ಅಥವಾ

ಒಟ್ಟು 25 ಕಡೆಗಳಲ್ಲಿ , 9 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಣ್ಣವನರಿಯದ ಬಯಲಿನಂತೆ, ಬ್ಥಿನ್ನ ಅಬ್ಥಿನ್ನವನರಿಯದ ಬೆಳಗಿನಂತೆ, ಛಿನ್ನ ವಿಚ್ಫಿನ್ನವನರಿಯದ ಪರಿಪೂರ್ಣದಂತೆ, ಅವದ್ಥಿಗೊಡಲಿಲ್ಲದ ಭಾವವಿರಹಿತನಾದೆಯಲ್ಲಾ. ಸುಳುಹುಗೆಟ್ಟು ಸೂಕ್ಷ್ಮವರತು, ಬೆಳಗೆಂಬ ಕಳೆನಾಮ ನಷ್ಟವಾಗಿ, ಅದೆಂತೆಯಿದ್ದಿತ್ತು, ಅಂತೆ ಆದೆಯಲ್ಲಾ ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು ನರಕಕ್ಕಿಳಿದು ಹೋದರು. ಸೂಳೆಗೆ ಮೆಚ್ಚಿದವರು ಸೂಳೆಯ ಬಂಟರೆಂಜಲ ತಿಂದು ನರಕಕ್ಕಿಳಿದು ಹೋದರು-ಇದು ಲೋಕವರಿಯಲುಂಟು. ಲಿಂಗವ ಮೆಚ್ಚಿದ ಸದ್ಭಕ್ತರು ಗುರುಲಿಂಗಜಂಗಮದ ಒಕ್ಕು ಮಿಕ್ಕ ಪ್ರಸಾದವ ಕೊಂಡು ಆಗಳೆ ಅಂತೆ ಮೋಕ್ಷವನೈದಿದರು, ಶಿವರಹಸ್ಯದಲ್ಲಿ; ಶ್ವಾನೋಚ್ಛಿಷ್ಟಾಯತೇ ರಾಜಾ ವೇಶ್ಯೋಚ್ಛಿಷ್ಟಂ ಜಗತ್ತ್ರಯಂ ಜಂಗಮೋಚ್ಛಿಷ್ಟಭುಂಜಾನೋ ಸದ್ಯೋ ಮುಕ್ತೋ ನ ಸಂಶಯಃ ಎಂದುದಾಗಿ ಗುರುಲಿಂಗಜಂಗಮದ ಪ್ರಸಾದವ ಕೊಂಬವರ ಕಂಡು ನಿಂದಿಸುವರ ಬಾಯಲ್ಲಿ ಬಾಲಹುಳು ಸುರಿಯದೆ ಮಾಣ್ಬವೆ ಕೂಡಲಚೆನ್ನಸಂಗಮದೇವಾರಿ
--------------
ಚನ್ನಬಸವಣ್ಣ
ಎಂತೆನಗೆ ತೃಷ್ಣೆ [ತುಷ್ಟಿ ?] ಅಂತೆ ಲಿಂಗಪರುಶನ ಮಾಡುವೆ ನಾನಯ್ಯಾ, ಎಂತೆನಗೆ ತೃಷ್ಣೆ [ತುಷ್ಟಿ ?] ಅಂತೆ ಜಂಗಮದರುಶನ ಮಾಡುವೆ ನಾನಯ್ಯಾ, ಎಂತೆನಗೆ ತೃಷ್ಣೆ [ತುಷ್ಟಿ ?] ಅಂತೆ ಪ್ರಸಾದದ ಸವಿಯ ಸವಿವೆ ನಾನಯ್ಯಾ. ತ್ರಿವಿಧದಲ್ಲಿ ಸಂಗವಾಗಿ, ಅಂಗಭೋಗವ ಭಂಗಿಸಿ ಕಳೆದು ಲೋಕ ಲೌಕಿಕವ ವಿವರಿಸಿ ಕಳೆದು ಬಸವನ ಅಂಗ ತಾವಾದೆವೆಂಬ [ತುಷ್ಟಿ] ಹಿರಿದು, ಕೂಡಲಚೆನ್ನಸಂಗಯ್ಯಾ, ಕ್ರಮವರಿಯೆ.
