಗವ ತೋರು ಗೋಪತಿನಾಥ ವಿಶ್ವೇಶ್ವರ ಲಿಂಗ.
--------------
ತುರುಗಾಹಿ ರಾಮಣ್ಣ
ಶಿವಶಿವಾ, ಈ ಸಂಸಾರದಂದುಗ ದುಃಖ ನಾನೆಂತು ಪೇಳ್ವೆ. ಹೊನ್ನಿನ ವ್ಯಾಪಾರವ ಮಾಡಿ, ಧಾವತಿಯಿಂದ ಗಳಿಸುವದು ದುಃಖ. ಆ ಹೊನ್ನು ಜೋಕೆಮಾಡುವದು ದುಃಖ. ಆ ಹೊನ್ನು ಹೋದಮೇಲೆ ಅನೇಕ ದುಃಖ. ಹೆಣ್ಣು ತರುವದು ದುಃಖ; ಆ ಹೆಣ್ಣು ಆಳುವದು ದುಃಖ. ಹೆಣ್ಣು ಸತ್ತುಹೋದಮೇಲೆ ಅನೇಕ ದುಃಖ. ಮಣ್ಣು ದೊರಕಿಸುವದು ದುಃಖ. ಆ ಮಣ್ಣಿನ ಧಾವತಿ ಹೋರಾಟ ಮಾಡುವದು ದುಃಖ. ಆ ಮಣ್ಣು ನಾಶವಾದ ಮೇಲೆ ಅನೇಕ ದುಃಖ. ಇಂತೀ ತ್ರಿವಿಧವು ಮಲಸಮಾನವೆಂದರಿಯದೆ, ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂಬಿರಿ. ಎಲೆ ಹುಚ್ಚು ಮರುಳು ಮಾನವರಿರಾ, ನೀವು ಮರಣವಾದ ಮೇಲೆ ಅವು ನಿಮ್ಮ ಕೂಡ ಬರ್ಪವೆ? ಬರ್ಪುದಿಲ್ಲ ಕೇಳಾ, ಎಲೆ ಹುಚ್ಚ ಮರುಳ ಮಾನವರಿರಾ, ಅವು ಆರ ಒಡವೆ ಎಂದರೆ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಹೊನ್ನು ರಾಜನದು, ಹೆಣ್ಣು ಅನ್ಯರದು, ಮಣ್ಣು ಬಲ್ಲಿದರದು. ಇಂತೀ ತ್ರಿವಿಧವು ಅನಿತ್ಯವೆಂದು ತನ್ನ ಸ್ವಾತ್ಮಜ್ಞಾನದಿಂದ ತಿಳಿದೆಚ್ಚತ್ತು ವಿಸರ್ಜಿಸಿ, ಗುರುಕಾರುಣ್ಯಮಂ ಪಡೆದು, ಲಿಂಗಾಂಗಸಂಬಂಧಿಯಾಗಿ, ಗುರೂಪಾವಸ್ತೆಯಂ ಮಾಡಿ, ಮುಂದೆ ಮೋಕ್ಷವ ಹಡೆಯಬೇಕೆಂಬ ಯುಕ್ತಿ ವಿವೇಕ ವಿಚಾರ ಬುದ್ಧಿಯನರಿಯದೆ ಅಶನಕ್ಕಾಗಿ ಮಣ್ಣ ಮೆಚ್ಚಿ, ವ್ಯಸನಕ್ಕಾಗಿ ಹೆಣ್ಣ ಮೆಚ್ಚಿ, ಅಂಗಸುಖಕ್ಕಾಗಿ ಹೊನ್ನ ಮೆಚ್ಚಿ- ಇಂತೀ ತ್ರಿವಿಧ ಆಶೆ ಆಮಿಷ ಮಮಕಾರದಿಂದ ಮನಮಗ್ನರಾಗಿ, ಮತಿಗೆಟ್ಟು ಮುಂದುಗಾಣದೆ, ಸಟೆಯ ಸಂಸಾರದಲ್ಲಿ ಹೊಡದಾಡಿ ಹೊತ್ತುಗಳೆದು ವ್ಯರ್ಥ ಸತ್ತುಹೋಗುವ ಕತ್ತೆಸೂಳೆಮಕ್ಕಳ ಬಾಳ್ವೆ ಶುನಿ ಸೂಕರ ಕುಕ್ಕುಟನ ಬಾಳ್ವೆಗಿಂದತ್ತತ್ತಯೆಂದಾತ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಹಾದೇವ ದೇವಂಗೇರಿಸುವೆ, ಆರ ಹಸ್ತ ಮುಟ್ಟದ, ಆರ ದೃಷ್ಟಿ ಮುಟ್ಟದ, ಮನಪುಷ್ಪದಿಂದ ಪೂಜಿಸುವೆನೆನ್ನ ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->