ಅಥವಾ

ಒಟ್ಟು 16 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯದ ಕುರುಹುವಿಡಿದು ಬಂದೆನೆಂಬ ಆ ಭಾವದ ಇರವೇತಕ್ಕೆ ನಿಮಗೆ ಅಂಬರದ ಚಾಪ ಮುಗಿಲೊಳಗೆ ಹೊಂದಿತ್ತೆ ಬೇರೊಂದರಲ್ಲಿ ಸಂದಿತ್ತೆ ಅದರಂಗದ ಛಾಯೆ. ಪ್ರಭುದೇವರ ನಿಂದ ಸುಳುಹು ಕೂಡಲಸಂಗಮದೇವರಲ್ಲಿ ಬ್ಥಿನ್ನವಿಲ್ಲದೆ ನಿಂದ ಕಾಯದಂನದಫ.
--------------
ಬಸವಣ್ಣ
ಅಂಬರದ ಪಕ್ಷಿಗೆ ಕಾಲಾರು, ತಲೆ ಮೂರು, ಬಾಲೆರಡು, ಕಣ್ಣೊಂದು, ಕೈ ಆರಾಗಿ, ನಡೆದರೆ ಹೆಜ್ಜೆಯಿಲ್ಲ, ನುಡಿದರೆ ಶಬ್ದವಿಲ್ಲ. ಅನ್ನ ಉದಕವನೊಲ್ಲದೆ ಅಗ್ನಿಯ ಸೇವಿಸುವದು. ಆ ಮೃಗವ ಕಣ್ಣಿಲ್ಲದೆ ನೋಡಿ, ಕಾಲಿಲ್ಲದೆ ನಡೆದು, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ನುಂಗಿ ಬೇಟೆಯನಾಡುವೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊರಗಣ ಒಂಬತ್ತು ಬಾಗಿಲವ ಮುಚ್ಚಿ ಒಳಗಣ ಅಂಬರದ ಬಾಗಿಲ ಬೀಗವ ತೆಗೆದು ಒಳಹೊಕ್ಕು ನೋಡಲು, ಗಂಗೆ ಸರಸ್ವತಿ ಯಮುನೆಯೆಂಬ ತ್ರಿನದಿಗಳು ಕೂಡಿದ ಠಾವಿನಲ್ಲಿ ಸಂಗಮಕ್ಷೇತ್ರವೆಂಬ ರಂಗಮಂಟಪವುಂಟು. ಆ ರಂಗಮಂಟಪದಲ್ಲಿ ರವಿಕೋಟಿಪ್ರಭೆಯಿಂದೆ ರಾಜಿಸುವ ಮಹಾಲಿಂಗವ ಕಂಡು, ಆ ಮಹಾಲಿಂಗಕ್ಕೆ ತನ್ನಾತ್ಮಸಂಬಂಧವಾದ ದ್ರವ್ಯಂಗಳಿಂದರ್ಚಿಸಿ, ಆ ಮಹಾಲಿಂಗದ ಬೆಳಗನು ಕಂಗಳು ತುಂಬಿ ನೋಡಿ ಮನ ಸಂತೋಷಗೊಂಡು, ಅಲ್ಲಿಂದತ್ತ ಪಶ್ಚಿಮದಿಕ್ಕಿನಲ್ಲಿ ಮಹಾಕೈಲಾಸವಿರ್ಪುದನು ತನ್ನ ಸ್ವಾತ್ಮಜ್ಞಾನದಿಂದ ತಿಳಿದು ನೋಡಿ, ಎಡಬಲದ ಬಟ್ಟೆಯ ಮೆಟ್ಟದೆ ನಟ್ಟನಡುಮಧ್ಯಮಾರ್ಗವಿಡಿದು ಹೋಗಿ, ಕೈಲಾಸದ ಪೂರ್ವದಿಕ್ಕಿನ ಹೆಬ್ಬಾಗಿಲ ಉಪ್ಪರ ಗೋಪುರವ ಕಂಡು ಒಳಹೊಕ್ಕು ಹೋಗಿ ಕಂಗಳಿಗೆ ಮಂಗಳವಾದ ಶಿವಮಹಾಸಭೆಯ ಕಂಡು, ಅಲ್ಲಿ ಹೊಡೆವ ಭೇರಿಯನಾದ, ತುಡುಮು ತಾಳ ಮದ್ದಳೆಯನಾದ, ಗಡಗಡ ಝಲ್ಲೆಂಬ ಸಮಾಳ ಕರಡಿ ಕೌಸಾಳನಾದ ನುಡಿಸುವ ವೀಣೆ ಕಿನ್ನರಿ ಸ್ವರಮಂಡಲ ತಂಬೂರಿ ಕಾಮಾಕ್ಷಿಯನಾದ, ಭೋರಿಡುವ ಶಂಖ ಘಂಟೆಯನಾದ, ಸ್ವರಗೈವ ನಾಗಸ್ವರ ಕೊಳಲು ಸನಾಯದ ನಾದ, ಕೂಗಿಡುವ ಕಹಳೆ ಹೆಗ್ಗಹಳೆ ಚಿನಿಕಹಳೆ ಕರಣೆಯನಾದ, ಇಂತಿವು ಮೊದಲಾದ ನಾನಾ ತೆರದ ನಾದಂಗಳನು ಕಿವಿದುಂಬಿ ಕೇಳಿ ಮನದುಂಬಿ ಸಂತೋಷಿಸಿ, ಅಲ್ಲಿಂದ ಮುಂದಕ್ಕೆ ಹೋಗಿ ಸೂರ್ಯವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಮೂವತ್ತೆರಡು ತೆರದ ತೂರ್ಯಗಣಂಗಳಂ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ಸೋಮವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಹದಿನಾರು ತೆರದ ಪ್ರಮಥಗಣಂಗಳ ಕಂಡು ಅಲ್ಲಿಂದ ಮುಂದಕ್ಕೆ ಹೋಗಿ ಅನಲವೀಥಿಯ ಕಂಡು ಪೊಕ್ಕು, ಅಲ್ಲಿ ಅಷ್ಟದಿಕ್ಕುಗಳಲ್ಲಿ ನಿಂದು ಓಲಗಂಗೊಡುವ ಅಷ್ಟ ತೆರದ ಅಮರಗಣಂಗಳ ಕಂಡು, ಅಲ್ಲಿಂದ ಮುಂದೆ ಹೋಗಿ ಚತುರ್ದಿಕ್ಕಿನಲ್ಲಿ ನಿಂದು ಓಲಗಂಗೊಡುವ ಚತುಃಶಕ್ತಿಯರ ಸಮ್ಮೇಳವ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ನಟ್ಟನಡುವಿರ್ದ ಶೃಂಗಾರಮಂಟಪದ ಮಹಾಸದರಿನಲ್ಲಿ ಮೂರ್ತಿಗೊಂಡಿರ್ದ ನಿಷ್ಕಲ ಪರಶಿವನ ಕಂಡು ತನು ಉಬ್ಬಿ ಮನ ಕರಗಿ, ಕಂಗಳಲ್ಲಿ ಪರಿಣಾಮಜಲ ಉಕ್ಕಿ ಕಡೆಗೋಡಿವರಿವುತ್ತ, ಉರಿಕರ್ಪುರ ಸಂಯೋಗದಂತೆ ಆ ನಿಷ್ಕಲಪರಶಿವನೊಡನೆ ಬೆರೆದು ಪರಿಪೂರ್ಣವಾದ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಉಚಿತ ಬಂದಲ್ಲಿ ನಾಳೆಗೆಂದಾಗವೆ ಕುಚಿತವಲ್ಲವೆ ? ನೆರೆ ಅರಿದು ಸಂಸಾರವ ಹರಿಯದಿದ್ದಾಗವೆ ಮರವೆಯಲ್ಲವೆ ? ಅರಿದಡೆ ಮರೀಚಿಕದಂತೆ, ಸುರಚಾಪದಂತೆ, ಅಂಬರದ ಆಕಾರದಂತೆ ತೋರಿ ಅಡಗುವ ನಿಜಲಿಂಗಾಂಗಿಯ ಇರವು. ಅದರಂಗ ವೇಧಿಸಿದಲ್ಲಿಯೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಂಬರದ ಕೂಸು ಆನೆಯ ನುಂಗಿ, ಕುಂಭಿನಿಯ ಕೂಸು ಕುದುರೆಯ ನುಂಗಿ, ಉಭಯರಂಗದ ಕೂಸು ಕುನ್ನಿಯ ನುಂಗಿ, ಆ ರಂಗದ ಕೂಸು ನಾಡೆಲ್ಲ ನುಂಗಿ ಕಣ್ಣೊಳಡಗಿ, ಅಡಗಿದ ಕೂಸ ಪಿಡಿದು ನುಂಗಬಲ್ಲಡೆ ಲಿಂಗೈಕ್ಯನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಬರದ ಮನೆಯೊಳಗೆ ಗಾಂಭೀರ್ಯತ್ವದ ಅಂಗನೆಯ ಕಂಡೆನಯ್ಯ. ಆಕೆಯ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಲೆವಾಲೊಸರಲು ನೆಲ ಬೆಂದು ನೀರರತು ಕಿಚ್ಚು ಕೆಟ್ಟಿತ್ತು ನೋಡಾ ಗಾಳಿಯ ದೂಳಿಯ ದಾಳಿನಿಂದು ಅಂಬರದ ಸಂಭ್ರಮವಡಗಿತ್ತು ನೋಡಾ. ಹಾಲಕುಡಿದ ಶಿಶು ಸತ್ತು ತಾನು ತಾನಾದುದ ಏನೆಂದುಪಮಿಸುವೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಿರಕ್ತಂಗೆ ವಿಷಯವುಂಟೆ? ಶರಣಂಗೆ ತಥ್ಯಮಿಥ್ಯವುಂಟೆ? ಮಹದೊಡಗೂಡಿ ಮಾಹಾತ್ಮೆಯನಳಿದವಂಗೆ ಗಾಂಭೀರ ಗರ್ವಕ್ಕೆ ಎಡೆದೆರವುಂಟೆ? ಆತನಿರವು ದಗ್ಧಪಟದಂತೆ, ದಹ್ಯದಲ್ಲಿ ನೊಂದ ರಜ್ಜುವಿನ ತೆರದಂತೆ, ನಿರವಯದಲ್ಲಿ ತೋರಿ ತೋರುವ ಮರೀಚಿಕಾ ಜಲದ ತೆರೆಯ ಹೊಳಹಿನ ವಳಿಯಂತೆ. ರೂಪಿಂಗೆ ದೃಷ್ಟವಾಗಿ ಹಿಡಿವೆಡೆಯಲ್ಲಿ ಅಡಿಯಿಲ್ಲದೆ ವಸ್ತುವನೊಡಗೂಡಬೇಕು. ಆತ ಹಿಡಿದುದು ಹಿಡಿಕೆಯಲ್ಲ, ಮುಟ್ಟಿಂಗೊಳಗಲ್ಲ. ಅಂಬರದ ವರ್ಣ ಎವೆ ಹಳಚುವುದಕ್ಕೆ ಮುನ್ನವೆ ಛಂದವಳಿದಂತೆ. ಇದು ಲಿಂಗಾಂಗಿಯ ಮುಟ್ಟು, ಸರ್ವಗುಣ ಸಂಪನ್ನನ ತೊಟ್ಟು, ದಿವ್ಯಜ್ಞಾನಿಯ ತಟ್ಟು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 87 ||
--------------
ದಾಸೋಹದ ಸಂಗಣ್ಣ
ಅಂಬರದ ಮನೆಯೊಳಗೆ ತುಂಬಿತೋರುವ ಶಂಭುಲಿಂಗವ ಕಂಡೆನಯ್ಯ. ಆ ಲಿಂಗದ ಕಿರಣದೊಳಗೆ ಅನಂತಕೋಟಿ ಚಂದ್ರಸೂರ್ಯಾದಿಗಳು ಅಡಗಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೇಮ ಬಣ್ಣವ ಕೂಡಿದ ದೆಸೆಯಿಂದ ಮತ್ರ್ಯರುಗಳಿಗೆ ಆಗುಚೇಗೆಗಳಿಗೀಡಾಯಿತ್ತು. ದಿವ್ಯ ನಿರಂಜನ ನಿಜವಸ್ತು ಭವ್ಯರ ಭಕ್ತಿಗಾಗಿ ಶಕ್ತಿ ನಾಮರೂಪವಾಗಿ ತಲ್ಲೀಯವಾಗಲ್ಪಟ್ಟುದು, ಶಕ್ತಿ ಸಮೇತವಾಗಿ ಲಿಂಗವಾಯಿತ್ತು. ಅದು ರಂಜನೆಯ ಬಣ್ಣ, ಮಾಯದ ಗನ್ನ, ಅಂಬರದ ಚಾಪದ ಸಂಚದ ವಸ್ತು. ಮುನ್ನಿನಂತೆ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬಂದು ಮೂವತ್ತರೊಳು ಸಂದ ಅಕ್ಷರವಾಱು ಒಂದಕ್ಕೆ ಅಕ್ಷರವು ಆರು. ಆರೂನೆಲ್ಲ ಘಟ್ಟಣಿಗೆ ಮುನ್ನ ಫಲಿತವಾಯಿತು ಮಠವು. ಮಠದಿಂದ ಮೇಲೆ ತಾಣಕಂಬನಿರುಗೆ ಕಂಬದಿಂ ಮೇಲೊಪ್ಪಿ ಇಂಬಪ್ಪ ತುಂಬಿಯ ಶಂಭುವೆಂಬಾ ಕುಸುಮ ವಿಕಾಸವಾಗೆ, ಅಂಬರದ ಮೇೀಗ ಬಿಂಬವೆಸೆದುದ ಕಂಡೆ, ಶಂಭುವೆ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಅಂಬರದ ಮಂಡಲದಲ್ಲಿ ಚಿದಾದಿತ್ಯನುದಯವಾಗಲು ಅಂಬುಜ ಉದಯವಾಗಿ ಅಮರಗಣಂಗಳು ಸಂಭ್ರಮಿಸುತ್ತಿದಾರೆ ನೋಡಾ. ಅಮರಗಣ ತಿಂಥಿಣಿಯೊಳಗೆ ಅನುಪಮ ಮಹಿಮನ ಕಂಡು ಅಪ್ಪಿ ಅಗಲದೆ ಅಪ್ರತಿಮನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವವ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಬರದ ಮನೆಯೊಳಗೆ ಸಾವಿರೆಸಳಮಂಟಪವ ಕಂಡೆನಯ್ಯ! ಆ ಮಂಟಪದೊಳಗೆ ಒಬ್ಬ ಸತಿಯಳು ನಿಂದು, ಐವರ ಕೂಡಿಕೊಂಡು, ನಿರಂಜನದೇಶಕೆ ಹೋಗಿ ನಿರ್ವಿಕಲ್ಪ ನಿತ್ಯನಿರಾಳವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಕುಂಭಿನಿಯ ಘಟಪುರುಷನು ಅಂಬರದ ರಂಭೆಗೆ ಬೇಟವ ಮಾಡಿದಡೆ ಕುಂಭಿನಿಯ ಘಟ ಬಯಲಾಯಿತ್ತು. ಪುರುಷ ರಂಭೆಯ ಕೂಡಿದ ಕಾರಣ ಸಂಭ್ರಮವಳಿಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಬಳಿಕ ಲಿಂಗೈಕ್ಯಂಗೆ ಇಂಬಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ದುಕೂಲ ಮುಂತಾದ ವಸ್ತ್ರಂಗಳಲ್ಲಿ, ಹೇಮ ಮುಂತಾದ ಆಭರಣಂಗಳಲ್ಲಿ, ಮೌಕ್ತಿಕ ರತ್ನ ಮುಂತಾದ ಪಾಷಾಣಂಗಳಲ್ಲಿ, ಚಂದನ ಗಂಧ ಮುಂತಾದ ಸುವಾಸನೆಯಲ್ಲಿ, ಅಂದಳ ಛತ್ರ ಚಾಮರ ಕರಿ ತುರಗಂಗಳು ಮುಂತಾದ ತಾನು ಸೋಂಕುವ ವೈಭವ ಮುಂತಾದ ಸಕಲಸುಖಂಗಳು ಲಿಂಗಕ್ಕೆಂದು ಕಲ್ಪಿಸಿ, ಅಂಗೀಕರಿಸುವವನಿರವು ವಾರಿಶಿಲೆ ನೋಡನೋಡಲಿಕ್ಕೆ ನೀರಾದ ತೆರದಂತೆ, ಅಂಬರದ ವರ್ಣ ನಾನಾ ಚಿತ್ರದಲ್ಲಿ ಸಂಭ್ರಮಿಸಿ ಕಂಗಳು ಮುಚ್ಚಿ ತೆರೆವುದಕ್ಕೆ ಮುನ್ನವೆ ಅದರಂದದ ಕಳೆ ಅಳಿದಂತಿರಬೇಕು. ಇದು ಲಿಂಗಭೋಗೋಪಭೋಗಿಯ ಸಂಗದ ಸುಖ, ನಿರಂಗದ ನಿಶ್ಚಯ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗದಲ್ಲಿ ವಿರಳವಿಲ್ಲದ ಪರಮಸುಖ.
--------------
ಮೋಳಿಗೆ ಮಹಾದೇವಿ
ಇನ್ನಷ್ಟು ... -->