ಅಥವಾ

ಒಟ್ಟು 14 ಕಡೆಗಳಲ್ಲಿ , 8 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ಈ ಬಚ್ಚಬರಿಯ ಬಯಲ ಕಂಡಿಹೆನೆಂದರೆ, ಕಾಣಬಾರದು. ಕೇಳಿಹೆನೆಂದರೆ ಕೇಳಬಾರದು, ಹೇಳಿಹೆನೆಂದರೆ ಹೇಳಬಾರದು. ಇವ ಮೂರರ ಕಾಳಿಕೆಯ ಕಳೆದು, ಈ ಹನ್ನೆರಡ ಜಾಣಿಯಲ್ಲಿ ದಾಂಟಿ, ಒಂದರ ಮೇಲೆ ನಿಂದು, ಅಂದವಳಿಯದೆ, ಬಿಂದು ತುಳುಕದೆ, ಅಂದಂದಿನ ಹೊಸಪೂಜೆಯ ನೋಡಿ, ಕಣ್ದೆರೆದು ಕರಗಿ ಒಂದಾದ ಶರಣರ ಚರಣವ ತೋರಿ ಬದುಕಿಸಯ್ಯಾ ಎನ್ನ , ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು. ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ ಭೇದಿಸಿ ನೋಡಿ ಅರಿವರಿನ್ನಾರಯ್ಯಾ ? ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಅಂದಂದಿನ ದಿನವ ಸಂಸಾರವಂದಂದಿಗೆ ಗ್ರಹಿಸುತ್ತಿದೆ. ಎಂದಯ್ಯಾ ನಿಮ್ಮ ನೆನೆವೆ, ಎಂದಯ್ಯಾ ನಿಮ್ಮ ಪೂಜಿಸುವೆ. ಸಮಚಿತ್ತದಿಂದ ನಿಮ್ಮ ನೆನೆವಡೆ, ನಾಳಿಗಿಂದೇ ಲೇಸು ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಅಷ್ಟವಿಧಾರ್ಚನೆ ಷೋಡಶೋಪಚಾರವ ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ. ಹಂಗು ಹರಿಯಿಲ್ಲದ ಕಾರಣ, ಕೂಡಲಸಂಗಮದೇವ ನಿಷ್ಫಲದಾಯಕನಾಗಿ ಆನು ಮಾಡಿ ಶುದ್ಧನಯ್ಯಾ.
--------------
ಬಸವಣ್ಣ
ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ. ಅಂದಂದಿನ ಸಂದೇಹ ಹರಿಯಿತ್ತು. ನೀ ಭಕ್ತನಾಗಿ ನಾ ಜಂಗಮವಾಗಿ, ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು.
--------------
ಅಲ್ಲಮಪ್ರಭುದೇವರು
ಅಂದಂದಿನ ಹೊದ್ದಿಗೆಯ ಬಿಂದುಮಾತ್ರದಲಾದ ಅಂದವ ಕೆಡಿಸಲರಿಯದ ಅಂಧಕರ ನೋಡಾ. ಸಮರಸವಿಲ್ಲದೆ ನೆರಹಿ ಮಾಡಿ, ಭಕ್ತರಾದೆವೆಂಬವರನೇನೆಂಬೆ ಆಚಾರವಂಚಕರ ಎನಗೆ ತೋರದಿರು ಕೂಡಲಸಂಗಮದೇವಾ, ನಿಮ್ಮ ಧರ್ಮ !
