ಅಥವಾ

ಒಟ್ಟು 99 ಕಡೆಗಳಲ್ಲಿ , 34 ವಚನಕಾರರು , 87 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಿರ ಹಳಿದು ತನ್ನ ಬಣ್ಣಿಸುವನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಹಮ್ಮು ಬಿಮ್ಮು ಹೆಮ್ಮೆ ಹಿರಿತನವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಉದಮದ ಗರ್ವ ಅಹಂಕಾರ ಮಮಕಾರವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಆಸೆ ಆಮಿಷ ಕ್ಲೇಶ ತಾಮಸವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಇಂತೀ ಗುಣಂಗಳುಳ್ಳನ್ನಕ್ಕರ ಶಿವಾನುಭಾವಿಯೆಂತಪ್ಪನಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ. ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ ಇಂತೀ ಉಭಯ ಪಾಶಬದ್ಧರ ಕೈಯಿಂದ ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು, ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ, ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ, ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ. ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು. ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ ನಿಲುಕಡೆಯ ತಿಳಿಯದ ಕಾರಣ. ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು, ಸರ್ವಾಂಗಲಿಂಗಮಯವಾಗಿರುವಂಥ ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ, ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ ಇಂತೀ ಉಭಯ ಭಕ್ತಗಣಂಗಳು ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು, ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು, ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ. ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು. ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಮತ್ತಂ, ಲಿಂಗಾಂಗಸಂಬಂದ್ಥಿಯಾಗಿ ಸರ್ವಾಚಾರ ನೆಲೆಗೊಂಡು ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ, ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ, ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ ದೀರ್ಘದಂಡನಮಸ್ಕಾರಮಂ ಮಾಡಿ ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು. ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ, ಅಥವಾ ಜಂಗಮಲಿಂಗಿಗಳಲ್ಲಾಗಲಿ, ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ, ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು, ತೋರದಿದ್ದರೆ ಪ್ರಮಥರು ಮೆಚ್ಚರು. ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ಮನವಿದ್ದಲ್ಲಿಯೇ ನಿಮ್ಮ ನೆನೆಯಬೇಕು. ಬುದ್ಧಿಯಿದ್ದಲ್ಲಿಯೇ ನಿಮ್ಮ ವಿಚಾರಿಸಬೇಕಯ್ಯ. ಚಿತ್ತವಿದ್ದಲ್ಲಿಯೇ ನಿಮ್ಮ ನಿಶ್ಚಯಿಸಬೇಕು. ಅಹಂಕಾರವಿದ್ದಲ್ಲಿಯೇ ನಿಮ್ಮ ಮಮಕರಿಸಬೇಕಯ್ಯ. ಕಾಯವಿದ್ದಲ್ಲಿಯೇ ಸಾಯದ ಸಂಚವನರಿದು ಎಚ್ಚತ್ತಿರಬೇಕಯ್ಯ. ಜೀವಹಾರಿಯ ಕೆಡೆದು ಭೂಗತವಾಗಿ, ವಾಯುಪ್ರಾಣಿಯಾಗಿ ಹೋಹಾಗ, ಆಗ ಮುಕ್ತಿಯ ಬಯಸಿದರುಂಟೇ? ಚಿತ್ತ ಬುದ್ಧಿ ಅಹಂಕಾರ ಮನ ಜಾÕನ ಭಾವಂಗಳ ಮೀರಿದ, ನಿರ್ಭಾವ ಲಿಂಗೈಕ್ಯನಾದ ನಿರಾಶ್ರಯನಯ್ಯ ಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಜ್ಜನಸನ್ನಹಿತವಾದ ಭಕ್ತಿ, ಹೊತ್ತಿಗೊಂದು ಪರಿಯುಂಟೆ ಹೇಳಾ ? ಒಮ್ಮೆ ಅಹಂಕಾರ ಒಮ್ಮೆ ಕಿಂಕಿಲವೆ ? ಮನಕ್ಕೆ ಮನ ಸಾಕ್ಷಿಯಾಗಿ ಮಾಡುವ ಭಕ್ತನಲ್ಲಿ ಗುಹೇಶ್ವರನಿಪ್ಪನಲ್ಲದೆ, ಪ್ರಪಂಚಿನೊಳಗಿಲ್ಲ ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಊದ್ರ್ವಮುಖವಾದ, ಅನಂತೇಶನೆಂಬ ವಾಸುಕಿಯ ಶಿರದ ಮೇಲಿಹ ಅಷ್ಟದಳಾಬ್ಜಮಧ್ಯದಲ್ಲಿ, ಒಪ್ಪುತ್ತಿಹ ಶುದ್ಧವಿದ್ಯೆಯೇ ಪೀಠವಾದ ಶಿವಲಿಂಗವೊಂದರಲ್ಲಿ, ದೃಢಭಕ್ತಿಯುಳ್ಳಾತನ ದೇಹವೇ ಲಿಂಗದೇಹವು. ಆ ಚಿದ್ರೂಪನಾದ ಪರಮ ಸ್ವರೂಪನ ಮೂರ್ತಿ ತಾನೇ ಇಷ್ಟಲಿಂಗವು. ಆ ಇಷ್ಟಲಿಂಗದಲ್ಲಿ ದೇಹವನಡಗಿಸಿದ ಮಹಾತ್ಮನ ಮನ ಬುದ್ಧಿ ಅಹಂಕಾರ ಇಂದ್ರಿಯಾದಿ ಗುಣಂಗಳು ಜನನಾದಿ ವಿಕಾರಂಗಳ ಹೊದ್ದವಾಗಿ, ಆತ ನಿರ್ದೇಹಿ, ನಿಜಗುರು ಸ್ವತಂತ್ರಲಿಂಗೇಶ್ವರನ ಶರಣನುಪಮಾತೀತನು.
--------------
ಸ್ವತಂತ್ರ ಸಿದ್ಧಲಿಂಗ
ಸೋಹಂ ಎಂದಡೆ ಅಂತರಂಗದ ಗರ್ವ; ಶಿವೋಹಂ ಎಂದಡೆ ಬಹಿರಂಗದ ಅಹಂಕಾರ ; ಈ ಉಭಯವನಳಿದು ದಾಸೋಹಂ ಎಂದಡೆ ಪರಮಪದವು. ಇದು ಕಾರಣ, ಎನಗೆ ದಾಸೋಹಂ ಭಾವವನೆ ಕರುಣಿಸಿ ಬದುಕಿಸಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ, ಹೇಳುವೆ ಕೇಳಿರಣ್ಣಾ : ಆ ಆಕಾಶ ಆಕಾಶವ ಬೆರಸಲು ಜ್ಞಾನ ಹುಟ್ಟಿತ್ತು. ಆ ಆಕಾಶ ವಾಯುವ ಬೆರಸಲು ಮನ ಹುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಹುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಹುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಹುಟ್ಟಿತ್ತು. ಇಂತಿವು ಕರಣಚತುಷ್ಟಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಕ್ತಂಗೆ ಸ್ಪರ್ಶನ ವಿಷಯವಳಿದು ಮಾಹೇಶ್ವರಂಗೆ ಅಪ್ಪು ವಿಷಯವಳಿದು ಪ್ರಸಾದಿಗೆ ರುಚಿ ವಿಷಯವಳಿದು ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು ಶರಣಂಗೆ ಸುಖದುಃಖ ವಂದನೆ ನಿಂದೆ ಅಹಂಕಾರ ಭ್ರಮೆ ವಿಷಯವಳಿದು ಐಕ್ಯಂಗೆ ಇಂತೀ ಐದರ ಭೇದದಲ್ಲಿ ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ ಮುಂದಣ ಹಿಂದಣ ಸಂದೇಹದ ವಿಷಯ ನಿಂದು ಕರ್ಪುರವುಳ್ಳನ್ನಕ್ಕ ಉರಿಯ ಭೇದ ಉರಿವುಳ್ಳನ್ನಕ್ಕ ಕರ್ಪುರದಂಗ. ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಸದ್ಯೋಜಾತನ ಮುಟ್ಟಿ, ಪೃಥ್ವಿ ಬಯಲಾಗಿ ಚಿತ್ತ ಪಂಚಕವು ಕೆಟ್ಟವು ನೋಡಾ. ವಾಮದೇವನಿಗೊಲಿದು, ಅಪ್ಪು ಬಯಲಾಗಿ ಬುದ್ಧಿ ಪಂಚಕವು ಕೆಟ್ಟವು ನೋಡಾ. ಅಘೋರನ ನೆರೆದು, ಅಗ್ನಿ ಬಯಲಾಗಿ ಅಹಂಕಾರ ಪಂಚಕವಳಿದು ನಿರಹಂಕಾರಿಯಾದೆನಯ್ಯ. ತತ್ಪುರುಷನನಪ್ಪಿ, ವಾಯು ಬಯಲಾಗಿ ಮನಪಂಚಕವಳಿದವು ನೋಡಾ. ಈಶಾನ್ಯನೊಡಗೂಡಿ, ಆಕಾಶಬಯಲಾಗಿ ಭಾವ ಪಂಚಕವಳಿದು