ಅಥವಾ

ಒಟ್ಟು 17 ಕಡೆಗಳಲ್ಲಿ , 9 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವವೂ ಶಿವನಿಂದ ಉದ್ಭವಿಸುವವೆಂದರೆ, ಉದ್ಭವಿಸುವವೆಲ್ಲವೂ ಶಿವನೆ? ಸಕಲ ಬೀಜವ ಬಿತ್ತುವನೊಕ್ಕಲಿಗನೆಂದರೆ ಆ ಬೆಳೆ ತಾನೊಕ್ಕಲಿಗನೆ? ಮಡಕೆಯ ಕುಂಬಾರ ಮಾಡುವನೆಂದರೆ, ಆ ಮಡಕೆ ತಾ ಕುಂಬಾರನೆ? ಕಬ್ಬುನವ ಕಮ್ಮಾರ ಮಾಡುವನೆಂದರೆ, ಆ ಕಬ್ಬುನ ತಾ ಕಮ್ಮಾರನೆ? ಆ ಪರಿಯಲಿ ಸಕಲ ಜಗತ್ತಿನ ಸಚರಾಚರವನು ಮಾಡುವನೆಂದರೆ, ಆ ಸಚರಾಚರವು ಶಿವನೆ? ಅಹಂಗಾದರೆ ಅಷ್ಟಾದಶವರ್ಣವೇಕಾದವು? ಚೌರಾಸಿಲಕ್ಷ ಜೀವರಾಶಿಗಳೇಕಾದವು? ಸುಖ-ದುಃಖ ಸ್ವರ್ಗ-ನರಕಂಗಳೇಕಾದವು? ಉತ್ತಮ-ಮಧ್ಯಮ-ಕನಿಷ್ಠಂಗಳೇಕಾದವು? ಪುಣ್ಯ-ಪಾಪ, ಭವಿ-ಭಕ್ತರೆಂದೇಕಾದವು? ಇದು ಕಾರಣ ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವ. ಅಂತಲ್ಲದೆ ಸರ್ವವೂ ಶಿವನೆಂದರೆ ಅಘೋರ ನರಕ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ. ಹೇಳಿಹೆನು ಕೇಳಿರಣ್ಣಾ: ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ, ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ. ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಭಿಲಾಷೆಯುಳ್ಳಡೆ, ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ. ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ_ ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ.
--------------
ಅಲ್ಲಮಪ್ರಭುದೇವರು
ಸಮಯಾಚಾರವೆಂದು ನೇಮಕ್ಕೆ ಹೊತ್ತು ಮಾಡುತಿರ್ಪ ಸದ್ಭಕ್ತರು, ಎನಗೆ ಹೇಳಿರಯ್ಯಾ, ಅರ್ಥಕೋ, ಪ್ರಾಣಕ್ಕೋ, ಅಪಮಾನಕ್ಕೋ? ಅಂತಲ್ಲದೆ, ಉಂಬ ಓಗರಕ್ಕೋ, ಸಂತತ ಸಮಯೋಚಿತವನರಿವುದಕ್ಕೋ? ಈ ಸಂಚಿತನವರಿಯದೆ ಮುಂಚಿತ್ತಾಗಿ ಉಂಬ, ಅಶನಕ್ಕೆ ಕೈಯ ನೀಡಿ, ತಾ ಹಿಂಚಾಗಿ ಉಂಬ ಪ್ರಸಾದಿಯ ನೋಡಾ. ಆಯತವೆಂದರಿಯದೆ, ಸ್ವಾಯತವೆಂದರಿಯದೆ, ಸನ್ನಹಿತಪ್ರಸಾದವೆಂದರಿಯದೆ, ಹಮ್ಮುಬಿಮ್ಮಿಗೆ ಹೋರುವ ಉನ್ಮತ್ತರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು. ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ, ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು, ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ, ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ, ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ. ಅಂತಲ್ಲದೆ ಬರಿಯಮಾತಿಂಗೆ ಮಾತನೆ ಕೊಟ್ಟು, ತಾನಾಡಿದುದೆ ನೆಲೆಯೆಂಬಾತ ಭಕ್ತನೆ ? ಅಲ್ಲ, ಉಪಜೀವಿ. ಹೇಮದಿಚ್ಛೆಗೆ ಹರಿದು ಕಾಮರತಿಗಳುಪವ, ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು, ನರಕದೊಳಗೋಲಾಡುವಾತ ಭಕ್ತನೆ ? ಅಲ್ಲ. ಆದಿಯಲ್ಲಿ ನಮ್ಮವರು ಹೊನ್ನು ಹೆಮ್ಣು ಮಣ್ಣು, ಈ ತ್ರಿವಿಧವ ಬಿಟ್ಟಿದರೆ ? ಇಲ್ಲ. ಆವ ತಲೆಯೆತ್ತಲೀಯರಾಗಿ, ಅನ್ಯಸಂಗವ ಹೊದ್ದರು. ಭವಿಮಿಶ್ರವ ಮುಟ್ಟರು, ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು. ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳಾ, ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು ?
