ಅಥವಾ

ಒಟ್ಟು 302 ಕಡೆಗಳಲ್ಲಿ , 52 ವಚನಕಾರರು , 180 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು ! ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು. ರಂಜನೆಗೊಳಗಪ್ಪುದೆ ? _ಆಗರದ ಸಂಚವನರಿಯರು ! ರಂಜಕನೂ ಅಲ್ಲ, ಭುಂಜಕನೂ ಅಲ್ಲ, ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು !
--------------
ಅಲ್ಲಮಪ್ರಭುದೇವರು
ಘಟದ ಮಧ್ಯದಲ್ಲಿ ನಿಂದವನ, ಆತ್ಮನ ಚಿತ್ತದಲ್ಲಿ ಅರಿದವನ, ಅಲ್ಲ ಆಹುದೆಂದು ಗೆಲ್ಲ ಸೋಲಕ್ಕೆ ಹೋರದವನ, ಎಲ್ಲಾ ಜೀವಂಗಳಲ್ಲಿ ದಯವುಳ್ಳವನ, ಆತನೆಲ್ಲಿಯೂ ಸುಖಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ. ಈ ದೇಹದ ಆತ್ಮನ ಸಂಪರ್ಕದಿಂದ ಹುಟ್ಟಿದ ಸಕಲ ಕರಣೇಂದ್ರಿಯಂಗಳೆ ಮಕ್ಕಳು ನೋಡಾ. ಇದೇ ಸಂಸಾರವೆಂಬುದನರಿಯದೆ ಬಹಿರಂಗದಲ್ಲಿ, ನಾನು ಹೊನ್ನು ಹೆಣ್ಣು ಮಣ್ಣು ಬಿಟ್ಟು ವಿರಕ್ತನಾದೆನೆಂಬ ಅಜಾÕನಿಯ ಪರಿಯ ನೋಡಾ. ಇದು ವಿರಕ್ತಿಯೇ? ಅಲ್ಲ. ದೇಹೇಂದ್ರಿಯ ಮನಃಪ್ರಾಣಾದಿಗಳ ಮಹದಲ್ಲಿ ಒಡಗೂಡಿದಾತನೇ ಪರಮ ವಿರಕ್ತನು. ಆತಂಗೆ ನಮೋ ನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೊಡುವವ ಮಾನವನೆಂದು ಒಡಲಾಸೆಯ ತೋರದಿರು, ಕೊಡುವವ ಮಾನವನಲ್ಲ. ಕೊಡುವವ ಕೊಂಬುವವ ಮಾನವರ ನಡುವಿಪ್ಪ ಮಹಾತ್ಮ ಸಂಜೀವಂಗೆ ಒಡಲಾಸೆ ತೋರಿ ಬೇಡಿಕೊ. ಜೀವನ ಬುದ್ಧಿಯಿಂದ ನರನನಾಸೆಗೈಯದಿರು. ಆಸೆಗೈದರೆ ಕಾವವರಲ್ಲ , ಕೊಲ್ಲುವವರೂ ಅಲ್ಲ , ಕೊಡುವವರೂ ಅಲ್ಲ , ಬಿಡುವವರೂ ಅಲ್ಲ . ನಾಯ ಬಾಲವ ನಂಬಿ ಹೊಳೆಯ ಹಾದವರುಂಟೇ ? ವೈಷಭನ ಬಾಲವ ಪಿಡಿದರೆ ನದಿಯ ತಡಿಯ ಸೇರುವರಲ್ಲದೆ. ನಂಬು ನಂಬು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲನೆಂಬ ಮಹಾಭಾಗ್ಯವ ನಂಬಿದರೆ ನಿನಗೆ ಬಡತನವೆ ಆತ್ಮ ?
--------------
ಹೇಮಗಲ್ಲ ಹಂಪ
ಜಂಗಮವೇನು ಕಾಮಿಯೇ? ಕ್ರೋದ್ಥಿಯೇ? ಲೋಬ್ಥಿಯೇ? ಅಲ್ಲ ಕಾಣಿರಣ್ಣ. ಮೋಹಿಯೇ? ಮದಡನೇ? ಮತ್ಸರನೇ? ಅಲ್ಲ ಕಾಣಿರಣ್ಣ. ಅಹಂಕಾರಿಯೇ ಮಮಕಾರಿಯೇ ಪ್ರಪಂಚಿಯೇ? ಇಂತೀ ಪ್ರಕೃತಿರೂಪನಲ್ಲ ಕಾಣಿರಣ್ಣ. ನಿಃಕಾಮಿ, ನಿಃಕ್ರೋದ್ಥಿ, ನಿರ್ಲೋಬ್ಥಿ, ನಿರ್ಮೋಹಿ, ನಿರ್ಮದ, ನಿರ್ಮತ್ಸರನಯ್ಯ. ನಿರಹಂಕಾರಿ, ನಿರ್ಮಮಕಾರಿ, ನಿಃಪ್ರಪಂಚಿ, ನಿರ್ಲೇಪಕನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಸುಗಂಧ ದುರ್ಗಂಧವೆಂಬುಭಯವ ನಾಸಿಕವರಿದು, ಹೆರೆಹಿಂಗುವ ಪರಿಯಿನ್ನೆಂತೊ ? ಸುಳಿವ ವಾಸನೆಗೆ ಮೊದಲೆ, ಅಲ್ಲ ಅಹುದೆಂಬುದನರಿತು, ಅರ್ಪಿತವ ಮಾಡಬಲ್ಲಡೆ ಬಲ್ಲರೆಂಬೆ. ಇಂತಿವರಲ್ಲಿ ಪ್ರಾಣಲಿಂಗಾರ್ಪಿತವುಳಿಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದೃಶ್ಯವ ಕಾಬ ದೃಷ್ಟನಾರೋ ಎಂದಡೆ ದೃಶ್ಯ ದೃಷ್ಟಗಳನರಿವ ಅರಿವದು ದೃಶ್ಯನೂ ಅಲ್ಲ ದೃಷ್ಟನೂ ಅಲ್ಲ. ಅದೃಶ್ಯಭಾವ ದೃಷ್ಟಿ ಚಿನ್ಮಯ ದರ್ಶನಾದಿ ಕ್ರಿಯೆಯಿಲ್ಲದ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇರಿ ಜನಿಸಿ ಜನಿತವ ಬಗೆಯರಾಗಿ ಎಮ್ಮ ಪುರಾತನರೇ ನಿರೂಪರು, ಕುಲದಲ್ಲಿ ಹುಟ್ಟಿ ಕುಲವ ಬೆರೆಸರಾಗಿ ಎಮ್ಮ ಪುರಾತನರೇ ಕುಲಜರು. ಆದಿಲಿಂಗ ಅನಾದಿಶರಣ. ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ. ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ. ಹರನೇ, ನೀ ಬೇಡಿತ್ತ ಕೊಟ್ಟು ನೀ ಬಂದರೆ ನಿನ್ನನಾಗುಮಾಡಿದರಲ್ಲದೆ ಎಮ್ಮ ಪುರಾತನರು ನಿಮ್ಮಲ್ಲಿಗೆ ಬಂದು ದೈನ್ಯಬಟ್ಟು ಬೇಡಿದರಲ್ಲೈ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದದ್ಥಿಯೋ ? ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ? ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ ಮನೋನಾಥನ ಅನುವ ವಿಚಾರಿಸಿ ಮನ ಮನನೀಯ ಭಾವ ಭಾವನೆ ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ. ಇಂತಿವನೆಲ್ಲವನೂ ತೆರದರಿಶನದಿಂದರಿದು ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ ಕಮಠೇಶ್ವರಲಿಂಗವು ತಾನಾದ ಶರಣ.
--------------
ಬಾಲಸಂಗಣ್ಣ
ಪರಿಯಾಣವೇ ಭಾಜನವೆಂಬರು. ಪರಿಯಾಣ ಭಾಜನವೇರಿ ಅಲ್ಲ. ಘನಲಿಂಗಕ್ಕೆ ಶುದ್ಧ ನಿರ್ಮಲವಾದ ಸಕಲಕರಣಂಗಳೇ ಭಾಜನ. ನಿಜಾನಂದವೇ ಭೋಜನ. ಪರಿಣಾಮವೇ ಪ್ರಸಾದ. ಇಂತಿವರಲ್ಲಿ ನಿರುತನಾಗಿರಬಲ್ಲ ¸õ್ಞರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ ವೃದ್ಧನೆಂದು ಅರಸಲುಂಟೇ ? ಅರಸಿದರೆ ಮಹಾಪಾತಕ. ಸಾಕ್ಷಿ :`` ಆಚಾರ್ಯೇ ಬಾಲಬುದ್ಧಿಶ್ಚ ನರಬುದ್ಧಿಸ್ತಥೈವ ಚ | ಅಸಿಷ್ಟ ಬುದ್ಧಿಭಾವೇನ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಎನ್ನ ಗುರು ಬಾಲನೂ ಅಲ್ಲ, ಯೌವನನೂ ಅಲ್ಲ, ವೃದ್ಧನೂ ಅಲ್ಲ. ಮೃತರಹಿತ ಪರಶಿವ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ. ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ. ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ. ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ, ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು. ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಊರನಾಶ್ರಯಿಸುವನೆ ಉಪಜೀವಿಗಳಂತೆ? ಕಾಡನಾಶ್ರಯಿಸುವನೆ ಕರಡಿಯಂತೆ? ಊರನಾಶ್ರಯಿಸುವನಲ್ಲ, ಕಾಡಾನಶ್ರಯಿಸುವನೂ ಅಲ್ಲ ನೋಡಾ. ಊರಾವುದು ಕಾಡುವುದು ಎಂದರಿಯದೆ ಕಳವಳಿಸುತ್ತಿಪ್ಪರು ನೋಡಾ. ಊರೆಂದರೆ:ಮಾಯಾಸಂಬಂಧವಾದ ಪಂಚಭೌತಿಕ ಗ್ರಾಮ. ಕಾಡೆಂದರೆ:ಆ ಕಾಯವನಾಶ್ರಯಿಸಿಕೊಂಡಿಪ್ಪ ಸಕಲ ಕರಣಂಗಳು ಕಾಣಮರುಳೆ. ಕಾಯದ ಕರಣಂಗಳಿಗೆ ವಶಗತವಾಗಿರ್ದು ಊರಿಗೆ ಹೊರಗಾಗಿದ್ದೆನೆಂಬ ಉಪಜೀವಿಗಳನೇನೆಂಬೆನಯ್ಯ? ಇದುಕಾರಣ ನಿಮ್ಮ ಶರಣರು ಕಾಯವನು ಜೀವವನು ಕರಣವನು ಕೇವಲ ಪರಂಜ್ಯೋತಿಲಿಂಗದೊಳಗೆ ಬೆರಸಿ ಬೇರಿಲ್ಲದೆ ಕಾಯವನು ಜೀವವನು ಕರಣವನು ಹೊದ್ದದೆ ಮಹಾಘನಲಿಂಗಪದದೊಳಗಿಪ್ಪರಯ್ಯ ಪ್ರಾಣಲಿಂಗ ಸಂಬಂದ್ಥಿಗಳು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->