ಅಥವಾ

ಒಟ್ಟು 22 ಕಡೆಗಳಲ್ಲಿ , 5 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು, ಅದಕ್ಕದು ಸತ್ಯವಯ್ಯ. ಎತ್ತಿನ ಮೇಲೆ ತಿತ್ತಿಯ ಮಾಡಿ ತೈಲ ತುಪ್ಪವ ಹೇರುವರು, ಅದಕ್ಕದು ಸತ್ಯವಯ್ಯ. ಆ ತಿತ್ತಿಯ ಒಳಗಣ ತೈಲ ತುಪ್ಪವ ತಂದು, ನಿತ್ಯ ಗುರು-ಲಿಂಗ-ಜಂಗಮಕ್ಕೆ ನೀಡುವ ಭಕ್ತನ ಭಕ್ತಿ ಎಂತಾಯಿತ್ತೆಂದಡೆ: ಆ ಕತ್ತೆಯ ಮೇಲೆ ಹೇರುವ ಕಳ್ಳುಗುಂಡಿಗಿಂದ ಕಡೆಯೆಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು, ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸಪ್ತಸಾಗರಗಳ ನಿಲ್ಲೆಂದು ನಿಲ್ಲಿಸಿ ಭೂಮಿಗೆ ಕೆಸರುಗಲ್ಲನಿಕ್ಕುವ ದೆವಸ, ಏಳು ಭೂಮಂಡಲವ ಜೋಳಿಗೆಗೊಳಿಸಿ ಗಾಳಿಯನಾಹಾರಗೊಂಬ ದೆವಸ, ಒಂಭತ್ತು ದ್ವೀಪಕ್ಕೆ ನೂಲ ಹಿಡಿದಂದು, ಅಂಬಿಗ ಚೌಡಯ್ಯನ ಕೆಳೆಗೊಂಡನುಮೇಶ್ವರ.
--------------
ಅಂಬಿಗರ ಚೌಡಯ್ಯ
ಕಷ್ಟಜೀವನ ಮನುಜರಿರಾ, ನೀವು ಹುಟ್ಟಿದ ಮೊದಲು, ಎಷ್ಟು ಮಂದಿ ನಿಮ್ಮ ಕಣ್ಣ ಮುಂದೆ ನಷ್ಟವಾಗಿ ಹೋದುದ ಕಂಡು ಕಂಡೂ ಹೆಂಡಿರು ತನ್ನವರೆಂಬೆನೆ? ಮಿಂಡಿಯಾಗಿ ಹಲವರ ಬಯಸುವವಳ ಮಕ್ಕಳ ತನ್ನವರೆಂಬೆನೆ? ಕೂಡುವಾಗ ದುಃಖ, ಕೂಡಿದ ಒಡವೆಯ ಮಡಗುವಾಗ ದುಃಖ, ಮಡಗಿದ ಒಡವೆಯ ತೆಗೆವಾಗ ದುಃಖ, ಪ್ರಾಣವ ಬಿಡುವಾಗ ದುಃಖ, ಹೊಲೆ ಸಂಸಾರವ ನಚ್ಚಿ ಕಾಲನ ಬಲೆಗೆ ಈಡಾ[ಗ]ದಿರೊ, ಪತಿಭಕ್ತಿ, ಮುಕ್ತಿಯೆಂಬುದ ಗಳಿಸಿಕೊಳ್ಳಿರೊ, ಸಟೆಯಂ ಬಿಡಿ, ದಿಟವಂ ಹಿಡಿ, ಘಟವುಳ್ಳ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ, ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸಂಸಾರವೆಂಬ ಸಾಗರವ ದಾಂಟುವಡೆ, ಅರಿವೆಂಬ ಹರುಗೋಲನಿಕ್ಕಿ ಜ್ಞಾನವೆಂಬ ಅಂಬಿಗ ಹರುಗೋಲದಲ್ಲಿ ಕುಳ್ಳಿರ್ದು, ಸುಜ್ಞಾನವೆಂಬ ಘಾತದ ಗಳೆಯ ಪಿಡಿದು, ನಾನೀ ಹೊಳೆಯ ಕಂಡು, ಅಂಬಿಗನು