ಅಥವಾ

ಒಟ್ಟು 302 ಕಡೆಗಳಲ್ಲಿ , 52 ವಚನಕಾರರು , 193 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ, ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕವಂ ಮಾಡಿಕೊಂಡು ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ, ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ.
--------------
ಅಕ್ಕಮ್ಮ
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆವಾವ ತ್ರಿಗುಣಭೇದದಲ್ಲಿವಿಶ್ವಾಸವ ಮಾಡಿದಡೂ ಭಾವಶುದ್ಧವಾಗಿರಬೇಕು. ಯೋಗಿಯಾದಲ್ಲಿ ದೇಹಧರ್ಮವ ಮರೆದು, ಭೋಗಿಯಾದಲ್ಲಿ ಸಂಚಿತವ ಮರೆದು, ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು. ಇಂತೀ ಯೋಗಿ ಭೋಗಿ ತ್ಯಾಗಿ, ಇಂತೀ ತ್ರಿವಿಧವನೊಳಕೊಂಡು ವಿರಕ್ತನಾದಲ್ಲಿ ಆತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ, ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ. ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು. ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ. ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು. ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ. ಘನಘನಮಹಿಮೆಯ ಹೊಗಳಲೆನ್ನಳವಲ್ಲ. ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ, ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
--------------
ಅಗ್ಘವಣಿ ಹಂಪಯ್ಯ
ಕಾಳಿಂಗನ ಮಡುವ ಕಲಕಿದವನ ನಾಬ್ಥಿಯ ಕೂಸಿನ ಶಿರಪಾಣಿಯಲ್ಲಿ ಬೇಡುವ, ಆತನ ಶಕ್ತಿಯ ಸಮರಸದಲ್ಲಿ ಓಲಾಡುವ, ಮುಕ್ತಿವಂತರೆಲ್ಲರೂ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಅವಸರ, ಆರೋಗಣೆ, ಆಪ್ಯಾಯನ-ತ್ರಿವಿಧವೂ, ಲಿಂಗ ಮುಖದಲ್ಲಿ ಅರ್ಪಿತವಾಗೆ, ಆತನ ಪ್ರಸಾದಿಯೆಂಬೆನು. ಅವಸರ ಅನವಸರ ಆತ್ಮ(ಅಂಗ?)ದಿಚ್ಛೆ ಲಿಂಗಮುಖದಲ್ಲಿ ಅರ್ಪಿತವಿಲ್ಲಾಗಿ ಆತನನೆಂತು ಪ್ರಸಾದಿಯೆಂಬೆನು? ಅವಸರ ಅನವಸರವರಿದು ವೇಧಿಸಬಲ್ಲರೆ ಆತನ ಪ್ರಸಾದಿಯೆಂಬೆನು- ``ಲಿಂಗಸ್ಯಾವಸರೇ ಯಸ್ತು ಅಚ್ರ್ಯಂ ದದ್ಯಾತ್ ಸುಖಂ ಭವೇತ್ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಅವಸರವರಿದು ಅರ್ಪಿಸುವ ಅರ್ಪಣೆ ಸದ್ಭಾವಿಗಲ್ಲದಿಲ್ಲ.
--------------
ಚನ್ನಬಸವಣ್ಣ
ದೂಷಕನವನೊಬ್ಬ ದೇಶವ ಕೊಟ್ಟಡೆ, ಆಸೆಮಾಡಿ ಅವನ ಹೊರೆಯಲಿರಬೇಡ. ಮಾದಾರ ಶಿವಭಕ್ತನಾದಡೆ, ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ, ತೊತ್ತಾಗಿಪ್ಪುದು ಕರ ಲೇಸಯ್ಯಾ. ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು, ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ. 136
--------------
ಬಸವಣ್ಣ
ಆತುರದ ಧ್ಯಾನದಿಂದ ಧಾವತಿಗೊಂಡೆ ; ಜ್ಯೋತಿರ್ಲಿಂಗವ ಕಾಣಿಸಬಾರದು. ಮಾತಿನ ಮಾಲೆಗೆ ಸಿಲುಕುವನಲ್ಲ ; ಧಾತುಗೆಡಿಸಿ ಮನವ ನೋಡಿ ಕಾಡುವನು. ಆತುಮನಂತರ ಪರವನರಿದಡೆ ಆತನೆ ಯೋಗಿ ; ಆತನ ಪಾದಕ್ಕೆ ಶರಣೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಾಮಿಗೆ ವ್ರತವುಂಟೆ, ನಿಃಕಾಮಿಗಲ್ಲದೆ? ಕ್ರೋದ್ಥಿಗೆ ವ್ರತವುಂಟೆ, ಸಮಾಧಾನಿಗಲ್ಲದೆ? ಲೋಬ್ಥಿಗೆ ವ್ರತವುಂಟೆ, ಉದಾರಿಗಲ್ಲದೆ? ಇಂತೀ ಕ್ಷಮೆ ದಮೆ ಶಾಂತಿ ಸಮಾಧಾನಸಂಪದ ಮುಂತಾಗಿ ಗುರುಲಿಂಗಜಂಗಮಕ್ಕೆ, ತನುಮನಧನದಲ್ಲಿ ನಿರತನಾಗಿ, ತನ್ನ ತ್ರಾಣಕ್ಕೆ ಇದ್ದಂತೆ ಚಿತ್ತಶುದ್ಧಾತ್ಮನಾಗಿ ಇಪ್ಪ ಮಹಾಭಕ್ತನೆ ಕೃತ್ಯವಿಲ್ಲದ ಶರಣ. ಆತನ ಪಾದ ಎನ್ನ ಹೃದಯದಲ್ಲಿ ಅಚ್ಚೊತ್ತಿದಂತಿಪ್ಪುದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವ ಎತ್ತುಕಟ್ಟುವ ಗೊತ್ತಾಗಿಪ್ಪನು.
--------------
ಅಕ್ಕಮ್ಮ
ಮಾತಿನಲ್ಲಿ ಬಲ್ಲೋತ್ತರವಂತರೆಲ್ಲರೂ ಆತನನರಿದುದಿಲ್ಲ ಆತ ಏತರೊಳಗೂ ಸಿಕ್ಕದ ಅಜಾತ ಶಂಭು. ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟು ವೇಷದಿಂದಾದ ಘಾತಕತನವನೊಲ್ಲದೆ ಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆ ನಿಜ ತತ್ವದ ಆಶೆಯೇ ಸಾಕಾರವಾಗಿ ಅರಿದ ಆತ್ಮ ಕರಿಗೊಂಡಲ್ಲಿ ಹರಿಪ್ರಿಯ ಅಘೋರನಾಶನ ರಾಮನಾಥಾ.
--------------
ಗುಪ್ತ ಮಂಚಣ್ಣ
ಹೊರಮನ ಹೊರತಾಗಿದ್ದವಳಾನಯ್ಯ. ಸುತ್ತಿ ಮುತ್ತಿ ಆತನ ಸೆರಗಿನ ಬಳಿಗಳ ಹಿಡಿದು ಹಿರಿದು ಕಂಗಳ ಕಣ್ಣಲಿ ಗೆಲಿದೆನವ್ವ, ಅವ್ವಾ! ಇಂತಹ ಮಾಯೆಯ ಬೆಡಗ ಬಲ್ಲ ಕಪಿಲಸಿದ್ಧಮಲ್ಲಿನಾಥನವ್ವ, ಅವ್ವಾ!
--------------
ಸಿದ್ಧರಾಮೇಶ್ವರ
ಮಾಗಿಯ ಹುಲ್ಲಿನ ಸೋಂಕಿನಂತೆ ತನು ಪುಳಕಿತಳಾದಳವ್ವೆ. ನುಡಿ ತೊದಳು ಆತನ ಒಲವೆ ಆಧಾರವಾಗಿದ್ದಳವ್ವೆ. ಬಿಳಿಯ ತುಂಬಿ ಕುಂಕುಮ ರಸದಲ್ಲಿ ಬಂಡುಂಡಂತೆ. ಮಹಾಲಿಂಗ ಗಜೇಶ್ವರನಲ್ಲಿ ತನ್ನಲ್ಲಿ ತಾನೆ ರತಿಯಾಗಿರ್ದಳವ್ವೆ
--------------
ಗಜೇಶ ಮಸಣಯ್ಯ
ಸತ್ವಕ್ಕೆ ತಕ್ಕ ಹೊರೆಯಲ್ಲದೆ, ಮತ್ತುಳಿದ ಮಾತಂಗವ ಹೊರಬಹುದೆ ? ಸತ್ವಕ್ಕೆ ತಕ್ಕ ನುಡಿಯಲ್ಲದಿರ್ದಡೆ, ಆತನ ಒಚ್ಚತಗೊಂಬರೆ ಹರಶರಣರು? ನಡೆ ನುಡಿ ಸಿದ್ಧಾಂತವಲ್ಲದೆ, ಹುಡಿಗರ ಮಾತ ಸುಡು. ಎನ್ನೊಡೆಯ ಕರೆಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ. ಆತನ ವಿದ್ಯಾ ಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ, ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು, ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ, ಈ ಮೂವರ ಪೀಠವಂತಿರಲಿ, ಆ ಶರಣನನರಿದು ಶರಣೆನುತ್ತಿದ್ದೆನು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ. ಬಾಯ ಮುಚ್ಚಿ ನಾಲಗೆಯಲ್ಲಿ ಉಂಡಡೆ, ಆತ ಸಂ[ಗ]ಗೊಳಿಸಿದವನೆಂಬೆ. ತನುವ ಮರೆದು, [ಆ ತ]ನುವ ಕಂಡಡೆ, ಆತನ ಅರಿದವನೆಂಬೆನಯ್ಯಾ. ಬೆಳಗಿನೊಳಗಣ ಬೆಳಗು ಕಳೆಯೊಳಗಣ ಕಾಂತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->