ಅಥವಾ

ಒಟ್ಟು 90 ಕಡೆಗಳಲ್ಲಿ , 23 ವಚನಕಾರರು , 77 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಂಡಲಿಗನೊಂದು ಕೀಡೆಯ ತಂದು ತನ್ನಂತೆ ಮಾಡಿತಲ್ಲಾ, ಎಲೆ ಮಾನವಾ, ಕೇಳಿ ನಂಬಯ್ಯಾ, ನೋಡಿ ನಂಬಯ್ಯಾ, ಎಲೆ ಮಾನವಾ. ತ್ವಚ್ಚಿಂತಯಾ ಮಹಾದೇವ ತ್ವಾಮೇವೈತಿ ನ ಸಂಶಯಃ ಭ್ರಮದ್‍ಭ್ರಮರಚಿಂತಾಯಾಂ ಕೀಟೋಡಿಪಿ ಭ್ರಮರಾಯತೇ ಕೂಡಲಸಂಗನ ಶರಣರ ಅನುಭಾವ ಇದರಿಂದ ಕಿರುಕುಳವೆ, ಎಲೆ ಮಾನವಾ
--------------
ಬಸವಣ್ಣ
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಬ್ರಹ್ಮವೇ ಬಸವಣ್ಣನೆನಗೆ. ಆ ಬಸವಣ್ಣನೆ ನವಲಿಂಗಸ್ವರೂಪವಾಗಿಪ್ಪನಯ್ಯ. ಅದು ಹೇಗೆಂದಡೆ- ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವವೆಂದು ಇಂದ್ರಿಯಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸಿಪ್ಪನಯ್ಯ. ಅದು ಹೇಗೆಂದಡೆ- ನಾಸಿಕದಲ್ಲಿ ಅಂಗಲಿಂಗಸಂಗ ಚತುರ್ವಿಂಶತಿ ಸ್ವರೂಪನೊಳಕೊಂಡು ಆಚಾರಲಿಂಗವಾಗಿ ಎನ್ನ ನಾಸಿಕದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಜಿಹ್ವೆಯಲ್ಲಿ ಅಂಗಲಿಂಗಸಂಗ ಅಷ್ಟಾದಶ ಸ್ವರೂಪನೊಳಕೊಂಡು ಗುರುಲಿಂಗವಾಗಿ ಎನ್ನ ಜಿಹ್ವೆಯಲ್ಲಿ ಇಂಬುಗೊಂಡನಯ್ಯ ಬಸವಣ್ಣ. ನೇತ್ರದಲ್ಲಿ ಅಂಗಲಿಂಗಸಂಗ ಷೋಡಶ ಸ್ವರೂಪನೊಳಕೊಂಡು ಶಿವಲಿಂಗವಾಗಿ ಎನ್ನ ನೇತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ತ್ವಕ್ಕಿನಲ್ಲಿ ಅಂಗಲಿಂಗಸಂಗ ಸಪ್ತಾದಶ ಸ್ವರೂಪನೊಳಕೊಂಡು ಜಂಗಮಲಿಂಗವಾಗಿ ಎನ್ನ ತ್ವಕ್ಕಿನಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಶ್ರೋತ್ರದಲ್ಲಿ ಅಂಗಲಿಂಗಸಂಗ ತ್ರೆ ೈದಶ ಸ್ವರೂಪನೊಳಕೊಂಡು ಪ್ರಸಾದಲಿಂಗವಾಗಿ ಎನ್ನ ಶ್ರೋತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಹೃದಯದಲ್ಲಿ ಅಂಗಲಿಂಗಸಂಗ ತ್ರಯೋದಶ ಸ್ವರೂಪವನೊಳಕೊಂಡು ಮಹಾಲಿಂಗವಾಗಿ ಎನ್ನ ಹೃದಯದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ. ಇಂತಿವನರಿದು ಅರ್ಪಿಸಿದೆನಾಗಿ ಎನ್ನ ತನುವಿನಲ್ಲಿ ಶುದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಮನದಲ್ಲಿ ಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಪ್ರಾಣದಲ್ಲಿ ಪ್ರಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಶುದ್ಧಸಿದ್ಧ ಪ್ರಸಿದ್ಧ ಪ್ರಸಾದದೊಳಗೆ ಮುಳುಗಿದ್ದ ಭೇದವನರಿದು ಬೋಳಬಸವೇಶ್ವರನ ಅನುಭಾವ ಸಂಪರ್ಕದಿಂದ ಸಿದ್ಧೇಶ್ವರನ ಘನಪ್ರಕಾಶ ಸಾಧ್ಯವಾಯಿತ್ತಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ದಲಿಂಗಪ್ರಭುವಿನಲ್ಲಿ ಎರಡರಿಯದಿರ್ದೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಉಲಿಗರ ಮಾತು, ಊರುಗರ ತೋಟಿಯೊಳಗುಂಟೆ ಲಿಂಗಾನುಭಾವ ? ರಚ್ಚೆಯ ಕೆಟ್ಟ ಬೀದಿಯ ಮಾತಿನೊಳಗುಂಟೆ ಲಿಂಗಾನುಭಾವ ? ಸಂತೆಯೊಳಗೆ ಸಮಾಧಿಯುಂಟೆ ? ಇದು ಕಾರಣ ಕೂಡಲಚೆನ್ನಸಂಗಯ್ಯನ ಅನುಭಾವ ಹೊರವೇಷದ ವಾಚಾಳರಿಗೆಲ್ಲಿಯದು.
--------------
ಚನ್ನಬಸವಣ್ಣ
ಆಚಾರ ಗುರುಸ್ಥಲ, ಅನುಭಾವ ಲಿಂಗಸ್ಥಲ, ಅವಧಾನ ಅರ್ಪಿತಸ್ಥಲ, ಪರಿಣಾಮ ಪ್ರಸಾದಿಸ್ಥಲ, ಸಮಾಧಾನ ಶರಣಸ್ಥಲ, ಅರಿವು ನಿಃಪತಿಯಾಗಿ ತೆರಹಿಲ್ಲದ ನಿಜದಲ್ಲಿಲಿಂಗೈಕ್ಯವು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮರುತನ ಸಂಗದಿಂದ ಪರಿಮಳ ಬೀಸರವಾಯಿತ್ತು, ನುಡಿಯ ಗಡಣದಿಂದ ಅನುಭಾವ ಬೀಸರವಾಯಿತ್ತು, ಮಾಟದ ಸಂಭ್ರಮದಿಂದ ಭಕ್ತಿ ಬೀಸರವಾಯಿತ್ತು. ಕೂಟದ ಬೆರಕೆಯ ಸಂಭ್ರಮದಿಂದ ಅರಿವು ಬೀಸರವಾಯಿತ್ತು. ಸೂಕ್ಷ್ಮ ಶಿವಪಥವು ಸಾಮಾನ್ಯಂಗಳವೆರಿ ಕೂಡಲಚೆನ್ನಸಂಗನ ಶರಣರಿಗಲ್ಲದಿಲ್ಲ.