--------------
ಬಸವಣ್ಣ
ಅನಂತ ವರುಷದವರ ಹಿರಿಯರೆಂಬೆನೆ ? ಎನ್ನೆನು_ ಅವರು ಭೂಭಾರಕರಾಗಿ. ಏಳು ವರುಷದ ಹಿರಿಯ ಚೀಲಾಳ; ಹನ್ನೆರಡು ವರುಷದ ಹಿರಿಯಳು ಮಹಾದೇವಿಯಕ್ಕ. ಅಂಡಜ ಪಿಂಡಜ ಮೀನಜರೆಂಬವರೆಲ್ಲಾ ಅಂದಂದಿನ ಬಾಲಕರು. ನಿಮಗೆ ಬುದ್ಧಿಯ ಹೇಳುವಡೆ ಎನಗೆ ಬುದ್ಧಿಯಿಲ್ಲ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಿನ್ನವಿಲ್ಲದೆ ಶರಣೆಂಬೀ ಚನ್ನಭಕ್ತರು ಎನ್ನರಸುತ್ತ ಬಂದರೆ ಬೆನ್ನ ಹತ್ತಿ ಬಂದ ಎನ್ನಯ್ಯ ಸಾಕ್ಷಿಯಾಗಿ. ಎಲ್ಲವೂ ನಿಮ್ಮದೆಂಬೆಯೆಂದಲ್ಲಿ ವಂಚನೆಯುಳ್ಳರೆ ಬಂಧನ ಬಪ್ಪುದು ತಪ್ಪದು. ಅಂದಂದಿನ ಮಾತು ಇಂದುಳಿವನಲ್ಲ, ಸಂದುಸಂಶಯ ನಿಂದುರುಹಿದ ನಿಷೆ*ಯೆನಗುಂಟು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೆಂದಸಂಸಾರ ಬೆಂಬಿಡದೆ ಕಾಡಿಹುದಯ್ಯ, ಏವೆನೇವೆನಯ್ಯಾ ? ಅಂದಂದಿನ ದಂದುಗಕ್ಕೆ ಏವೆನೇವೆನಯ್ಯಾ ? ಬೆಂದ ಒಡಲ ಹೊರೆವುದಕ್ಕೆ ನಾನಾರೆ. ಚೆನ್ನಮಲ್ಲಿಕಾರ್ಜುನಯ್ಯಾ, ಕೊಲ್ಲು ಕಾಯಿ, ನಿಮ್ಮ ಧರ್ಮ.
--------------
ಅಕ್ಕಮಹಾದೇವಿ
ಅಂದಂದಿನ ದಿನಕ್ಕೆ ಬಂದ ದಂದುಗಕ್ಕೆ ಮನನಾಚದ ಪರಿಯ ನೋಡಾ! ಕಂದದೀ ಮನವು, ಕುಂದದೀ ಮನವು ಲಿಂಗದೇವನ ಒಲವು ಎಯ್ದದೆಂದು ಮರುಗುವ ಪರಿಯ ನೋಡಾ! ಮಹಾಲಿಂಗ ಕಲ್ಲೇಶ್ವರಯ್ಯಾ, ಈ ಬೆಂದ ಮನವು, ಹೇಸದ ಪರಿಯ ನೋಡಾ!
--------------
ಹಾವಿನಹಾಳ ಕಲ್ಲಯ್ಯ
ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕೆ ಅಳಿದರಲ್ಲಾ ! ಅಂದಂದಿನ ಘಟಜೀವಿಗಳು ಬಂದ ಬಟ್ಟೆಯಲ್ಲಿ ಹೋದರಲ್ಲಾ ! ಗುಹೇಶ್ವರನೆಂಬ ಲಿಂಗವು ಆರಿಗೆಯೂ ಇಲ್ಲವಯ್ಯಾ.
--------------
ಅಲ್ಲಮಪ್ರಭುದೇವರು
ಕಂದದ ಹೂವನೆ ಕೊಯ್ದು, ನಂದದಾರತಿಯನೆ ಬೆಳಗಿ, ಅಂದವಳಿಯದೆ, ಬಿಂದು ತುಳುಕದೆ, ನಂದಿ ಮುಂದುಗೆಡದೆ, ಅಂದಂದಿನ ಹೊಸ ಪೂಜೆಯ ಮಾಡಿ ಆ ಲಿಂಗಮಧ್ಯವನೆ ತಿಳಿದು ನೋಡಿ ಮೇರುಗಿರಿಯಾಕಳನೆ ಕರೆದು, ಕ್ಷೀರದಲ್ಲಿ ಅಡಿಗೆಯ ಮಾಡಿ, ಕೂಡಲಚೆನ್ನಸಂಗಯ್ಯನೆಂಬ ಲಿಂಗಕ್ಕೆ ಆರೋಗಣೆಯ ಸಮಯ
--------------
ಚನ್ನಬಸವಣ್ಣ
ಹಿಂದನರಿಯದದು ಮುಂದನೇನ ಬಲ್ಲುದೊ? ಉದಯ ಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕಳಿದರಲ್ಲಾ! ಅಂದಂದಿನ ಘಟಜೀವಿಗಳು, ಬಂದ ಬಟ್ಟೆಗೆ ಹೋದರಲ್ಲಾ. ಗುಹೇಶ್ವರನೆಂಬ ಲಿಂಗ ಅರಿಗೂ ಇಲ್ಲವಯ್ಯಾ.
--------------
ಅಲ್ಲಮಪ್ರಭುದೇವರು
-->