ಅಥವಾ

ಒಟ್ಟು 54 ಕಡೆಗಳಲ್ಲಿ , 17 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು. ಸಕಲ ನೀನು ನಿಷ್ಕಲ ನೀನು. ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ ? ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು ಹೊತ್ತುಕೊಂಡೈದಾವೆ ನೋಡಾ ! ಅದೆಂತೆಂದಡೆ: ``ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ'' _ ಇಂತೆಂದುದಾಗಿ_ನಾದ ನೀನು, ಬಿಂದು ನೀನು, ಕಳೆ ನೀನು, ಕಳಾತೀತ ನೀನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು. ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು. ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು. ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ, ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು. ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು. ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ !
--------------
ಚನ್ನಬಸವಣ್ಣ
ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ಪರತರವ ಸಾದ್ಥಿಸುವಡೆ ಪ್ರಪಂಚದ ವಿಷಯ ಅಳಿದಿರಬೇಕು. ರಾಜ್ಯವ ಸಾದ್ಥಿಸುವಡೆ ಪ್ರಾಣದಾಸೆಯ ಮರೆದಿರಬೇಕು. ವಿದ್ಯೆಯ ಸಾದ್ಥಿಸುವಡೆ ಅನ್ಯ ಆಸೆಯ ಮರೆದಿರಬೇಕು. ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವಡೆ ಸಂಶಯವಳಿದು ನಿಶ್ಚಿಂತನಾಗಬೇಕು.
--------------
ಸಿದ್ಧರಾಮೇಶ್ವರ
ಕಾಯವಿಕಾರ ಕಾಡಿಹುದಯ್ಯಾ, ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯ ವಿಕಾರ ಸುಳಿವುದಯ್ಯಾ ! ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ ! ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ. ಅನುಪಮಸುಖಸಾರಾಯ ಶರಣರಲ್ಲಿ- ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ. 48
--------------
ಬಸವಣ್ಣ
ಗುರುಲಿಂಗಜಂಗಮದ ಭಕ್ತನಾದೆನೆಂದು, ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ. ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ. ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ. ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ. ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ. ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ. ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ. ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ. ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ. ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಭವಿಸಂಗವನೊಲ್ಲೆನೊಲ್ಲೆ- ಆ ಸಂಗ ಮುಂದೆ ಅನಂತ ಭವಂಗಳಲ್ಲಿ ಬರಿಸುವುದಾಗಿ, ಅನ್ಯ ದೈವದ ಭಜನೆಯನೊಲ್ಲೆನೊಲ್ಲೆ- ಆ ಭಜನೆ ಮುಂದೆ ಅನಂತ ಘೋರವನುಣಿಸುವುದಾಗಿ, ಈ ಉಭಯ ಜಡತೆಯ ಹೊದ್ದದೆ ಹಿಂಗಿ ನಿಂದೆ, ಕೂಡಲಸಂಗಮದೇವಾ.
