ಅಥವಾ

ಒಟ್ಟು 56 ಕಡೆಗಳಲ್ಲಿ , 1 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ತೆರೆಯ ಮರೆಯ ಬಹು ರೂಪದಂತೆ, ಸೀರೆಯ ಮರೆಯ ಉಪಸ್ಥಳದಂತೆ, ಆ ಪೂರ್ವ ಕಟ್ಟಿದ ಮರೆಯ ಬಿಡುವನ್ನಕ್ಕ ಸೈರಿಸಲಾರದವನಂತೆ ಎನ್ನ ತಲ್ಲಣ. ನಿನ್ನಯ ಕಲ್ಲಿನ ಮರೆಯ ನನ್ನಿಯ ರೂಪ ತೋರು. ಎನ್ನಯ ಕಲ್ಲೆದೆಯ ಬಿಡಿಸು, ಮನೋವಲ್ಲಭ, ಅಲೇಖನಾದ ಶೂನ್ಯ, ಉರಿಗಲ್ಲಿನ ಖುಲ್ಲತನವ ಬಿಡು, ಬೇಡಿಕೊಂಬೆ ನಿನ್ನನು.
--------------
ವಚನಭಂಡಾರಿ ಶಾಂತರಸ
ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ ಶಕ್ತಿ ಕೂಡಿ ಪ್ರಣವವಾಯಿತ್ತು. ಮಾತಿನ ಸೂತಕದಿಂದ ವೇದವಾಯಿತ್ತು, ನೀತಿಯ ಹೇಳುವಲ್ಲಿ ಶಾಸ್ತ್ರವಾಯಿತ್ತು. ಸರ್ವರ ಕೂಟದ ಕೂಗಿನಿಂದ ಪುರಾಣವಾಯಿತ್ತು. ಇಂತಿವರ ಗೋಷ್ಠಿಯ ಹುದುಗಿಗಾರದೆ, ಅಲೇಖನಾದ ಶೂನ್ಯ ಕಲ್ಲಿನೊಳಗಾದ.
--------------
ವಚನಭಂಡಾರಿ ಶಾಂತರಸ
ಮಾರುತನ ಸಂಗದ ಸ್ಫುಟಿತ ಪಲ್ಲವ ಕಾಷ್ಠ ತೃಣ, ಇವು ಮೊದಲಾದವೆಲ್ಲವು ಗಂಡಾಕಾರವಾಗಿ ತೋರಿ, ಸಂಚಾರ ಹಿಂಗೆ, ಮತ್ತವು ಪುನರಪಿಯಂತಾಗೆ. ಚಿತ್ತ ನಾಲ್ಕರೊಳು ಕೂಡಿದ ಮತ್ತಳಿಯೆ, ಚಿತ್ತದ ಬಂಧವಾವುದು ಹೇಳು, ಅಲೇಖನಾದ ಶೂನ್ಯಕಲ್ಲಿನ ಮನೆಯವನೆ.
--------------
ವಚನಭಂಡಾರಿ ಶಾಂತರಸ
ಎತ್ತಬಾರದ ಕಲ್ಲು ನೀರಿನ ಮೇಲೆ ತೆಪ್ಪದಂತೆ ಹೋದಾಗ ಮೇಲೆ ಕುಳಿತು ಒತ್ತುವರ ನುಂಗಿತ್ತು. ನುಂಗಿದವರು ಅಲ್ಲಿದಂತೆ ಹೊಳೆಯ ನೀರ ತಪ್ಪಲಿಕ್ಕೆ ಕುಡಿದು, ಆ ತೆಪ್ಪ ಪೃಥ್ವಿಯಲ್ಲಿ ನಿಂದಿತ್ತು. ಈ ಗುಣಬ್ಥಿತ್ತಿಯ ಕೇಳಿಹರೆಂದು, ಅಲೇಖನಾದ ಶೂನ್ಯ ಶಿಲೆಯ ಮರೆಯಾದ.