--------------
ಸೊಡ್ಡಳ ಬಾಚರಸ
ಉದಯಕಾಲ ಮಧ್ಯಾಹ್ನಕಾಲ ಅಸ್ತಮಯಕಾಲದಲ್ಲಿ, ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವಾತನೆ ಸದ್ಭಕ್ತನು. ಇಂತೀ ತ್ರಿಕಾಲದಲ್ಲಿ ಲಿಂಗಾರ್ಚನೆಯ ಮಾಡುವಲ್ಲಿ, ಹಿಂದಣ ಕ್ರೀಯಿಂದ ಮಾಡಬೇಕು. ಅಂತಲ್ಲದೆ ಸುಮ್ಮನೆ ಲಿಂಗಾರ್ಚನೆಯ ಮಾಡುವಾತ, ಭಕ್ತನಲ್ಲ, ಮಾಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ ಐಕ್ಯನಲ್ಲ. ಅವನು ಶ್ರೀಗುರುವಿನಾಜ್ಞೆಯ ಮೀರಿದವನು, ಪಂಚಮಹಾಪಾತಕನು, ಲಿಂಗಚೋರಕನು. ಇದನರಿದು ತ್ರಿಸಂಧ್ಯಾಕಾಲದಲ್ಲಿ ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಹಿಂದಣ ಕ್ರೀವಿಡಿದು ಮಾಡುವ ಸದ್ಭಕ್ತಂಗೆ ನಮೋ ನಮೋ ಎನುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಗುರುಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಇಷ್ಟಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಜಂಗಮಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಗುರು ಲಿಂಗ ಜಂಗಮದ ಈ ತ್ರಿವಿಧಪ್ರಸಾದವ ಸೇವಿಸುವಲ್ಲಿ ಏಕರತಿಯಾಗಿರಬೇಕು. ಅಂತಲ್ಲದೆ, ಅನ್ಯಲಿಂಗ ಪ್ರಸಾದವ ಕೊಳಲಾಗದು. ಅದೇನು ಕಾರಣವೆಂದಡೆ: ವೀರಶೈವ ತನ್ನ ಇಷ್ಟಲಿಂಗಕ್ಕೆ ಕೊಟ್ಟು ಕೊಂಬ ಕ್ರಿಯೆಗೆ ಬಾರದಾಗಿ. ಭಕ್ತಾಂಗಕೋಟಿಗಳಲ್ಲಿ ಬೇರೆ ಬೇರೆ ಲಿಂಗ ತೋರಿತ್ತೆಂದಡೆ ಅದು ಬೇರಾಗಬಲ್ಲುದೆ? ಹಲವು ಘಟ ಜಲಗಳಲ್ಲಿ ಚಂದ್ರನೊಬ್ಬ ತೋರಿದಂತೆ ಇಂತೀ ಪರಿಯಲ್ಲಿ ಎಸೆವುದು. ಬಹುಲಿಂಗಭಾವಂಗಳೆಂದಡೆ ಬೇರಾಗಬಲ್ಲುದೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅಂಗ ಹಲವಾದಡೇನು ಅಲ್ಲಿ ತೋರುವುದೊಂದೇ ವಸ್ತು.