--------------
ಬಸವಣ್ಣ
ಹುಸಿ ಕಳವು ಪರದಾರ ಹಿಂಸೆ ಅಧಿಕಾಶೆಗಳ ಕೂಡಿಸಿಕೊಂಡು ಇದ್ದು ಅನ್ಯ ಅನಾಚಾರದಲ್ಲಿ ವರ್ತಿಸುವವರು, ತಮ್ಮ ಅಂಗದ ಮೇಲೆ ಕಟ್ಟಿಕೊಂಡಿದ್ದ ಲಿಂಗವು ಅದು ಲಿಂಗವಲ್ಲ. ಅವರು ಮಾಡುವ ದೇವಪೂಜೆ ನಿಚ್ಚದಂಡಕ್ಕೆ ಪ್ರಾಯಶ್ಚಿತ್ತವೆಂದು ಶಿವನ ವಾಕ್ಯ ಮೊದಲಾದ ಸಕಲಪುರಾತನರ ವಚನಂಗಳು ಮುಂದೆ ಸಾರಿ ಹೇಳಿಹವು. ಅದು ಕಾರಣ_ಕೂಡಲಚೆನ್ನಸಂಗಯ್ಯಾ ಪ್ರಾಣಲಿಂಗದ ಸಂಬಂಧವಾದ ಸದ್ಭಕ್ತನು ಅನ್ಯಾಯ ಅನಾಚಾರದಲ್ಲಿ ವರ್ತಿಸುವವರ ಬಿಟ್ಟಿಹನು
--------------
ಚನ್ನಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ಭಕ್ತಾಂಗನೆಯರು ತಮ್ಮ ಲಿಂಗಶರೀರಂಗ? ಮಧ್ಯದಲ್ಲಿ ಹರಭಕ್ತಿಗೆ ಹೊರಗಾದ ಅಸು[ರಾಂಶಿ] ಕವಪ್ಪ ಹಸುರು ಹಚ್ಚೆಗಳೆಂಬ ಪತಿತ ಲೇಖನ ಇವಾದಿಯಾದ ಅನ್ಯ ಚಿಹ್ನೆಗಳನು ಅಂಕಿತಧಾರಣ ಲೇಖನಂಗ? ಮಾಡಿಕೊಂಡು ಮತ್ತೆ ತಾವು ಲಿಂಗವನರ್ಚಿಸಿ ಭಕ್ತರಾದೆವೆಂಬ ಈ ಭಂಗಮಾರಿ ಹೊಲೆಜಂಗುಳಿಗಳಿಗೆ ಉಪದೇಶವ ಕೊಟ್ಟ ಗುರು, ಪ್ರಸಾದ ನೀಡುವ ಜಂಗಮ, ಅವರಗೊಡಗೂಡಿಕೊಂಡು ನಡೆವ ಭಕ್ತತತಿ ಈ ಚತುರ್ವಿಧರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರ ವೇಳೆ ಬಂದು ನರಕವಿಪ್ಪತ್ತೆಂಟುಕೋಟಿಯನೈದುವರು, ಅದೆಂತೆಂದೊಡೆ: ``ಭಕ್ತನಾರೀ ಸ್ವಯಾಂಗೇಷು ಪತಿತಾದ್ಯನ್ಯ ಚಿಹ್ನೆಯೇತ್ ಲೇಖನಾಂಕಂ ಯದಿ ಕೃತ್ವಾ ತೇ[s]ಪಿ ಸ್ತ್ರೀ ಪತಿತ ಸ್ತ್ರೀಣಾಂ ತಸ್ಯೋಪದೇಶಶೇಷಂಚ ದತ್ವಾಶ್ಚೈ ಗುರುಃ ಚರಾನ್ ತಪತ್ಸಂಗ ಸಯೋದ್ಭಕ್ತಾ ತದಾದಿ ಚತುರಾನ್ವಯಂ ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ ಅಷ್ಟವಿಂಶತಿಕೋಟ್ಯಸ್ತು ನರಕಂ ಯಾತಿ ಸಧ್ರುವಂ ಇಂತೆಂದುದಾಗಿ ಇದು ಕಾರಣ ಇಂತಪ್ಪ ಅನಾಚಾರಿಗಳನು ಕೂಡಲಚೆನ್ನಸಂಗಯ್ಯ ಅಘೋರ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಭಕ್ತರಾಗಿದ್ದವರು ಭಕ್ತರ ವಿರಕ್ತರ ಮಿಥ್ಯದಿಂದ ನುಡಿವುದು ಸತ್ಯವಲ್ಲ. ಮಿಥ್ಯವನಳಿದು ಸತ್ಯವ ಕುರಿತು ಭಕ್ತ ಜಂಗಮಕ್ಕೆ ತತ್ತ್ವದ ಬಟ್ಟೆಯ ಹೇಳಿದಲ್ಲಿ ನಿತ್ಯ ಅನಿತ್ಯವ ತಿಳಿಯಬೇಕು. ಇದು ಸುಚಿತ್ತದ ಭಾವ. ತನ್ನ ವಂಶ ಕೆಟ್ಟಡೆ ತನಗಲ್ಲದೆ ಅನ್ಯರಿಗಿಲ್ಲ. ಇದು ಕಾರಣದಲ್ಲಿ ತನ್ನಂಗದ ಗಾಯದ ನೋವು ತನಗೆ ಅನ್ಯ ಬ್ಥಿನ್ನವಿಲ್ಲದೆ ತೋರುವವೊಲು ಇದು ನನ್ನಿಯ ನುಡಿದೆ ನೈಸಲ್ಲದೆ ಸಮರಸದ ಸನ್ನರ್ಧನಲ್ಲ. ನೀವಾಡಿಸುವ ಯಂತ್ರದ ತಂತ್ರವಲ್ಲದೆ ಸ್ವತಂತ್ರಿಯಲ್ಲ. ಎನಗೆ ಇದಿರನಾಡೆ ನಾ ಮಾಡುವ ಭಕ್ತಿ ಸತ್ಯ ಸುಚಿತ್ತದ ನಿತ್ಯವಲ್ಲ. ಮೊತ್ತದ ಕರಣಂಗಳ ನಡುವೆ ಸಿಕ್ಕಿ ಮತ್ತನಾಗಿ ಬಿದ್ದವಂಗೆ ವಸ್ತುವಿನ ಬಟ್ಟೆಯ ತೋರಿ ಮುಕ್ತಿಪಥದಲ್ಲಿ ನಿಲುವ ನಿಚ್ಚಣಿಕೆಯನಿಕ್ಕಿ ತೋರಿದ ಭಕ್ತ ದೇಹಿಕ ನಿಜಪದ ತತ್ವ ಸ್ವರೂಪ. ಸಕಲ ಜೀವದ ಆಧಾರ, ಸಕಲಮಯ ಅಖಿಳ ಬ್ರಹ್ಮಾಂಡ ಕರಂಡ ತಮರಿಪು ಕೋದಂಡ, ಶಕ್ತಿಮಯ ಚಂಡಿಕಾ ಕಿರಣದಶ ಉದಕಭರಿತ, ಭಕ್ತಿಭಂಡಾರಿ ಬಸವೇಶ್ವರನ ನಿಜತತ್ವದ್ವಯ ಪಾದಂಗಳಿಗೆ ಮಂಡಿತಮಯನಾಗೆರಗಿದೆ ಸಂದೇಹವೆಂಬ ಕರಂಡವ ಬಂದ ಪ್ರಮಥರ ಸತಿ ಸಂದ ಪ್ರಮಥರ ಡಿಂಗರಿಗ ಗುಪ್ತಮಂಚನ ನಿತ್ಯನೇಮ ಸಂದಿತ್ತು. ವೀರದಾಸನ ದಾಸೋಹ ಸೋಹಂ ಎನುತಿದ್ದಿತ್ತು. ನಾರಾಯಣ ನಯನ ಪೂಜಿತಪದಾಂಬುಜ ವಿಮಲ ಕಮಲ ಸುಲಲಿತ ರಾಮೇಶ್ವರಲಿಂಗ ಎನ್ನೊಳಗಾದಾ.