--------------
ವಚನಭಂಡಾರಿ ಶಾಂತರಸ
ಪೃಥ್ವಿಯಲ್ಲಿದ್ದು ಪೃಥ್ವಿಯನರಿತು, ಅಪ್ಪುವಿನಲ್ಲಿದ್ದು ಅಪ್ಪುವನರಿತು, ತೇಜದಲ್ಲಿದ್ದು ತೇಜವನರಿತು, ವಾಯುವಿನಿಲ್ಲಿದ್ದು ವಾಯುವನರಿತು, ಆಕಾಶದಲ್ಲಿದ್ದು ಆಕಾಶವನರಿತು, ತನ್ನಲ್ಲಿದ್ದು ತನ್ನನರಿತು, ಕಣ್ಣಿನೊಳಗಣ ಕಣ್ಣ ಕಂಡು ಕಲ್ಲಿನೊಳಗಡಗಿ, ಅಲೇಖನಾದ ಶೂನ್ಯನ ಭೇದವನರಿತು, ಕಾಯವನರಿ
--------------
ವಚನಭಂಡಾರಿ ಶಾಂತರಸ
ಬ್ರಹ್ಮಮೂರ್ತಿಗೂ ಶಿಲೆ ಒಂದೆ, ವಿಷ್ಣು ಮೂರ್ತಿಗೂ ಶಿಲೆ ಒಂದೆ, ರುದ್ರಮೂರ್ತಿಗೂ ಶಿಲೆ ಒಂದೆ, ರೂಪಿನ ಅವತಾರ ಬ್ಥಿನ್ನವಾಯಿತ್ತು, ಸ್ಥೂಲ ಸೂಕ್ಷ್ಮ ಕಾರಣದಂತೆ, ಕುಂಭ ಜಲ ಬಿಂಬದಂತೆ, ಇನ್ನಾರನಹುದೆಂಬೆ, ಇನ್ನಾರನಲ್ಲಾ ಎಂಬೆ ? ಬ್ರಹ್ಮ ಕಾಲು, ವಿಷ್ಣು ಕೈ, ರುದ್ರ ಕಣ್ಣು, ಈಶ್ವರ ತಲೆ, ಸದಾಶಿವ ಪ್ರಾಣವಾದಲ್ಲಿ ಇವು ಸಮಯ. ಈ ಪಂಚಕೋಶಕ್ಕೆ ಆಧಾರ ಪರಮಜ್ಞಾನ. ಅದ ಭೇದಿಸಲರಿಯದೆ ವಾದವ ಮಾಡಿದರೆಲ್ಲರು. ನಾದ ಬಿಂದು ಕಳೆ ಅತೀತನರಿ, ಅಲೇಖನಾದ ಶೂನ್ಯ ಕಲ್ಲಿನೊಳಗಾದವನ.
--------------
ವಚನಭಂಡಾರಿ ಶಾಂತರಸ
ವಾಸನೆ ವೆಗ್ಗಳದ ಕುಸುಮವ, ಅದ ಲೇಸ ಕಂಡು ವಾಸಿಸಿದಡೆ ಸುಖವಲ್ಲದೆ, ಅದ ಘಾಸಿ ಎಸೆದಡೆ ಅದೇತರ ಗಂಧ ? ನಾತದ ಕೂಟ. ಭಕ್ತನ ಪೂಜೆಯ ಗುರುವಿನ ಯುಕ್ತಿ, ಇಷ್ಟನರಿತಡೆ ಆತನಿರವು, ತತ್ವದ ಬ್ಥಿತ್ತಿ, ಅಲೇಖನಾದ ಶೂನ್ಯ ಕಲ್ಲಿನ ಮೆಲ್ಲೆದೆಯಾಗದಿರಯ್ಯಾ.
--------------
ವಚನಭಂಡಾರಿ ಶಾಂತರಸ
ಕಾಲಲ್ಲಿ ಕಟ್ಟಿದ ಸಡ್ಡೆಯ ಕೀಳುವರಿಲ್ಲ. ಕೈಯಲ್ಲಿ ಹಿಡಿದ ಮೊರನ ಬೇಡಾ ಎಂಬವರಿಲ್ಲ. ತಲೆಯಲ್ಲಿ ಹೊತ್ತ ಕೊಂಗವ ಇಳುಹುವರಿಲ್ಲ. ಸಡ್ಡೆಗೆ ಮೂರು ಕವೆ. ಒಂದೆ ಚಿತ್ತವಟ್ಟ. ಮೊರಕೆ ಮೂರು ಗೋಟು, ಮಾಡುವಾಕೆ ಒಬ್ಬಳೆ. ಕೊಂಗಕ್ಕೆ ಎರಡು ಗೋಟು, ತೂರುವರು ಮೂವರು. ರಾಶಿವೊಂದೆ, ಕೊಳಗ ಎರಡು, ಅಳೆವರು ಲೆಕ್ಕಕ್ಕೆ ಕಡೆಯಿಲ್ಲ. ಇದ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನೊಳಹೊಕ್ಕ.
