ಅಥವಾ

ಒಟ್ಟು 16 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದೊಳಗೆ ಲಿಂಗವಿದೆ, ಲಿಂಗದೊಳಗೆ ಅಂಗವಿದೆ. ಅಂಗ ಲಿಂಗ ಸಂಗದೊಳಗೆ ಪರಮ ಸುಖವಿದೆ. ಪರಮ ಸುಖದೊಳಗೆ ಪ್ರಸಾದವಿದೆ. ಪ್ರಸಾದದೊಳಗೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. ನಿಮ್ಮ ಶರಣನ ನಿಲವಿದೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು, ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು, ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ. ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ? ಅಂಗದೊಳಗಣ ಲಿಂಗವನು ಹಿಂಗಿದವರಿಗೆ ಭವಮಾಲೆಯುಂಟು, ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕರಸ್ಥಲದಲ್ಲಿ ಲಿಂಗವಿರಲು ಆ ಹಸ್ತವೇ ಕೈಲಾಸ, ಈ ಲಿಂಗವೇ ಶಿವನು. ಇದು ಕಾರಣ ಇಲ್ಲಿಯೇ ಕೈಲಾಸ. ಇದಲ್ಲದೆ ಬೇರೆ ಬೆಳ್ಳಿಯ ಬೆಟ್ಟವೇ ಕೈಲಾಸವೆಂದು ಅಲ್ಲಿಪ್ಪ ರುದ್ರನೇ ಶಿವನೆಂದು ಕೈಲಾಸಕ್ಕೆ ಹೋದಹೆ ಬಂದಹೆನೆಂಬ ಭ್ರಾಂತು ಬೇಡ ಕೇಳಿರಣ್ಣಾ. ಕಾಯದ ಅನುಗ್ರಹ ಲಿಂಗದಲ್ಲಿ ಶ್ರದ್ಧೆ ಇಲ್ಲದೆ ಇರಲು ಇನ್ನೆಲ್ಲಿಯ ನಂಬುಗೆಯಯ್ಯಾ? ಅಲ್ಲಲ್ಲಿಗೆ ಹರಿಹಂಚಾಗಿ ಕೆಡಬೇಡ ಕೇಳಿರಣ್ಣಾ. ಅಂಗದೊಳಗೆ ಲಿಂಗಾಂಗ ಸಂಗವನರಿತು ಒಳಹೊರಗು ಒಂದೇಯಾಗಿ ಶಿಖಿಕರ್ಪುರ ಸಂಗದಲ್ಲಿ ಕರ್ಪುರ ಉರಿಯಾಗಿಪ್ಪಂತೆ, ಸರ್ವಾಂಗದಲ್ಲಿ ಲಿಂಗಸೋಂಕಿ ಅಂಗಭಾವವಳಿದು, ಲಿಂಗಭಾವ ತನ್ಮಯವಾಗಿಪ್ಪ ತದ್ಗತಸುಖ ಉಪಮಾತೀತವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ತನ್ನೊಡನೆ ಒಬ್ಬ ಭಾಮಿನಿ ಪುಟ್ಟಿದಳು ನೋಡಾ. ಆ ಭಾಮಿನಿಯ ಅಂಗದೊಳಗೆ ಐದು ಗ್ರಾಮಂಗಳು ಹುಟ್ಟಿದವು ನೋಡಾ. ಆ ಗ್ರಾಮದೊಳಗೆ ಸುಳಿದಾಡುವ ಹಂಸನ ಕಂಡೆನಯ್ಯ. ಆ ಹಂಸನ ಹಿಡಿಯಲಾಗಿ ಆ ಹಂಸ ಹಾರಿ ಆ ಭಾಮಿನಿಯ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನಮಂಡಲದೊಳಗೆ ಕಿರಣವಡಗಿಪ್ಪಂತೆ, ಫಲವಹ ಬೀಜದಲ್ಲಿ ವೃಕ್ಷವಡಗಿಪ್ಪಂತೆ, ಇಂದುಕಾಂತ ರವಿಕಾಂತದಲ್ಲಿ ಜಲಬಿಂದು ಅಗ್ನಿ ಇಪ್ಪಂತೆ, ಸಂದ ಕ್ಷೀರದಲ್ಲಿ ಹೊಂದಿದ ದಧಿ ತಕ್ರ ನವನೀತ ಘೃತವಿಪ್ಪಂತೆ ಅಂಗದ ಮೇಲೆ ಲಿಂಗ ಸಾಹಿತ್ಯವಾಗಿ, ತನ್ನೊಳಗೆ ಆ ಲಿಂಗವ ಕಂಡು, ಲಿಂಗದೊಳೆಗೆ ತನ್ನ ಕಂಡು, ತನ್ನೊಳಗೆ ಸಮಸ್ತ ವಿಸ್ತಾರವನೆಲ್ಲವ ಕಂಡು, ಜಂಗಮಮುಖ ಲಿಂಗವೆಂಬ ಭೇದವರು, ಲಿಂಗಕ್ಕೆ ಜಂಗಮವೆ ಪ್ರಾಣವಾಗಿಪ್ಪ ಭೇದವನು, ಅಂಗದೊಳಗೆ ಲಿಂಗವೆ ಆಚಾರವಾಗಿ ಅಳವಟ್ಟ ವಿವರವಾಗಿ ಇದ್ದತೆಂಬುದನು, ಕಂಗಳ ನೋಟಕ್ಕೆ ಗುರಿಯಾದ ಲಿಂಗವೆ ಅಂಗವನೊಳಕೊಂಬ ಭೇದವನು, ಸಂಗನ ಬಸವಣ್ಣ ಚೆನ್ನಬಸವಣ್ಣನಿಂದ ಕೃಪೆಮಾಡಿಸಿ ಎನ್ನನುಳುಹು, ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನದೇವಯ್ಯಾ.
--------------
ಸಿದ್ಧರಾಮೇಶ್ವರ
ಅಂಗದೊಳಗೆ ಲಿಂಗನಾಗಿ ಬಂದ ಲಿಂಗವನೆಂತು ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಸೃಷ್ಟಿಯಲ್ಲಿ ಹುಟ್ಟಿ ನಷ್ಟವಹ ಲಿಂಗವನೆಂತು ಮುಟ್ಟಿ ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ? ಈ ಕಷ್ಟವ ಕಂಡು ಮುಟ್ಟಲಂಜಿ ನಿಮ್ಮಲ್ಲಿಯೇ ನಿಂದೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಅಂಗದ ಮೇಲೆ ಲಿಂಗ ಕಾಣಲ್ಪಡುತಿಪ್ಪುದಯ್ಯ. ಅಂಗದೊಳಗೆ ಪ್ರಾಣವಿಪ್ಪುದಯ್ಯ. ತನುವಿನ ಮೇಲಿಪ್ಪ ಲಿಂಗವ ಮನದಲ್ಲಿ ಸ್ವಾಯತಮಾಡಿ ನೆರೆಯಲರಿಯದೆ ಧನ ಕಾಮಿನಿಯರ ಭ್ರಾಂತಿನಲ್ಲಿ ಜಿನುಗುವ ಮನುಜರಿಗೆ ಪ್ರಾಣಲಿಂಗವೆಂದೇನೋ ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಮೇಲಣ ಲಿಂಗ ಹಿಂಗಿದಾತ ಭವಿ ಎಂಬರು. ಅಂಗದ ಮೇಲಣ ಲಿಂಗ ಹಿಂಗದಾತನ ಭಕ್ತನೆಂಬರು. ಅಂಗದೊಳಗೆ ಬೆರಸಿರ್ಪ ಲಿಂಗದ ಹೊಲಬನಾರೂ ಅರಿಯರು. ಆ ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿವುದೆ? ಅಂಗದೊಳಗಣ ಲಿಂಗ ಹಿಂಗದೆ ಆರಾಧಿಸಬಲ್ಲಡೆ ಹಿಂಗುವದು ಭವಮಾಲೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ದೇಹ ಪ್ರಾಣದಂತೆ ಕೂಡಿದ ಭಕ್ತ ಜಂಗಮ[ದ] ಉಭಯದನುವನೇನೆಂಬೆನಯ್ಯಾ, ಅಂಗದೊಳಗೆ ಅನುಭಾವಸಾಹಿತ್ಯ, ಆಚಾರಲಿಂಗಸಂಬಂಧ. ಚಿದಂಗದೊಳಗೆ ಸ್ವಾನುಭಾವ ಸಮ್ಯಕ್‍ಜ್ಞಾನದುದಯ, ಪ್ರಾಣಲಿಂಗಸಂಬಂಧ. ಇಂತೀ ಉಭಯದನುವನಾನೇನೆಂಬೆನಯ್ಯಾ. ಅರಿವಿನೊಳಗನುಭವ, ಅನುಭವದೊಳಗರಿವಿಪ್ಪಂತೆ ಭಕ್ತನೊಳಗೆ ಜಂಗಮ, ಜಂಗಮದೊಳಗೆ ಭಕ್ತ. ಇಂತೀ ಭಕ್ತ ಜಗಂಮದ ಸಕೀಲಸಂಬಧವ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರೇ ಬಲ್ಲರು.