--------------
ಚನ್ನಬಸವಣ್ಣ
ಶ್ರದ್ಧೆ ತೋರಿದಲ್ಲಿ ಆಚಾರಲಿಂಗವ ಕಾಣುವನು. ನೈಷ್ಠೆದೋರಿದಲ್ಲಿ ಗುರುಲಿಂಗವ ಕಾಣುವನು. ಸಾವಧಾನ ತೋರಿದಲ್ಲಿ ಶಿವಲಿಂಗವ ಕಾಣುವನು. ಅನುಭಾವ ತೋರಿದಲ್ಲಿ ಜಂಗಮಲಿಂಗವ ಕಾಣುವನು. ಆನಂದದೋರಿದಲ್ಲಿ ಪ್ರಸಾದಲಿಂಗವ ಕಾಣುವನು. ಸಮರಸ ತೋರಿದಲ್ಲಿ ಮಹಾಲಿಂಗವ ಕಾಣುವನು. ಇಂತು ಷಡ್ವಿಧಭಕ್ತಿ ನಿಷ್ಪತ್ತಿಯಾದಲ್ಲಿ ಗುರುನಿರಂಜನ ಚನ್ನಬಸವಲಿಂಗವ ಕಾಣದೆ ತಾನು ತಾನಾಗಿಹನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿಯೆಂಬ ನಿಧಾನವ ಸಾದ್ಥಿಸುವಡೆ ಶಿವಪ್ರೇಮವೆಂಬ ಅನಂಜನವನೆಚ್ಚಿಕೊಂಬುದು, ಭಕ್ತನಾದವಂಗೆ ಇದೇ ಪಥವಾಗಿರಬೇಕು. ನಮ್ಮ ಕೂಡಲಸಂಗನ ಶರಣರ ಅನುಭಾವ ಗಜವೈದ್ಯ. 243
--------------
ಬಸವಣ್ಣ
ಅನುಭಾವ ಸಾಹಿತ್ಯವಾದ ಬಳಿಕ ಅನುಭವಿಸಲೆಲ್ಲಿಯದೊ? ಸಂಚಿತ ಪ್ರಾರಬ್ಧ ಆಗಾಮಿಯ ಅದ್ವೈತ ಸಾಹಿತ್ಯವಾದ ಬಳಿಕ ಸಂದೇಹ ಭ್ರಾಂತಿಯೆಲ್ಲಿಯದೊ? ಉಂಟು ಇಲ್ಲವೆಂಬ ಪ್ರಸಾದ ಸಾಹಿತ್ಯವಾದ ಬಳಿಕ ಭೋಗ ಉಪಭೋಗಂಗಳೆಲ್ಲಿಯವೋ? ಅಷ್ಟಭೋಗಂಗಳು ಸೌರಾಷ್ಟ್ರ ಸೋಮೇಶ್ವರ ಸಾಹಿತ್ಯವಾದ ಬಳಿಕ ಮಲ-ಮಾಯಾ-ಕರ್ಮ-ತಿರೋಧಾನವೆಂಬ ಚತುರ್ವಿಧಪಾಶಂಗಳೆಲ್ಲಿಯವೊ?
--------------
ಆದಯ್ಯ
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಪವನದ ಕಡೆಯಿಂದ ಪರಿಮಳ ಬೀಸರವಾಯಿತ್ತು, ನುಡಿಗಡಣದಿಂದ ಅನುಭಾವ ಬೀಸರವಾಯಿತ್ತು, ಮಾಟದ ಬೆರಕೆಯಿಂದ ಭಕ್ತಿ ಬೀಸರವಾಯಿತ್ತು, ಕೂಟದ ಬೆರಕೆಯಿಂದ ಅರಿವು ಬೀಸರವಾಯಿತ್ತು, ಸೂಕ್ಷ್ಮಶಿವಪಥವು ಸಾಮಾನ್ಯರಿಗ?ವೆ ? ಕೂಡಲಚೆನ್ನಸಂಗಯ್ಯನ ಶರಣರಿಗಲ್ಲದಿಲ
--------------
ಚನ್ನಬಸವಣ್ಣ
