ಅಥವಾ

ಒಟ್ಟು 41 ಕಡೆಗಳಲ್ಲಿ , 20 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಆಯತದಲ್ಲಿ ಅಂಗಭೋಗಿಯಾಗಿರಬೇಕು. ಸ್ವಾಯತದಲ್ಲಿ ಸನ್ನಹಿತನಾಗಿರಬೇಕು. ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು. ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು. ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ, ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ. ಲಿಂಗವಂತನು ಅಂಗಸೂತಕಿಯಲ್ಲ. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು, ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು, ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು, ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಅಂಗವೆ ಅಮಳೋಕ್ಯ, ಲಿಂಗವೆ ಮುಖಸೆಜ್ಜೆಯಾಗಿ ಆ ಲಿಂಗವೆ ಭುಂಜಗ, ಅಂಗವೆ ನಾಗವತ್ತಿಕೆಯಾದ ಬಳಿಕ ಬೇರರಸಲುಂಟೆ ? ಅಪ್ರತಿಮ ಪ್ರಾಣನಾಥನಾದಬಳಿಕ ಇನ್ನು ಬೇರರಸಲುಂಟೆ ? ಅಂಗಲಿಂಗಸುಸಂಗ ಶರಣರ ಸಂಗದಲ್ಲಿರಿಸಯ್ಯ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಉಂಬೆಡೆಯಲ್ಲಿ ಭರಿತಾರ್ಪಣವೆಂದು ಮಿಕ್ಕಾದ ವಿಷಯೇಂದ್ರಿಯಂಗಳಲ್ಲಿ ಭರಿತಾರ್ಪಣದ ಸಂದನಳಿದು ಅರ್ಪಿಸಬಲ್ಲಡೆ, ಆ ಗುಣ ಉಭಯಭರಿತಾರ್ಪಣಭೇದ. ಇದನರಿಯದೆ ಲಿಂಗಕ್ಕೆ ಸಂದಲ್ಲದೆ, ತಾನೊಂದು ದ್ರವ್ಯವ ಮುಟ್ಟೆನೆಂಬ ಸಂದೇಹದ ಸಂಕಲ್ಪವಲ್ಲದೆ, ಭರಿತಾರ್ಪಣಾಂಗಿಯ ಲಿಂಗಾಂಗಿಯ ಮುಟ್ಟಲ್ಲ. ಭರಿತಾರ್ಪಣವಾವುದೆಂದಡೆ : ತಾ ಕಂಡುದ ಮುಟ್ಟದೆ, ತಾ ಮುಟ್ಟಿದುದನರ್ಪಿಸದೆ, ತಾ ಕಾಣದುದ ಮುನ್ನವೆ, ತಾ ಕಂಡುದ ಮುಟ್ಟದ ಮುನ್ನವೆ ಅರ್ಪಿತವಾದುದ ದೃಷ್ಟಾಂತವನರಿದು, ಭರಿತಾರ್ಪಣವೆಂಬ ಪರಿಪೂರ್ಣತ್ವವಂ ಕಂಡು, ಅಂಗಸಹಿತವಾಗಿ ಮುಟ್ಟದೆ, ಮನಸಹಿತವಾಗಿ ನೆನೆಯದೆ, ಇಂದ್ರಿಯಂಗಳು ಸಹಿತವಾಗಿ ಒಂದನೂ ಅನುಭವಿಸದೆ ಲಿಂಗವೆ ಅಂಗವಾಗಿ, ಅಂಗವೆ ಲಿಂಗವಾಗಿ ಅಂದಂದಿಗೆ ಕಾಯ ಹಿಂಗಬೇಕೆಂಬುದನರಿದಾಗವೆ ಭರಿತಾರ್ಪಣ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಆಚಾರವೆ ಲಿಂಗ, ಆ ಆಚಾದರಿವೆ ಜಂಗಮ ಅಂಗವೆ ಲಿಂಗ, ಚೈತನ್ಯವೆ ಜಂಗಮ ಆ ಜಂಗಮದ ಸೇವೆಯೆ ಲಿಂಗ, ಕೈಕೊಂಬುದೆ ಜಂಗಮ. ನಮ್ಮ ಗುಹೇಶ್ವರನ ಶರಣರು ಮಚ್ಚುವಂತೆ, ಮಡಿವಾಳನ ಕಾಯಕದಂತೆ, ನಿರೂಪಿಸಿದ ಚನ್ನಬಸವಣ್ಣನ ಕರುಣದಲ್ಲಿ ಬದುಕಾ ಚಂದಯ್ಯಾ.
