ಅಥವಾ

ಒಟ್ಟು 19 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗೈಯಲ್ಲಿ ಪೂಜಿಸಿದ ಫಲ ಲಿಂಗಯ್ಯ ಕೊಡನೆಂದು ಮರುಗರಾ ಮನವೆ. ಅಂಗೈಯಲ್ಲಿ ಫಲ ಅಂಗ ಲಿಂಗ ನೋಡಿದಂತೆ ನೋಡಾ ಮನವೆ. ಅಂಗೈಯ ಫಲ ಲಿಂಗಯ್ಯನಾಗರೆ ಪೂಜಿಸುವರೆ ಪ್ರಮಥರು? ನೋಡಾ ಮನವೆ. ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿ ಪೂಜಿಸಿ ಬದುಕು ಮನವೆ.
--------------
ಸಿದ್ಧರಾಮೇಶ್ವರ
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ ಕ್ರಮವು ಎಂತೆಂದಡೆ : 'ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ | ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||' ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ ಜಂಗಮಕ್ಕೆ ಪಾದಾರ್ಚನೆಯಂ ಮಾಡಿ ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ ತನ್ನ ಕರಕಮಲವಂ ಮುಗಿದು ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಶ್ರೀಪಾದಗಳಿಗೆ ಶರಣು ಶರಣಾರ್ಥಿಯೆಂದು 'ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್] ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾsಕ್ಷತಾದಿಭಿಃ ||' ಎಂದುದಾಗಿ, ದೀರ್ಘದಂಡ ನಮಸ್ಕಾರವಂ ಮಾಡಿ ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ ವಿಭೂತಿಯಲ್ಲಿ ಬರೆದು ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ ಲಿಂಗೋಪಾದಿಯಲ್ಲಿ ಪಿಡಿದುಕೊಂಡು ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ, ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ, ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ ಆಱುವೇಳೆ ಷಡಕ್ಷರವ ನುಡಿದು ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ್ಠದ ಮೇಲೆ ನೀಡುವಾಗ ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ, ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ ಒಂದು ವೇಳೆ 'ಓಂ ಬಸವಲಿಂಗಾಯನಮಃ' ಎಂದು ಸ್ಮರಿಸಿ, ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾರ್ಥಿಯೆಂದು ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು. ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು ಗುರುಪಾದೋದಕ. ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು ಲಿಂಗಪಾದೋದಕ. ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ. ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು. ಹೀಗೆ ಕ್ರಮವರಿದು ಸಲಿಸುವರ್ಗೆ ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಮಹಾಬೆಳಗಿನ ಲಿಂಗವ ಕೈಯಲ್ಲಿ ಕೊಟ್ಟಡೆ, ಕೊರಳಲ್ಲಿ ಕಟ್ಟಿಕೊಳ್ಳಲೇಕೆ ? ನೋಡುವ ಕಣ್ಣು ಮುಚ್ಚಿದ ಮತ್ತೆ, ತನಗೆ ಎಡೆಯಾಟವುಂಟೆ ? ಲಿಂಗವ ಹಿಂಗದೆ ಅಂಗೈಯಲ್ಲಿ ಕೊಟ್ಟ ಮತ್ತೆ, ಚಿತ್ತದಲ್ಲಿ ಹಿಂಗದಿರಬೇಕು. ಉರಿಲಿಂಗತಂದೆಯ ಸಿರಿಯ ಭಾಷೆ.
--------------
ಉರಿಲಿಂಗದೇವ
ಅಂಗೈಯದು ಹೆಂಗಳಾಗಿ, ನೋಡುವ ಕಂಗಳು ಪುರುಷನಾಗಿ ಉಭಯವನರಿವುದು, ಪ್ರಜಾಪತಿಯಾಗಿ. ಚಿದ್ಘನಶಕ್ತಿ ಯೋನಿಯಲ್ಲಿ ಕೂಡಿ, ಬಿಂದು ವಿಸರ್ಜನವಾಯಿತ್ತು. ಅದು ಲೀಯವಾಗಲ್ಪಟ್ಟುದು ಲಿಂಗವಾಯಿತ್ತು. ಅದು ಅಂಗೈಯಲ್ಲಿ ಅರಿಕೆ, ಕಂಗಳಿಂಗೆ ಕುರುಹು. ಮಂಗಳಮಯ ಅರ್ಕೇಶ್ವರಲಿಂಗವನರಿವುದಕ್ಕೆ ಇಷ್ಟದ ಗೊತ್ತೆ ? ಅರ್ಕೇಶ್ವರಲಿಂಗವು ತಾನು ತಾನೆ.
--------------
ಮಧುವಯ್ಯ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗನಿಷೆ*ಯುಳ್ಳ ವೀರಶೈವ ಮಹೇಶ್ವರರು ಸಕಲಪದಾರ್ಥವ ಲಿಂಗಕ್ಕೆ ಕೊಡದೆ, ಎನ್ನಂಗಕ್ಕೆ ಕೊಂಡಡೆ ವ್ರತಕ್ಕೆ ಭಂಗವೆಂದೆಂಬಿರಯ್ಯಾ ಉದಯಕಾಲದಲ್ಲಿ ಶೌಚಾಚಮನವ ಮಾಡಿ ಅಗ್ಗಣಿಯ ಬಳಸುವಿರಿ, ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಹಳ್ಳ ಕೊಳ್ಳ ಕೆರೆ ಬಾವಿ ನದಿಗಳಿಗೆ ಹೋಗಿ, ಮೃತ್ತಿಕಾದಿಂದ ಹಸ್ತಪಾದಕ್ಕೆ ಮೂರು ವೇಳೆ ಪೂಸಿ ಮೂರು ವೇಳೆ ತೊಳೆವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಶೌಚಕ್ಕೆ ಒಯ್ದ ಪಾತ್ರೆಯ ಮೃತ್ತಿಕಾದಿಂದ ತೊಳೆದು, ತಾ ಉಟ್ಟು ತೊಟ್ಟ ಪಾವಡಪಂಕಿಗಳ ನೀರಿನಲ್ಲಿ ಸೆಳೆದು ಗಾಳಿ ಬಿಸಲಾಗ ಹಾಕುವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಇಂತೀ ಎಲ್ಲವನು ಶುಚಿ ಮಾಡಿ ಜ್ಯಾಲಿ ಬೊಬ್ಬಲಿ ಉತ್ರಾಣಿಕಡ್ಡಿ ಮೊದಲಾದ ಕಡ್ಡಿಗಳ ತಂದು ಆವಾಗ ತಮ್ಮ ಅಂಗದ ಮೇಲಣ ಲಿಂಗವ ತೆಗೆದು ಅಂಗೈಯಲ್ಲಿ ಪಿಡಿದು, ಆ ಲಿಂಗಕ್ಕೆ ಮಜ್ಜನ ಮಾಡಿ, ಮರಳಿ ತಾ ಮುಖಮಜ್ಜನವ ಮಾಡಿ, ಆ ಮೇಲೆ ತಮ್ಮ ಅಂಗೈಯೊಳಗಿನ ಇಷ್ಟಲಿಂಗಕ್ಕೆ ಆ ಕಡ್ಡಿಯ ತೋರಿ, ತೋರಿದಂಥ ಧಾವನೆಯ ಮಾಡುವರು. ಲಿಂಗದ ಗೊತ್ತು ತಮಗಿ¯್ಲ ; ತಮ್ಮ ಅಂಗದ ಗೊತ್ತು ಲಿಂಗಕ್ಕಿಲ್ಲ . ಇಂತಪ್ಪ ಭಿನ್ನವಿಚಾರವನುಳ್ಳ ಮಂಗಮನುಜರಿಗೆ ಲಿಂಗನೈಷೆ*ಯುಳ್ಳ ವೀರಮಹೇಶ್ವರರೆಂದಡೆ ನಿಮ್ಮ ಶಿವಶರಣರು ಮುಖವೆತ್ತಿ ನೋಡರು. ಮನದೆರೆದು ಮಾತನಾಡರು, ತಮ್ಮೊಳಗೆ ತಾವೇ ಮುಗುಳುನಗೆಯ ನಕ್ಕು ಸುಮ್ಮನಿರುವರು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗೈಯಲ್ಲಿ ಬೇರು ಹುಟ್ಟಿ, ಮುಂಗೈಯಲ್ಲಿ ಮೊಳೆದೋರಿ, ಹಿಂಗಾಲಿನಲ್ಲಿ ಮರ ಬಲಿಯಿತ್ತು. ಮುಂಗಾಲಿನಲ್ಲಿ ಫಲ ಮೂಡಿ, ಅಂಗೈಯಲ್ಲಿ ಹಣ್ಣಾಯಿತ್ತು. ಕಂಗಳ ಕೂಸು ಹಣ್ಣ ಮೆದ್ದಿತ್ತು. ಕೂಸಿನ ಅಂಗವನರಿ, ಅರ್ಕೇಶ್ವರಲಿಂಗದ ಸಂಗವ ಮಾಡು.
