ಅಥವಾ

ಒಟ್ಟು 19 ಕಡೆಗಳಲ್ಲಿ , 7 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ. ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ. ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ ಭ್ರಷ್ಟ ಮಾದಿಗರ ಮಾತು ಅಂತಿರಲಿ. ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು ? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ ? ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ ಯೋನಿಮಂಡಲವೇಕಾಯಿತು ? ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ ? ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ ? ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ ? ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ ಮೂವತ್ತುಮೂರುಕೋಟಿ ದೇವರ್ಕಳು ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು ಶಿವನ ಮೊರೆಯ ಹೊಕ್ಕರೇಕೆ ? ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ ಬೊಗಳುವರ ಮಾತ ಕೇಳಲಾಗದು. ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ. ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರುಕೊಟ್ಟ ಲಿಂಗವೇನಾಯಿತು ? ವಿಭೂತಿ ಏನಾಯಿತು ? ರುದ್ರಾಕ್ಷಿ ಏನಾಯಿತು ? ಮಂತ್ರವೇನಾಯಿತು ? ಪಾದೋದಕ ಪ್ರಸಾದವೇನಾಯಿತು ? ನಿಮ್ಮ ಶಿವಾಚಾರವೇನಾಯಿತು ? ನೀವೇನಾದಿರಿ ಹೇಳಿರಣ್ಣಾ ? ಅರಿಯದಿದ್ದರೆ ಕೇಳಿರಣ್ಣಾ. ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ ಅಶುದ್ಧ ಕಿಲ್ಬಿಷವೆನಿಸಿತ್ತು. ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟವ ಕಂಡು ಪಂಚಾಂಗವ ಕೇಳಿದವರಿಗೆ ನಾಯಿ ಮಲವ ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಶೀಲವಂತರೆಲ್ಲ ಅಂತಿರಲಿ, ತಮ್ಮ ತಮ್ಮ ಮನದಿ ಮದವ ಕಳೆದು ತಮ್ಮೊಳಗಿರ್ದ ಭವಿಗಳ ಭಕ್ತರ ಮಾಡಿ ತಮ್ಮಲ್ಲಿರುವ ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಪಂಚಭೂತಂಗಳು, ಚತುಷ್ಕರಣಂಗಳು, ತ್ರಿಕರಣಂಗಳು, ತ್ರಿಗುಣಂಗಳು ಶಿವಸಂಸ್ಕಾರದಿಂದ ಲಿಂಗಕರಣಂಗಳೆಂದೆನಿಸಿ ನಿತ್ಯ ಲಿಂಗಾರ್ಚನೆಯ ಮಾಡಬಲ್ಲಾತನೆ ಶೀಲವಂತನಯ್ಯಾ. ಅವನ ಶ್ರೀಪಾದವನು ಹಸ್ತವನೆತ್ತಿ ಹೊಗಳುತಿರ್ದವು ವೇದಂಗಳು: `ಓಂ ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ ಅಯಂ ಮಾತಾ ಅಯಂ ಪಿತಾ ' ಇಂತಪ್ಪ ಲಿಂಗದ ಅರ್ಚನೆಯ ಮಾಡಬಲ್ಲಾತನೆ ಸಂಬಂಧಿಯೆನಿಸಿಕೊಳ್ಳಬಲ್ಲನಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಬಸವಣ್ಣ ನಿನ್ನ ಹೊಗಳತೆ ಅಂತಿರಲಿ, ಎನ್ನ ಹೊಗಳತೆ ಅಂತಿರಲಿ, ಗುರುವಾಗಬಹುದು ಲಿಂಗವಾಗಬಹುದು ಜಂಗಮವಾಗಬಹುದು, ಇಂತೀ ತ್ರಿವಿಧವೂ ಆಗಬಹುದು. ನಿನ್ನ ಆಚಾರಕ್ಕೆ ಪ್ರಾಣವಾಗಿ, ಎನ್ನ ಜ್ಞಾನಕ್ಕೆ ಆಚಾರವಾಗಿ ಈ ಉಭಯ ಸಂಗದ ಸುಖದ ಪ್ರಸನ್ನಕ್ಕೆ ಪರಿಣಾಮಿಯಾಗಿ ಬಂದ ಘನಮಹಿಮನು ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನಾಗಬಾರದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು. ದ್ವಯಮುಖರು ಅದ್ವಯಮುಖರು ಸ್ವತಂತ್ರಮುಖರು ಸನ್ನಹಿತಮುಖರು ಉಗ್ರಮುಖರು ಉತ್ಪತ್ಯಕ್ಕೆ ಹೊರಗಾದ ಮುಖರು ಸ್ಥಿತಿಗತಿಯಿಂದರಿಯದ ಮುಖರು ಸರ್ವವಿಸ್ತೀರ್ಣದೊಳಗುಳ್ಳ ಮುಖರು ಅಷ್ಟತನುಮೂರ್ತಿ ಮೊದಲಾದ ಅನಂತಮೂರ್ತಿಗಳೆಲ್ಲ ದೇವಾರಾಧನೆ ಪೂಜಕರಾದರಲ್ಲದೆ ಭಕ್ತಮುಖರಲ್ಲ. ಸಂಸಾರ ಸಂಗದೊಳಗಿದ್ದವರಲ್ಲ. ಇಂಥ ಮುಖರೆಲ್ಲ ಅಂತಿರಲಿ. ಇಲ್ಲದ ನಿರವಯವ ಆಕಾರಕ್ಕೆ ತಂದು, ಜಂಗಮಲಿಂಗವೆನಿಸಿ ಸಾಹಿತ್ಯವ ಮಾಡಿದಾತ ಬಸವಣ್ಣನು. ಇದನರಿದು ಧನ್ಯನಾದೆನೆಂಬೀತ ಪರುಷದೊಳಗು. ಈ ಕ್ರಮವನರಿಯದೆ, ಅನಂತ ಮತವ ಹಿಡಿದು ಭೂಭಾರಕರಾದರು. ಅವರ ಮುಟ್ಟಿ, ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದವಾಗದೆಂದು ಜಂಗಮಕ್ಕೆ ಅರ್ಪಿಸಿದ ನಿತ್ಯಪ್ರಸಾದವೆನಗೆ ಬಸವಣ್ಣನ ಪ್ರಸಾದ. ಆ ಬಸವಣ್ಣನ ಪ್ರಸಾದವೆ ಎನಗೂ ನಿನಗೂ ವಿಸ್ತಾರವಾಗಿತ್ತು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ತೊರೆದು, ಲಿಂಗಮುಖವರಿಯದವರೆಲ್ಲಾ ಅಂತಿರಲಿ ಅಂತಿರಲಿ. ಬ್ರಹ್ಮೋಪದೇಶವನೆ ಕೊರಳಲ್ಲಿರಿಸಿಕೊಂಡು, ವಿಷಯಾದಿಗಳ ಕೊಂಡಾತನಂತಿರಲಿ, ಅಂತಿರಲಿ. ಪಂಚಮಹಾವೇದಶಾಸ್ತ್ರವನೋದಿ, ಲಿಂಗವುಂಟು ಇಲ್ಲಾಯೆಂಬ ಶ್ವಾನರಂತಿರಲಿ, ಅಂತಿರಲಿ. ತನುವ ಹೊತ್ತು ತೊಳಲಿ ಬಳಲುವ ಕಾಲವಂಚಕ ಯೋಗಿಗಳೆಲ್ಲಾ ಅಂತಿರಲಿ, ಅಂತಿರಲಿ. ಪಂಚಮಹಾಶೈವರು ಭ್ರಷ್ಟರಾಗಿಹೋದರು. ಎಂತು ಲಿಂಗವಂತಂಗೆ ಸರಿಯೆಂಬೆ ? ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು, ಬುದ್ಧಿ ತಪ್ಪಿ, ಗಮನಗೆಟ್ಟುಹೋದರು. ಅದೃಶ್ಯಂ ಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ | ಸದ್ಬ್ರಹ್ಮಂ ತು ನಿರಾಕಾರಂ, ತಥ್ಯಂ ಧ್ಯಾಯಂತಿ ಯೋಗಿನಃ || ಎಂದುದಾಗಿ, ಬ್ರಾಹ್ಮಣನೆಂದಡೆ ಬ್ರಹ್ಮನ ಶಿರವ ದಂಡವ ಕೊಂಡರು. ಬ್ರಹ್ಮವಾದಿಗಳು ಲಿಂಗಕ್ಕೆ ದೂರವಾಗಿ ಹೋದರು. ಅಹಮಿಲ್ಲದ ಕಾರಣ, ಸಕಳೇಶ್ವರದೇವಯ್ಯಾ, ನಿಮ್ಮ ಶರಣರು ಜಗವಂದಯರಾದರು.