--------------
ಆದಯ್ಯ
ಕಾಯದ ಕೈಮುಟ್ಟಿ ಲಿಂಗಕ್ಕರ್ಪಿಸಿದೆನಂದಡೆ ಅನರ್ಪಿತ, ಅಂಗದೊಳಗೆ ಲಿಂಗ ತನ್ಮಯನಾಗಿ ಪ್ರಾಣಾನುಪ್ರಪಂಚ ಮರೆದಿರಲು, ಆ ಅಂಗವೇ ಲಿಂಗಕ್ಕರ್ಪಿತವಾಗಿ ಪ್ರಸಾದಕಾಯವಪ್ಪುದು. ಇಂತಾದ ಬಳಿಕ ಅಂಗ ಸೋಂಕಿಲ್ಲದೆ ಲಿಂಗ ಸೋಂಕಾಗಿರ್ಪುದಾಗಿ ಅರಿದು ಮರೆದು ಅರ್ಪಿತ ಅನರ್ಪಿತವೆಂಬ ಭ್ರಾಂತು ಸೂತಕವಿಲ್ಲ. ನಿಭ್ರಾಂತ, ನಿಸ್ಸಂದೇಹಿ, ಸೌರಾಷ್ಟ್ರರ ಸೋಮೇಶ್ವರ ಲಿಂಗವಲ್ಲದನ್ನ ಸೊಗಸದ ಪ್ರಸಾದಿ.
--------------
ಆದಯ್ಯ
ಅಂಗದ ಲಯ ಲಿಂಗದೊಳಗೆ, ಲಿಂಗದ ಲಯ ಅಂಗದೊಳಗೆ. ಇವೆರಡರ ಸಂಗಸುಖ ಜಂಗಮದೊಳಗೆ ಏಕವಾಯಿತ್ತು . ಅಂದೆ ಪ್ರಸಾದದಿಂದ ರೂಪಾಯಿತ್ತು. ಮುಂದೆ ಪ್ರಸಾದದಲ್ಲಿ ಪರಿಪೂರ್ಣವಾಯಿತ್ತು. ಇದರಂದವ ಬಲ್ಲ ಶರಣರೆ ಎನ್ನ ತಂದೆಗಳಾಗಿಪ್ಪರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಅಂಗದೊಳಗೆ ಲಿಂಗ ಲಿಂಗದೊಳಗೆ ಅಂಗ ! ಅಂಗವಿಲ್ಲದೆ ಬೇರೆ ಸಂಗವಿಲ್ಲ ಕಾಣಿರೆ. ಅದೆಂತೆಂದಡೆ; ``ಲಿಂಗಸ್ಥಲಂ ಶಿವಃ ಸಾಕ್ಷಾತ್ ಜೀವಾತ್ಮಾಂಗಸ್ಥಲಂ ಭವೇತ್ ಲಿಂಗಾಂಗಸ್ಥಲಯೋರೈಕ್ಯಂ ಶಿವಜೀವೈಕ್ಯಮೇವಹಿ '' ಎಂದುದಾಗಿ. ಲಿಂಗವಿದ್ದೆಡೆಯ ನೀವು ತಿಳಿದು ನೋಡಿ ಕೂಡಿಕೊಳ್ಳಿ. ಕಾಯವಳಿಯದ ಮುನ್ನವೆ ಕೂಡಿಕೊಳ್ಳಬಲ್ಲಡೆ, ಗುಹೇಶ್ವರನು ಬೇರಿಲ್ಲ ಕಾಣಿರೆ.