--------------
ಸ್ವತಂತ್ರ ಸಿದ್ಧಲಿಂಗ
ವಿಭೂತಿ ವಿಭೂತಿಯೆಂಬ ಮಾತಿಂಗಂಜಲೇಕೋ, ಅದು ವಿಭೂತಿ ಅಹುದೊ ಅಲ್ಲೊ ಎಂಬ ಕ್ರಮವನರಿಯಬೇಕಲ್ಲದೆ ? ಕೊಂತವೆಂದರೆ ಕರುಳು ಹರಿವುದೆ ಇರಿಯದನ್ನಕ್ಕ ? ನಿಃಕ್ರಿಯ ನಿಃಕಾಮ್ಯ ನಿರುಪಾಧಿಕದಿಂದ ಶ್ರೇಷ್ಠಾಚಾರವಿಡಿದು ಚರಿಸುವುದು ವಿಭೂತಿ. ಅದಕ್ಕಂಜುವುದು, ಬೆಚ್ಚುವುದು, ಅದಕ್ಕೆ ತಪ್ಪಿದಡೆ ತಪ್ಪಿದುದು, ಅಲ್ಲಿ ಶಿಕ್ಷಿಸಲುಂಟು ಬುದ್ಧಿಗಲಿಸಲುಂಟು. ಅಂತಲ್ಲದೆ ಕುಮಂತ್ರವನೊಡಲೊಳಗಿಂಬಿಟ್ಟುಕೊಂಡು ಧನದುಪಾಧಿಕೆಗೆ ಅಹುದನಲ್ಲವ ಮಾಡಿ, ಕುಚೇಷ್ಟೆವಿಡಿದು ಚರಿಸುವುದು ವಿಭೂತಿಯೆ ? ಅಲ್ಲ. ಅದಕಂಜಲಿಲ್ಲ ಬೆಚ್ಚಲಿಲ್ಲ. ಅದೇನು ಕಾರಣವೆಂದೆಡೆ_ ವಿಭೂತಿಯಲ್ಲಾಗಿ. ಇಂತೀ ಉಭಯದ ಸಕೀಲವ ಸಜ್ಜನ ಶುದ್ಧಸಾತ್ವಿಕರು ಬಲ್ಲರಲ್ಲದೆ ಎಲ್ಲರೂ ಬಲ್ಲರೆ ಕೂಡಲಚೆನ್ನಸಂಗನಲ್ಲಿ ?
--------------
ಚನ್ನಬಸವಣ್ಣ
ವಾಹನವನೇರುವಾಗ ದಾರವ ಹಿಡಿದು ನಡೆಸಲು ವಾಹಕನಿಚ್ಛೆಯಲ್ಲಿ ನಡೆವುದು ವಾಹನ. ಹಾಗೆ ದೇಹಧರ್ಮದಿಚ್ಛೆಯಲ್ಲಿ ಹೋಗದೆ ತನ್ನ ವಶಕ್ಕೆ ತಂದು ನಡೆಸಬೇಕು ಭಕ್ತನಾದಡೆ. ಅಂತಲ್ಲದೆ ದೇಹಧರ್ಮ ತನ್ನಿಚ್ಚೆಗೆ ಬಾರದೆಂಬವ, ದೇಹಭಾರವ ಹೊತ್ತು ತೊಳಲುವ ಭೂಭಾರಕನಲ್ಲದೆ, ಆತ ಭಕ್ತನಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತ್ರಿವಿಧೋದಕತ್ರಿವಿಧೋದಕವೆಂದು ತಿರುಗಿ ತಿರುಗಿ ಕುಂಡಲಿಗನ ಹುಳುವಿನಂತೆ ಭ್ರಮೆಗೊಂಡು ಹೋದರಲ್ಲಾ ನಿಮ್ಮ ಭಕ್ತರೆಂಬವರು, ನಿಮ್ಮ ಹಿರಿಯರೆಂಬವರು. ತ್ರಿವಿಧೋದಕ ಒಬ್ಬರಿಗೆಯೂ ಆಗದು. ತ್ರಿವಿಧೋದಕ ಅಳವಟ್ಟ ದೇಹ ಕುರುವಿಟ್ಟ ರೂಹಿನಂತೆ ಕಣ್ಣೆವೆ ಹಳಚದೆ ನಿಬ್ಬೆರಗಾಗಿರಬೇಕು, ಸಿಡಿಲು ಹೊಡೆದ ಹೆಣನಂತಿರಬೇಕು. ಅಂತಲ್ಲದೆ ಬಯಲಿಂಗೆ ತ್ರಿವಿಧೋದಕ ತ್ರಿವಿಧೋದಕವೆಂಬ ಹೇಸಿಕೆಯ ಮಾತ ಕೇಳಲಾಗದು. ಇದು ಕಾರಣ, ಕೂಡಲಚೆನ್ನಸಂಗಮದೇವಾ. ನಿಮ್ಮ ತ್ರಿವಿಧೋದಕವ ಬಲ್ಲ ಬಸವಣ್ಣಂಗೆ ನಮೋ ನಮೋ.