ಕೇಳಿದಡೆ, ನಾನು ಹಾಸಿಕೊಟ್ಟೆಹೆನೆಂದನು. ನಾನು ನಿನ್ನ ನಂಬಿ ಹರುಗೋಲನೇರಿದೆನು ಕಾಣಾ, ಅಂಬಿಗರಣ್ಣಾಯೆಂದು ನಾನು ಹರುಗೋಲದಲ್ಲಿ ಕುಳ್ಳಿರ್ದು ಹೊಳೆಯೊಳಗೆ ಹೋಗಲಿಕೆ, ಕಾಮವೆಂಬ ಕೊರಡು ಅಡ್ಡಬಿದ್ದಿತ್ತು. ಕ್ರೋಧವೆಂಬ ಸುಳುಹಿನೊಳಗೆ ಅಹಂಕಾರವೆಂಬ ಮೀನು ಬಂದು ನಿಂದಿತ್ತು. ಮಾಯೆಯೆಂಬ ಮೊಸಳೆ ಬಂದು ಬಾಯಬಿಡುತ್ತಿದ್ದಿತ್ತು. ಮೋಹವೆಂಬ ನೊರೆತೆರೆಗಳು ಹೆಚ್ಚಿ ಬರುತ್ತಿದ್ದಿತ್ತು. ಲೋಭವೆಂಬ ಕಾಳ್ಗಡಲು ಎಳೆದೊಯ್ವುತ್ತಿದ್ದಿತ್ತು. ಮರವೆಂಬ ಮೊರಹು ನೂಕುತ್ತಲಿದ್ದಿತ್ತು. ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು. ಇವೆಲ್ಲವನೂ ಪರಿಹರಿಸಿ, ಎನ್ನ ಹೊಳೆಯ ದಾಂಟಿಸಿದನು ಅಂಬಿಗರಣ್ಣನು. ಈ ಹೊಳೆಯ ದಾಂಟಿಸಿದ ಕೂಲಿಯ ನನ್ನ ಬೇಡಿದಡೆ, ಕೂಲಿಯ ಕೊಡುವಡೇನೂ ಇಲ್ಲೆಂದಡೆ, ಕೈಸೆರೆಯಾಗಿ ಎನ್ನನೆಳದೊಯ್ದನಯ್ಯಾ. ಅರುವೆಯ ಕೊಟ್ಟ ಕೂಲಿಗೆ ತನ್ನ ಕರುವ ಕಾಯಿಸಿಕೊಂಡನಯ್ಯಾ. ಅರಿಯದೆ ಹರುಗೋಲವ ನೆರೆತೊರೆಯ ದಾಂಟಿಸಿದ ಕೂಲಿಗೆ ಕರುವ ಕಾಯಿದೆನು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಒಬ್ಬ ತಂದೆಯ ಬಸಿರಿನಲ್ಲಿ ಒಂಬತ್ತು ಮಕ್ಕಳು ಹುಟ್ಟಿದಡೇನಯ್ಯ ? ಅವರೊಳಗೊಬ್ಬಾತಂಗೆ ಸೆರಗ ಕಟ್ಟಿ ಮದುವೆಯ ಮಾಡಿದ ಬಳಿಕ, ಆತಂಗೆ ತನ್ನಂಗದ ಸುಖವನೊಪ್ಪಿಸಬೇಕಲ್ಲದೆ, ಉಳಿದಿರ್ದವರೆಲ್ಲ ತನ್ನ ಮಾವನ ಮಕ್ಕಳೆಂದು ಅವರಿಗೆ ಸೆರಗು ಹಾಸುವವಳನು ಒಪ್ಪುವರೆ ಲೋಕದೊಳು ? ಪರಮಾತ್ಮನೆಂಬ ಶಿವನಿಗೆ ಆಶ್ರಯವಾಗಿ ಹುಟ್ಟಿತ್ತು ಲಿಂಗ, ಆತಂಗೆ ವಾಹನವಾಗಿ ಹುಟ್ಟಿದಾತ ವೃಷಭ, ಆತಂಗೆ ಯೋಗವಾಗಿ ಹುಟ್ಟಿದಾತ ವಿನಾಯಕ, ಆತಂಗೆ ಯುದ್ಧಕ್ಕೆ ಸರಿಯಾಗಿ ಹುಟ್ಟಿದಾತ ವೀರಭದ್ರ. ಇಂತಿವರೆಲ್ಲ ಶಿವನ ಮಕ್ಕಳಾದರೆ, ತನಗೊಂದು ಪ್ರಾಣಲಿಂಗವೆಂದು ಕಂಕಣ ಕಟ್ಟಿ, ಕರಸ್ಥಲಕ್ಕೆ ಬಂದ ಬಳಿಕ ಅದನು ನಂಬಲರಿಯದೆ ಮತ್ತನ್ಯದೈವಕ್ಕೆರಗಿದಡೆ ನಾಯಕನರಕವೆಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗುರುವಿನೊಳಡಗಿದ ಭಕ್ತ ಪರವ ಕಂಡುದಿಲ್ಲ, ಲಿಂಗದೊಳಡಗಿದ ಭಕ್ತ ಜಂಗಮವ ಕಂಡುದಿಲ್ಲ. ಇವರಿಬ್ಬರ ಭಕ್ತಿಯೂ ಹುರಿಗೂಡದ ಹಗ್ಗದಂತಾಯಿತ್ತು ನೋಡಯ್ಯ. ಅರಿವು ಆಚಾರವಿಡಿದು ಆಚರಿಸಿದ ಸದ್ಭಕ್ತನು. ಗುರು ಲಿಂಗ ಜಂಗಮವ ನೆರೆ ಕಂಡು ಸನ್ಮತನಾಗಿ ಇ[ಹ] ಪರವೆಂಬುಭಯ ಸಂಕಲ್ಪವರತದಲ್ಲದಿಲ್ಲವೆಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯದಿಂದ ಕಂಡೆಹೆನೆಂದಡೆ ಬ್ರಹ್ಮನ ಹಂಗು, ಜೀವದಿಂದ ಕಂಡೆಹೆನೆಂದಡೆ ವಿಷ್ಣುವಿನ ಹಂಗು, ಅರಿವಿನಿಂದ ಕಂಡೆಹೆನೆಂದಡೆ ರುದ್ರನ ಹಂಗು, ಕಾಬ ಕಾಬಲ್ಲಿ ಕಂಡೆಹೆನೆಂದಡೆ ನಾಡೆಲ್ಲರ ಹಂಗು. ಇವನೆಲ್ಲವನಲ್ಲಾ ಎಂದು ನಿಲಿಕಿ ನೋಡಿ ಕಂಡ ಅಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ತನುವಿನೊಳಗಣ ತನು, ಮನದೊಳಗಣ ಮನ, ಜ್ಞಾನದೊಳಗಣ ಜ್ಞಾನ, ಕಾಣುವ ಕಂಗಳಿಂಗೆ ಮತ್ತಮಾ ಕಣ್ಣು ತೆಗೆದು ನೋಡಲಾಗಿ, ಬ್ರಹ್ಮ ಹರುಗೋಲವಾದ, ವಿಷ್ಣು ಸಟ್ಟುಗವಾದ, ರುದ್ರ ಅಂಬಿಗನಾಗಿ ಒತ್ತಿದ. ಹರುಗೋಲ ಸಿಕ್ಕಿತ್ತು, ಮಾತಂಗವೆಂಬ ಪರ್ವತದ ತಪ್ಪಲಿನ ಸಿಕ್ಕುಗಲ್ಲಿನಲ್ಲಿ. ಹರುಗೋಲು ಕೊಳೆತಿತ್ತು, ಹುಟ್ಟು ಮುರಿಯಿತ್ತು, ಅಂಬಿಗ ಎತ್ತಹೋದನೆಂದರಿಯೆ. ಎನಗಾ ಬಟ್ಟೆಯ ಹೇಳಾ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅಂಬುಧಿಯಲ್ಲಿ ಅಂಬಿಗ ಮನೆಯ ಮಾಡಿ, ಕುಂಭಿನಿಯಲ್ಲಿ ಇರಲೊಲ್ಲದೆ, ಹರುಗೋಲ ಬೆಂಬಳಿಯಲ್ಲಿ ಬದುಕಿಹೆನೆಂದು [ಹೋದಡೆ] ಹರುಗೋಲು ತುಂಬಿ, ಮಂದಿ ಸಂದಣಿಸಿತ್ತು. [ಗ]ಣಿಯ ಹಿಡಿದು ಒತ್ತುವುದಕ್ಕೆ ಠಾವಿಲ್ಲದೆ, ಅಂಬಿಗ ಹಿಂಗಿದ. ಹೆರೆಸಾರಿ ಹರುಗೋಲು ಅಂಬುಧಿಯಲ್ಲಿ ಮುಳುಗಿತ್ತು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ.
