ಅಥವಾ

ಒಟ್ಟು 59 ಕಡೆಗಳಲ್ಲಿ , 1 ವಚನಕಾರರು , 59 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತರ್ಕವ ನುಡಿವುದಕ್ಕೆ ಪರಸಮಯಿಯಲ್ಲ. ಕೃತ್ರಿಮ ನುಡಿವುದಕ್ಕೆ ಅಕೃತ್ಯನಲ್ಲ. ಮತ್ತೆ ಇವರ ನಿಂದಿಸುವುದಕ್ಕೆ ಬಂಧ ಮೋಕ್ಷದವನಲ್ಲ. ಇವರುವ ಅಂದಚಂದವ ಅಂತಿಂತೆಂಬುದಕ್ಕೆ ಉಭಯದ ಗೊಂದಳದವನಲ್ಲ. ಎನ್ನ ಅಂದದ ಇರವ ಕೇಳಲಿಕ್ಕೆ ನಿಮ್ಮಂಗವ ಹೇಳಿದೆನೈಸೆ. ಎನಗೆ ಎನ್ನಂಗೆ ನಿರುಪಮನ ಸಂಗ ಇನ್ನೆಂದಿಗೆ, ಎನ್ನ ಗೂಡಿನ ಒಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಕಾಯದ ಕೈಯಲ್ಲಿಪ್ಪುದು ರೂಪುವಿಡಿದ ಲಿಂಗ. ಮನದ ಕೊನೆಯಲ್ಲಿಪ್ಪುದು ಸಾಕಾರವಿರಹಿತಲಿಂಗ. ಅರಿವಿನ ಭೇದಂಗಳ ತಿಳಿದು ನೋಡಿ, ಕಂಡೆಹೆನೆಂಬ ಸನ್ಮತ ಸದ್ಭಾವಿಗಳು ಕೇಳಿರೊ. ಅದು ಚಿದ್ಘನ ಚಿದಾದಿತ್ಯ ಚಿತ್ಸ್ವರೂಪ ಸದಮಲಾನಂದ ಗೂಡಿನ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ. ಇದಾರಿಗೂ ಅಪ್ರಮಾಣಮೂರ್ತಿ.
--------------
ಮನುಮುನಿ ಗುಮ್ಮಟದೇವ
ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ. ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ. ಗಂಡಹಂಡೆರಿಬ್ಬರಿಗೆ ಇಹ ತೆರನಾವುದು ? ತೆರಪಿಲ್ಲದುದ ಕಂಡು, ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ, ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು, ಗಂಡನ ಕೊಂದು, ಅವಳ ಕೊಂಡು ಹೋಹಾಗ, ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು. ಇದರ ಸಂಗವಾರಿಗೂ ಚೋದ್ಯ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು. ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ. ಹಾಲು ದೇಹ ಹಲವಾದಡೆ, ಅಳಿವು ಉಳಿವು ಎರಡೇ ಭೇದ. ಏನನರಿತಡೂ ಜೀವನ ನೋವನರಿಯಬೇಕು. ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು. ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ, ಕಡಿಯಬಹುದೆ ಅಯ್ಯಾ ? ಮಾತಿನಲ್ಲಿ ಬಲ್ಲವರಾದಡೆ, ನೀತಿಯಲ್ಲಿ ಮರೆದಡೆ ಕೊಡನೊಡೆದ ಏತದ ಕಣೆಯಂತೆ, ಶರೀರದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇಕ್ಷುದಂಡದ ತುದಿಯ ಸುಳಿಯಲ್ಲಿ ಹುಟ್ಟಿತೊಂದು ಗಿಳಿ, ರಟ್ಟೆ ಮೂರು, ಕಾಲೊಂದು, ಬಾಯಿ ಎರಡಾಗಿ. ಮುಚ್ಚಿದ ಕಣ್ಣು, ಮೂಗಿನ ಕೆಂಪು, ಮೈಯ ರಕ್ತವರ್ಣ, ತುಪ್ಪುಳು ಕಪ್ಪು, ಕಾಲು ಹಳದಿ, ಬಾಯಿ ಬೆಳ್ಳಗೆ ಹಾರಾಡುವ ಬಯಲರೂಪು, ತೋರದ ಆಗರದಲ್ಲಿ ಹಾರಿಹೋಯಿತ್ತು. ಆತ್ಮನೆಂಬ ರಾಮ, ಪಂಜರವಿಲ್ಲದೆ ಹೋಯಿತ್ತು, ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಧರೆಯ ಉದಕ ಮಾರುತನ ಸಂಗದಿಂದ, ಆಕಾಶಕ್ಕೆ ಎಯ್ದಿ ಭುವನಕ್ಕೆ ಸೂಸುವಂತೆ, ಆತ್ಮವಸ್ತುವಿನಲ್ಲಿ ಎಯ್ದಿ ವಸ್ತುವ ಬೆರಸುವಂತೆ, ಇದು ನಿಶ್ಚಯವೆಂದರಿದ ಆ ಚಿತ್ತ ಇಷ್ಟಲಿಂಗವೇ ಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಣ್ಣು ಮೂರು, ತಲೆಯಾರು, ಬಾಯಿಯೆಂಟು, ಭಗವೊಂಬತ್ತು. ಆರ ಬಗೆಗೂ ಅಳವಡದ ಬಾಲೆ, ಬಾಲನನರಸಿ ಬಳಲುತ್ತೈದಾಳೆ. ಆ ನಾಳಕ್ಕೆ ಒಡೆಯನಿಲ್ಲದೆ, ಬಾಲನ ಬಗೆ ಎಂತಪ್ಪದು ಎನಗೆ ಹೇಳಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಬೆಕ್ಕಿನ ತಲೆಯ ಗಿಳಿ ತಿಂದಿತ್ತು. ಕತ್ತೆ ಕುದುರೆಯ ರೂಪಾಯಿತ್ತು. ಮತ್ಸ್ಯ ಸಮುದ್ರವ ಕುಡಿದು, ಕೆರೆಯ ತಪ್ಪಲ ನೀರಿಗಾರದೆ ಸತ್ತಿತ್ತು ನೀರಕ್ಕದೆ. ಈ ಬಚ್ಚಬಯಲ ಇನ್ನಾರಿಗೆ ಹೇಳುವೆ, ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಪದವನರಿಯದ ವಾಚಕ, ಘಾತಕನ ಇರವು ಪುಸಿ ಧನುವಿನಲ್ಲಿ ಸಿಕ್ಕಿದ ಮಿಸುಕಿದ ಕಣೆಯಂತೆ, ಹುಸಿದವನ ಒಡಲಿನ ಪ್ರತಿಮೂದಲೆಯಂತೆ. ಇಂತೀ ಅರಿವಿನ ಒಳಗನರಿಯದ ಜೂಜಿನ ಹುದುಗಿಂಗೆ ಬಂದು, ಸುರಿಗಾಯ ಸುರಿವವನ ವಿದ್ಥಿಯಂತೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಬ್ರಹ್ಮಂಗೆ ಇಚ್ಫಾಶಕ್ತಿಯಾಗಿದ್ದಲ್ಲಿ, ವಿಷ್ಣುವಿಂಗೆ ಕ್ರಿಯಾಶಕ್ತಿಯಾಗಿದ್ದಲ್ಲಿ, ರುದ್ರಂಗೆ ಜ್ಞಾನಶಕ್ತಿಯಾಗಿದ್ದಲ್ಲಿ, ಇಂತಿವರು ದಂಪತಿ ಸಹಜವಾಗಿ ಯುಗಜುಗಂಗಳ ಜೋಗೈಸುತ್ತಿದ್ದರು. ಬ್ರಹ್ಮಂಗೆ ಸರಸ್ವತಿಯೆಂದಾರು ! ವಿಷ್ಣುವಿಗೆ ಲಕ್ಷ್ಮೀದೇವಿಯೆಂದಾರು ! ರುದ್ರಂಗೆ ಉಮಾದೇವಿಯೆಂದಾರು ! ಬ್ರಹ್ಮ ಅಂಗವಾಗಿ, ವಿಷ್ಣು ಪ್ರಾಣವಾಗಿ, ರುದ್ರ ಉಭಯಜ್ಞಾನವಾಗಿ, ಅಂದು ತಾಳಿದ ಸಾಕಾರದ ಗುಡಿಯ ಐಕ್ಯನಾದ ಕಾರಣ, ಗುಮ್ಮಟನೆಂಬ ನಾಮವ ತಾಳಿ, ಅಗಮ್ಯೇಶ್ವರಲಿಂಗ ಗುಹೇಶ್ವರನಾದ.