--------------
ಚನ್ನಬಸವಣ್ಣ
ಬಸವಣ್ಣ ಚೆನ್ನಬಸವಣ್ಣ ಪ್ರಭುಸ್ವಾಮಿ ಮಡಿವಾಳ ಮಾಚಯ್ಯ ಹಡಪದಪ್ಪಣ್ಣ ಅಕ್ಕಮಹಾದೇವಿ ನೀಲಲೋಚನೆಯಮ್ಮ ಗಂಗಾಂಬಿಕೆ ಅಕ್ಕನಾಗಲಿ ಮುಕ್ತಾಯಕ್ಕ ನಿಂಬೆಕ್ಕ ಚೋಳವ್ವೆ ಅಮ್ಮವ್ವೆ ಆದವ್ವೆ ಕೋಳೂರು ಕೊಡಗೂಸಮ್ಮ ಗೊಗ್ಗವ್ವೆ ದುಗ್ಗಳವ್ವೆ ಸುಗ್ಗಳವ್ವೆಯರ ಪಾದರಕ್ಷೆಯೊಳಗೆ ಐಕ್ಯಪದವೀಯಯ್ಯ ಸಿದ್ಧಲಿಂಗಪ್ರಿಯ ಬಸವಪ್ರಭುವೆ ನಿಮ್ಮ ಧರ್ಮ ನಿಮ್ಮ ಧರ್ಮ ಈ ದೇವರ ಸೆರಗೊಡ್ಡಿ ಬೇಡಿಕೊಂಬೆನು. ಪಾಲಿಸಯ್ಯಾ ಸ್ವಾಮಿ ದಯದಿಂದ ಚಿದಾದಿತ್ಯ ನಿರೀಕ್ಷಣ ವಿಚಕ್ಷಣ. ವಸ್ತುವ ಕಂಡರೆ ಸುಮ್ಮನಿರುವುದುಚಿತವಯ್ಯಾ. ಅಂತಲ್ಲದೆ ಹೆಮ್ಮೆಗೆ ನುಡಿದಡೆ ಉಚಿತವಲ್ಲವಯ್ಯಾ ನೀನಾನೆಂಬುಭಯವಳಿದಾತಂಗೆ ಏನೂ ಇಲ್ಲವಯ್ಯಾ ವಿರಕ್ತರೆಂಬವರು ಸ್ತುತಿ ನಿಂದ್ಯಾದಿಗಳಿಗೆ ಹೆದರಿರಬೇಕಯ್ಯ, ಸಿದ್ಧಲಿಂಗಪ್ರಿಯ ಪ್ರಭುವೆ.
--------------
ಸಿದ್ಧಲಿಂಗಪ್ರಿಯ ಬಸವಪ್ರಭುವೆ
ಕಲ್ಪಿತದಿಂ ಮಾಡುವ ಭಕ್ತ ನಿರ್ಧನಿಕನಾದರೆ ತನ್ನ ಕೈಯ ಧನವ ವೆಚ್ಚಿಸಿ, ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ, ಅವರ ಮತ್ತೆ ದಾಸೋಹಕ್ಕೆ ನಿಲಿಸಿ, ತಾ ಕರ್ತನಾಗಿ ಪರಿಣಾಮಿಸಬಲ್ಲರೆ ಜಂಗಮ. ಅವರಿಗೆ ನಮೋ ನಮೋ [ಎಂಬೆ] ಅಂತಲ್ಲದೆ ಮುನ್ನ ಮಾಡಿದಿರಿ, ಈಗ ಮಾಡಿರೇನಿ ಭೋ ಎಂದು ಜರಿದು ಝಂಕಿಸಿ ಹೋಹರ ಜಂಗಮವೆಂಬೆನೆ ? ಎನ್ನೆನು. ಏನು ಕಾರಣವೆಂದರೆ_ ಆತ ಸೂನೆಗಾರ, ಆತ ದೋಷಾರ್ಥಿ, ಆತ ಭವಭಾರಿ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತ ಜಂಗಮದ ನುಡಿಗಡಣದ ಮೇಳಾಪವೆಂತಿರಬೇಕೆಂದರೆ: ಪ್ರಚ್ಛನ್ನವಾಗಿ ಲೋಕಕ್ಕೆ ಅದೃಶ್ಯವಾಗಿರಬೇಕು, ಜಲಚರನ ಪಾದಪಥದಂತಿರಬೇಕು, ಶಿಶುಕಂಡ ಕನಸಿನಂತಿರಬೇಕು, ಮೌನಿಯುಂಡ ರುಚಿಯಂತಿರಬೇಕು, ಶಿವಾಚಾರಕ್ಕೆ ಇದು ಚಿಹ್ನ. ಅಂತಲ್ಲದೆ ಹಗರಣದ ವಾದ್ಯದಂತೆ ನಗೆಗೆಡೆಯಾಗಿರುತಿಪ್ಪರು. ಹೇಮದೊರೆಯ ಮೃತ್ತಿಕೆಯಲೆತ್ತಿದಂತೆ, ಭೇರುಂಡ ಬಾಯಿವಡೆದಿಪ್ಪವರ ಭಕ್ತರೆಂತೆಂಬೆ ? ಜಂಗಮವೆಂತೆಂಬೆ ? ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅರಿಯದ ಕಾರಣ ಭವಕ್ಕೆ ಬಂದರು. ಅರಿವಿಲ್ಲದವಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಅರಿವಿಲ್ಲ. ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಲಿಂಗವಿಲ್ಲ. ಲಿಂಗವಿಲ್ಲದವಂಗೆ ಜಂಗಮವಿಲ್ಲ, ಜಂಗಮವಿಲ್ಲದವಂಗೆ ಪ್ರಸಾದವಿಲ್ಲ. ಪ್ರಸಾದವಿಲ್ಲದವಂಗೆ ಮಹಾಲಿಂಗವಿಲ್ಲವಯ್ಯಾ. ಈ ಆರು ಸಹಿತ ಆಚಾರ, ಆಚಾರಸಹಿತ ಗುರು ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ. ಆದಿಲಿಂಗ ಅನಾದಿಶರಣನಾಗಿಬಂದು ಷಡುಸ್ಥಲವ ನಡೆದು ತೋರಿದ. ಅಂತಲ್ಲದೆ ಒಂದೊಂದ ಕಳೆದು ನಡೆದನೆಂದಡೆ ಸೋಪಾನದ ಕಟ್ಟೆಯ ಕಲ್ಲು ಬಿದ್ದಂತೆ. ಇದು ಆರಿಗೂ ಅಳವಡದು ಬಸವಣ್ಣಂಗಳವಟ್ಟಿತ್ತು. ಆ ಬಸವಣ್ಣನ ಭೃತ್ಯನಾಗಿರಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರುವನರಿಯಲೆ ಬೇಕು, ಶ್ರೀಗುರುವನರಿಯಲೆ ಬೇಕು. ಅಂತಲ್ಲದೆ ಸುಖವಿಲ್ಲಯ್ಯಾ, ಅಂತಲ್ಲದೆ ಸುಖವಿಲ್ಲಯ್ಯಾ. ಶ್ರೀಗುರುವನರಿದಲ್ಲದೆ ಇಹಪರಸುಖವನರಿಯಬಾರದು. ಅಂತಲ್ಲದೆ_ಶ್ರೀಗುರುವನು ಅರಿಯದವನೆ ಲಘು. ಶ್ರೀಗುರುವನು ಅರಿದಂಗೆ ಶ್ರೀಗುರು ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಕಾಯದ ಕರಸ್ಥಲದಲ್ಲಿ ಲಿಂಗ, ಮನದ ಕರಸ್ಥಲದಲ್ಲಿ ಮಂತ್ರ, ಭಾವದ ಕರಸ್ಥಲದಲ್ಲಿ ಅರಿವು, ನಿರ್ಧರವಾದುದೇ ನಿಜ ಕಾಣಾ. ಅಂತಲ್ಲದೆ ಕಾಯದಲ್ಲಿ ಲೋಭ ಕೊಲೆ, ಮನದಲ್ಲಿ ಕ್ರೋಧ ಮೋಹ, ಭಾವದಲ್ಲಿ ಭ್ರಾಂತಿ ತಾಮಸ, ಇಂತಿವು ಸಂಗಸಂಬಂಧವಾಗಿ ನಾವು ಲಿಂಗಶರಣರೆಂದು ನುಡಿದುಕೊಂಬ ಕಡೆ ನಡು ಬುಡಗಳಳಿಯದ ಕರ್ಮಿಗಳನೇನೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->