ನಿರ್ಭಾವಿಯಾಗಿ ನಿಜಲಿಂಗೈಕ್ಯನಾದೆನಯ್ಯ. ಎಲ್ಲಾ ಪದಂಗಳ ಮೀರಿ ಮಹಾಲಿಂಗ ಪದದೊಳಗೆ ಸಂಯೋಗವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗವ ನೆರೆಯರಿದು ನಿಷ್ಠೆ ನಿಬ್ಬೆರಸಿದ ಬಳಿಕ ಅಹಂಕಾರ ಮಮಕಾರಂಗಳುಂಟೆ? ಪಂಚಕ್ಲೇಶಂಗಳು ಮದ ಮತ್ಸರಗಳುಂಟೆ? ಕ್ರಾಮ ಕ್ರೋಧಂಗಳು ತಾಮಸಗುಣಂಗಳುಂಟೆ? ಲಿಂಗದಂಗವೆ ಅಂಗವಾದ ಲಿಂಗದೇಹಿಗೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅರಿಯಬಾರದ ಘನವನರಿದು ಸಾದ್ಥಿಸಿ ಗೆದ್ದ ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ? ಅವರಿಪ್ಪರು ಲಂಗಪ್ರಭೆಯೊಳಗೆ; ನಾನಿಪ್ಪೆನು ಅಹಂಕಾರ ಪಂಜರದೊಳಗೆ ಎನ್ನ ನೊಸಲ ಕಣ್ಣಿನ ಕಿಚ್ಚುಡುಗಿ ಲಜ್ಜಿತವಾಗಿ ಮರಳಿ ಬಂದೆನ್ನ ಸ್ತುತಿ ಮುತ್ತಿತ್ತು ನಾನು ಶರಣೆಂಬ ಗುರುವಚನವಿದಿರೆದ್ದು ಕೊಲುವಡೆ, ಕಪಿಲಸಿದ್ಧಮಲ್ಲಿನಾಥನೊಳಗೆ ಅಳಿವೆನಲ್ಲದೆ ಉಳಿವನಲ್ಲ.
--------------
ಸಿದ್ಧರಾಮೇಶ್ವರ
ಭಾಜನಕ್ಕೆ ಸರ್ವಾಂಗವ ಬಾಸಣಿಸುವಾಗ ಅದು ಆ ಕುಂಭಕ್ಕೊ, ತನ್ನಂಗಕ್ಕೊ ಎಂಬುದನರಿತು, ಸರ್ವಾಂಗ ಪಾವಡವ ಕಟ್ಟುವ ವಿವರ ; ಮನ, ಬುದ್ಧಿ, ಚಿತ್ತ, ಅಹಂಕಾರ ಎಂಬ ಚತುರ್ಭಾವದ ಸೆರಗಿನಲ್ಲಿ ಗುಹ್ಯೇಂದ್ರಿಯವಂ ಕಳೆದು, ಜಿಹ್ವೇಂದ್ರಿಯವೆಂಬ ಅಂಗ ಭಾಜನಕ್ಕೆ ಸರ್ವಾಂಗ ಪಾವಡವಂ ಕಟ್ಟಿ, ಮಣ್ಣೆಂಬ ಆಸೆಯ ಬಿಟ್ಟು, ಹೊನ್ನೆಂಬ ಆಸೆಯ ಬಿಟ್ಟು, ಹೆಣ್ಣೆಂಬ ಮೋಹದಲ್ಲಿ ಮಗ್ನವಾಗದೆ, ಮಣ್ಣೆಂಬ ಆಸೆಯ ಗುರುವಿನಲ್ಲಿ, ಹೊನ್ನೆಂಬ ಆಸೆಯ ಲಿಂಗದಲ್ಲಿ, ಹೆಣ್ಣೆಂಬ ಮೋಹವ ಜಂಗಮದಲ್ಲಿ, ಕೊಡುವ ವ್ರತವನರಿಯದೆ ಆಚಾರ ಅಂಗದಲ್ಲಿ ಇಂತೀ ವ್ರತನೇಮವಲ್ಲದ ಮಣ್ಣ ಮಡಕೆಯ ಗನ್ನದಲ್ಲಿ ಕಟ್ಟಿದಡೆ ಪ್ರಸನ್ನನ ವ್ರತದಣ್ಣಗಳೆಲ್ಲರು ಇದ ಚೆನ್ನಾಗಿ ತಿಳಿದು ನೋಡಲಾಗಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತ ನೇಮ ಹರಿತವಾಯಿತ್ತು.
