ಅಥವಾ

ಒಟ್ಟು 38 ಕಡೆಗಳಲ್ಲಿ , 20 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ. ಕೈಯ ತೊಳೆದುಕೊಂಡು ಬಂದರೆ ಮನದ ಮುಂದೆ ನಿಂದೆ. ತಲೆಯ ತೊಳೆದುಕೊಂಡು ಬಂದರೆ ಭಾವದ ಮುಂದೆ ನಿಂದೆ. ಸಂದು ಸಂಶಯ ಕುಂದು ಕಲೆಯ ಕಳೆದುಳಿದು ಬಂದರೆ ಸರ್ವಾಂಗಸನ್ನಿಹಿತನಾಗಿ ನಿಂದೆ. ಬಂದ ಬರವು ಚಂದವಾಗಿ ನಿಂದರೆ ಅಂದಂದಿಗೆ ಅವಧರಿಸು ಮುಂದುವರಿವೆನು ಮುದದಿಂದೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಿ ಹರನೊಂದೆ ಎಂದಡೆ, ಸುರಿಯುವೆ ಬಾಯಲಿ ಬಾಲಹುಳುಗಳು ಹರಿಗೆ ಹತ್ತು ಪ್ರಳಯ, ಬ್ರಹ್ಮಂಗನಂತ ಪ್ರಳಯ, ಹರಂಗೆ ಪ್ರಳಯ ಉಂಟೆಂಬುದ ಬಲ್ಲಡೆ ನೀವು ಹೇಳಿರೆ ಪ್ರಳಯ ಪ್ರಳಯ ಅಂದಂದಿಂಗೆ ಹಳೆಯ, ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಪ್ರಮಾಣಿಸಿ ಅವಧರಿಸಿ ಮಾಡುವಂಗೆ, ಮಾಡುವ ದ್ರವ್ಯಕ್ಕೆ ಹೇಗೆಂದು ಮನಗುಂದದಿರಬೇಕು. ನೀಡಿದ ಮತ್ತೆ, ನಿಜವಸ್ತುವಿನಲ್ಲಿರಬೇಕು. ಕೂಡಿದ ಮತ್ತೆ, ಹಿಂದಣ ಹಂಗ ಹರಿದು, ಸಂದಳಿದು ಅಂದಂದಿಗೆ ಬಂದುದ ಕಂಡು, ಬಾರದುದಕ್ಕೆ ಭ್ರಮೆಯಿಲ್ಲದಿರಬೇಕು. ಇಂತೀ ಸ್ಥಲ, ಭಕ್ತಂಗೆ. ಮುಕ್ತಿಯನರಸಿ ಇಪ್ಪವಂಗೆ ಇದೇ ಸತ್ಯಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸದ್ಭಕ್ತಿ ನಿರ್ಲೇಪ.
--------------
ಮೋಳಿಗೆ ಮಾರಯ್ಯ
ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ, ಸುಖದುಃಖವೆಂಬ ಉಭಯವರಿಗಾಣದೆ, ಅಂದಂದಿಗೆ ಆಯು ಸಂದಿತ್ತೆಂದಿರಬೇಕು. ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ.
--------------
ಅಕ್ಕಮ್ಮ
ಉಂಬೆಡೆಯಲ್ಲಿ ಭರಿತಾರ್ಪಣವೆಂದು ಮಿಕ್ಕಾದ ವಿಷಯೇಂದ್ರಿಯಂಗಳಲ್ಲಿ ಭರಿತಾರ್ಪಣದ ಸಂದನಳಿದು ಅರ್ಪಿಸಬಲ್ಲಡೆ, ಆ ಗುಣ ಉಭಯಭರಿತಾರ್ಪಣಭೇದ. ಇದನರಿಯದೆ ಲಿಂಗಕ್ಕೆ ಸಂದಲ್ಲದೆ, ತಾನೊಂದು ದ್ರವ್ಯವ ಮುಟ್ಟೆನೆಂಬ ಸಂದೇಹದ ಸಂಕಲ್ಪವಲ್ಲದೆ, ಭರಿತಾರ್ಪಣಾಂಗಿಯ ಲಿಂಗಾಂಗಿಯ ಮುಟ್ಟಲ್ಲ. ಭರಿತಾರ್ಪಣವಾವುದೆಂದಡೆ : ತಾ ಕಂಡುದ ಮುಟ್ಟದೆ, ತಾ ಮುಟ್ಟಿದುದನರ್ಪಿಸದೆ, ತಾ ಕಾಣದುದ ಮುನ್ನವೆ, ತಾ ಕಂಡುದ ಮುಟ್ಟದ ಮುನ್ನವೆ ಅರ್ಪಿತವಾದುದ ದೃಷ್ಟಾಂತವನರಿದು, ಭರಿತಾರ್ಪಣವೆಂಬ ಪರಿಪೂರ್ಣತ್ವವಂ ಕಂಡು, ಅಂಗಸಹಿತವಾಗಿ ಮುಟ್ಟದೆ, ಮನಸಹಿತವಾಗಿ ನೆನೆಯದೆ, ಇಂದ್ರಿಯಂಗಳು ಸಹಿತವಾಗಿ ಒಂದನೂ ಅನುಭವಿಸದೆ ಲಿಂಗವೆ ಅಂಗವಾಗಿ, ಅಂಗವೆ ಲಿಂಗವಾಗಿ ಅಂದಂದಿಗೆ ಕಾಯ ಹಿಂಗಬೇಕೆಂಬುದನರಿದಾಗವೆ ಭರಿತಾರ್ಪಣ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು. ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ ಭೇದಿಸಿ ನೋಡಿ ಅರಿವರಿನ್ನಾರಯ್ಯಾ ? ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು. ಸಂದ ಪುರಾತನರ ನೆನೆಯುತ್ತಿರಬೇಕು. ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು. ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಹೊತ್ತಿಂಗೊಂದು ಪರಿಯಹ ಮನವ ಕಂಡು ದಿನಕ್ಕೊಂದು ಪರಿಯಹ ತನುವ ಕಂಡು ಅಂದಂದಿಗೆ ಭಯದೋರುತ್ತಿದೆ. ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು ಅಂದಂದಿಂಗೆ ಭಯವಾಗುತ್ತಿದೆ. ಈ ಮನ ನಿಮ್ಮ ನೆನೆಯಲೀಯದು, ಮನ ಹಗೆಯಾದುದಯ್ಯಾ ಸದ್ಗುರುವೆ ಪುರದ ಮಲ್ಲಯ್ಯಾ!