--------------
ಸಕಳೇಶ ಮಾದರಸ
ಶತವೇದಿ, ಸಹಸ್ರವೇದಿಗಳು, ಕಬ್ಬುನವ ಹೊನ್ನ ಮಾಡುವ ಸಿದ್ಧರಸವಾದಡೇನು? ಅಂತಿರಲಿ, ಅಂತಿರಲಿ. ದೀಪವಾದಿಗಳು ಜಲವಾದಿಗಳು, ಹಿರಣ್ಯಂಗಳ ವೇಧಿಸುವ ವೇದಿಗಳಾದಡೇನು ? ಅಂತಿರಲಿ, ಅಂತಿರಲಿ. ಘಟದಿಟ ಚಂದನ ಪರುಷ ಕಾಗೆಯ ಹೊಂಬಣ್ಣದ ಮಾಡುವ ಮೇರುವಾದಡೇನು ? ಅಂತಿರಲಿ, ಅಂತಿರಲಿ. ಸಕಳೇಶ್ವರದೇವಾ, ನಿಮ್ಮ ಶರಣರು. ಸ್ವತಂತ್ರ[ರು], ಘನಮಹಿಮರು. ಶರವೇದಿ ಶಬುದವೇದಿ ಕ್ಷಣವೇದಿಯೆಂಬವರು, ಲಿಂಗವೇದಿಗೆಂತು ಸರಿಯೆಂಬೆ?
--------------
ಸಕಳೇಶ ಮಾದರಸ
ಆ ಪರಶಿವನ ಗರ್ಭದಲ್ಲಿರ್ದ ಬ್ರಹ್ಮಾಂಡದೊಳಗೆ ಪಿಂಡಾಂಡವಾದ ಪುಣ್ಯಾತ್ಮರು, ಬಿಂದುರೂಪಾಗಿ ಬಂದ ಸೂತಕ ಕಂಡು ಸಂದೇಹಗೊಂಡು, ಚಂದವಳಿದು, ಹಿಂದೆ ಬಂದಾ ಯೋನಿಯ ಕಿಸುಕುಳ ಮೂತ್ರದಕುಣಿಗೆ ಬೀಳಬಾರದೆಂದು ಹೇಯ ಹುಟ್ಟಿ ಸ್ತ್ರೀ ಭೋಗವ ಬಿಟ್ಟು, ವೈರಾಗ್ಯ ತಲಿಗೇರಿ, ಅನ್ನ ವಸ್ತ್ರವ ಕಳೆದು ಊರೊಳಗಿರಬಾರದೆಂದು ದೇಶ ಸಂಚಾರ ಮಾಡಿ, ಕಾಶಿ, ಕೇದಾರ, ರಾಮೇಶ್ವರ, ಶ್ರೀಶೈಲ, ಉಳವಿ, ಹಂಪಿ, ಗೋಕರ್ಣ ಮೊದಲಾದ ಅನಂತ ತೀರ್ಥವ ಮಿಂದು, ಸಾಯಬಾರದ ಅಂಗಸಿದ್ಧಿ, ಅಲಗುನೋಯಿಸದ ಘುಟಿಕಾಸಿದ್ಧಿ, ಹೇಳಿದ್ದಾಗುವ ವಾಕ್ಯಸಿದ್ಧಿ, ಹೆಸರುಹೇಳುವ ಬೆನಕನಸಿದ್ಧಿ, ರೋಗಕಳೆಯುವ ಮೂಲಿಕಿಸಿದ್ಧಿ, ಬೆರಗುಮಾಡುವ ಬೇತಾಳಸಿದ್ಧಿ, ಅಗ್ನಿಸ್ತಂಭನ, ಜಲಸ್ತಂಭನ, ಗಗನಕ್ಕೆ ಹಾರುವ ಯೋಗಸಿದ್ಧಿ, ದೂರದೃಷ್ಟಿ, ದೂರಶ್ರವಣ, ಸರ್ವದೃಷ್ಟಿ, ಉಂಡೂಟ, ಕಂಡ ಕನಸು, ಮನೋಬಯಕೆ, ಹಿಂದಿನ ಖೂನ, ಕನಸಸಾಕ್ಷಿ, ಇಂದ್ರಜಾಲ, ಮಹೇಂದ್ರಜಾಲ, ಸುವರ್ಣಜನನ, ಬಂಗಾಳಿ, ಮರಣಯೋಗ, ಪರಕಾಯಪ್ರವೇಶ, ರಾಜಯೋಗ, ರಾಜವಶ, ಜನವಶ, ಸ್ತ್ರೀವಶ, ಭಸ್ಮಸಿದ್ಧಿ, ಅಂಜನಸಿದ್ಧಿ, ಮೋಹನ, ವೈರಿಸ್ತಂಭನ, ವಾಯುಸ್ತಂಭನ, ಭೂತ, ಪ್ರೇತ, ಪಿಶಾಚಿ, ಬ್ರಹ್ಮರಾಕ್ಷಸ, ಜಟ್ಟಿಂಗ, ಹಿರೋಡ್ಯಾ, ಯಲ್ಲಮ್ಮಾ, ಪೋತಮ್ಮಾ, ಚಂಡಿಚಾಮುಂಡ್ಯಾದಿಗಳ ಮಾತನಾಡಿಸುವ ಮಂತ್ರಸಿದ್ಧಿ, ಹುಲಿ, ಹಲ್ಲಿ, ಕತ್ತಿ, ನರಿ, ಕಾಗಿ, ಹಾಲ್ಹಕ್ಕಿ ಮೊದಲಾದ ಮೃಗಪಕ್ಷಿಯ ಮಾತು ತಿಳಿಯುವ ಯಂತ್ರತಂತ್ರಸಿದ್ಧಿ, ಮಲಮೂತ್ರವನು ಬಿಡದ ಅಂತರಪಚನ ಅದೃಶ್ಯ ಅನಂತ ಆಹಾರ ಜೀವಸ್ತಂಭನ, ದೇವ ಪ್ರತ್ಯಕ್ಷ ಸಂಜೀವನ, ಬಂಧವಿಮೋಚನ, ದೃಷ್ಟಿ ಆಗಮನ, ಇಷ್ಟದಾಯಕ ಮನೋಗಮನ ಮೊದಲಾದ ಅನಂತ ಸಿದ್ಧಿಗಳಿಗಾಶೆ ಮಾಡಿ ಮಣ್ಣುಗಾಣದೇ ಹೋದರು ಅನಂತರು. ಅದು ಅಂತಿರಲಿ, ಫಲಪದವಿ ಪಡೆವೆವೆಂದು ಹಳ್ಳ, ಕೊಳ್ಳ, ನದಿತೀರ, ಅಡವಿ ಅರಣ್ಯ ಗುಡ್ಡ ಗಿರಿ, ಗವಿ ವಟವೃಕ್ಷ, ಸಂಗಮ, ಮಠ ಮಾನ್ಯ ಮೊದಲಾದ ಸುಸ್ಥಳದಲ್ಲಿ ಕುಳಿತು ನಿದ್ರೆ ಆಹಾರ ತೊರೆದು, ಆಸನವ ಬಲಿದು, ಮೌನ ಮುದ್ರೆಯ ಹಿಡಿದು, ವಾತ, ಅಂಬು, ಪರ್ಣ, ಕಲ್ಲು, ಹಣ್ಣು, ಬೂದಿ, ಹುಲ್ಲಿನ ರಸ, ನೆಲ, ಬೇರು, ಗಡ್ಡಿ ಮೊದಲಾದ ಆಹಾರವ ಕೊಂಡು, ಮೈಗೆ ಹುತ್ತೇರಿ, ಜಡಿಯಲ್ಲಿ ಆಲವ ಬೆಳೆದು, ಗಡ್ಡದೊಳು ಗೀಜಗವು ಮನಿ ಮಾಡಿರಲು, ಮನವಳಿಯದೆ, ಘನವ ತಿಳಿಯದೆ, ತನುವ ಉಳಿಯದೆ, ಪಂಚೇಂದ್ರಿಯ ಮಿಂಚು ತೊಳಿಯದೆ, ಹಳೆಹಂಚಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬ್ರಹ್ಮಪದವ ಪಡೆದೆನೆಂಬುದು ಭ್ರಮೆ ಕಾಣಿರೋ. ವಿಷ್ಣುಪದವ ಪಡೆದೆನೆಂಬುದು ತೃಷ್ಣೆ ಕಾಣಿರೋ. ಇಂದ್ರಪದವ ಪಡೆದೆನೆಂಬುದು ಬಂಧನ ಕಾಣಿರೆಲವೋ ಮರುಳು ಮಾನವರಿರಾ. ದೇವಾತಾದಿಭೋಗಂಗಳ ಪಡೆದಿಹೆನೆಂದು ಪರಿಣಾಮಿಸುವ ಗಾವಿಲರನೇನೆಂಬೆನಯ್ಯ? ದನುಜಪದ ನಿತ್ಯವೆಂಬ ಮನುಜರ ಮರುಳತನವ ನೋಡಾ. ಬ್ರಹ್ಮವಿಷ್ಣು ಇಂದ್ರಾದಿಗಳಿಗೊಡೆಯನಾದ ರುದ್ರನ ಪದವ ಪಡೆದೆನೆಂಬುದು- ಅದು ಅಂತಿರಲಿ. ಅದೇನು ಕಾರಣವೆಂದರೆ: ಇವೆಲ್ಲವೂ ಅನಿತ್ಯಪದವಾದ ಕಾರಣ. ಇವೆಲ್ಲ ಪದಂಗಳಿಗೂ ಮೇಲಾದ ಮಹಾಲಿಂಗ ಪದವೇ ನಿತ್ಯತ್ವಪದ. ಆ ಮಹಾಲಿಂಗ ಪದದೊಳಗೆ ಸಂಯೋಗವಾದ ಘನಲಿಂಗ ಪದಸ್ಥ ಶರಣನು ತನಗನ್ಯವಾಗಿ ಒಂದು ವಸ್ತುವ ಬಲ್ಲನೇ ಅನನ್ಯ ಶರಣನು? ಇದು ಕಾರಣ, ತನುವ ಬಳಲಿಸಿ ತಪವಮಾಡಿ ಫಲಪದವ ಪಡೆದು ಭೋಗಿಸಿಹೆನೆಂಬವರ ವಿಧಿಯೆಲ್ಲ ಹಂದಿ ತಪವಮಾಡಿ ಹಾಳು[ಗೇರಿ]ಯ ಹಡೆದಂತಾಯಿತ್ತು ಕಾಣಾ. ಶಿವಪದವಲ್ಲದೆ ಉಳಿದ ಪದವೆಲ್ಲಾ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->