--------------
ಮಧುವಯ್ಯ
ಅಂಗದ ಮೇಲಿಹ ಲಿಂಗಕ್ಕರ್ಪಿಸಿದಲ್ಲದೆ ಕೊಳಲಾಗದು. ಅಂಗೈಯಲ್ಲಿ ಹಿಡಿದು ಅರ್ಪಿಸಿಹೆನೆಂದಡೆ ಅರ್ಪಿತವಾಗದು. ಇನ್ನು ಅರ್ಪಿಸುವ ಪರಿ ಎಂತೆಂದಡೆ : ನಾಸಿಕದಲ್ಲಿ ಗಂಧ ಅರ್ಪಿತ, ಜಿಹ್ವೆಯಲ್ಲಿ ರುಚಿ ಅರ್ಪಿತ, ನೇತ್ರದಲ್ಲಿ ರೂಪು ಅರ್ಪಿತ, ತ್ವಕ್ಕಿನಲ್ಲಿ ಸ್ಪರ್ಶನ ಅರ್ಪಿತ, ಶೋತ್ರದಲ್ಲಿ ಶಬ್ದ ಅರ್ಪಿತ, ಹೃದಯದಲ್ಲಿ ಪರಿಣಾಮ ಅರ್ಪಿತ. ಇದನರಿದು ಭೋಗಿಸಬಲ್ಲಡೆ ಪ್ರಸಾದ. ಈ ಕ್ರಮವನರಿಯದೆ ಕೊಂಡ ಪ್ರಸಾದವೆಲ್ಲವು ಅನರ್ಪಿತ. ನುಂಗಿದ ಉಗುಳೆಲ್ಲವು ಕಿಲ್ಬಿಷ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮೂರಾರು ಬಾಗಿಲಲ್ಲಿ ಹೋಹ ಕರುವ ಹುರಿಯಿಲ್ಲದ ಕಣ್ಣಿಯಲ್ಲಿ ಬಂಧಿಸಿ, ಅನ್ನ ಉದಕವಿಲ್ಲದೆ ಬದುಕಿ, ಕಂಡವರ ನುಂಗಿ, ಅಂಗೈಯಲ್ಲಿ ಅಡಗಿತ್ತು. ಈ ಭೇದವ ತಿಳಿಯಬಲ್ಲರೆ ಶಿವಶರಣನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತೆಂಗಿಗೆ ನೀರನೆರೆದರೆ ಅಂಗೈಯಲ್ಲಿ ಫಲವು ಕಾಣುವಂತೆ ಜಂಗಮಕ್ಕೆ ಅನ್ನ ಉದಕಂಗಳ ನೀಡಿದ ಫಲವು ಮೇರುಪರ್ವತಕ್ಕೆ, ಸಪ್ತಸಮುದ್ರಕ್ಕೆ ಸಮಾನವಹುದು. ಅದಲ್ಲದೆ ಒಂದೊಂದು ಅಗುಳಿಗೆ ಕೋಟ್ಯನುಕೋಟಿ ಯಜ್ಞಂಗಳ ಮಾಡಿದ ಫಲವಹುದು. ಅದೆಂತೆಂದೊಡೆ : ``ಕ್ಷಿಪ್ತಂ ಕ್ಷಿಪ್ತಂ ಮಹಾದೇವಿ ಕೋಟಿಯಜ್ಞಫಲಂ ಭವೇತ್ | ಅಲ್ಪಬೀಜಾತ್ ಮಹಾವೃಕ್ಷೋ ಯಥಾ ಭವತಿ ಪಾರ್ವತೀ ||'' ಮತ್ತಂ, ``ಅನ್ನಂ ವಾ ಜಲಮಾತ್ರಂ ವಾ ಯದ್ ದತ್ತಂ ಲಿಂಗಧಾರಿಣೇ | ತದನ್ನಂ ಮೇರುಸದೃಶಂ ತಜ್ಜಲಂ ಸಾಗರೋಪಮಮ್ ||'' ಎಂದುದಾಗಿ, ಜಂಗಮದಲ್ಲಿ ನಮ್ಮ ಅಖಂಡೇಶ್ವರಲಿಂಗದ ತೃಪ್ತಿ ನೋಡಾ.