--------------
ಅಲ್ಲಮಪ್ರಭುದೇವರು
ಅಂಗವದಾರದು? ಲಿಂಗವದಾರದು? ಸಂಗವದಾರದು ? ಸಮರಸವ ದಾರದು? ಸಂದೇಹದಿಂದ ಮುಂದುಗಾಣದೆ ಒಂದೊಂದ ಕಲ್ಪಿಸಿಕೊಂಡು ಬಂದಿರಲ್ಲಾ ಭವ ಭವದಲ್ಲಿ. ಅಂಗವೆ ಗುರು, ಲಿಂಗವೆ ಪ್ರಾಣ, ಸಂಗವೆ ಜಂಗಮ, ಸಮರಸವೆ ಪ್ರಸಾದ. ಈ ಚತುರ್ವಿಧವು ಒಂದಂಗ. ಈ ಚತುರ್ವಿಧವ ಶ್ರುತಿ ಸ್ಮೃತಿಗಳರಿಯವು, ನಿಮ್ಮ ಶರಣಬಲ್ಲ. ಆ ಶರಣನೆ ಶಿವನವಾ. ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ನಿನ್ನ ನೀನೆ ಬಲ್ಲೆ.
--------------
ಹಡಪದ ಅಪ್ಪಣ್ಣ
ಈಶ್ವರಮೂರ್ತಿಯ ಕರಕಮಲಕ್ಕೆ ತಂದಲ್ಲಿ, ಕಣ್ಮನ ಮೂರ್ತಿಧ್ಯಾನ ಹೆರೆಹಿಂಗದಕ್ಕರಿಂದ ಭಾವ ಭ್ರಮಿಸದೆ, ಚಿತ್ತ ಸಂಚರಿಸದೆ ಮನ ವಚನ ಕಾಯದಲ್ಲಿ ಬ್ಥಿನ್ನ ಭಾವವಿಲ್ಲದೆ ಪೂಜಿಸುವ ಕೈಯೂ ತಾನಾಗಿ, ಅರಿದ ಮನವೂ ತಾನಾಗಿ, ಹೊತ್ತಿಪ್ಪ ಅಂಗದ ನೆಲೆಯೂ ತಾನಾಗಿ ಹೆರೆಹಿಂಗದೆ ಪೂಜೆಯ ಮಾಡುತಿರ್ಪ ಆತನ ಅಂಗವೆ ಲಿಂಗ, ಆತನಿದ್ದುದೆ ಅವಿಮುಕ್ತಿ ಕ್ಷೇತ್ರ. ಇಂತಪ್ಪ ಮಹಾಮಹಿಮ ನಾರಾಯಣಪ್ರಿಯ ರಾಮನಾಥ ತಾನು ತಾನೆ.
--------------
ಗುಪ್ತ ಮಂಚಣ್ಣ
ಅಂಗಸೋಂಕಿನಲ್ಲಿ ಲಿಂಗಸಂಗವಾದ ಬಳಿಕ ಸರ್ವಾಂಗ ವಿಕಾರವಳಿಯಬೇಕು. ಅಂಗಸೋಂಕಿನ ಲಿಂಗಕ್ಕೆ ಸೆಜ್ಜೆ, ಶಿವದಾರವಾ[ವುವೆಂದರೆ]; ಅಂಗವೆ ಲಿಂಗದ ಸೆಜ್ಜೆ, ಆಚಾರವೆ ಶಿವದಾರ. ತ್ರಿಕರಣ ಶುದ್ಧವಾಗಬೇಕು, ತ್ರಿವಿಧಗುಣಂಗಳಳಿಯಬೇಕು, ತ್ರಿವಿಧ ಸಂಪನ್ನನಾಗಬೇಕು, ತ್ರಿಕಾಲ ಶಿವಲಿಂಗಾರ್ಚನೆಯ ಮಾಡಬೇಕು, ಅಂಗಲಿಂಗ ಸಂಬಂಧಕ್ಕೆ ಇದು ಕ್ರಮ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗವ ಹಿಡಿದ ಹಸ್ತವೆ ಲಿಂಗಕ್ಕೆ ಪೀಠ ಕಾಣಿರೊ. ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೊ. ಲಿಂಗವ ಧರಿಸಿಪ್ಪ ಅಂಗವೆ ಲಿಂಗದಂಗ ತಾನೆ ನೋಡಾ. ಲಿಂಗಪ್ರಸಾದವ ಕೊಂಬ ಪ್ರಾಣಲಿಂಗ ತಾನೆ ನೋಡಾ. ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ ಕರ್ಮವ ಕಲ್ಪಿಸಿ ನುಡಿವ ಅಬದ್ಧರನೇನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಟ ಕೂಟವ ಮಾಡುವನ್ನಬರ ಮನ ನಲಿದು, ತನು ಕರಗಿ ಮಾಡುವ ದ್ರವ್ಯಕ್ಕೆ ಕೇಡಿಲ್ಲದಂತೆ ಮಾಡುತ್ತಿಪ್ಪ ಭಕ್ತನ ಅಂಗವೆ ಎನ್ನ ಹೃದಯಾಲಯ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲ್ಲಿ ತಾನಾಗಿಪ್ಪನು.