--------------
ಚನ್ನಬಸವಣ್ಣ
ಕಟ್ಟಿದ ಕೊಟ್ಟಿಗೆಯಲ್ಲಿ ಗುಬ್ಬಿ ಗೂಡನಿಕ್ಕದೆ? ತೋಡಿದ ಬಾವಿಯಲ್ಲಿ ತೊತ್ತು ನೀರ ತಾರಳೆ? ರಾಜಮಾರ್ಗದಲ್ಲಿ ಆರಾರೆಡೆಯಾಡರು? ಅಂತೆ ಎನಗಿವರ ಭ್ರಾಂತಿಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ ಆ ಆತ್ಮ ಒಂದೋ, ಎರಡೋ? ಸರ್ವಯೋನಿಗಳಲ್ಲಿ ಕೂಡುವ ಶಿಶ್ನೆಯ ಸುಖ ಒಂದೋ, ಎರಡೋ ? ಆತ್ಮ ಒಂದೆಂದಡೆ ಘಟಭೇದಕ್ಕೆ ಭಿನ್ನವಾಗಿಪ್ಪುದು. ಆತ್ಮ ಹಲವೆಂದಡೆ ಚೇತನ ಸ್ವಭಾವ ಏಕವಾಗಿಪ್ಪುದು. ಆ ಘಟ ಆತ್ಮನ ಕೂಟ ಎಂತೆಯಿದ್ದಿತ್ತು ಅಂತೆ ಸುಖವಿದ್ದಿತ್ತು. ಯೋನಿಯ ಘಟ ಸಾಕಾರ ಎಂತೆಯಿದ್ದಿತ್ತು ಅಂತೆಯಿದ್ದಿತ್ತು ಶಿಶ್ನೆಯ ಯೋಗ. ಆತ್ಮನ ಘಟಸಂಗ ಜಾತಿಯ ಸುಜಾತಿಯ ಕೂಟಸ್ಥ ವಿಶ್ವಾಸದ ಭ್ರಾಂತಿಯ ಭ್ರಾಮಕಯೆಂತಿದ್ದಿತ್ತು ಅಂತೆಯಿದ್ದಿತ್ತು ಆತ್ಮ. ಇಂತೀ ಘಟದ ಸಾಕಾರವಡಗಿ ತೋರುವ ಆತ್ಮನ ಪರಿ. ಭಿನ್ನ ಇಂದ್ರಿಯಂಗಳ ಹಲವು ಸಂಚಿನ ಯೋನಿ. ಅದ ಸಂಧಿಸಿ ಕೂಡಿಹೆನೆಂಬ ಅರಿಕೆಯ ತೃಷ್ಣೆಯ ಶಿಶ್ನೆ ತಲಹಗೆಟ್ಟಲ್ಲಿ, ಭ್ರಾಂತಿನ ಭ್ರಮೆಯ ಸೂತಕ ಹೋಯಿತ್ತು, ಕಾಮಧೂಮ ಧೂಳೇಶ್ವರನ ತಾನು ತಾನಾದ ಕಾರಣ.
--------------
ಮಾದಾರ ಧೂಳಯ್ಯ
ಶಿಲೆ ಮರ ಮಣ್ಣು ಬೆಂಕಿ ನೀರು ಮಳಲುಗಳಲ್ಲಿ ಇಂದು ಚಂದ್ರ ಇಂತಿವರೊಳಗಾದವರ ಮರೆಯಲ್ಲಿ ತಮ್ಮ ವಿಶ್ವಾಸ ಎಂತಿದ್ದಿತ್ತು ಅಂತೆ ವಸ್ತುವಿಪ್ಪುದನರಿತು ಇದು ಸಂಗನಬಸವಣ್ಣ ಸರ್ವಾಧಾರವಾಗಿ ಬಂದ ಸಂಬಂಧ. ಬ್ರಹ್ಮೇಶ್ವರಲಿಂಗವು ವಿಶ್ವಾಸದಲ್ಲಿ ತಪ್ಪದಿಪ್ಪನು.
--------------
ಬಾಹೂರ ಬೊಮ್ಮಣ್ಣ
ತತ್ವಂಗಳಿಂದ ಗೊತ್ತ ನೋಡಿಹೆನೆಂದಡೆ ಮರ್ಕಟ ದರ್ಪಣದಂತೆ, ತಾನಾಡಿದಂತಲ್ಲದೆ ಬೇರೊಂದು ಗುಣವಿಲ್ಲ. ಗಿರಿಯ ಗಹ್ವರದಲ್ಲಿ ಕರೆದಡೆ ಕರೆದಂತೆ ವಿಶ್ವಾಸವೆಂತ ಅಂತೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ಹಾಂಗಿಪ್ಪನು.
