ಅಥವಾ

ಒಟ್ಟು 33 ಕಡೆಗಳಲ್ಲಿ , 17 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಗಧ್ಯಾನವೆಂಬುವ ಬಂದಿಕಾನವ ಹೊಕ್ಕು, ಸತಿಯರ ಸವಿನುಡಿಯೆಂಬ ಶಸ್ತ್ರವ ಹಾಯ್ದು, ಅಂಗನೆಯರ ಶೃಂಗಾರವೆಂಬ ಕತ್ತಲೆಗವಿದು, ಕಂಗಳು ಕೆಟ್ಟು, ಲಿಂಗನೆನಹೆಂಬ ಜ್ಯೋತಿ ನಂದಿತ್ತು ನೋಡಾ. ಆ ಸ್ವಯಂ ಜ್ಯೋತಿ ಕೆಡದ ಮುನ್ನ, ಅಂಗವಿಕಾರವೆಂಬ ಅರಸು ಅನಂತ ಹಿರಿಯರ ನುಂಗುವದ ಕಂಡು, ಮಹಾಜ್ಞಾನಿಗಳು ಹೇಸಿ ಕಡೆಗೆ ತೊಲಗಿದರು ನೋಡಾ ನಿಮ್ಮ ಪ್ರಮಥರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೊಲನ ಕಂಡ ನಾಯಂತೆ ಇಂದ್ರಿಯವಿಷಯಕ್ಕೆ ಮುಂದುವರಿಯದಿರಾ. ಅಂಗನೆಯರ ಸಮ್ಮೇಳದಿಂ ಭಂಗಿತನಾಗದಿರಾ. ಲಿಂಗವನಪ್ಪಿ ಸುಖಿಯಾಗಿ ಎಲೆ ಮನವೇ. ಅಂಗದಿಚ್ಛೆಗೆ ಆಯಸಂಬಡದಿರಾ. ಲಿಂಗ ಸಂಗಿಗಳು ನೋಡಿ ನಗುವರೆಲೆ[ಲೆಲೆ] ಮನವೇ. ಇಂದ್ರಿಯಭೋಗಂಗಳೆಂಬವು ಕನಸಿನ ಸಿರಿಯಂತೆ ತೋರಿ ಅಡಗುವವೋ. ಇವನೇಕೆ ನಚ್ಚುವೆ ಮಚ್ಚುವೆ ಹುಚ್ಚು ಮನವೇ? ಹರಹರಾ ಶಿವ ಶಿವಾ ಎನ್ನೆಯೋ ಎಲೆಲೆ ಮನವೇ. ನಿನ್ನ ನಾ ಬೇಡಕೊಂಬೆನಯ್ಯೋ ಎಲೆಲೆ ಮನವೇ. ಸಿಂಹನ ಕಂಡ ಕರಿಯಂತೆ ಕೆಡೆಬಡೆದೋಡದರಿಯ್ಯೋ ಪಾಪಿ ಮನವೇ. ಲಿಂಗ ಪಾದವ ಸಾರಿ, ಶಿವಭಕ್ತನಾಗಿ ಮುಕ್ತಿಸಮ್ಮೇಳನಾಗಯ್ಯ. ಕರ್ತೃ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಡಗೂಡಿ, ನಿತ್ಯನಾಗಬಲ್ಲರೆಲೆಲೆ ಮನವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಂಜಲಮಾತ ನುಡಿವುತ್ತಿಪ್ಪ ಜಗದ ಜಂಗುಳದೊಳಗಿದಡೆ ಶೀಲವಂತನೆ ? ಬ್ಥಿನ್ನರುಚಿಗಳಿಗೆರಗಿ, ಕಾಮನ ಬೆಂಬಳಿವರಿದು, ಮಕರಶೃಂಗಾರವ ಮಾಡಿದಡೆ ಮಹಂತನೆ ? ಲಿಂಗಶೃಂಗಾರವ ಮಾಡಿ, ಅಂಗನೆಯರ ಸಂಗವ ತೊರೆದಡೆ, ಶೀಲವಂತನೆಂಬೆನು. ಲೋಕದ ನಚ್ಚು ಮಚ್ಚು ಬಿಟ್ಟು, ಮನ ನಿಶ್ಚಿಂತವಾದಡೆ, ಮಚ್ಚುವನಯ್ಯಾ, ಎಮ್ಮ ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಅಷ್ಟಭೋಗಂಗಳ ಕಾಮಿಸಿ, ತನಗೆಂಬ ಜ್ಞಾನೇಂದ್ರಿಯ ಅಂತಃಕರಣಗಳ ಮುಸುಡುಗುತ್ತಲೀಯದೆ ಸ್ವಾನುಭಾವರ ಸುಖದೊಳಗಿರಬಲ್ಲಡೆ ಕಕ್ಷಸ್ಥಲದಲ್ಲಿ ಧರಿಸುವುದಯ್ಯಾ. ಇಂದ್ರಿಯ ನಿರೂಡ್ಥೀಯ ವಿಕಳದ ಅಪೇಕ್ಷೆಯಿಂ ಕಾಂಚಾಣಕ್ಕೆ ಕೈಯಾನದೆ ನಿಚ್ಚಯ ದೃಡಚಿತ್ತದೊಳಿರಬಲ್ಲಡೆ ಕರಸ್ಥಲದಲ್ಲಿ ಧರಿಸುವುದಯ್ಯಾ. ಅಂಗನೆಯರ ಅಂಗಸುಖದ ವಿರಹಕ್ಕೆ ತನುವನೊಪ್ಪಿಸದೆ ಲಿಂಗವನಪ್ಪಿ ಪರಮಸುಖದ ಸುಗ್ಗಿಯೊಳಿರಬಲ್ಲಡೆ ಉರಸ್ಥಲದಲ್ಲಿ ಧರಿಸುವುದಯ್ಯಾ. ನಿಂದೆ ನಿಷ್ಠುರ ಅನೃತ ಅಸಹ್ಯ ಕುತರ್ಕ ಕುಶಬ್ದವಳಿದು ಶಿವಾನುಭಾವದ ಸುಖದೊಳಿರಬಲ್ಲಡೆ ಕಂಠಸ್ಥಲದಲ್ಲಿ ಧರಿಸುವುದಯ್ಯಾ. ಲಿಂಗವಿಹೀನರಾದ ಲೋಕದ ಜಡಮಾನವರಿಗೆ ತಲೆವಾಗದೆ ಶಿವಲಿಂಗಕ್ಕೆರಗಿರಬಲ್ಲಡೆ ಶಿರದಲ್ಲಿ ಧರಿಸುವುದಯ್ಯಾ. ಅಂತರ್ಮುಖವಾಗಿ ಶಿವಜ್ಞಾನದಿಂ ಪ್ರಾಣಗುಣವಳಿದು ಸದಾ ಸನ್ನಿಹಿತದಿಂದೆರಡರಿಯದಿರಬಲ್ಲಡೆ ಅಮಳೋಕ್ಯದಲ್ಲಿ ಧರಿಸುವುದಯ್ಯಾ. ಶಿವತತ್ವದ ಮೂಲಜ್ಞಾನಸಂಬಂದ್ಥಿಗಳಪ್ಪ ಶಿವಶರಣರ ಮತವಿಂತಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ವೀರನಾದಡೆ ವೈರಿಗಳ ಕಾಟ ಬಹಳವಯ್ಯಾ, ದಾನಶೂರನಾದಡೆ ಯಾಚಕರ ಗೋಳು ಬಹಳವಯ್ಯಾ. ಅತಿರೂಪನಾದಡೆ ಅಂಗನೆಯರ ಕಾಟ ವಿಶೇಷವಯ್ಯಾ. ಮೂರರಲ್ಲಿ ನಿಂತಡೆ ಮಲತ್ರಯಂಗಳ ಘೋರ ಹೆಚ್ಚಾಯಿತಯ್ಯಾ. ಅಂಗದಲ್ಲಿ ಲಿಂಗಸಂಬಂಧವಾಗಬಾರದು; ಆದ ಬಳಿಕ ವೀರನಾಗಿ ವಿಷಯಂಗಳನಳಿವುದು, ಬಹುಘೋರವು ಬಹುಘೋರವು ನೋಡಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗಾರ್ಚಕನಾದ ಬಳಿಕ, ಲಿಂಗ ವಿದ್ಥಿವಿಧಾನಂಗಳನರಿದರಿದು ಮಾಡಬೇಕು. ಲಿಂಗದೇಹಿ ತಾನಾದ ಬಳಿಕ, ಅಂಗಿಗಳ ಸಂಗವಳಿದಿರಬೇಕು. ಲಿಂಗಧ್ಯಾನಿ ತಾನಾದ ಬಳಿಕ, ಅಂಗನೆಯರ ನೋಡದಿರಬೇಕು. ಲಿಂಗೈಕ್ಯ ತಾನಾದ ಬಳಿಕ, ಕರುಣಾಕರ ಅಭಯಕರ ಕಪಿಲಸಿದ್ಧಮಲ್ಲಿಕಾರ್ಜುನನ ಕಾರ್ಯದಲ್ಲಿ ಅಭೇದವಿರಬೇಕು ಕಾಣಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ಲಿಂಗದ ಭಾವ ಹಿಂಗದ ನಂಬಿಗೆ, ಅಂಗನೆಯರ ಮೊಲೆ ಲಿಂಗವಾಯಿತ್ತು. ಕಾಯ ಸಂಸಾರಸುಖವು, ಮನ ಪರಮಸುಖವು. ಇದು ಕಾರಣ, ಸಕಳೇಶ್ವರದೇವಾ, ನಿಮ್ಮ ಶರಣರ ಕಾಮಿಗಳೆಂದೆನಬಹುದೆ ?