--------------
ಗುರುಪುರದ ಮಲ್ಲಯ್ಯ
ಅಯ್ಯಾ ನೀನಿಲ್ಲದಿದ್ದರೆ ಎನಗೆ ಮುನ್ನ ನಾಮ ರೂಪುಂಟೆ ? ನೀ ಮಾಡಲಾನಾದೆನಯ್ಯಾ. ಅದು ಕಾರಣವಾಗಿ ನಾ ಬಂದ ಬಂದ ಭವಾಂತರದಲ್ಲಿ ನೀವು ಬರುತ್ತಿದಿರಾಗಿ, ಇನ್ನೆನ್ನ ಗುರುತಂದೆಗೆ ಬಳಲಿಕೆ ಆಗುತಿದೆ ಎಂದು ನಾ ನೋಡಲಾಗಿ, ನೀವೆನ್ನ ಭವವ ಕೊಂಡಿರಾಗಿ. ಇದು ಕಾರಣ, ಅಂದಂದಿಗೆ ನೂರು ತುಂಬಿತ್ತೆಂಬ ಭೇದವನು ನೀವೆ ತೋರಿದಿರಿ. ಇದನರಿದರಿದು ನಾನು ಹಿಂದಣ ಭವವ ಹರಿದು, ಮುಂದಣ ಭಾವ ಬಯಕೆಯ ಮುಗ್ಧವ ಮಾಡಿ, ಹೊಂದದ ಬಟ್ಟೆಯನೆ ಹೊಂದಿ, ಸದಮಳಾನಂದ ಚೆನ್ನಮಲ್ಲೇಶ್ವರನ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಭಕ್ತಿಯೇ ವಿಗ್ರಹ, ಜ್ಞಾನವೇ ಪ್ರಾಣ, ವೈರಾಗ್ಯವೇ ಗಮನ. ಇಂಬಿಲ್ಲ ಇಂಬಿಲ್ಲ ನೋಡುವರೆ ನುಡಿಸುವರೆ. ಎಲೆದೋರದ ವೃಕ್ಷ ಫಲವಾಗಿ ಕಾಣಿಸಿಕೊಳ್ಳದು. ಬಂದರೇನು ನಿಂದರೇನು ಭೋಗಿಸಿದರೇನು ಅಂದಂದಿಗೆ ಆರೂಢ ತಾನೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು, ಜಂಗಮನಿಷ್ಠೆ ಅನುಸರಣೆಯಲ್ಲಿ ಬೀಯವಾಯಿತ್ತು, ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಯಿತ್ತು, ಇಂತೊಂದರ ನಿಷ್ಠೆ ಅಂದಂದಿಂಗೆ ಬೀಯವಾಯಿತ್ತು, ಕೂಡಲಚೆನ್ನಸಂಗಯ್ಯನ ಭಕ್ತಿ ಜಗವನಾಳಿಗೊಂಡಿತ್ತು.
--------------
ಚನ್ನಬಸವಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರವ ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ. ಹಂಗು ಹರಿಯಿಲ್ಲದ ಕಾರಣ, ಕೂಡಲಸಂಗಮದೇವ ನಿಷ್ಫಲದಾಯಕನಾಗಿ ಆನು ಮಾಡಿ ಶುದ್ಧನಯ್ಯಾ.
--------------
ಬಸವಣ್ಣ
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು, [ಜಂಗಮ]ನಿಷ್ಠೆ ತ್ಯಾಗದಲ್ಲಿ ಬೀಯವಾಯಿತ್ತು, ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಗಿತ್ತು. ಒಂದೊಂದರ ನಿಷ್ಠೆ ಅಂದಂದಿಗೆ ಬೀಯವಾಗಿತ್ತು, ಕೂಡಲಸಂಗಮದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು.
--------------
ಬಸವಣ್ಣ
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ -ಲಿಂಗವಿಲ್ಲದೆ ಉಗುಳ ನುಂಗಿದಡೆ ಅಂದಂದಿಗೆ ಕಿಲ್ಬಿಷವಯ್ಯಾ_ ಏನೆಂಬೆನೇನೆಂಬೆನಯ್ಯಾ ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ ಮುಟ್ಟಲಾಗದು. ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ ಕೇಳಲಾಗದು. ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವ್ರತಗೇಡಿ ಕೂಡಲಸಂಗಮದೇವಾ.
--------------
ಬಸವಣ್ಣ
ಮುನ್ನ ಗಳಿಸಿದವರೊಡವೆಯ ಈಗ ಕಂಡು ಮತ್ತೆ ಇನ್ನಾರಿಗೆ ಇರಿಸಿದೆ? ಅದಂದಿಗೆ ಮಳೆ ಬೆಳೆ ತಾನಿದ್ದಂದಿಗೂ ತಪ್ಪದು. ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಇನ್ನಷ್ಟು ... -->