--------------
ಮನುಮುನಿ ಗುಮ್ಮಟದೇವ
ಜಾತಿವಿಚಾರ, ನೀತಿವಿಚಾರ, ಸಮಯವಿಚಾರವೆಂಬ ತ್ರಿವಿಧವ ಹಿಡಿದು, ಬಿಡದೆ ಉತ್ತಮ ಮಧ್ಯಮ ಕನಿಷ*ವೆಂಬವ ಕಾಲಿಗೆ ಮಾವವ ಕಟ್ಟಿ ಸಿಕ್ಕಿಸಿ, ಸರ್ವಸೂತಕದೊಳಗಿರ್ದಜಾತನಾದೆ ಕ....ಗವನೆಂದಡಾತ ಸಾಧ್ಯವಾದಾತನೆ ? ಸಿಕ್ಕನೆಂದ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಲೋ ಮಾನವ ಕೇಳೆಲೊ, ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ: ಹಣ್ಣುಗಳು ಸಣ್ಣ ಜಾತಿಯ ಎಂಜಲು, ಹಾಲು ಕರುವಿನ ಎಂಜಲು, ಮೊಸರು ಗೊಲ್ಲತಿಯ ಎಂಜಲು, ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು, ನೀರು ಮೀನು ಕಪ್ಪೆಗಳ ಎಂಜಲು, ಉಪ್ಪು ಉಪ್ಪಾರನ ಎಂಜಲು, ಎಣ್ಣೆ ಸರ್ವಮಾನವರ ಎಂಜಲು, ಸಕಲಪದಾರ್ಥವು ಅನಂತ ಹುಳುಗಳ ಎಂಜಲು. ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ, ಮಾಡುವ ದುರಾಚಾರವ ಆರು ಬಣ್ಣಿಸಬಹುದುರಿ ಅರಿವು ಇಲ್ಲದವರು ಅರಮನೆಗೆ ಮಾಡಿದರು, ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು. ಇಂತಪ್ಪ ಸರ್ವರ ಎಂಜಲು ತಿಂದು ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ, ಕಾಲಿಗೆ ಬಂದಂತೆ ಕುಣಿದು, ಬಾಯಿಗೆ ಬಂದಂತೆ ಅಂದು, ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು? ಆಚರಣೆ ಎಲ್ಲಿಹುದುರಿ ಕುಲವೆಲ್ಲಿಹುದು? ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತುಂಬಿದ ಕೆರೆಗೆ ಅಂಬಿಗ ಹರಿಗೋಲ ಹಾಕಿ ಬಲೆಯ ಬೀಸಿದಂತೆ, ತುಂಬುತ್ತ ಕೆಡಹುತ್ತಿದ್ದು ಲಿಂಗವನೊಡಗೂಡಿದೆವೆಂದು, ಜಂಗಮದ ನೆಲೆಯಕಾಣದೆ ಸಂದುಹೋದರಲ್ಲಾ ಈ ಲೋಕದವರೆಲ್ಲ. ಲಿಂಗದ ನೆಲೆಯ ಕಾಂಬುದಕ್ಕೆ, ಹರಿಗೋಲನೆ ಹರಿದು, ಹುಟ್ಟ ಮುರಿದು, ಆ ಬಲೆಯಲ್ಲಿ ಸಿಕ್ಕಿದ ಖಗಮೃಗವನೆ ಕೊಂದು, ಆ ಬಲೆಯನೆ ಕಿತ್ತು, ಅಂಬಿಗ ಸತ್ತು, ಕೆರೆ ಬತ್ತಿ, ಮೆಯ್ಮರೆದಲ್ಲದೆ ಆ ಮಹಾಘನವ ಕಾಣಬಾರದೆಂದರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಶೆಯುಳ್ಳಾತನೊಬ್ಬರಾಧೀನದಲ್ಲಿಪ್ಪನು. ಆಶೆಯ ಮನದ ಕೊನೆಯನರಿದಾತ ಕೈಲಾಸದಾಚೆಯಲ್ಲಿಪ್ಪನೆಂದಾತ ನಮ್ಮ ಅಂಬಿಗ ಚೌಡಯ್ಯ!
--------------
ಅಂಬಿಗರ ಚೌಡಯ್ಯ
ಆಶೆಯಲಿದ್ದವನ ತಲೆಯನರಿದು, ಆಶೆಯ ಹರಿಯಲೊದ್ದವನನೊಂದೆ ಹುಟ್ಟಿನಲ್ಲಿ ಒಯ್ದು ಕೈಲಾಸಕ್ಕೆ ಹೋದಾತ ಅಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->