--------------
ಸಕಳೇಶ ಮಾದರಸ
ವ್ರತ ನೇಮ ಸಪ್ಪೆ ಒರತೆ ಮುಂತಾದ ನೀರ್ವಿಡಿಯ ನೇಮವಂ ತಾಳಿ, ಅಂಗನೆಯರ ಸಂಗಸುಖವ ಮೆಚ್ಚಿ, ಲಿಂಗವ ಕೊಂಡಾಡುವ ಬಾಯಲ್ಲಿ ಹೆಂಗಳ ಅಧರವಂ ಚುಂಬಿಸೆ, ಲಿಂಗಜಂಗಮದ ಪ್ರಸಾದ ಹೋಯಿತ್ತು. ಇಷ್ಟಲಿಂಗ ಹಿಡಿವ ಕೈಯಲ್ಲಿ ಬಟ್ಟಿತ್ತು ಕುಚವ ಹಿಡಿದು, ಉಚ್ಚೆಯ ಬಚ್ಚಲ ತೋಡುವ ಕಸ್ತುಕಾರರನೊಪ್ಪೆನೆಂದ. ಇಂತಪ್ಪವರ ಭಕ್ತರೆಂದಡೆ, ಮೆಟ್ಟುವ ನರಕದಲ್ಲಿ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮೂರುಲೋಕದ ಮೋಹಿನಿ ಆರುಲೋಕದ ಅಂಗನೆಯರ ಸಂಗವ ಮಾಡಿ, ಮೂರುಲೋಕದ ಮೋಹವ ಮರೆದು ತಾ ಸತ್ತಳು ನೋಡಾ. ಮೂರುಲೋಕದ ಮೋಹಿನಿ ಸತ್ತುದ ಕಂಡು, ಆರುಲೋಕದ ಅಂಗನೆಯರು, ನಾವೀ ಲೋಕದಲ್ಲಿರಲಾಗದೆಂದು ಮೀರಿದ ಲೋಕಕ್ಕೆ ಹೋಗಿ, ಆರೂಢನ ನೋಡುತ್ತ ನೋಡುತ್ತ ಆರೂರವರೂ ಸತ್ತರು. ಇದು ಮೀರಿದ ಲಿಂಗೈಕ್ಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾಲ್ಕು ಜಾವಕ್ಕೆ ಒಂದು ಜಾವ ಹಸಿವು ತೃಷೆ ಮಿಕ್ಕಾದ ವಿಷಯದೆಣಿಕೆಗೆ ಸಂದಿತ್ತು. ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. ಮತ್ತೊಂದು ಜಾವ ಅಂಗನೆಯರ ಕುಚ, ಅಧರಚುಂಬನ ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸತ್ತಿತ್ತು. ಇನ್ನೊಂದು ಜಾವವಿದೆ: ನೀವು ನೀವು ಬಂದ ಬಟ್ಟೆಯ ತಿಳಿದು ಮುಂದಳ ಆಗುಚೇಗೆಯನರಿದು, ನಿತ್ಯನೇಮವ ವಿಸ್ತರಿಸಿಕೊಂಡು ನಿಮ್ಮ ಶಿವಾರ್ಚನೆ, ಪೂಜೆ, ಪ್ರಣವದ ಪ್ರಮಥಾಳಿ, ಭಾವದ ಬಲಿಕೆ, ವಿರಕ್ತಿಯ ಬಿಡುಗಡೆ, ಸದ್ಭಕ್ತಿಯ ಮುಕ್ತಿ, ಇಂತೀ ಕೃತ್ಯದ ಕಟ್ಟ ತಪ್ಪದಿರಿ. ಅರುಣೋದಯಕ್ಕೆ ಒಡಲಾಗದ ಮುನ್ನವೆ ಖಗವಿಹಂಗಾದಿಗಳ ಪಶುಮೃಗನರಕುಲದುಲುಹಿಂಗೆ ಮುನ್ನವೆ ಧ್ಯಾನಾರೂಢರಾಗಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೊಡಬಲ್ಲಡೆ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಲಿಂಗವಂತರು ತಾವಾದ ಬಳಿಕ, ಅಂಗನೆಯರ ನಡೆನುಡಿಗೊಮ್ಮೆ ಲಿಂಗದ ರಾಣಿಯರೆಂದು ಭಾವಿಸಬೇಕು. ಲಿಂಗವಂತರು ತಾವಾದ ಬಳಿಕ, ಅನುಭವ ವಚನಗಳ ಹಾಡಿ ಸುಖದುಃಖಗಳಿಗಭೇದ್ಯವಾಗಿರಬೇಕು. ಲಿಂಗವಂತರು ತಾವಾದ ಬಳಿಕ, ಜಂಗಮವ ಪೂಜಿಸಿ ಸದಾ ಲಿಂಗೈಕ್ಯಸುಖಿಗಳಾಗಿರಬೇಕು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಯವಿಲ್ಲದ ಹೆಂಗೂಸು ಬಸುರಿಲ್ಲದ ಮಗನ ಹಡೆದು ಅಂಗನೆಯರ ಆರು ಮಂದಿಯ ಕರೆದು ಲಿಂಗವೆಂಬ ತೊಟ್ಟಿಲೊಳಗೆ ಆ ಮಗನ ಮಲಗಿಸಿ ಜೋಗುಳಮಂ ಪಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನ್ನದ ಮೇಲಣ ಲವಲವಿಕೆ, ನಿದ್ರೆಯ ಮೇಲಣ ಲವಲವಿಕೆ, ಅಂಗನೆಯರ ಮೇಲಣ ಲವಲವಿಕೆಯಿದ್ದಂತೆ ಲಿಂಗದಲ್ಲಿರಬೇಕು. ಶಿವಲಿಂಗದಲ್ಲಿ ಮೋಹವನಳವಡಿಸಿದರೆ, ತನ್ನನೀವ ನಮ್ಮ ಚೆನ್ನಬಂಕನಾಥದೇವನು.
--------------
ಸುಂಕದ ಬಂಕಣ್ಣ
ಆಸೆಯುಳ್ಳವಂಗೆ ಮಾಟಕೂಟವಲ್ಲದೆ, ನಿರಾಸೆಯುಳ್ಳವಂಗೆ ಮಾಟಕೂಟವೇಕೆ ? ಮನಪರಿಣಾಮಿಗೆ ಮತ್ಸರವೇಕೆ ? ಸುತ್ತಿದ ಮಾಯಾಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದೆ ತಿರುಗಲೇಕೆ ? ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ
--------------
ಅಮುಗೆ ರಾಯಮ್ಮ
ಉದಯವೆಲ್ಲ ಒಂದೆ: ಈ ಚಲವ ಆಶ್ರಯಿಸಿ ಮದ್ಯಪಾನವೆನಿಸಿತ್ತು ; ಸುರತರುವ ಆಶ್ರಯಿಸಿ ಅಮೃತವೆನಿಸಿತ್ತು. ದೇಹವೆಲ್ಲ ಒಂದೆ: ಅಂಗನೆಯರ ಆಶ್ರಯಿಸಿ ಭವಕ್ಕೆ ಬೀಜವಾಯಿತ್ತು ; ಅಂಗವ ಆಶ್ರಯಿಸಿ ಭವಾರಣ್ಯಕ್ಕೆ ದಾವಾನಲವೆನಿಸಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->