--------------
ಗುಪ್ತ ಮಂಚಣ್ಣ
ತನ್ನಿಂದ ತನ್ನ ನೋಡಲು, ತನಗೆ ತಾ ಪ್ರತ್ಯಕ್ಷನಾಗೆ ಆ ಪ್ರತ್ಯಕ್ಷವೆಂಬುದೆ ಭ್ರಾಂತು ನೋಡಾ ! ಅದೇನು ಕಾರಣವೆಂದಡೆ; ತನಗೆ ತಾನು ಅನ್ಯವಲ್ಲಾಗಿ, ಎನಗೆ ಅನ್ಯವಿಲ್ಲ. ಅನ್ಯ ನಾನಲ್ಲ ಎಂದು; `ಬ್ರಹ್ಮವು ನಾನು' ಎಂಬೆಡೆ_ ಅದು ಅತಿಶಯದಿಂದ ಭ್ರಾಂತು_ಎಂಬುದನು ತಿಳಿದು ನೋಡಾ. ಅದೇನು ಕಾರಣವೆಂದಡೆ: `ಬ್ರಹ್ಮಕ್ಕೆ ನಾ ಬ್ರಹ್ಮ' ಎಂಬುದು ಘಟಿಸದಾಗಿ ! ಅತಿಶಯದ ಸುಖವಳಿದ ನಿರಂತರ ಸುಖವೆಂತುಟೆಂದಡೆ ಗುರು ಮುಗ್ಧನಾದೆಡೆಯ ತಿಳಿಯಲು ನೋಡಲು ಗುಹೇಶ್ವರಲಿಂಗದ ನಿಲವು ತಾನೆ.
--------------
ಅಲ್ಲಮಪ್ರಭುದೇವರು
ಅನ್ಯೋನ್ಯವೆಂಬುದು ತನ್ನತ್ತಲಿಲ್ಲ ಅನ್ಯ ಬಂದಡೆ ಅಯ್ಯನತ್ತಲೆ ಮುಖವ ಬೆರಸುವ ಭೇದ ಅಯ್ಯನ ಮುಖವೆ ಮುಖವಾದನೊ. ಇಂ್ರಯಂಗಳೈದು ಆತನ ಇಂಬಪ್ಪ ಮುಖವಾಗಿ ಬಂದ ಪ್ರಸಾದವ ಕೊಂಬ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿನ ಗುರುಭಕ್ತ ಪ್ರಸಾದಿಯ ಪರಿಯಿಂತು
--------------
ಸಿದ್ಧರಾಮೇಶ್ವರ
ಚಿನ್ನದೊಳಗಣ ಬಣ್ಣದಂತೆ, ಬಣ್ಣ ನುಂಗಿದ ಬಂಗಾರದಂತೆ, ಅನ್ಯ ಭಿನ್ನವಿಲ್ಲದ ಲಿಂಗೈಕ್ಯವು. ಲಿಂಗಾಂಗವಾದಲ್ಲಿ, ಅಂಗ ಲಿಂಗವಾದಲ್ಲಿ ಹಿಂಗದ ಭಾವ ಚಿನ್ನ ಬಣ್ಣದ ತೆರ. ಇದು ಪ್ರಾಣಲಿಂಗಯೋಗ, ಸ್ವಾನುಭಾವ ಸಮ್ಮತ. ಉಭಯ ನಾಶನ ಐಕ್ಯಲೇಪ ನಾರಾಯಣಪ್ರಿಯ ರಾಮನಾಥಾ
--------------
ಗುಪ್ತ ಮಂಚಣ್ಣ
