ಅಥವಾ

ಒಟ್ಟು 46 ಕಡೆಗಳಲ್ಲಿ , 18 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವಿಂಗೆ ಗುರುಲಿಂಗ, ಮನಕ್ಕೆ ಆಚಾರಲಿಂಗ, ಆಚಾರಕ್ಕೆ ಅರಿವೆ ಲಿಂಗವಾಗಿ, ಅರಿವೇ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬುದಕ್ಕೆ ಕುರುಹಾಯಿತ್ತು .
--------------
ಶಿವಲೆಂಕ ಮಂಚಣ್ಣ
ಕಲ್ಲು ರತಿಯಿಂದ ರತ್ನವಾದಂತೆ, ಉದಕ ಸಾರವರತು ಲವಣವಾದಂತೆ, ವಾರಿ ವಾಯುವ ಸಂಗದಿಂದ ಬಲಿದಂತೆ, ಪೂರ್ವವನಳಿದು ಪುನರ್ಜಾತನಾದ ಮತ್ತೆ, ಎನ್ನವರೆಂದು ಬೆರಸಿದಲ್ಲಿ, ಆ ಗುಣ ಆಚಾರಕ್ಕೆ ಹೊರಗಾಯಿತ್ತು. ಮಾತೆ ಪಿತ ಸಹೋದರ ಬಂಧುಗಳೆಂದು ಮನ ಕೂರ್ತು ಬೆರಸಿದಲ್ಲಿ, ಆಚಾರಕ್ಕೆ ಭ್ರಷ್ಟ, ವಿಚಾರಕ್ಕೆ ದೂರ, ಪರಮಾರ್ಥಕ್ಕೆ ಸಲ್ಲ. ಇವನೆಲ್ಲವ ಕಳೆದುಳಿದು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅನುಭಾವವಿಲ್ಲದ ಕ್ರಿಯೆ ಆಚಾರಕ್ಕೆ ದೂರ. ಅನುಭಾವವಿಲ್ಲದ ಜ್ಞಾನ ವಿಚಾರಕ್ಕೆ ದೂರ. ಅನುಭಾವವಿಲ್ಲದ ಭಕ್ತಿ ಅರುವಿಂಗೆ ದೂರ. ಅನುಭಾವವಿಲ್ಲದ ವೈರಾಗ್ಯ ಅಗಮ್ಯಕ್ಕೆ ದೂರ. ಗುರುನಿರಂಜನ ಚನ್ನಬಸವಲಿಂಗವನರಿವರೆ ಅನುಭಾವವೇ ಬೀಜ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಾದಿ ಪರಶಿವನಿಂದಾಕಾರವಾದ ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು, ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ ಸ್ಥೂಲವಾದಡೆ ಸದಾಚಾರಕ್ಕೆ ಹೊರಗು ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ ಭೃತ್ಯಭಾವದಿಂದ ಹತ್ತು ಹನ್ನೊಂದ ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?) ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ ! ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ: ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್‍ಸ್ಥಾನದೊಳಗೆ ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಭಿನ್ನವಾದಡೆ, ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು, ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ ಸ್ಥೂಲವೆನಿಸುವುದಯ್ಯಾ ! ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ ಸೂಕ್ಷ್ಮವೆನಿಸುವುದಯ್ಯಾ ! ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ, ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು ಜಂಗಮದ ಪಾದದಲ್ಲಿ ಸಮಾಧಿಯ ಮಾಡುವುದಯ್ಯಾ ಪ್ರಾಣತ್ಯಾಗವ ಮಾಡಲಾರದಿರ್ದಡೆ, ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ, ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾಧಿಯ ಮಾಡಿ ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ. ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ ಷಟ್‍ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ ನಿರವಯವಪ್ಪುದು ನೋಡಾ ! ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ, ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ, ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !
--------------
ಚನ್ನಬಸವಣ್ಣ
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು, ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ. ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ, ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ. ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ. ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ, ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ, ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ. ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ. ಇದಕ್ಕೆ ಎನಗೆ ನಿಶ್ಚಯ. ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
--------------
ಏಲೇಶ್ವರ ಕೇತಯ್ಯ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇಂತೀ ಷಡುಸ್ಥಲಚಕ್ರವರ್ತಿಯಯ್ಯಾ ನಮ್ಮ ಚನ್ನಬಸವಣ್ಣನು. ಷಡಕ್ಷರಂ ಸರ್ಮಮಂತ್ರಂ ಸರ್ವಾಂಚಾರಂ ಚ ಲಿಂಗಯೋ ಷಡ್ವರ್ಗಂ ತ್ರಿವಿಧ ಏಕಂ ತಸ್ಮಾತ್ ಲಿಂಗಂತು ಪೂಜನಂ || ಇಂತೆಂದುದಾಗಿ, ಆಚಾರವೆ ಕಾಯ, ಆಚಾರವೆ ಪ್ರಾಣ, ಆಚಾರವೆ ಅಂಗ, ಆಚಾರವೆ ಲಿಂಗ, ಆಚಾರವೆ ಸಂಗ. ಇಂತಪ್ಪ ಆಚಾರಕ್ಕೆ ಆಚಾರವೆ ಪ್ರಾಣವಾಗಿರಬಲ್ಲನಲ್ಲಯ್ಯಾ ನಮ್ಮ ಚನ್ನಬಸವಣ್ಣನು. ಶುದ್ಧಸಿದ್ಧ ಪ್ರಸಿದ್ಧ ಪ್ರಭುವೆ ಪ್ರಸನ್ನ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಚನ್ನಬಸವಣ್ಣನು ಸರ್ವಾಚಾರ ಸಂಗಸಂ[ಪ]ನ್ನನು. ಇಂತಪ್ಪ ಚೆನ್ನಬಸವಣ್ಣನ ನಿಲವ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಕ್ರೀಯ ಅನುವನರಿದಾತ ಗುರುವೆಂಬೆ, ಕ್ರೀಯ ಅನುವನರಿತುದು ಲಿಂಗವೆಂಬೆ, ಕ್ರೀಯ ಅನುವನರಿದಾತ ಜಂಗಮವೆಂಬೆ. ಇಂತೀ ತ್ರಿವಿಧಮೂರ್ತಿ ಆಚಾರಕ್ಕೆ ಅನುಕೂಲವಾಗಿ ಬಂಗಾರದೊಳಗೆ ಬಣ್ಣವಡಗಿದಂತೆ, ಆ ಬಣ್ಣವೇಧಿಸಿ ಬಂಗಾರವಾದಂತೆ. ಇಂತು ಆಚಾರಕ್ಕೂ ಅರಿವಿಂಗೂ ಪಡಿಪುಚ್ಚವಿಲ್ಲವಾಗಿ, ಆಚಾರವೆ ಕುಲ, ಅನಾಚಾರವೇ ಹೊಲೆ. ಇದಕ್ಕೆ ಒಲವರವಿಲ್ಲ, ಏಲೇಶ್ವರಲಿಂಗವ ಕೇಳಲಿಲ್ಲ.
--------------
ಏಲೇಶ್ವರ ಕೇತಯ್ಯ
ಒಡೆಯರು ಭಕ್ತರು ತಾವೆಂದು ಅಡಿಮೆಟ್ಟಿ ಹೋಹಲ್ಲಿ ತಡೆಯಿತು ಶಕುನವೆಂದುಳಿದಡೆ, ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಶಂಕೆಗಳು ಮುಂತಾದ ಸಂಕಲ್ಪಕ್ಕೊಳಗಾದಲ್ಲಿ ವ್ರತಕ್ಕೆ ಭಂಗ, ಆಚಾರಕ್ಕೆ ದೂರ. ಅದೆಂತೆಂದಡೆ: ಅಂಗಕ್ಕೆ ಆಚಾರವ ಸಂಬಂಧಿಸಿ, ಮನಕ್ಕೆ ಅರಿವು-ಅರಿವಿಂಗೆ ವ್ರತವ ಮಾಡಿದಲ್ಲಿ, ಬೇರೊಂದು ಪರಿಹರಿಸುವ ನಿಮಿತ್ತವುಂಟೇರಿ ಇಂತೀ ಸತ್ಕ್ರಿಯಾವಂತಗೆ ಕಷ್ಟಜೀವದ ಲಕ್ಷದಲ್ಲಿ ಚಿತ್ತ ಮೆಚ್ಚಿಹನ್ನಕ್ಕ ಆತನು ಆಚಾರಭ್ರಷ್ಟ, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಕ್ರೀವಂತಂಗೆ ಪಡಿಪುಚ್ಚಕ್ಕೆ ಬಂದಾಗವೆ ಆಚಾರಕ್ಕೆ ಭಂಗ. ಪಟುಭಟಂಗೆ ರಣಕ್ಕೆ ಹಂದೆಯಾದಲ್ಲಿಯೆ ಮಾತಿನ ಕೊರತೆ. ವಿರಾಗಿ ರಾಗಿಯಾದಲ್ಲಿಯೆ ಸಮತೆಯೆಂಬುದಕ್ಕೆ ಸಮಾಧಾನವಿಲ್ಲ. ವಿರಕ್ತನಾದಲ್ಲಿ ಸ್ತುತಿನಿಂದ್ಯಾದಿ ಕಂಗಳಲ್ಲಿ, ಅಂಗಭಾವ ನಿಂದಲ್ಲಿಯೆ ವಿರಕ್ತಿಯೆಂಬ ಸಂಗವಿಲ್ಲ. ಇಂತಿವರ ಸಂದನಳಿದಲ್ಲದೆ ಕ್ರೀ ಭಾವ ಜ್ಞಾನ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಹುದಹುದು, ಭಕ್ತಿಭಾವದ ಭಜನೆ ಎಂತಿರ್ದುದಂತೆ ಅಂತರಂಗದಲ್ಲಿ ಅರಿವು. ಆ ಅಂತರಂಗದ ಅರಿವಿಂಗೆ ಆಚಾರವೆ ಕಾಯ. ಆಚಾರವೆಂಬ ಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯನ ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ. ನಿನ್ನ ಅರಿವಿಂಗೆ ಆಚಾರವಾಗಿ, ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು ನಿನ್ನ ಸುಖಸಮಾಧಿಯ ತೋರು, ಬಾರಾ ಸಿದ್ಧರಾಮಯ್ಯ
--------------
ಅಲ್ಲಮಪ್ರಭುದೇವರು
ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು, ಸದಾಚಾರಿಗಳೆಲ್ಲಾ ಬನ್ನಿರಿಂದು, ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು ಕೀಲಿಗೆ ದೇವಾಲಯವ ನೋಡುವವನಂತೆ, ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ? ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಶೈವವಾರು, ವೀರಶೈವ ಮೂರು, ಗುರುಸ್ಥಲವೈದು, ಆಚಾರ್ಯನಂಗ ನಾಲ್ಕು, ಆಚಾರಕ್ಕೆ ಅಂಗವಾರು. ಆತ್ಮಂಗೆ ಅರಿವು ಮೂರು. ಮತ್ತಿವರೊಳಗಾದ ಷಡ್ದರುಶನಭೇದ. ಆಚರಣೆ ಆಶ್ರಯಂಗಳು ವಿಶ್ವತೋಮುಖವಾಗಿಹವು. ಚೀರದ ಬಾಯಿದಾರದಂತೆ ಕಟ್ಟುವುದು ಒಂದೆ ಭೇದ, ಬಿಡುವುದು ಒಂದೆ ಭೇದ. ಇಂತೀ ಸ್ಥಳಕುಳಂಗಳಲ್ಲಿ ಭೇದಂಗಳನರಿವುದು ಆಚಾರ್ಯನಿರವು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ವಿಭೇದವಾದಭೇದ.
--------------
ಪ್ರಸಾದಿ ಭೋಗಣ್ಣ
ಭಕ್ತರ ಮನೆಯಲ್ಲಿ ಭಕ್ತರು ಬಂದು ಕಳವು ಪಾರದ್ವಾರವ ಮಾಡಿದರೆಂದು ಹೊರಹಾಯ್ಕಿ ಎಂದು ನುಡಿಯಬಹುದೆ ? ಒಡೆಯರು ಭಕ್ತರ ನಿಂದೆಯ ಕೇಳೆನೆಂದು ತನ್ನೊಡವೆ ಒಡೆಯರು ಭಕ್ತರ ದ್ರವ್ಯವೆಂದು ಭಾವಿಸಿದಲ್ಲಿ ಮತ್ತೊಬ್ಬ ಅರಿಯದ ತುಡುಗುಣಿ ಮುಟ್ಟಿದಡೆ ಅವ ಕೆಡುವ. ಆಚಾರಕ್ಕೆ ಹೊರಗು, ತಾನರಿಯದಂತಿರಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸ್ಥನ ನೇಮ.
--------------
ಅಕ್ಕಮ್ಮ
ತನು ಮುಟ್ಟುವುದಕ್ಕೆ ಮುನ್ನವೇ ಮನ ಶೀಲವಾಗಿರಬೇಕು, ಮನ ಮುಟ್ಟುವುದಕ್ಕೆ ಮುನ್ನವೆ ಅರಿವು ಶೀಲವಾಗಿರಬೇಕು, ಅಂಗ ಮನ ಅರಿವು ವ್ರತಾಂಗದಲ್ಲಿ ಕರಿಗೊಂಡು ಆಚಾರಕ್ಕೆ ಅನುಸರಣೆಯಿಲ್ಲದೆ, ಆತ್ಮವ್ರತ ತಪ್ಪಿದಲ್ಲಿ ಓಸರಿಸದೆ, ಆ ವ್ರತದ ಅರಿವು ಹೆರೆಹಿಂಗದೆ ಇಪ್ಪಾತನಂಗವೆ ಏಲೇಶ್ವರಲಿಂಗದಂಗ.
--------------
ಏಲೇಶ್ವರ ಕೇತಯ್ಯ
ಆರಾರ ಭಾವಕ್ಕೆ ಒಳಗಾದ ವಸ್ತು, ಆರಾರ ಭ್ರಮೆಗೆ ಹೊರಗಾದ ವಸ್ತು, ಆರಾರ ಆಚಾರಕ್ಕೆ ಒಳಗಾದ ವಸ್ತು, ಆರಾರ ಅನಾಚಾರಕ್ಕೆ ಹೊರಗಾದ ವಸ್ತು, ಆಚಾರ ಶ್ರದ್ಧೆ ಇದ್ದಲ್ಲಿ ನೀನೆಂಬೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ಆ ಗುಣ ಇಲ್ಲದಿರ್ದಡೆ ನೀನು ಎನ್ನವನಲ್ಲಾ ಎಂಬೆ.
--------------
ಅಕ್ಕಮ್ಮ
ಇನ್ನಷ್ಟು ... -->