--------------
ಮನುಮುನಿ ಗುಮ್ಮಟದೇವ
ತತ್ ತ್ವಂ ಅಸಿಯೆಂಬ ತ್ರಿವಿಧಭೇದಂಗಳಲ್ಲಿ ತ್ರಿವಿಧಮಯನಾಗಿ, ತ್ರಿಗುಣಾತ್ಮನಾಗಿ, ತ್ರಿಶಕ್ತಿಪತಿಯಾಗಿ ಗತಿಯ ತೋರಿಹೆನೆಂದು ಪ್ರತಿರೂಪಾದೆ. ಎಳ್ಳಿನೊಳಗಣ ಎಣ್ಣೆ, ಕಲ್ಲಿನೊಳಗಣ ಬೆಂಕಿ, ಬೆಲ್ಲದೊಳಗಣ ಮಧುರ, ಅಲ್ಲಿಯೆ ಅಡಗಿ ಮಥನದಿಂದಲ್ಲದೆ ತೋರದವೊಲು ಅಲ್ಲಿಯೆ ಅಡಗಿದೆ ಗುಡಿಯೊಳಗೆ, ಗುಮ್ಮಟನಾಥನ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇಚ್ಫಾಶಕ್ತಿಯೆಂಬೆನೆ ಬ್ರಹ್ಮನ ಬಲೆಗೊಳಗು. ಕ್ರಿಯಾಶಕ್ತಿಯೆಂಬೆನೆ ವಿಷ್ಣುವಿನ ಸಂತೋಷಕ್ಕೊಳಗು. ಜ್ಞಾನಶಕ್ತಿಯೆಂಬೆನೆ ರುದ್ರನ ಭಾವಕ್ಕೊಳಗು. ಇಂತೀ ಮೂರರಿಂದ ಕಂಡೆಹೆನೆಂದಡೆ ಮಾಯಾಪ್ರಪಂಚು. ಹೆರೆಹಿಂಗಿ ನೋಡಿಹೆನೆಂದಡೆ ವಾಙ್ಮನಕ್ಕೆ ಅಗೋಚರ. ಇದ ಭೇದಿಸಲಾರೆ. ಎನ್ನ ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ, ಎನ್ನ ಕಾಡುವುದಕ್ಕೆ ಏಕೆ ಎಡಗಿದೆ ?
--------------
ಮನುಮುನಿ ಗುಮ್ಮಟದೇವ
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅಮೃತದ ಗುಟಿಕೆಯ ಮರೆದು, ಅಂಬಲಿಯನರಸುವನಂತೆ, ಶಂಬರವೈರಿ ತನ್ನಲ್ಲಿ ಇದ್ದು, ಕುಜಾತಿಯ ಬೆಂಬಳಿಯಲ್ಲಿ ಹೋಹವಂಗೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ, ಅವರಿಗೆ ಇಲ್ಲಾ ಎಂದೆ.
--------------
ಮನುಮುನಿ ಗುಮ್ಮಟದೇವ
ಇನ್ನಷ್ಟು ... -->