--------------
ಷಣ್ಮುಖಸ್ವಾಮಿ
ಎನ್ನ ಬ್ರಹ್ಮರಂಧ್ರದಲ್ಲಿ ಅಖಂಡಿತನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಉತ್ತಮಾಂಗದಲ್ಲಿ ಗಂಗಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಲಲಾಟದಲ್ಲಿ ಮಹಾದೇವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಪಶ್ಚಿಮ[ಚಕ್ರ]ದಲ್ಲಿ ಪಂಚಮುಖನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಕರ್ಣದಲ್ಲಿ ಶ್ರುತಿಪುರಾಣಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ ಎನ್ನ ಬಲದ ನಯನದಲ್ಲಿ ತ್ರಿಪುರಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ನಯನದಲ್ಲಿ ಕಾಮಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಜಿಹ್ವೆಯಲ್ಲಿ ಭವಹರರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಕಂಠದಲ್ಲಿ ಲೋಕೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಭುಜದಲ್ಲಿ ಸದಾಶಿವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಭುಜದಲ್ಲಿ ಮೃತ್ಯುಂಜಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೋಳಿನಲ್ಲಿ ಶೂಲಪಾಣಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೋಳಿನಲ್ಲಿ ಕೋದಂಡನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮೊಳಕೈಯಲ್ಲಿ ಪರಬ್ರಹ್ಮಸ್ವರೂಪನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮೊಳಕೈಯಲ್ಲಿ ವಿಶ್ವಕುಟುಂಬಿ ಎಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮುಂಗೈಯಲ್ಲಿ ಕರೆಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮುಂಗೈಯಲ್ಲಿ ಶ್ರೀಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗೈಯಲ್ಲಿ ನಿಧಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗೈಯಲ್ಲಿ ವೇದಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಹೃದಯದಲ್ಲಿ ಮಾಹೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಪಾಶ್ರ್ವದಲ್ಲಿ ದಕ್ಷಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಪಾಶ್ರ್ವದಲ್ಲಿ ಕಾಲಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬೆನ್ನಿನಲ್ಲಿ ಭೂತೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಭಿಯಲ್ಲಿ ಶಂಕರನೆಂಬ ರುದ್ರನಾಗಿ, ಬಂದು ನಿಂದಾತ ಬಸವಣ್ಣನಯ್ಯಾ, ಎನ್ನ ಗುಹ್ಯದಲ್ಲಿ ವಿಷ್ಣುಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಗುದದಲ್ಲಿ ಬ್ರಹ್ಮಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೊಡೆಯಲ್ಲಿ ಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೊಡೆಯಲ್ಲಿ ಸ್ಫಟಿಕಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮಣಿಪಾದದಲ್ಲಿ ಫಣಿಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮಣಿಪಾದದಲ್ಲಿ ರುಂಡಮಾಲಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಹದಡಿನಲ್ಲಿ ಕಪಾಲಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಹದಡಿನಲ್ಲಿ ಭಿಕ್ಷಾಟನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗುಷ*ದಲ್ಲಿ ಭೃಂಗಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗುಷ*ದಲ್ಲಿ ನಂದಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅರೆಪಾದದಲ್ಲಿ ಪೃಥ್ವೀಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅರೆಪಾದದಲ್ಲಿ ಸಚರಾಚರಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಸರ್ವಾಂಗದಲ್ಲಿ ಸರ್ವೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಇಂತೀ ಮೂವತ್ತೆಂಟು ಸ್ಥಾನಂಗಳಲ್ಲಿ, ಕೂಡಲಚೆನ್ನಸಂಗಯ್ಯಾ ಬಸವಸಾಹಿತ್ಯವಾಗಿಪ್ಪುದಯ್ಯಾ.
