ಅಥವಾ

ಒಟ್ಟು 38 ಕಡೆಗಳಲ್ಲಿ , 13 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗವಿಲ್ಲದ ಬಾಳಿಗೆ ಅಂಗವೆಂಬುದಿಲ್ಲ, ಅಂಗವಿಲ್ಲದ ಬಾಳಿಗೆ ಲಿಂಗವೆಂಬುದಿಲ್ಲ, ಸಂಗದ ಸುಖಮಯದ ಬಾಳಿಗೆ ತಾನಿಲ್ಲ ನೀನಿಲ್ಲ. ತಾನುಯೆಂಬುದು ಆಶ್ಚರ್ಯದ ಗತಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಗತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ ಗರ್ಭವಿಲ್ಲದೆ ಬಸುರಾದುದ ಕಂಡೆ. ದಿನ ವಾರ ಮಾಸವಿಲ್ಲದೆ ಬೇನೆತೋರದೆ ಒಂದು ಶಿಶು ಹಡೆದುದ ಕಂಡೆ. ಆ ಶಿಶು ಮಂಡಲಾದ್ಥಿಪತಿಯ ಕೊಂದು ಮಂಡಲವೆಲ್ಲ ಸುಡುವುದ ಕಂಡೆ. ಕಂಡವರ ನುಂಗಿ ಸೂಲಗಿತ್ತಿಯ ಕೊಲ್ಲುವದ ಕಂಡೆ. ತಾಯಿಸಂಗವ ಮಾಡಿ ತಂದೆಯಲ್ಲಿ ಸತ್ತು ಕೂಡಲಚನ್ನಸಂಗಯ್ಯನ ಪಾದದಲ್ಲಿ ಅಡಗಿ ಬಯಲಾದುದ ಕಂಡೆ. ಅದು ಅಡಗಿದಲ್ಲಿ ತಾನಡಗಬಲ್ಲರೆ ಪ್ರಳಯವಿರಹಿತ ಪರಶಿವಮೂರ್ತಿ ತಾನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ, ಅಂಗವಿದ್ದು ಅಂಗವಿಲ್ಲದ ಸಂಗ ಘನಪದದ್ಲ ವೇದ್ಯವಾದ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬೆಚ್ಚು ಬೇರಿಲ್ಲದ ಸುಖವಚ್ಚಾದ ಪರಿಯ ನೋಡಾ ಅಯ್ಯಾ. ಅಂಗವಿಲ್ಲದ ಕೂಟ, ಸಮರಸವಿಲ್ಲದ ಬೇಟ, ಸಮರತಿಯಿಲ್ಲದಾನಂದ ಸನ್ನಹಿತವಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗದ ಸಂಗ, ಏನೂ ಅಲ್ಲದ ನಿಸ್ಸಂಗದ ನಿಜಸುಖವನೇನೆಂಬೆನಯ್ಯಾ.
--------------
ಆದಯ್ಯ
ಅಂಗವಿಲ್ಲದ ನಾರಿಯು ಸಂಗವಿಲ್ಲದ ಪುರುಷನ ನೆರೆದು ಸಕಲ ಜಗಂಗಳ ಗಬ್ರ್ಥೀಕರಿಸಿಕೊಂಡು, ಪರವಶದಲ್ಲಿ ನಿಂದು, ಪರಕೆಪರವಾದ ಸೋಜಿಗವ ನಾನೇನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ. ಆ ಪುರುಷನ ಮುಟ್ಟಿ ಹಿಡಿದು, ದರುಶನ ಸ್ವರುಷನವ ಮಾಡಿ ಕೂಡಿ ನೆರೆದಿಹೆನೆಂದರೆ ಚಿತ್ತ ಮನಕ್ಕೆ ಅಗೋಚರವಾಗಿಪ್ಪನಯ್ಯ. ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ. ಆತನ ರೂಪು ಲಾವಣ್ಯ ಯುಕ್ತಿ ವಿಧಾನವ ಏನೆಂದುಪಮಿಸುವೆನಯ್ಯ? ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿಭೋ. ಕೆಂಜೆಡೆಯ ಭಾಳನೇತ್ರಂ ರಂಜಿಪ ರವಿಕೋಟಿತೇಜದಿಂದುರವಣಿಸುತ್ತಿದಾನೆ ನೋಡಾ. ಕಂಜಪದಯಗಳದೊಳು ಹೊಳವುತ್ತಿದಾನೆ ನಂಜುಗೊರಳಭವ ಕಾಣಿಭೋ. ಭವರೋಗವೈದ್ಯ, ಭವಹರ, ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನು, ಎನ್ನ ಹೃದಯದಲ್ಲಿ ಕಂಡು, ಮನೋಭಾವದಲ್ಲಿ ಆರಾದ್ಥಿಸುತ್ತಿರ್ದೆನಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು, ಬ್ರಹ್ಮಕಪಾಲವೇ ಶಿರಸ್ಸಾಗಿಪ್ಪುದು ನೋಡಾ. ಅಗ್ನಿಯಂಗದ ಉದರದೊಳಗೆ ಪರಿಪರಿಯ ರಸದ ಭಾವಿ. ಆ ರಸದ ಭಾವಿಯ ತುಳಕ ಹೋದವರೆಲ್ಲ ಅಗ್ನಿಯನುಣ್ಣದೆ, ಆ ರಸವನೆ ಉಂಡು, ಅಗ್ನಿಯ ಸ್ವರೂಪವಾದರು ನೋಡ. ಅಗ್ನಿಯ ಸ್ವರೂಪವಾದುದ ಕಂಡು ಕುರುಹಳಿದು ಅರುಹಡಗಿ ನಿರವಯಲಸಮಾದ್ಥಿಯಲ್ಲಿ ನಿಂದ ನಿಬ್ಬೆರಗು ಮೃತ ಗಮನ ರಹಿತನು ನೋಡಾ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಡಲ ನುಂಗಿದ ಕಪ್ಪಿನ ಪರಿಭವ ನವಸಾಸಿರ ! ಸಿಡಿಲು ಹೊಯ್ದ ಬಯಲಿಂಗೆ ಬಣ್ಣವುಂಟೆ ? ಕಂಗಳ ಮುಂದಣ ಕನಸು ಹಿಂಗಿದ ತುಂಬಿಯ ಪರಿಮಳ ! ಅಂಗವಿಲ್ಲದ ರೂಹಿಂಗೆ ಸಂಗವುಂಟೆ ?_ಇದೇನೋ ! ಗಗನದ ಹಣ್ಣನೆ ಕೊಯ್ದು, ಮುಗುದೆ ರುಚಿಯನರಿಯಳು ! ಹಗರಣದಮ್ಮಾವಿನ ಹಯನು ಸಯವಪ್ಪುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಂಗವಿಲ್ಲದ ನಾರಿಯ ಮನೆಯಲ್ಲಿ ಆರುಮೂರು ಶಿವಾಲಯವ ಕಂಡೆನಯ್ಯ. ಆರುಮೂರು ಶಿವಾಲಯದೊಳಗೆ ಆರುಮೂರು ಲಿಂಗವಿಪ್ಪುವು ನೋಡಾ. ಆರುಮೂರು ಲಿಂಗದ ಭೇದವನರಿತು ಅಂಗವಿಲ್ಲದ ನಾರಿಯ ನೆರೆದು, ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ! ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು! ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ, ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ ನಿರ್ದೋಷಿಯಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮಣ್ಣಿಲ್ಲದ ಹಾಳ ಮೇಲೆ, ಕಣ್ಣಿಲ್ಲದಾತ ಮಣಿಯ ಕಂಡ, ಕೈಯಿಲ್ಲದಾತ ಪವಣಿಸಿದ, ಕೊರಳಿಲ್ಲದಾತ ಕಟ್ಟಿಕೊಂಡ ! ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಂಗವಿಲ್ಲದ ಬಾಲೆಯು ಅಂಗಳದೊಳಗೆ ಕುಳಿತು ಮಂಗಳಾರತಿಯ ಅಂಗಲಿಂಗ ಸಂಯೋಗವೆಂಬ ಲಿಂಗಕ್ಕೆ ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತರುವಾಗ ಹುಟ್ಟಿ ವಾಯುವಿಗೆ ಎಡೆಗೊಡದಿರಬಹುದೆ? ತನುವೆಂಬುದ ಹೊತ್ತು ಲಿಂಗವ ಪೂಜಿಸದಿರಬಹುದೆ? ಅಂಗವಿಲ್ಲದ ಸಂಗವಂಟೆ? ಸಂಗವಿಲ್ಲದ ಸುಖವುಂಟೆ? ಸುಖವಿಲ್ಲದ ಕಳೆ ರಸವುಂಟೆ? ಇಂತೀ ಅಂಗದಲ್ಲಿದ್ದಂತೆ ಲಿಂಗವನರಿದು, ಲಿಂಗದಲ್ಲಿದಂತೆ ಸಕಲ ಪ್ರಪಂಚಿಕವ ಮುರಿದು ನಿಂದಲ್ಲಿ ಕಾಲಾಂತಕ ಭೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಅಂಗವಿಲ್ಲದ ಮಂಗಳಾಂಗಿಯ ಮನದಲ್ಲಿ, ಶಿವಲಿಂಗದುದಯವ ಕಂಗಳಿಲ್ಲದೆ ಕಂಡು, ಅಂಗವಿಲ್ಲದೆ ಸಂಗವ ಮಾಡಿ, ನಿಸ್ಸಂಗಿಯಾಗಿ ಸರ್ವಸಂಗಕ್ಕೆ ಹೊರಗಾಗಿ, ನಿರ್ವಯಲ ಬೆರಸಲು `ಮಂಗಳ ಮಂಗಳ'ವೆನುತ್ತಿಪ್ಪ ಮಹಾಗಣಂಗಳ ಸಂಗದಲ್ಲಿ ಮೈಮರೆದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಿಲ್ಲದ ನಿಲುವಿಂಗೆ ಆಚಾರವಿಲ್ಲ. ಆಚಾರವಿಲ್ಲದ ನಿಲುವಿಂಗೆ ನೆನಹಿಲ್ಲ. ನೆನಹು ಇಲ್ಲದ ನಿಲುವಿಂಗೆ ಅರುಹಿಲ್ಲ. ಅರುಹು ಇಲ್ಲದ ನಿಲುವಿಂಗೆ ಗುರುನಿರಂಜನ ಚನ್ನಬಸವಲಿಂಗವಿಲ್ಲದ ನಿಜೈಕ್ಯ ತಾನೆ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->