ಅಥವಾ

ಒಟ್ಟು 149 ಕಡೆಗಳಲ್ಲಿ , 52 ವಚನಕಾರರು , 142 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು. ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಹರಿಯಬೇಕು. ಅರಿವನ್ನಬರ ಗುಹೇಶ್ವರನೆಂಬ ಕುರುಹಾಯಿತ್ತು.
--------------
ಅಲ್ಲಮಪ್ರಭುದೇವರು
ಶೀಲ ಶೀಲವೆಂದು ನುಡಿವ ಉದ್ದೇಶಪ್ರಾಣಿಗಳು ಎಲ್ಲರೂ ಅನಂತಶೀಲರು, ಅರಿವಿನ ನಿರ್ಣಯವನರಿಯರು. ಹೊರಗೆ ಬಳಸುವರು, ಒಳಗಣ ಶುದ್ಧಿಯನರಿಯರು. ನೇಮಶೀಲವೆಂದು ಹಿಡಿವರು, ನಿರ್ಣಯವನರಿಯರಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಉದ್ದೇಶಪ್ರಾಣಿಗಳು.
--------------
ಚನ್ನಬಸವಣ್ಣ
ಪ್ರಾಣಲಿಂಗ, ಲಿಂಗಪ್ರಾಣ `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ಎಂದುದಾಗಿ ಪಂಚಭೂತಕಾಯವಳಿದು ಪ್ರಸಾದಕಾಯವ ಮಾಡಿ ಭಕ್ತದೇಹಿಕನೆನಿಸಿದನು. ಈ ಸತ್ಕ್ರೀಯನು ಶ್ರೀಗುರು ಕರುಣಿಸಿ ಮಾಡಿದನಾಗಿ ಪ್ರಾಣಲಿಂಗ, ಕಾಯಭಕ್ತನು ಇದೂ ಸ್ವಭಾವ. ದಾಸೋಹಿಯಾಗಿ ಅರ್ಚನೆ ಪೂಜನೆ ಸರ್ವದ್ರವ್ಯ ಸಕಲಭೋಗವನೂ ಅರ್ಪಿತವ ಮಾಡುತ್ತಿಹನು, ಪ್ರಸಾದವ ಭೋಗಿಸುತ್ತಿಹನು. ಸತ್ಕ್ರೀಯಲ್ಲಿ ಲಿಂಗಕ್ಕೆ ಕಾಯಶೂನ್ಯನಾಗಿ ಭಕ್ತಕಾಯ ಮಮಕಾಯನೆಂದು ಅವಗ್ರಹಿಸಿಕೊಂಡ ಭಕ್ತಂಗೆ ಬೇರೆ ಪ್ರಾಣವಿಲ್ಲಾಗಿ ಪ್ರಾಣವೆಂದು ಅವಗ್ರಹಿಸಿಕೊಂಡ. ಇಂತಹ ಪ್ರಾಣಲಿಂಗವು, ಕಾಯಭಕ್ತನು ತನ್ನೊಳಗೆ ತಾನೇ ಐಕ್ಯವಾಯಿತ್ತು. ಭಕ್ತನೇ ಲಿಂಗ, ಲಿಂಗವೇ ಭಕ್ತನು, ದಾಸೋಹಕ್ರೀಯೆ ಸೋಹಕ್ರೀ, ಸೋಹಕ್ರೀಯೆ ದಾಸೋಹಕ್ರೀ. ಈ ಕ್ರೀಯನು ಅದ್ವೈತವೆನ್ನಿ, ಸೋಹವೆನ್ನಿ, ದಾಸೋಹವೆನ್ನಿ ಬಲ್ಲವರುಗಳು ಬಲ್ಲಂತೆ ನಿಮ್ಮ ನಿಮ್ಮ ಅರಿವಿನ ಹವಣಿಂಗೆ ನುಡಿಯಿರಿ. ಆ ಲಿಂಗಾಯತವ, ಆ ಲಿಂಗದ ಮರ್ಮವ ಅರ್ಪಿತದ ಮರ್ಮವ, ಪ್ರಸಾದದ ಮಹಿಮೆಯ ಮಹಾಪರಿಣಾಮದ ಕ್ರೀಯು ಸಾಮಾನ್ಯರಿಗೆ ಅರಿಯಬಾರದು. ಈ ಮಹಾ ಕ್ರೀ ವಾಙ್ಮನೋತೀತ. ಈ ಮಹಾಕುಳವ ಮಹಾನುಭಾವರೇ ಬಲ್ಲರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪದವನರಿಯದ ವಾಚಕ, ಘಾತಕನ ಇರವು ಪುಸಿ ಧನುವಿನಲ್ಲಿ ಸಿಕ್ಕಿದ ಮಿಸುಕಿದ ಕಣೆಯಂತೆ, ಹುಸಿದವನ ಒಡಲಿನ ಪ್ರತಿಮೂದಲೆಯಂತೆ. ಇಂತೀ ಅರಿವಿನ ಒಳಗನರಿಯದ ಜೂಜಿನ ಹುದುಗಿಂಗೆ ಬಂದು, ಸುರಿಗಾಯ ಸುರಿವವನ ವಿದ್ಥಿಯಂತೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ತರುಗಿಡು