--------------
ಚನ್ನಬಸವಣ್ಣ
ಮೂರುಗಂಟಿನ ದಂಡಿಗಿ, ಆರು ಕಾಯಿ, ಒಂಬತ್ತು ಮೆಟ್ಟು, ಬಿಳಿಯ ಕುದುರೆ, ಒಂದೆ ತಂತಿ, ನಾಲ್ಕು ಬಿರಡಿ, ಮೂರುಬೆರಳಿನಲ್ಲಿ ಡೋಹಾರನ ಕಿನ್ನರಿಯ ಹೊಡೆಯಲು, ಬ್ರಹ್ಮ ಮತ್ರ್ಯದಲ್ಲಿ ಸತ್ತು, ವಿಷ್ಣು ಸ್ವರ್ಗದಲ್ಲಿ ಸತ್ತು, ರುದ್ರ ಪಾತಾಳದಲ್ಲಿ ಸತ್ತು, ಸಕಲ ಪ್ರಾಣಿಗಳು ಬ್ರಹ್ಮಾಂಡದಲ್ಲಿ ಅಳಿದರು. ಇಂತೀ ವಿಚಿತ್ರವ ನೋಡಿ ಕಿನ್ನರಿಸಹಿತ ಡೋಹಾರ ಅಂಗೈಯಲ್ಲಿ ಬಯಲಾದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲದಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ, ನೀರಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ, ಬೆಂಕಿಯಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ, ಗಾಳಿಯ ಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ, ಆಕಾಶದಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ, ಪಾತಾಳದಲ್ಲಿ ಲಿಂಗಸ್ಥಾಪನವಮಾಡಿ ಪೂಜಿಸುವ, ಇಂತಿಷ್ಟವನು ಅಂಗೈಯಲ್ಲಿ ಸ್ಥಾಪನವಮಾಡಿ ಪೂಜಿಸುವ ನಿತ್ಯಪ್ರಾಣಲಿಂಗಿ ತಾನೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೆತ್ತಿಯಲ್ಲಿ ಶ್ರೀ ವಿಭೂತಿಯ ಧರಿಸಿ ಮಿಥ್ಯದೈವಕೆರಗದ ಭಾಷೆ. ನಯನದಲ್ಲಿ ಶ್ರೀ ವಿಭೂತಿಯ ಧರಿಸಿ ಪರಧನ ಪರಸ್ತ್ರೀಯರ ನೋಡದ ಭಾಷೆ. ಭಾಳೊಳು ವಿಭೂತಿಯ ಧರಿಸಿ ಗಂಧ ಚಂದನಾದಿಗಳ ಪೂಸದ ಭಾಷೆ. ಕರ್ಣದಲ್ಲಿ ವಿಭೂತಿಯ ಧರಿಸಿ ಶಿವನಿಂದ್ಯವ ಕೇಳದ ಭಾಷೆ. ನಾಸಿಕದಲ್ಲಿ ವಿಭೂತಿಯ ಧರಿಸಿ ಲಿಂಗಸಂಗವಲ್ಲದನ್ಯವ ವಾಸಿಸದ ಭಾಷೆ. ಜಿಹ್ವೆಗೆ ಶ್ರೀ ವಿಭೂತಿಯ ಧರಿಸಿ ಲಿಂಗ ಜಂಗಮ ಪ್ರಸಾದವಲ್ಲದನ್ಯವ ಸೇವಿಸದ ಭಾಷೆ. ಕಂಠದಲ್ಲಿ ವಿಭೂತಿಯ ಧರಿಸಿ ಅನ್ಯಕೆ ಸೆರಗೊಡ್ಡದ ಭಾಷೆ. ಭುಜದಲ್ಲಿ ವಿಭೂತಿಯ ಧರಿಸಿ ಸತ್ಯ ಸದಾಚಾರವ ಭುಜಗೊಟ್ಟಾನುವ ಭಾಷೆ. ತೋಳಿನಲ್ಲಿ ವಿಭೂತಿಯ ಧರಿಸಿ ಪರಧನವನಪ್ಪದ ಭಾಷೆ. ಮುಂಗೈಯಲ್ಲಿ ವಿಭೂತಿಯ ಧರಿಸಿ ಅನ್ಯರಿಗೆ ಕೈಯೊಡ್ಡಿ ಬೇಡದ ಭಾಷೆ. ಅಂಗೈಯಲ್ಲಿ ವಿಭೂತಿಯ ಧರಿಸಿ ಲಿಂಗವಲ್ಲದನ್ಯದೈವವ ಪೂಜಿಸದ ಭಾಷೆ. ಇಂತಿವು ಮುಖ್ಯವಾದ ಸ್ಥಾನಂಗಳಲ್ಲಿ ಶ್ರೀ ವಿಭೂತಿಯನೊಲಿದು ಧರಿಸಿ ಶಿವಸತ್ಯ ಶಿವದೇಹಿಯಾದೆ ನೋಡಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬ್ರಹ್ಮಾಂಡಮಂಡಲದಲ್ಲಿ ಒಬ್ಬ ನಾರಿ ಹುಟ್ಟಿದಳು. ಅವಳಿಗೆ ಐವರು ಗಂಡಂದಿರು, ಮೂವರು ಮಿಂಡಂದಿರು. ಗಂಡಂಗೆ ಕಾಲ ಕೊಟ್ಟು, ಮಿಂಡಂಗೆ ಮಂಡೆಯ ಕೊಟ್ಟು, ಗಂಡಮಿಂಡರ ಒಡಗೂಡಿಕೊಂಡಿಪ್ಪ ನಾರಿಯ ಅಂಗೈಯಲ್ಲಿ ಒಂದು ನಾರಿವಾಳದ ಸಸಿ ಹುಟ್ಚಿತ್ತು. ಅದು ಕಂಗಳ ನೀರ ಕುಡಿದು, ಅಂಗದ ಮರೆಯ ನೆಳಲಲ್ಲಿ ಬಲಿದು, ಸಸಿ ಮರನಾಯಿತ್ತು. ಮರ ಮಹದೊಡಗೂಡಿ ತೆಂಗಿನಕಾಯಿ ಆಕಾಶದಲ್ಲಿ ನಿಂದಿತ್ತು. ಮಟ್ಟೆಯನೊಡೆದು ಕಾಯ ನಿಶ್ಚಯದಲ್ಲಿ ನೋಡಲಾಗಿ, ಕಾಯಿಗೆ ಕಣ್ಣಿಲ್ಲ , ಅಲಿಕಿದಡೆ ಜಲವಿಲ್ಲ. ಅಂಗ ಭಿನ್ನವ ಮಾಡಿ ನೋಡಲಾಗಿ, ಕಾಯ ಕರ್ರಗಾಗಿತ್ತು , ನೀರು ಬೆಳ್ಳಗಾಯಿತ್ತು , ಒಡೆದಾತನ ಬಾಯಿ ಬೆತ್ತಲೆಯಾಯಿತ್ತು. ಬ್ರಹ್ಮಾಂಡಮಂಡಲದ ಶಕ್ತಿ ಗಂಡನ ಕೊಂಡು, ಮಿಂಡನ ವಂಚಿಸಿ, ಬಂಧುಗಳ ಹಿಂಗಿ, ತನ್ನ ಹಿಂಡನೊಡಗೂಡಿದಳು. ಇಂತಿವರೆಲ್ಲರ ಬಲ್ಲತನ ಅವಳಲ್ಲಿಯೇ ಹೋಯಿತ್ತು. ಶಕ್ತಿ ಉಮಾಪತಿ, ನಿಶ್ಶಕ್ತಿ ಪರಮಜ್ಞಾನ. ಕಾಯ ಭ್ರಮೆ, ಜೀವ ಬಯಲು, ಅರಿವು ರೂಪು, ಬಂಕೇಶ್ವರಲಿಂಗವನರಿದನೆಂಬುದು ಗರ್ವಮಾಯೆ.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->