--------------
ಅಕ್ಕಮ್ಮ
ಭೃತ್ಯತ್ವದಿಂದ ಕಾಯ ಶುದ್ಧಮಾಗುವುದಯ್ಯ. ಭೃತ್ಯತ್ವದಿಂದ ಮನ ಸಿದ್ಧವಾಗುವುದಯ್ಯ. ಭೃತ್ಯತ್ವದಿಂದ ಭಾವ ಪ್ರಸಿದ್ಧವಾಗುವುದಯ್ಯ. ಭೃತ್ಯತ್ವದಿಂದ ಪ್ರಾಣ ಪರಬ್ರಹ್ಮವನೊಡಗೂಡುವುದಯ್ಯ. ಭೃತ್ಯತ್ವದಿಂದ ಕಾಮ ನಿಷ್ಕಾಮವಾಗುವುದಯ್ಯ. ಭೃತ್ಯತ್ವದಿಂದ ಕ್ರೋಧ ನಿಷ್ಕೋಧವಾಗುವುದಯ್ಯ. ಭೃತ್ಯತ್ವದಿಂದ ಲೋಭ ನಿರ್ಲೋಭವಾಗುವುದಯ್ಯ. ಭೃತ್ಯತ್ವದಿಂದ ಮೋಹ ನಿರ್ಮೋಹವಾಗುವುದಯ್ಯ. ಭೃತ್ಯತ್ವದಿಂದ ಮದ ನಿರ್ಮದÀವಾಗುವುದಯ್ಯ. ಭೃತ್ಯತ್ವದಿಂದ ಮತ್ಸರ ನಿರ್ಮತ್ಸರವಾಗುವುದಯ್ಯ. ಭೃತ್ಯತ್ವದಿಂದ ಆಸೆ ನಿರಾಸೆಯಾಗುವುದಯ್ಯ. ಭೃತ್ಯತ್ವದಿಂದ ಕುಚಿತ್ತ ಸುಚಿತ್ತವಾಗುವುದಯ್ಯ. ಭೃತ್ಯತ್ವದಿಂದ ಕುಬುದ್ಧಿ ಸುಬುದ್ಧಿಯಾಗುವುದಯ್ಯ. ಭೃತ್ಯತ್ವದಿಂದ ಅಹಂಕಾರ ನಿರಹಂಕಾರವಾಗುವುದಯ್ಯ. ಭೃತ್ಯತ್ವದಿಂದ ಕುಮನ ಸುಮನವಾಗುವುದಯ್ಯ. ಭೃತ್ಯತ್ವದಿಂದ ಅಜ್ಞಾನ ಸುಜ್ಞಾನವಾಗುವುದಯ್ಯ. ಭೃತ್ಯತ್ವದಿಂದ ದುರ್ಭಾವ ಸದ್ಭಾವವಾಗುವುದಯ್ಯ. ಭೃತ್ಯತ್ವದಿಂದ ನಿಜನೈಷ್ಠೆ ದೊರವುದು ನೋಡ ಗುರುಹಿರಿಯರಲ್ಲಿ ಭೃತ್ಯತ್ವವುಳ್ಳಾತನೆ ಸಾಕ್ಷಾತ್ಪರತತ್ವಲಿಂಗ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಒಂದೊಂದರ ಸಂಬಂಧ ಮತ್ತೊಂದಕ್ಕಳವಡದು. ಕಂದನೊಳಗಣ ಸ್ವಪ್ನ ಮುಂದುದೋರುವುದೇ ? ಚಂದ್ರಕಾಂತಶಿಲೆಯಲ್ಲಿ ರತ್ನವ ಕಂಡೆನೆಂಬ ಅಹಂಕಾರ ನಿನಗೇಕೆ ಶರಣಾ? ಕೈಯ ಕುರುಹಳಿಯದು, ಬಾಯ ಮೊರೆ ಮಿಗೆವರಿಯುತ್ತಿದೆ, ಕೂಡಲಚೆನ್ನಸಂಗಯ್ಯನಲ್ಲಿ ಬಸವನೂ ಪ್ರಭುವೂ ಇಬ್ಬರೂ ಮರುಳಾದರು.
--------------
ಚನ್ನಬಸವಣ್ಣ
ಇನ್ನಷ್ಟು ... -->