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಭಕ್ತನ ಶ್ರದ್ಧೆ ಗುರುಲಿಂಗಜಂಗಮವೇ ಪ್ರಾಣವೆಂಬುದು. ಭಕ್ತನ ನಿಷ್ಠೆ ಪಂಚಾಕ್ಷರಿಯೇ ಪ್ರಾಣವೆಂಬುದು. ಭಕ್ತನ ಸಾವಧಾನ ಪ್ರಸಾದವೇ ಪ್ರಾಣವೆಂಬುದು. ಭಕ್ತನ ಅನುಭಾವ ರುದ್ರಾಕ್ಷಿಯೇ ಪ್ರಾಣವೆಂಬುದು. ಭಕ್ತನ ಆನಂದ ಪಾದೋದಕವೇ ಪ್ರಾಣವೆಂಬುದು. ಭಕ್ತನ ಸಮರಸ ಶ್ರೀ ವಿಭೂತಿಯೇ ಪ್ರಾಣವೆಂಬುದು. ಇಂತು ಅಷ್ಟಾವರಣ ಪ್ರಾಣವಾಗಿ, ನಡೆಯೇ ಪ್ರಕಾಶವಾಗಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನುಭಾವ ಅನುಭಾವವೆಂದು, ನುಡಿದಾಡುತ್ತಿಪ್ಪಿರಿ. ನಿಮ್ಮ ತನುವಿನಿಚ್ಛೆಗೆ ಅನುವಿಗೆ ಬಂದಂತೆ, ಬಿನುಗರ ಮುಂದೆ ಬೊಗುಳಿಯಾಡುವ ನಿನಗಂದೆ ದೂರ. ಅನುಭಾವವೆಂತೆಂದರೆ, ನಮ್ಮ ಹಿಂದನರಿದು, ಮುಂದೆ ಲಿಂಗದಲ್ಲಿ ನೋಡುವ ಶರಣರ ಅಂಗವ ಸೋಂಕಿ ನಾ ಬದುಕಿದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬಸವಣ್ಣನ ಕೃಪೆ ಎನ್ನ ಶ್ರದ್ಧೆ ಕೂಡಿದಲ್ಲಿ ಎನ್ನಂಗವೆಲ್ಲ ಶುದ್ಧಪ್ರಸಾದ. ಮಡಿವಾಳಯ್ಯನ ಕೃಪೆ ಎನ್ನ ನಿಷ್ಠೆಕೂಡಿದಲ್ಲಿ ಎನ್ನಾತ್ಮವೆಲ್ಲ ಅಮಲಪ್ರಸಾದ. ಚನ್ನಬಸವಣ್ಣನ ಕೃಪೆ ಎನ್ನ ಸಾವಧಾನ ಕೂಡಿದಲ್ಲಿ ಪ್ರಾಣವೆಲ್ಲ ಸಿದ್ಧಪ್ರಸಾದ. ಸಿದ್ಧರಾಮಯ್ಯನ ಕೃಪೆ ಎನ್ನ ಅನುಭಾವ ಕೂಡಿದಲ್ಲಿ ಕರಣವೆಲ್ಲ ನಿಜಪ್ರಸಾದ. ಉರಿಲಿಂಗಪೆದ್ದಣ್ಣಗಳ ದಯೆ ಎನ್ನಾನಂದ ಕೂಡಿ[ದಲ್ಲಿ] ವಿಷಯಂಗಳೆಲ್ಲ ಪ್ರಸಿದ್ಧಪ್ರಸಾದ. ಅಜಗಣ್ಣನ ಕೃಪೆ ಎನ್ನ ಸಮರಸ ಕೂಡಿ[ದಲ್ಲಿ] ತೃಪ್ತಿಯೆಲ್ಲ ಮಹಾಪ್ರಸಿದ್ಧಪ್ರಸಾದ. ಇಂತು ಎನ್ನೊಡೆಯರ ಪ್ರಸಾದವನು ಮಂಡೆಯೊಳಿಟ್ಟು ಮುಳುಗಿ ಪ್ರಸಾದವೆಂಬ ಭಾವದೋರದೆ ಗುರುನಿರಂಜನ ಚನ್ನಬಸವಲಿಂಗದೊಳಡಗಿರ್ದೆನು
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರವನರಿಯದ ನಡೆ ದುರ್ನಡೆ. ಆಚಾರವನರಿಯದ ನೋಟ ಭವದಕೂಟ. ಆಚಾರವನರಿಯದ ಅಂಗ ವಿಚಾರಭಂಗ. ಆಚಾರವನರಿಯದ ಅನುಭಾವ ಅಪ್ರಮಾಣ ದುರ್ಭಾವ. ಇದು ಕಾರಣ ಗಣಕೂಟಕೆ ಆಚಾರವೇಬೇಕು ಕಾಣಾ ಚನ್ನ ಕಾಯಮನಭಾವಪ್ರಿಯ ಮಹಾಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->