--------------
ಅಲ್ಲಮಪ್ರಭುದೇವರು
ಅಂಗದೊಳಗೆ ಮಹಾಲಿಂಗವಿರಲು, ಕೈಯ ಲಿಂಗ ಬಿದ್ದಿತ್ತೆಂದು ನೆಲದೊಳಗಂಗವ ಹೂಳಿ ಭಂಗಪಡುವರಲ್ಲಾ, ಗುಹೇಶ್ವರಲಿಂಗವನರಿಯದ ಜಡರು.
--------------
ಅಲ್ಲಮಪ್ರಭುದೇವರು
ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ. ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡಿದೆ. ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣಾ.
--------------
ಅಕ್ಕಮಹಾದೇವಿ
ಲಿಂಗದೇವರ ಪಾದದ ನೆನೆವ ನಿತ್ಯಮಾಡಿ, ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ. ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ, ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು ಬರಿಯ ಮಾತಿನ ಬಣಬೆಯ ಹಿಡಕೊಂಡು ತಿರುಗುವ ನರಗುರಿಗಳು, ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ, ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ, ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ, ಒಳಗೆ ತೇಜತತ್ವದ ಹೊರಗೆ ತೇಜತತ್ವದ ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ, ಒಳಗೆ ವಾಯುತತ್ವದ ಹೊರಗೆ ವಾಯುತತ್ವದ ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ, ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ. ಇಂತೀ ಇವರು ಆರುಮಂದಿ ಭವಿಗಳು. ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು, ಬೇರೊಂದು ವಿಷ್ಣುಲಿಂಗವಾಗಿ ಬಂದು ಪೂಜೆಗೊಂಬುತಿದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ. ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ. ಆ ಲಿಂಗದ ರೂಪನು ನೋಡಿ, ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು, ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ, ಲೋಭವೆಂಬೊ ಭವಿ, ಮೋಹವೆಂಬೊ ಭವಿ, ಮದವೆಂಬೊ ಭವಿ, ಮತ್ಸರವೆಂಬೊ ಭವಿ. ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ, ಅಜ್ಜಿಗೆ ಅರಸಿನ ಚಿಂತೆಯಾದರೆ, ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು, ಹಲವು ಮಿಂಡಗಾರಗೆ ಸೆರಗುಹಾಸಿ ಮಾಡಿಕೊಂಡು ಹೋದಂತಾದೀತು ಕಾಣಿರೊ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ ನಕಾರವೆಂಬೊ ಅಕ್ಷರ ಹುಟ್ಟಿ, ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು ಚಿಂತೆಯನು ತಾಳಿ, ಪೃಥ್ವಿತತ್ವವೆಂಬೊ ಆದಿ ಆಧಾರ ಬುಡವಾಗಿಯಿದ್ದ ಕಾಣಿರೊ. ಮಕಾರವೆಂಬೊ ಅಕ್ಷರ ಹುಟ್ಟಿ, ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ ಚಿಂತೆಯನು ತಾಳಿ, ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಶಿಕಾರವೆಂಬೊ ಅಕ್ಷರ ಹುಟ್ಟಿ, ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಭಕ್ಷಿಸಬೇಕೆಂಬೊ ಚಿಂತೆಯನು ತಾಳಿ, ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ವಕಾರವೆಂಬೊ ಅಕ್ಷರ ಹುಟ್ಟಿ, ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ ಚಿಂತೆಯನು ತಾಳಿ, ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಯಕಾರವಂಬೊ ಅಕ್ಷರ ಹುಟ್ಟಿ, ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ ಚಿಂತೆಯನು ತಾಳಿ, ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಅದು ಎಂತೆಂದಡೆ : ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ. ಅದು ಎಂತೆಂದರೆ : ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ. ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ. ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ. ವಾಯುತತ್ವವೆಂಬೊ ಭವಿಯ ಅಂಗದೊಳಗೆ ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ. ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು. ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ, ಭವಿ ಆಧಾರದಲ್ಲಿ ಬೆಳೆದು, ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ ಅಡಗಿಕೊಂಡಿದ ಅಜ್ಞಾನಿಗಳು. ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ. ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು ಶಿವಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು, ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ, ಕೂಗಿ ಕೂಗಿ ಹೇಳುವ ಕುನ್ನಿಗಳು ಮಾಡಿದ ಭಕ್ತಿಯೇನಾಯಿತೆಂದರೆ, ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು, ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ, ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರಾರುಂಟೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
-->