ತನ್ನ ಸತಿ, ತನ್ನ ಧನ ಉನ್ನತಿಯಲಿರಬೇಕು. ಅನ್ಯ ಸತಿ, ಅನ್ಯ ಧನದಾಸೆಯನ್ನು ಬಿಡಬೇಕೆಂಬುದು ನೋಡ, ಜಗ. ತನ್ನ ಸತಿಯಾರು ಅನ್ಯಸತಿಯಾರೆಂದು ಬಲ್ಲವರುಂಟೆ ಹೇಳ ಮರುಳೆ, ಬಲ್ಲವರುಂಟುಂಟು ಶಿವಶರಣರು. ತನ್ನ ಶಕ್ತಿಯೆ ಶಿವಶಕ್ತಿ; ಅನ್ಯಶಕ್ತಿಯು ಮಾಯಾಶಕ್ತಿ ಕಾಣ ಮರುಳೆ. ಇದು ಕಾರಣ, ಮಾಯಾಶಕ್ತಿಯ ಸಂಗ ಭಂಗವೆಂದು ನಿವೃತ್ತಿಯ ಮಾಡಿ ಶಿವಶಕ್ತಿಸಂಪನ್ನರಾಗಿ ಶಿವಲಿಂಗವ ನೆರೆವರಯ್ಯ ನಿಮ್ಮ ಶರಣರು. ಇದು ಕಾರಣ, ಶರಣಂಗೆ ಅನ್ಯಸ್ತ್ರೀಯ ಸಂಗ ಅಘೋರನರಕ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಂಟುದಿಕ್ಕು ನಾಲ್ಕು ಬಾಗಿಲೊಳಗೆ, ಸಕಲ ಪದಾರ್ಥವೆಂಬ ಮಂಟಪವ ಮಾಡಿ, ನಾನಾ ಕೇರಿ ಬೀದಿವಾಗಿಲೊಳು ಅನಂತ ಬಣ್ಣಬಣ್ಣದ ಚೈತನ್ಯಗಳನನುಮಾಡಿ, ಅನಂತ ವೀರರನು ಅನಂತ ಲಾಳಮೇಳಿಗಳನು ಅನಂತ ಸೋಹಂ ಘನ ಮುಟ್ಟಿಕೊಂಡಿರ್ಪವರನು ತಂದಿರಿಸಿ ಆ ಮಂಟಪದೊಳಗೆ ಬಿಜಯ ಮಾಡೆಂದು_ ಭಕ್ತ್ಯಂಗನೆಯ ಕರೆಸಿ ಪರಿಪೂರ್ಣವಾಗಿರಿಸಿ ಜ್ಞಾನಾಂಗನೆಯ ಕರೆಸಿ ನಾಲ್ಕು ಬಾಗಿಲುಗಳಿಗೆ ಕಾಹ ಕೊಟ್ಟು ನುಡಿಯದಂತೆ ಗಂಡನು ಶಿವನಲ್ಲದೆ ಮತ್ತಿಲ್ಲವೆಂದಾತನ ಮಂಟಪದ ವಾರ್ತೆಯ ಅನ್ಯ ಮಿಶ್ರಂಗಳ ಹೊಗಲೀಸೆನೆಂಬ ಭಾಷೆ ! ಕಾಲ ಕರ್ಮ ಪ್ರಳಯವಿರಹಿತನೆಂದಾತನ ಹೆಸರು. ಮಹಾಪ್ರಳಯದಲ್ಲಿ ಅನಂತಮೂರ್ತಿಗಳು ಮಡಿವಲ್ಲಿ ಮಡಿಯದೆ ಉಳಿದ ನಿತ್ಯಸ್ವರೂಪನು. ಆತನ ಶ್ರೀಚರಣದೊಳಚ್ಚೊತ್ತಿದಂತಿರ್ಪಾತನೆ ಅನಾದಿ ಸಿದ್ಧನೆ, ಅನಾದಿ ಕುಳಜ್ಞನೆ, ಅನಾದಿ ಮಡಿವಾಳನೆ, ಶಿವನ ಮದಹಸ್ತಿಯೆ, ಹಸ್ತದೊಳು ಮದಂಗಳ ತೃಣವ ಮಾಡಿದ Zõ್ಞದಂತನೆ, ಭಕ್ತಿಸಾರಾಯ ಪ್ರಸಾದಪರಿಪೂರ್ಣನೆ ಕೂಡಲಚೆನ್ನಸಂಗನ ಮಹಾಮನೆಯಲ್ಲಿ, ಅನಾದಿಗಣೇಶ್ವರನು ಮಡಿವಾಳನು.
--------------
ಚನ್ನಬಸವಣ್ಣ
ಇನ್ನಷ್ಟು ... -->