--------------
ಶಿವಲೆಂಕ ಮಂಚಣ್ಣ
ಪ್ರಣಮವೆ ಪ್ರಾಯ, ಪ್ರಾಣವೆ ಲಿಂಗ. ಲಿಂಗವೆ ಅಂಗ, ಆ ಅಂಗವೆ ಆಗಮ್ಯ ಅಗೋಚರ ಅಪ್ರಮಾಣ. ಲಿಂಗಸಂಗವೆ ಜಂಗಮಲಿಂಗ. ಜಂಗಮ ಒಂದೆರಡೆಂದು ಸಂದು ಮಾಡಲಂಜಿ ಬೆರಗಾಗಿರಲು, ಬೇಗೆಯೆದ್ದು ಬೆಳಗಾಯಿತ್ತ ಕಂಡು, ಕಣ್ಣು ಮುಚ್ಚಿ ಕರಗಿ ಪ್ರಾಣಲಿಂಗ ಲೀಯವಾದ, ಬಸವಪ್ರಿಯ ಕೂಡಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ ಅಮೃತದೇಹಿಗೆ ಹಸಿವು ತೃಷೆಯೆ ? ಆ ಅಮೃತವೆ ಆಹಾರ, ಆ ಅಮೃತವೆ ಸೇವನೆ, ಬೇರೊಂದು ವಸ್ತುವುಂಟೆ ? ಇಲ್ಲ. ಅಮೃತವೇ ಸರ್ವಪ್ರಯೋಗಕ್ಕೆ. ಇದಕ್ಕೆ ಕಟ್ಟಳೆಯುಂಟೆ ? ಕಾಲವುಂಟೆ ? ಆಜ್ಞೆ ಉಂಟೆ ? ಬೇರೆ ಕರ್ತರುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಶ್ರೀಗುರುಲಿಂಗದಲ್ಲಿ ಜನಿಸಿ, ಶಿವಲಿಂಗದಲ್ಲಿ ಬೆಳೆದು ಜಂಗಮಲಿಂಗದಲ್ಲಿ ವರ್ತಿಸಿ, ಪ್ರಸಾದಲಿಂಗದಲ್ಲಿ ಪರಿಣಾಮಿಸಿ, ಗುರು ಲಿಂಗ ಜಂಗಮ ಪ್ರಸಾದ ಒಂದೆಂದರಿದು ಆ ಚತುರ್ವಿಧ ಏಕವಾದ ಲಿಂಗವೇ ಪ್ರಾಣ, ಪ್ರಾಣವೇ ಲಿಂಗ ಲಿಂಗವೇ ಅಂಗ, ಅಂಗವೆ ಲಿಂಗವಾದ ಲಿಂಗಸ್ವಾಯತವಾದ ಲಿಂಗೈಕ್ಯಂಗೆ ಜಪ ಧ್ಯಾನ ತಪಕ್ಕೆ ಅರ್ಚನೆಗೆ ಪೂಜನೆಗೆ ಆಗಮವುಂಟೆ ? ಕಾಲವುಂಟೆ ? ಕರ್ಮವುಂಟೆ ? ಕಲ್ಪಿತವುಂಟೆ ? ಇಲ್ಲ. ಸರ್ವವೂ ಲಿಂಗಮಯ. ಆ ಲಿಂಗವಂತಂಗೆ ನಡೆದುದೇ ಆಗಮ, ಪೂಜಿಸಿದುದೇ ಕಾಲ ಮಾಡಿದುದೇ ಕ್ರಿಯೆ, ನುಡಿದುದೇ ಜಪ, ನೆನೆದುದೇ ಧ್ಯಾನ ವರ್ತಿಸಿದುದೇ ತಪಸ್ಸು. ಇದಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ, ಆತ್ಮ ಮನೋವಾಕ್ಕಾಯ ಹೊನ್ನು ಹೆಣ್ಣು ಮಣ್ಣು ಮೊದಲಾದ ಸರ್ವಪದಾರ್ಥವನರ್ಪಿಸಿ, ಗುರು ಲಿಂಗ ಜಂಗಮದ ಪ್ರಸನ್ನತೆಯ ಪಡೆದ ಮಹಾಪ್ರಸಾದಿಗೆ ಸರ್ವವೂ ಪ್ರಸಾದವಲ್ಲದೆ ಮತ್ತೊಂದಿಲ್ಲ. ಆ ಪ್ರಸಾದಿಗೆ ಪದಾರ್ಥವೆಂಬ ಪ್ರಸಾದವೆಂಬ ಭೇದವುಂಟೆ ? ಅರ್ಪಿತವೆಂಬ ಅನರ್ಪಿತವೆಂಬ ಸಂದೇಹವುಂಟೆ ? ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ ? ನಿಸ್ಸೀಮಪ್ರಸಾದಿಗೆ ಸರ್ವವೂ ಪ್ರಸಾದ. ಆ ಭೋಗಕ್ಕೆ ಮೇರೆ ಉಂಟೆ ? ಅವಧಿಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ವೇದ ಶಾಸ್ತ್ರ ಆಗಮ ಪುರಾಣ ಮೊದಲಾದ ಸರ್ವವಿದ್ಯಂಗಳ ತಾತ್ಪರ್ಯ ಮರ್ಮ ಕಳೆಗಳನರಿದ ಮಹಾಜ್ಞಾತೃವಿಂಗೆ ಆ ಮಹಾಜ್ಞಾನವೇ ದೇಹ, ಆ ಮಹಾಜ್ಞೇಯವೇ ಪ್ರಾಣ. ಈ ಮಹತ್ತಪ್ಪ ಜ್ಞಾತೃ ಜ್ಞಾನ ಜ್ಞೇಯ ಒಂದಾದ ಮಹಾಬೆಳಗಿನ ಸುಖಸ್ವರೂಪಂಗೆ ಮತ್ರ್ಯ ಸ್ವರ್ಗ ದೇವಲೋಕವೆಂಬ ಫಲಪದದಾಸೆಯುಂಟೆ ? ಇಲ್ಲ. ನಿರಂತರ ತೇಜೋಮಯ ಸುಖಸ್ವರೂಪನು ವಿದ್ಯಾಸ್ವರೂಪನು ನಿತ್ಯಾನಂದಸ್ವರೂಪನು. ಆ ಮಹಾಮಹಿಮನ ಮಹಾಸುಖಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಆ ಮಹಾನುಭಾವಿ ತಾನೆ ಕೇವಲ ಜ್ಯೋತಿರ್ಮಯಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