ಗುಣನಾಮವಾದಡೇನು, ಸ್ಥಾಣುವಿನ ಒಲವರದ ತೆರ ಬೇರೆ. ದರ್ಶನ ಸುಖಸಂಪತ್ತಾದಡೇನು, ಅರಿವಿನ ಒಲವರದ ತೆರ ಬೇರೆ. ಎಲೆಯ ಹಾಕಿ ತನ್ನಲ್ಲಿಗೆ ಕರೆವವನ ಗುಣ ಲೇಸೆ ? ಶಬರನ ವೇಷ, ಮೃಗದ ಹರಣದ ಕೇಡು. ಹಿರಿಯತನವ ತೋರಿ, ತ್ರಿವಿಧವ ಬೇಡುವ ಅಡಿಗರಿಗೇಕೆ, ಬಂಕೇಶ್ವರಲಿಂಗವ ಅರಿದ ಅರಿವು ?
--------------
ಸುಂಕದ ಬಂಕಣ್ಣ
ಸದ್ಭಕ್ತಿಯೆ ಆರು ಸ್ಥಲಕ್ಕೆ ಮುಖ್ಯ ಸದ್ಭಕ್ತಿಯ ಕೂಡಿಕೊಂಡು ಷಟ್‍ಸ್ಥಲವಿಪ್ಪುದು. ಇದು ಕಾರಣ: ಸದ್ಭಕ್ತಿಯಿಂ ಲಿಂಗದ-ಲಿಂಗವಂತರ ಸುಖವನು, ಮಹಿಮೆಯ ಪೂಜೆಯನು ಅರಿದು ಮರೆದು ವಿಷ್ಣು ಕಷ್ಟಜನ್ಮದಲ್ಲಿ ಬಂದನು. ಅರಿದು ಮರೆದು ಬ್ರಹ್ಮನು ಘನವೆಂದು ಶಿರವ ಹೋಗಾಡಿಕೊಂಡನು. ಅರಿದು ಮರೆದು ಇಂದ್ರನು ಭಂಗಿತನಾಗಿ ಐಶ್ವರ್ಯಮಂ ಹೋಗಾಡಿಕೊಂಡನು. ಅರಿದು ಮರೆದು ದಕ್ಷನು ಭಂಗಿತನಾಗಿ ಶಿರವ ಹೋಗಾಡಿಕೊಂಡನು. ಅರಿದು ಮರೆದು ವ್ಯಾಸನು ಹಸ್ತವ ಹೋಗಾಡಿಕೊಂಡನು. ಈ ದೃಷ್ಟವ ಹಲವು ಪುರಾತನರು ಕೇಳಿರಣ್ಣಾ: ಅರಿದು ಮರೆಯದೆ ನಂಬಲು ಸಿರಿಯಾಳನಿಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಸಿಂಧುಬಲ್ಲಾಳಂಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ನಂಬಿಯಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ನಿಂಬವ್ವೆಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಕೆಂಭಾವಿಯ ಭೋಗಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ಪುರಾತನರೆಲ್ಲರು ಶಿವಪದಂಗಳ ಪಡೆದರು. ಇದನು ಶ್ರುತ ದೃಷ್ಟ ಅನುಮಾನದಿಂ ಕೇಳಿ, ನಿಶ್ಚೈಸಿ, ನಂಬಿ. ಅರಿವಿನ ಹದವಿದು, ಮರವೆಯ ಪರಿಯಿದು ಇಷ್ಟವಾದುದ ಹಿಡಿದು ಅನಿಷ್ಟವಾದುದ ಬಿಟ್ಟು ಅರಿವು ಸಯವಾಗಲು ಶಿವಪದವಪ್ಪುದು ತಪ್ಪದು, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಿವಿನ ಪ್ರಸಂಗಕ್ಕೆ ಮಚ್ಚರವೇಕೆ ? ಮಹಾನುಭಾವಿಗೆ ಮನ್ನಣೆಯ ಮಾಡರೆಂಬ ತೇಜದ ಬ್ಥೀಷ್ಮತೆಯೇಕೆ ? ತನ್ಮಯ ತಾನಾದ ಮತ್ತೆ , ತನಗೆ ಅನ್ಯವಿಲ್ಲಾ ಎಂದೆ, ಜಾಂಬೇಶ್ವರಾ
--------------
ರಾಯಸದ ಮಂಚಣ್ಣ
ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ, ತಾಗುವ ಮೊನೆಗಾಧಾರವಾಗಿ ದೂರ ಎಯಿದುವುದಕೆ ಸಾಗಿಸುವ ಗುಣ ತಾನಾಗಿ ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ, ಅರಿವು ಕುರುಹು ಎರಡು ಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಅರಿವಿನ ನಡೆ, ಅರಿವಿನ ನುಡಿ, ಭಕ್ತಿಯ ಮೂಲವನರಿತ ಶರಣರ ಚರಣದೊಳೆನ್ನನಿಟ್ಟು ಸಲಹಯ್ಯ, ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಅರಿದು ಮಾಡುವ ಮಾಟ ಮರವೆಗೆ ಬೀಜವೆಂದೆ. ಅದಕ್ಕೆ ಮರೆದರಿವು ತಪ್ಪದು. [ಆ] ಅರಿವಿನ ಭೇದ ಎತ್ತಿದ ದೀಪದ ಬೆಳಗಿನಂತೆ. ಅರಿದು ಮರೆಯದೆ, [ಮರೆದು ಅರಿಯದೆ] ಇಂತೀ ಅರಿಕೆಯಲ್ಲಿ ಮಾಡುವವನ ಅರಿವು, ಹೊತ್ತ ದೀಪದ ನಿಶ್ಚಯದಂತೆ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ, ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಮೋಳಿಗೆ ಮಾರಯ್ಯ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಮರವೆ ಅರಿವಿನ ಮರೆಗೊಂಡು ತಲೆದೋರಿ ಅರಿವೆಂದೆನಿಸಿತ್ತು. ಅರಿವು ಮರವೆಯ ಮರೆಗೊಂಡು ತಲೆದೋ? ಮರಹೆಂದೆನಿಸಿತ್ತು. ಅರಿವು ಮರವೆಗಳಿಂದರಿತರಿವು ನಿಜವಪ್ಪುದೆ ? ಅದು ಹುಸಿ, ಅದೆಂತೆಂದಡೆ: `ಪ್ರಾಣನಿಲಾಚೇಷ್ಟಮನೋಗಲಿತ್ವಂ ಮನೋಗಲಿತ್ವಾತ್ಕರಣಂ ಪ್ರಕೃತ್ಯಾ' ಪ್ರಕೃತಿಯಿಂದಂ ಮರೆವರಿವು ತೋರ್ಕುಂ, ಮರೆವರಿವಿನಿಂ ಅನಿತ್ಯಂ. ಇದು ಕಾರಣ, ಅರಿವಿನ ಮರಹಿನ ಸಂಚಲದಿಂದರಿಹಿಸಿಕೊಂಡರಿವು ತಾನರಿವಲ್ಲ. ಅರಿಯದ ಮರೆಯದ ಮರವರಿವಿಂಗೆ ತೆರಹಿಲ್ಲದ ಬಚ್ಚಬರಿಯರಿವೆ ತಾನಾಗಿ. ಅರಿವೆಂಬ ಕುರುಹುಗೆಟ್ಟ ಪರಮಸ್ವಯಂಭು ನೀನೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಓಂ ಎಂಬುದು ಬ್ರಹ್ಮಾಕ್ಷರ. ನ ಎಂಬುದು ನಾರಾಯಣಬೀಜ. ಮ ಎಂಬುದು ಮಹಾದೇವನ ಬೀಜಾಕ್ಷರ. ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ. ಇಂತೀ ಭೇದ : ಪಂಚವಿಂಶತ್ತತ್ವವಾಗಲಾಗಿ ಆಚಾರ್ಯನ ಅಂಗಭೇದ. ಇಂತೀ ಕ್ರೀಮಾರ್ಗದ ನಿಜ ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ.
--------------
ಪ್ರಸಾದಿ ಭೋಗಣ್ಣ
ಬಾವಿಯ ನೆಳಲ ಬಗ್ಗಿ ನೋಡುವನಂತೆ, ಜೀವದಾಸೆ ನೋಟದ ಬೇಟ ಬಿಡದಂತೆ, ಸಂಸಾರದ ಘಾತಕತನ, ಅರಿವಿನ ಮಾತಿನ ಮಾಲೆ. ಉಭಯವ ನೇತಿಗಳೆಯದೆ ಅರಿಯಬಾರದು, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಇನ್ನಷ್ಟು ... -->