--------------
ಪ್ರಸಾದಿ ಭೋಗಣ್ಣ
ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಯಲೊಳಗಣ ಬಣ್ಣದಂತೆ, ನೀರಿನೊಳಗಣ ಸಾರದಂತೆ, ಅನಲ ಅನಿಲನ ಸಂಗದಿಂದ ಲಯವಾದ ಸಾಕಾರದಂತೆಯಿಪ್ಪಾತನಿರವು ಎಂತಿದ್ದಿತ್ತು, ಅಂತೆ ಇರಬಲ್ಲಡೆ ಆತ್ಮಯೋಗಸಂಬಂಧ. ಈ ಸಂಬಂಧದ ಸಮೂಹ ನಿಂದಲ್ಲಿ, ಕಂಡೆಹೆ, ಕಾಣಿಸಿಕೊಂಡೆಹೆನೆಂಬ ದಂದುಗ ನಿಂದಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಹಿಂದಣ ಅನಂತವನೂ, ಮುಂದಣ ಅನಂತವನೂ ಒಂದು ದಿನ ಒಳಕೊಂಡಿತ್ತು ನೋಡಾ ! ಒಂದು ದಿನವನೊಳಕೊಂಡು ಮಾತಾಡುವ ಮಹಂತನ ಕಂಡು ಬಲ್ಲವರಾರಯ್ಯ ? ಆದ್ಯರು ವೇದ್ಯರು ಅನಂತ ಹಿರಿಯರು, ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ನೆನಹು ನೆನೆವ ಮನದಲ್ಲಿಲ್ಲ, ತನುವಿನಲ್ಲಿ ಆಸೆಯಿಲ್ಲ. ನೆನೆವ ಮನವನತಿಗಳೆದ ಘನಕ್ಕೆ ಘನವೆಂತೆಂಬೆ ? ತನ್ನಲ್ಲಿ ತಾನಾಯಿತ್ತು, ಭಿನ್ನವಿಲ್ಲದೆ ನಿಂದ ನಿಜವು. ಅನಾಯಾಸದ ಅನುವ ಕಂಡು ಆನು ಬೆರಗಾದೆನಯ್ಯಾ. ಎಂತಿದ್ದುದು ಅಂತೆ ಅದೆ ಚಿಂತೆಯಿಲ್ಲದನುಭಾವ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಷಡುವರ್ಣ ದಶವಾಯು ಚತುಷ್ಟಯಂಗಳು ಪಂಚೇಂದ್ರಿಯ ಅಷ್ಟಮದಂಗಳೆಂದು, ಷೋಡಶಕಳೆಗಳೆಂದು, ತ್ರಿವಿಧ ಶಕ್ತಿಯೆಂದು, ತ್ರಿವಿಧ ಆತ್ಮನೆಂದು, ತ್ರಿವಿಧ, ಭೂತಿಕವೆಂದು, ಪಂಚವಿಂಶತಿತತ್ವಂಗಳೆಂದು, ಪಿಂಡಪಿಂಡಭಾವವೆಂದು, ಜ್ಞಾನಜ್ಞಾನ ಸಂಬಂಧವೆಂದು ಇಂತೀ ಭೇದಂಗಳ ಸಂಕಲ್ಪಿಸಿ ನುಡಿವುದು ಅದೇನು ಹೇಳಾ. ಅದು ಅರಿವಿನ ಮರವೆಯೋ ? ಮರೆದು ಅರಿದ ಎಚ್ಚರಿಕೆಯೋ ? ಇಂತೀ ಭೇದವ ತೆರೆದು ಕಂಡೆನೆಂಬ ಸೂತಕವ ಮರೆದಲ್ಲಿ, ಆ ಗುಣ ಎಂತೆಯಿದ್ದಿತ್ತು ಅಂತೆ ವಸ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಅಮೃತ ಸರ್ವರಿಗೂ ಅಮೃತವಾಗಿಪ್ಪುದಲ್ಲದೆ ಕೆಲಬರಿಗೆ ಅಮೃತವಾಗಿ ಕೆಲಬರಿಗೆ ವಿಷವಾಗದು ನೋಡಾ. ಎಂತು ಅಂತೆ, ಶ್ರೀಗುರು ಸರ್ವರಿಗೆಯೂ ಗುರುವಾಗಿರಬೇಕಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಜ್ಞಾನೋದಯವಾಗಿ ಷಟ್‍ಸ್ಥಲದ ನಿರ್ಣಯವೆಂತುಟೆಂದು ವಿಚಾರಿಸೆ: ಮೊದಲಲ್ಲಿ ಭಕ್ತಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಮಾಹೇಶ್ವರಸ್ಥಲಕ್ಕೆ ಬಂದು, ಮಾಹೇಶ್ವರಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಪ್ರಸಾದಿಸ್ಥಲಕ್ಕೆ ಬಂದು, ಪ್ರಸಾದಿಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಪ್ರಾಣಲಿಂಗಿಸ್ಥಲಕ್ಕೆ ಬಂದು, ಪ್ರಾಣಲಿಂಗಿಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಶರಣಸ್ಥಲಕ್ಕೆ ಬಂದು, ಶರಣಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಐಕ್ಯಸ್ಥಲಕ್ಕೆ ಬಂದು, ಐಕ್ಯಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ನಿರವಯಸ್ಥಲಕ್ಕೆ ಬಂದು ನಿರಾಳಕ್ಕೆ ನಿರಾಳನಾದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->