--------------
ವಚನಭಂಡಾರಿ ಶಾಂತರಸ
ತುಂಬಿದ ನಾಳಿ ಬಾಯ ಹಂಗಾದಂತೆ, ಬಾಯ ಬೆಣ್ಣೆಯ ಹಂಗಿಗನಾಗಿ, ನಳಿಗೆ ಬಾಯಿ ಬೆಣ್ಣೆಯೆರೆವಳ ಹಂಗು. ಮಂಡೆಯ ಶೂಲೆ ಇನ್ನೆಂದಿಗೆ ಹರಿಗು ? ಈ ಅಬ್ಥಿಸಂದ್ಥಿಯ ಹೇಳು, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ
--------------
ವಚನಭಂಡಾರಿ ಶಾಂತರಸ
ಕಾಯದ ಕರಸ್ಥಲದಲ್ಲಿ ಇಷ್ಟಲಿಂಗವನರಿವುದಕ್ಕೆ ಬಾಹ್ಯೇಂದ್ರಿಯ ನಷ್ಟವಾಗಿರಬೇಕು. ಪ್ರಾಣನ ಕರಸ್ಥಲದಲ್ಲಿ ಪ್ರಾಣಲಿಂಗವನರಿವುದಕ್ಕೆ ಅಂತರಿಂದ್ರಿಯವರತು ಮಂತ್ರಸಾಹಿತ್ಯವಾಗಿರಬೇಕು. ಭಾವದ ಕರಸ್ಥಲದಲ್ಲಿ ಭಾವಲಿಂಗವನರಿವುದಕ್ಕೆ ಭಾವದ ಭ್ರಮೆಯಳಿದು ನಿಜ ನೆಲೆಗೊಳ್ಳಬೇಕು. ಕಾಯ ತನ್ನಂತೆ ಹರಿದು, ಜೀವ ತನ್ನಂತೆ ನೆನೆದು, ಭಾವ ತನ್ನಂತೆ ಬೆರಸಿದಡೆ, ಸೂಳೆಯ ಕೂಟದಂತೆ ಕಾಣಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ
--------------
ವಚನಭಂಡಾರಿ ಶಾಂತರಸ
ಆರೈದು ಕಾಣುವುದಕ್ಕೆ ಸ್ಥಾಣು ಕರ್ತನಲ್ಲ. ನೋಯಿಸದೆ ಕಾಬುದಕ್ಕೆ ಆರಡಿಯಲ್ಲ. ನೋಯದೆ ಕೊಂಬುದಕ್ಕೆ ಪಿಪೀಲಿಕನಲ್ಲ, ಬಂಧಿಸಿ ಕಾಬುದಕ್ಕೆ ಚಂದನ ಶಿಲೆಯಲ್ಲ. ಭಕ್ತಿಯೆಂಬ ಅಂಗದ ಸತಿ ನಾನಾಗಿ, ವಿರಕ್ತಿಯೆಂಬ ಘನಲಿಂಗದ ಕೂಟಪುರುಷ ನೀನಾಗಿ, ಇಂತೀ ಉಭಯದಿಂದ ಒದಗಿದ ರೂಪು ನಾಮವ ಏನೆಂಬೆ ? ಅಲೇಖನಾದ ಶೂನ್ಯ ಕಲ್ಲಿನ ಹಂಗು ಬಿಡು, ಬೇಡಿಕೊಂಬೆ.
--------------
ವಚನಭಂಡಾರಿ ಶಾಂತರಸ
ನಿನ್ನ ಭೇದವ ನಿನ್ನನರಿವರಲ್ಲಿ ಮನಸಿಜನಿಂದ ಕಡೆಯೆ ? ನಿನ್ನ ಭಾವ ಹಿರಣ್ಯನ ಪುತ್ರನ ಮಾರನ ಪಿತನ ಅವತಾರದ ವಜ್ರದ ಕಂಬದಲ್ಲಿ ತೋರಿದ ಕುರುಹಿಂಗೆ ಕಡೆಯೆ ? ಕಾರ್ಯಕ್ಕೆ ಮಾಡಿದ ಮರುಳಿನ ನಂಬುಗೆಯ ತೆರದಿಂದ ಕಡೆಯೆ ? ಎನಗೆ ನೀ ಮನಸಿಜನಾಗು, ಮನದಲ್ಲಿ ಹೆರಹಿಂಗದಿರು. ಅಲೇಖನಾದ ಶೂನ್ಯ ಶಿಲೆ ಮಂಥಣ ಬೇಡ, ಸಲಹೆನ್ನುವ.
--------------
ವಚನಭಂಡಾರಿ ಶಾಂತರಸ
ಅಹಿ ಆಹಾರವ ಕೊಂಬಲ್ಲಿ, ತನ್ನಯ ನಂಜ ಮರೆಯಿಸಿಕೊಂಬುದಲ್ಲದೆ, ತಾನೊಂದರಲ್ಲಿ ಉದಯಿಸಿಹ ಬಿಂದುವಿನಲ್ಲಿ, ಭಕ್ತರ ಮಂದಿರದಲ್ಲಿ ಒಪ್ಪಿಹ, ಗುರುಜಂಗಮದಲ್ಲಿ ಇರವಿನ ಪರಿ. ಹರಿಹರಿ ಕೂಡಿದಂತೆ ಅಲೇಖನಾದ ಶೂನ್ಯ ಕಲ್ಲಿಂದ ಬಲ್ಲಿದನಾದೆ ಬಾ.
--------------
ವಚನಭಂಡಾರಿ ಶಾಂತರಸ
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ, ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ, ನಾನರಿಯದೆ ಕುರುಹ ಹಿಡಿದು, ಅದು ಎನ್ನ ಮರವೆಯ ಮನಕ್ಕೆ ತೆರಹಾಗದು. ನಾನರಿವಡೆ ಎನ್ನ ಒಡಗೂಡಿದ ತುಡುಗುಣಿ ಬೆನ್ನಬಿಡದು. ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ ? ಬಿಡು ಬಡವೊಡೆಯನ, ಬಿಡದಿದಡೆ ಕಲ್ಲೆದೆಯಾಗು. ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ ಕಠಿಣವ ನಂಬಿ. ಇದರ ಬಲ್ಲತನವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ
--------------
ವಚನಭಂಡಾರಿ ಶಾಂತರಸ
ಇನ್ನಷ್ಟು ... -->