--------------
ಉರಿಲಿಂಗಪೆದ್ದಿ
ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ, ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಮಾಡಿ, ಚತುರ್ವಿಧಫಲಪದಪುರುಷಾರ್ಥವ ಪಡೆದು, ಆ ಪರಿಭವಕ್ಕೆ ಬರಲೊಲ್ಲದೆ, ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ. ಆ ನಿಧಾನದ ಹೆಸರಾವುದೆಂದಡೆ; ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು. ಆ ಚರಲಿಂಗದ ಪಾದಾಂಬುವ ತಂದೆನ್ನ ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ. ಅದೆಂತೆಂದೆಡೆ; ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ತದುಪೇಕ್ಷಕಭಕ್ತಶ್ಚ gõ್ಞರವಂ ನರಕಂ ವ್ರಜೇತ್ ಎಂದುದಾಗಿ, ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ ಅದೆಂತೆಂದೆಡೆ; ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ ಮತ್ತಂ, ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಭಿಷೇಚನೇ ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ, ಆ ಲಿಂಗವೆ ಅಂಗ, ಅಂಗವೆ ಲಿಂಗ, ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು. ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು. ಕೂಡಲಸಂಗಮದೇವಯ್ಯಾ. ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ.
--------------
ಬಸವಣ್ಣ
ವ್ರತವೆಂಬುದೇನು ? ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು. ಜಗದ ಕಾಮಿಯಂತೆ ಕಾಮಿಸದೆ, ಜಗದ ಕ್ರೋಧಿಯಂತೆ ಕ್ರೋಧಿಸದೆ, ಜಗದ ಲೋಭಿಯಂತೆ ಲೋಭಿಸದೆ, ಮಾಯಾಮೋಹಂಗಳು ವರ್ಜಿತವಾಗಿ ಮನಬಂದಂತೆ ಆಡದೆ, ತನುಬಂದಂತೆ ಕೂಡದೆ ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.
--------------
ಅಕ್ಕಮ್ಮ
ಅಂಗದ ಗುಣವನರತು ಲಿಂಗವನರಿಯಬೇಕೆಂಬರು ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ ? ಅಂಗವೆ ಲಿಂಗ, ನಿರಂಗವೆ ಸಂಗ. ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->